Category: ಪ್ರಮುಖ ಸುದ್ದಿ

  • PSI ಪರುಶುರಾಮ್ ಶಂಕಾಸ್ಪದ ಸಾವು ಸಿಬಿಐ ತನಿಖೆಗೆ ಅಂಬೇಡ್ಕರ್ ಮಾನವ ಹಕ್ಕುಗಳ ಕ್ರಾಂತಿ ಸೇನೆ ಒತ್ತಾಯ

    ಬೆಂಗಳೂರು: ಯಾದಗಿರಿ ಪಿ.ಎಸ್.ಐ.ಪರುಶುರಾಮ್ ಶಂಕಾಸ್ಪದ ಸಾವು ಕುರಿತು ಸಿಬಿಐ ತನಿಖೆಗೆ ವಹಿಸಬೇಕೆಂದು ಅಂಬೇಡ್ಕರ್ ಮಾನವ ಹಕ್ಕುಗಳ ಕ್ರಾಂತಿ ಸೇನೆ ಒತ್ತಾಯಿಸಿದೆ.

    ಅಂಬೇಡ್ಕರ್ ಮಾನವ ಹಕ್ಕುಗಳ ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ಕ್ರಾಂತಿರಾಜು, ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಚಿದರಹಳ್ಳಿ ಮಹಾದೇವಸ್ವಾಮಿ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಯಂತ್ರಣ ಸಮಿತಿಯ ವಿ.ಗಿರಿಕುಮಾರ್, ಹಿರಿಯ ಹೋರಾಟಗಾರರಾದ ಉಮಾಶಂಕರ್, ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಬಿ.ದೇವರಾಜ್ ರವರು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ,  ಸ್ವಾತಂತ್ರ್ಯ ಬಂದ 77ವರ್ಷಗಳು ಕಳೆದರು ಇಂದು ಸಹ ದಲಿತರ ಮೇಲೆ ಜಾತಿನಿಂದನೆ, ದೌರ್ಜನ್ಯ ನಡೆಯುತ್ತಿದೆ. ಇತ್ತಿಚೇಗೆ ರಾಜ್ಯದಲ್ಲಿ ದಲಿತ ಸಮುದಾಯದ ಅಧಿಕಾರಿಗಳು ಭ್ರಷ್ಟಚಾರದ ವಿರುದ್ದ ಸೆಣಸಲು ಆಗದೇ ಸಾವಿಗೆ ಶರಣುಗಾತ್ತಿದ್ದಾರೆ ಎಂದು‌ಕಳವಳ ವ್ಯಕ್ತಪಡಿಸಿದರು.

    ಯಾದಗಿರಿ ಪೊಲೀಸ್ ಠಾಣೆ ಪಿ.ಎಸ್.ಐ. ಪರುಶುರಾಮ್ ಶಂಕಸ್ಪಾದ ಸಾವು ಸಂಭವಿಸಿದ ಕಾರಣ ಕುರಿತು ಪರುಶುರಾಮ್ ರವರ ಪತ್ನಿ ಶ್ವೆತ್ರಾ ರವರು ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ಮತ್ತು ಆತನ ಪುತ್ರ 30ಲಕ್ಷ ರೂಪಾಯಿ ಲಂಚ ಬೇಡಿಕೆ ಹಾಗೂ ಜಾತಿ ನಿಂದನೆ ಮಾಡಿರುವುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಪರುಶುರಾಮ್ ರವರು ಸಾವಿಗೀಡಾಗಿದ್ದಾರೆ ಎಂದು ಕ್ರಾಂತಿರಾಜು ದೂರಿದರು.

    ಪಿ.ಎಸ್.ಐ.ಪರುಶುರಾಮ್ ಶಂಕಾಸ್ಪದ ಸಾವಿಗೆ ನ್ಯಾಯ ಸಿಗಬೇಕು ಎಂದರೆ ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ವಹಿಸಬೇಕು ಎಂಬುದು ನಮ್ಮ ಅಗ್ರಹ ಎಂದರು

  • ದೇವಸ್ಥಾನದ ಮೆರವಣಿಗೆ ವೇಳೆ ಘೋರ ದುರಂತ; ವಿದ್ಯುತ್ ಸ್ಪರ್ಷಿಸಿ 8 ಮಂದಿ ಸಾವು

    ದೇವಸ್ಥಾನದ ಮೆರವಣಿಗೆ ವೇಳೆ ಘೋರ ದುರಂತ; ವಿದ್ಯುತ್ ಸ್ಪರ್ಷಿಸಿ 8 ಮಂದಿ ಸಾವು

    ಪಾಟ್ನಾ: ಬಿಹಾರದ ಸುಲ್ತಾನ್‌ಪುರ ಗ್ರಾಮದ ದೇವಸ್ಥಾನವೊಂದರ ಕಾರ್ಯಕ್ರಮದ ಮೆರವಣಿಗೆಯಲ್ಲಿ ಡಿಜೆ ವಾಹನಕ್ಕೆ ವಿದ್ಯುತ್‌ ತಗುಲಿ 8 ಮಂದಿ ಬಲಿಯಾಗಿದ್ದಾರೆ.

    ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಈ ಗ್ರಾಮದಲ್ಲಿ ಹುಡುಗರು ಪ್ರತಿ ಸೋಮವಾರ ಸಮೀಪದ ಹರಿಹರನಾಥ ದೇವಸ್ಥಾನಕ್ಕೆ ಜಲಾಭಿಷೇಕ ಕೈಂಕರ್ಯ ಆಯೋಜಿಸಿದ್ದರು. ಈ ಸಂಬಂಧ ಭಾನುವಾರ ಮಧ್ಯರಾತ್ರಿ ಮೆರವಣಿಗೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಡಿಜೆ ವಾಹನಕ್ಕೆ ವಿದ್ಯುತ್ ತಂತಿ ತಗುಲಿದೆ ಎನ್ನಲಾಗಿದೆ.

    ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಬಾಂಗ್ಲಾ ಹಿಂಸಾಚಾರ; ಸದ್ಯದ ಸ್ಥಿತಿಯಲ್ಲಿ ಢಾಕಾ ಪ್ರವಾಸ ಬೇಡ ಎಂದ ಮೋದಿ ಸರ್ಕಾರ

    ಬಾಂಗ್ಲಾ ಹಿಂಸಾಚಾರ; ಸದ್ಯದ ಸ್ಥಿತಿಯಲ್ಲಿ ಢಾಕಾ ಪ್ರವಾಸ ಬೇಡ ಎಂದ ಮೋದಿ ಸರ್ಕಾರ

    ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಿಯಂತ್ರಿಸಲಾಗದ ಸ್ಥಿತಿ ತಲುಪಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಆ ದೇಶಕ್ಕೆ ಭೇಟಿ ನೀಡದಂತೆ ಭಾರತೀಯರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

    ಹಿಂಸಾತ್ಮಕ ಪ್ರತಿಭಟನೆಗಳಿಂದ ಬಾಂಗ್ಲಾದೇಶ ನಲುಗಿದ್ದು, 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ, ಪರಿಸ್ಥಿತಿಯನ್ನು ಮನಗಂಡಿರುವ ಮೋದಿ ಸರ್ಕಾರ, ಮುಂದಿನ ಸೂಚನೆ ಬರುವವರೆಗೆ ಬಾಂಗ್ಲಾದೇಶಕ್ಕೆ ತೆರಳದಂತೆ ಎಚ್ಚರಿಕೆ ನೀಡಿದೆ.

    ಈ ಸಂಬಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಬಾಂಗ್ಲಾದೇಶದಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಭಟನಾ ನಿರತರ ನಡುವೆ ಭುಗಿಲೆದ್ದ ಹಿಂಸಾಚಾರ ಭುಗಿಲೆದ್ದಿದ್ದು, ಅಲ್ಲಿರುವ ಭಾರತೀಯರಿಗೂ ಸುರಕ್ಷತೆ ಬಗ್ಗೆ ಸಲಹೆ ನೀಡಲಾಗಿದೆ. ಬಾಂಗ್ಲಾದೇಶದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ತೀವ್ರ ಎಚ್ಚರಿಕೆ ವಹಿಸಲು, ಢಾಕಾದಲ್ಲಿರುವ ಭಾರತದ ಹೈಕಮಿಷನ್ ಕಚೇರಿಯ ತುರ್ತು ದೂರವಾಣಿ ಸಂಖ್ಯೆಗಳನ್ನು (8801958383679, 8801958383680, 8801937400591ಗ) ಸಂಪರ್ಕಿಸಲು ಸೂಚಿಸಿದೆ.

  • ‘ಬಿಜೆಪಿ ಭ್ರಷ್ಟಾಚಾರದ ಗಂಗೋತ್ರಿ, ಆ ಪಕ್ಷದಲ್ಲಿರುವವರೆಲ್ಲರೂ ಭ್ರಷ್ಟರೇ’; ರಾಮಲಿಂಗಾ ರೆಡ್ಡಿ

    ರಾಮನಗರ: ಭಾರತೀಯ ಜನತಾ ಪಕ್ಷ. ಭ್ರಷ್ಟಾಚಾರದ ಗಂಗೋತ್ರಿ, ಆ ಪಕ್ಷದಲ್ಲಿ ಇರುವವರೆಲ್ಲರೂ ಭ್ರಷ್ಟರೇ ಆಗಿದ್ದಾರೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

    ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಬಿಜೆಪಿ – ಜೆಡಿಎಸ್ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಎಂದರೆ ಭ್ರಷ್ಟ ಜನತಾ ಪಕ್ಷ. ಭ್ರಷ್ಟಾಚಾರದ ಗಂಗೋತ್ರಿ ಬಿಜೆಪಿ. ಅಳ್ಲಿರುವವರೆಲ್ಲ ಭ್ರಷ್ಟರೇ, ಅವರನ್ನು ಕಡು ಭ್ರಷ್ಟರು ಎಂದರೆ ತಪ್ಪಿಲ್ಲ ಎಂದರು.

    ದೇಶದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತವರೆಲ್ಲರನ್ನೂ ಬಿಜೆಪಿಗೆ ಸೇರಿಸಿಕೊಳ್ಳುತ್ತಿದ್ದಾರೆ. ಅದೇ ಭ್ರಷ್ಟರು ಇಂದು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅವರದು ಬುರುಡೆ ಪಕ್ಷ. ಪ್ರಧಾನಿಗಳಿಂದ ಎಲ್ಲರೂ ಬುರುಡೆ ಬಡುತ್ತಲೇ ಇರುತ್ತಾರೆ. ಬಿಜೆಪಿಯವರು ಸುಳ್ಳನ್ನೇ ನೂರು ಬಾರಿ ಹೇಳಿ ನಿಜ ಮಾಡುತ್ತಾರೆ. ಇವರು ಸಿದ್ದರಾಮಯ್ಯ ಅವರ ವಿರುದ್ಧ ಅಫಪ್ರಚಾರ ಮಾಡುತ್ತಿದ್ದು, ಇವರ ಈ ಪ್ರಯತ್ನದ ವಿರುದ್ಧ ನಮ್ಮ ಪಕ್ಷದ ನಾಯಕರು ಜನಾಂದೋಲನ ಸಭೆ ಮಾಡುತ್ತಿದ್ದಾರೆ ಎಂದು ರಾಮಲಿಂಗ ರೆಡ್ಡಿ ಹೇಳಿದರು.

  • ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ; ನೂರಕ್ಕೂ ಹೆಚ್ಚು ಜನರ ಸಾವು

    ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ; ನೂರಕ್ಕೂ ಹೆಚ್ಚು ಜನರ ಸಾವು

    ಢಾಕಾ: ಬಾಂಗ್ಲಾದೇಶದಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಕಾರ್ಯಕರ್ತರ ನಡುವಿನ ಸಂಘರ್ಷ ತಾರಕಕ್ಕೇರಿದ್ದು ಹಿಂಸಾಚಾರ ಉಲ್ಬಣಗೊಂಡಿದೆ. ಹತ್ತಕ್ಕೂ ಹೆಚ್ಚು ನಗರಗಳಿಗೆ ಹಿಂಸಾಚಾರ ವ್ಯಾಪಿಸಿದ್ದು, ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

    ಬಾಂಗ್ಲಾ ದೇಶದ ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರು ಹಾಗೂ ಪ್ರತಿಭಟನಾಕಾರರ ನಡುವೆ ಹೊಡೆದಾಟ ಬಡಿದಾಟವೇ ನಡೆದಿದೆ. ಉದ್ಯೋಗ ಮೀಸಲಾತಿ ಸಹಿತ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ವಿದ್ಯಾರ್ಥಿಗಳು ಹಾಗೂ ವಿರೋಧ ಪಕ್ಷಗಳ ಬೆಂಬಲಿಗರು ಹಲವು ದಿನಗಳಿಂದ ಪ್ರತಿಭಟನೆ ನಡೆಸಿತ್ತಿದ್ದಾರೆ.

    ಪ್ರಧಾನಿ ಶೇಕ್ ಹಸೀನಾ ರಾಜೀನಾಮೆಗೂ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಈ ಪ್ರತಿಭಟನೆ ಹತ್ತಿಕ್ಕಲು ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರು ಅಖಾಡಕ್ಕಿಳಿದಿದ್ದು ಉಭಯ ಗುಂಪುಗಳ ನಡುವೆ ಹಿಂಸಾಚಾರ ನಡೆದಿದೆ. ಈ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

    ಅವಾಮಿ ಲೀಗ್ ನ ಬೆಂಬಲಿಗರು, ಛಾತ್ರಾ ಲೀಗ್ ಹಾಗೂ ಜುಬೋ ಲೀಗ್ ಕಾರ್ಯಕರ್ತರ ನಡುವೆ ಭುಗಿಲೆದ್ದಿರುವ ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಹಾಗೂ ಸೇನಾಪಡೆ ಶತಪ್ರಯತ್ನ ನಡೆಸುತ್ತಿದೆ.

  • ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು BJP-JDS ನಾಯಕರಿಂದ ‘ಮೈಸೂರು ಪಾದಯಾತ್ರೆ? 

    ಬೆಂಗಳೂರು: “ಬಿಜೆಪಿ ಮತ್ತು ಜೆಡಿಎಸ್ ಪ್ರಮುಖ ನಾಯಕರು ತಮ್ಮ ಮಕ್ಕಳನ್ನು ರಾಜಕೀಯವಾಗಿ ಉಳಿಸಲು ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರ ಉರುಳಿಸಲು ಪಿತೂರಿ ನಡೆಸುತ್ತಿದ್ದಾರೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ವ್ಯಾಖ್ಯಾನಿಸಿದ್ದಾರೆ..

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಚಿವರೊಂದಿಗೆ ಭಾನುವಾರ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ಪ್ರಜ್ವಲ್‌ ರೇವಣ್ಣ ಪ್ರಕರಣ ಹಾಗೂ ಹಲವಾರು ಪ್ರಕರಣಗಳಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಪಿತೂರಿಯನ್ನು ದೇಶದ ಜನ ಗಮನಿಸಿದ್ದಾರೆ. ನಾವು ಜನರಿಗೆ ವಾಸ್ತವಾಂಶ ವಿವರಿಸುತ್ತೇವೆ. ಒಗ್ಗಟ್ಟಿನಿಂದ ಹೋರಾಡುತ್ತೇವೆ” ಎಂದರು.

    “ಈ ಹಿಂದೆ ಕಾಂಗ್ರೆಸ್- ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಉರುಳಿಸಿದ್ದ ಬಿಜೆಪಿ ಈಗಲೂ ಅದೇ ಉದ್ದೇಶದಿಂದ ಕಾಂಗ್ರೆಸ್‌ ಸರ್ಕಾರವನ್ನು ಗುರಿಯಾಗಿಸಿಕೊಂಡಿದೆ. ಈ ಎಲ್ಲಾ ಬೆಳವಣಿಗೆಗಳ ಕುರಿತು ರಾಜ್ಯದ ಸಚಿವರೊಂದಿಗೆ ಚರ್ಚಿಸಲಾಗಿದೆ” ಎಂದು ಹೇಳಿದರು. ‘2023ರ ವಿಧಾನಸಭೆ ಚುನಾವಣೆ ಉಳ್ಳವರ ಮತ್ತು ಇಲ್ಲದವರು ನಡುವಿನ ಹೋರಾಟವಾಗಿತ್ತು. ಈ ಹೋರಾಟದಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದು. ಬಹುಮತ ಪಡೆದು ಸರ್ಕಾರ ರಚಿಸಿದೆ. ಬಹುಮತ ಪಡೆದ ಸರ್ಕಾರವನ್ನೇ ಬೀಳಿಸಲು ಕುತಂತ್ರದಿಂದ ಹೊರಟಿದ್ದಾರೆ’ ಎಂದುವೇಣುಗೋಪಾಲ್ ಕಿಡಿಕಾರಿದರು.

    “ಸಿದ್ದರಾಮಯ್ಯ ಅವರ ಪ್ರಾಮಾಣಿಕತೆಯ ಬಗ್ಗೆ ಇಡೀ ರಾಜ್ಯದ ಜನರಿಗೆ ತಿಳಿದಿದೆ. ಅವರು ಸಿಎಂ ಸ್ಥಾನಕ್ಕೆ ಹೊಸಬರೇನಲ್ಲ. ಅವರ ರಾಜಕೀಯ ಪ್ರಯಾಣದ ಬಗ್ಗೆ ರಾಜ್ಯದ ಪ್ರತಿಯೊಬ್ಬರು ತಿಳಿದಿದ್ದಾರೆ. ಅವರ ಆರಂಭದ ದಿನಗಳು ಹಾಗೂ ಈಗ ಅವರ ಬೆಳವಣಿಗೆಯನ್ನು ನೋಡಿದ್ದಾರೆ” ಎಂದರು.

    “ನಮ್ಮ ಸರ್ಕಾರ ಬಡವರಿಗಾಗಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಮತ್ತು ಜೆಡಿಎಸ್‌ ನವರಿಗೆ ಹೊಡೆತ ಬಿದ್ದಿದೆ. ಅಲ್ಲದೇ ಕಾಂಗ್ರೆಸ್ ಸರ್ಕಾರ ಅನೇಕ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ತನಿಖೆಗೆ ಆದೇಶಿಸಿದೆ. ಇದರಲ್ಲಿ ಸಿಕ್ಕಿಹಾಕಿಕೊಳ್ಳುವ ಭಯದಿಂದಾಗಿ ಮುಖ್ಯಮಂತ್ರಿಯವರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ” ಎಂದರು.

    “ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡಿರುವ ತಾರತಮ್ಯ ಕುರಿತು ಯಾರೂ ಮಾತನಾಡುತ್ತಿಲ್ಲ. ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕದಿಂದ ಆಯ್ಕೆಯಾಗಿದ್ದರೂ ಯಾವುದೇ ನೆರವು ಒದಗಿಸಿಲ್ಲ. ಕೇಂದ್ರ ಸರ್ಕಾರ ಅನುದಾನ ನೀಡುವ ಬದಲಿಗೆ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ. ನಾವು ಒಗ್ಗಟ್ಟಾಗಿ ಇದ್ದೇವೆ, ಪಿತೂರಿ ವಿರುದ್ಧ ಹೋರಾಡುತ್ತೇವೆ” ಎಂದರು.

    “ರಾಜ್ಯಪಾಲರನ್ನು ಬಿಜೆಪಿ ಪಿತೂರಿಯ ಭಾಗವಾಗಿ ಬಳಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಯವರಿಗೆ ಕಾರಣ ಕೇಳಿ ನೋಟಿಸ್ ನೀಡುವ ಮೂಲಕ ಸರ್ಕಾರ ಬಿಳಲಿದೆ ಎನ್ನುವ ಭಾವನೆ ಮೂಡಿಸುತ್ತಿದ್ದಾರೆ. ನಮ್ಮ ಮತದಾರರಿಗೆ ಸತ್ಯಂಶ ತಿಳಿಸುತ್ತೇವೆ. ಸಚಿವರು, ಶಾಸಕರು ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಜನರಿಗೆ ಸರ್ಕಾರದ ಸಾಧನೆಗಳನ್ನು ವಿವರಿಸಿ ಬಿಜೆಪಿ-ಜೆಡಿಎಸ್‌ ನ ಹುನ್ನಾರವನ್ನು ಬಯಲಿಗೆಳೆಯುವ ಕೆಲಸವನ್ನು ಮಾಡಲಾಗುತ್ತದೆ” ಎಂದರು. ‘ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ವಿಜಯೇಂದ್ರ, ಪ್ರಜ್ವಲ್ ರೇವಣ್ಣ ವಿರುದ್ಧ ಅನೇಕ ಆರೋಪಗಳಿವೆ. ಭ್ರಷ್ಟರು ರಾಜ್ಯದ ಮುಖ್ಯಮಂತ್ರಿ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಹೇಳಿದರು.

    “‘ಪ್ರತಿದಿನ ಸಿದ್ದರಾಮಯ್ಯ ಅವರ ವಿರುದ್ಧ ಪದೇ ಪದೇ ಭ್ರಷ್ಟಾಚಾರ ಆರೋಪ ಮಾಡುವ ಮೂಲಕ ಜನಪ್ರಿಯ ಯೋಜನೆಗಳು ಹಾಗೂ ಗ್ಯಾರಂಟಿ ಯೋಜನೆಗಳನ್ನು ಮುಗಿಸುವ ಹುನ್ನಾರ ಬಿಜೆಪಿಯದ್ದು. ಪ್ರತಿಪಕ್ಷಗಳು ಕೇವಲ ಸಿದ್ದರಾಮಯ್ಯನವರನ್ನು ಮಾತ್ರ ಗುರಿಯಾಗಿಸಿಕೊಂಡಿಲ್ಲ. ಕಾಂಗ್ರೆಸ್ ಸರ್ಕಾರದ ಎಲ್ಲರನ್ನು ಹಾಗೂ ಜನಪ್ರಿಯ ಯೋಜನೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ’ ಎಂದರು.

  • ಭ್ರಷ್ಟಾಚಾರ ನಡೆಸಿ ಭ್ರಷ್ಟಾಚಾರದ ವಿರುದ್ಧವೇ ಸುಳ್ಳು ಪಾದಯಾತ್ರೆ ಮಾಡುತ್ತಿರುವ ಬಿಜೆಪಿ; ಪರಮೇಶ್ವರ್ ವ್ಯಂಗ್ಯ

    ರಾಮನಗರ: ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿ ಭ್ರಷ್ಟಾಚಾರದ ವಿರುದ್ಧವೇ ಸುಳ್ಳು ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹುನ್ನಾರವನ್ನು ಜನಸಾಮಾನ್ಯರಿಗೆ ನಾವು ತಿಳಿಸಬೇಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

    ಚನ್ನಪಟ್ಟಣದಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಪರಮೇಶ್ವರ್, ದಾರಿ ಉದ್ದಕ್ಕೂ ಅನೇಕ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಅದರಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ಹಿಂದಕ್ಕೆ ಹೋಗಿದೆ ಪ್ರಾದೇಶಿಕ ಪಕ್ಷ ಜೆಡಿಎಸ್ ಮುಂದಕ್ಕೆ ಬಂದಿದೆ. ಮೈಸೂರ್ ಚಲೋ ಪಾದಯಾತ್ರೆ ಮಾಡಬಾರದು ಎಂದು ರಾಜಾರೋಷವಾಗಿ ಹೇಳಿದವರ ಫೋಟೋ ಈಗ ಮುಂದೆ ಬಂದಿದೆ. ಪಾದಯಾತ್ರೆ ಮಾಡಲೇಬೇಕು ಎಂದು ಘಂಟಾಘೋಷವಾಗಿ ಹೇಳಿದ ಬಿಜೆಪಿಯ ರಾಜ್ಯ ಅಧ್ಯಕ್ಷರ ಫೋಟೋ ಹಿಂದಕ್ಕೆ ಹೋಗಿದೆ ಎಂದು ಟೀಕಿಸಿದರು.

    ಭ್ರಷ್ಟಾಚಾರಿಗಳ ಭ್ರಷ್ಟಾಚಾರದ ಯಾತ್ರೆ ಎಂದು ಬಿಜೆಪಿಯವರೇ ಹೇಳಿದ್ದಾರೆ. ಸತ್ಯವನ್ನು ಮರೆಮಾಚಲು ಎರಡು ಪಕ್ಷಗಳು ಹೊರಟಿವೆ. ನಾಲ್ಕು ವರ್ಷ ಕರ್ನಾಟಕದಲ್ಲಿ ಭ್ರಷ್ಟ ಆಡಳಿತ ನಡೆಸಿ, 40% ಕಮಿಷನ್ ತಿಂದ ನಿಮಗೆ ಕರ್ನಾಟಕದ ಜನತೆ 2023ರ ಚುನಾವಣೆಯಲ್ಲಿ ಬುದ್ದಿ ಕಲಿಸಿದ್ದಾರೆ ಎಂದ ಪರಮೇಶ್ವರ್, ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಆದರೆ ಕಾಂಗ್ರೆಸ್ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಹೇಳಲು ಬಂದಿದ್ದಾರೆ. ಭ್ರಷ್ಟ ಜನರಿಗೆ ಯಾವಾಗಲೂ ಭ್ರಷ್ಟಾಚಾರದ ಬಗ್ಗೆಯೇ ಯೋಚನೆ ಇರುತ್ತದೆ. ಇದು ಬಿಜೆಪಿಯ ಲಕ್ಷಣ ಎಂದರು.

    ಬಿಜೆಪಿಯವರೇ ನಿಮ್ಮ ಕಾಲದಲ್ಲಿ 21 ಹಗರಣಗಳು ನಡೆದವಲ್ಲ ಇದರ ಬಗ್ಗೆ ರಾಜ್ಯದ ಜನರಿಗೆ ಉತ್ತರ ಕೊಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್, ಭೋವಿ ಅಭಿವೃದ್ಧಿ ನಿಗಮ, ಪ್ರವಾಸೋದ್ಯಮ ಇಲಾಖೆ ಹೀಗೆ ಹಗರಣ ನಡೆದಿದೆ. ಬಿಜೆಪಿಯ ಎಲ್ಲಾ ಹಗಡಗಳನ್ನು ಹೊರಗೆ ತೆಗೆಯುತ್ತೇವೆ. ಜನರ ಮುಂದೆ ಇಡುತ್ತೇವೆ ಎಂದ ಅವರು, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಬಿಜೆಪಿಯ ಹಗರಣಗಳನ್ನು ಜನರ ಮುಂದೆ ಇಟ್ಟು ಸತ್ಯವನ್ನು ತಿಳಿಸಲು ಹೊರಟಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ ಗೆ ನಾವು ಛೀಮಾರಿ ಹಾಕುವುದು ಬೇಡ ಜನರೇ ಛೀಮಾರಿ ಹಾಕುತ್ತಾರೆ ಎಂದರು.

  • ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ನತ್ತ ಮುಖ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ

    ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ನತ್ತ ಮುಖ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ

    ಬೆಂಗಳೂರು: ಬಿಜೆಪಿ, ಜೆಡಿಎಸ್‌ನ ದ್ವಂದ್ವ ನಿಲುವಿನ ಪಾದಯಾತ್ರೆಯಿಂದ ಬೇಸತ್ತ ಹಳೇ ಮೈಸೂರು ಭಾಗದ ಆ ಎರಡೂ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ನತ್ತ ಮುಖ‌ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿಕೆ ನೀಡಿದ್ದಾರೆ.

    ಬಿಜೆಪಿ, ಜೆಡಿಎಸ್ ನ ಮೈಸೂರು ಚಲೋ ಪಾದಯಾತ್ರೆಯ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮುಂಚಿನ ದಿನ ರಾತ್ರಿ ಹೇಳಿಕೆ ನೀಡಿದ್ದ, ಪೆನ್ ಡ್ರೈವ್ ಪ್ರಕರಣದಲ್ಲಿ ತಮ್ಮ ಕುಟುಂಬದ ಸರ್ವ ನಾಶ ಮಾಡಿದವನ ಸಭೆಗೆ ನಾನು ಹೋಗಬೇಕೇ ಎಂದು ರಾತ್ರಿ ಪ್ರಶ್ನಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, ಬೆಳಗಾಗುವುದರೊಳಗೆ ತಮ್ಮ ನಿಲುವು ಬದಲಿಸಿದ್ದಾರೆ. ದಿಢೀರ್ ಆಗಿ ಬಂದು ಪಾದಯಾತ್ರೆಯ ನೇತ್ರತ್ವ ವಹಿಸಿದ್ದಾರೆ. ಮಂತ್ರಿ ಪದವಿಯಿಂದ ಕಿತ್ತು ಹಾಕುವುದಾಗಿ ಅಮಿತ್ ಶಾ ಬೆದರಿಕೆ ಹಾಕಿರಬೇಕು. ಸಿಕ್ಕ ಒಂದು ಸಚಿವ ಪದವಿ ಕೈಬಿಡುವ ಭಯದಲ್ಲಿ ಕುಮಾರಸ್ವಾಮಿ ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಮಂಜುನಾಥ ಭಂಡಾರಿ ಅವರು ಟೀಕಿಸಿದ್ದಾರೆ.

    ಇಂಥ ದ್ವಂದ್ವ ನಿಲುವಿನ ವ್ಯಕ್ತಿಯನ್ನು ನಂಬುವುದು ಹೇಗೆ..? ರಾಜ್ಯದ ಜನರು ಇಂಥ ಸಚಿವರಿಂದ ರಾಜ್ಯದ ಜನರು ಏನು ತಾನೇ ನಿರೀಕ್ಷೆ ಮಾಡಬಹುದು ಎಂದು ಭಂಡಾರಿ ಅವರು ಪ್ರಶ್ನಿಸಿದ್ದಾರೆ.

    ಚುನಾವಣೆ ಗೆದ್ದ ಬಳಿಕ ಬದಲಾದ ವರಸೆ

    ಕುಮಾರಸ್ವಾಮಿ ಕುಟುಂಬದವರು, ಎಲೆಕ್ಷನ್‌ ಗೆಲ್ಲುವತನಕ “ನಾವು ಮಣ್ಣಿನ ಮಕ್ಕಳು, ನೀರಿನ ಮಕ್ಕಳು ಎಂದು ಹೇಳುತ್ತಿದ್ದರು. ಮಂಡ್ಯ, ರಾಮನಗರ ನಮ್ಮ ಕಣ್ಣು, ಕಿವಿ, ಎಂದು ಹೇಳುತ್ತಿದ್ದರು. ಇದೇ ನಮ್ಮ ಹೃದಯ, ಶ್ವಾಸಕೋಶ, ಕರುಳು ಎಂದು ಜನರನ್ನು ಮರಳು ಮಾಡಿದ್ದರು. ಗೆದ್ದಮೇಲೆ, ಅಧಿಕಾರ ಹಿಡಿದ ಮೇಲೆ ಅವರ ರಾಗವೇ ಬದಲಾಗಿದೆ. ಮೇಕೆದಾಟು ಸಮಸ್ಯೆ ಬಗೆಹರಿಸುತ್ತೇನೆ, ಕಾವೇರಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದ ಎಚ್ ಡಿಕೆ, ಈಗ ನಾನೆಲ್ಲಿ ಹೇಳಿದ್ದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

    ನಾನು ಸಾಯುವುದರೊಳಗೆ ಬಗೆಹರಿಸುತ್ತೇನೆ ಎಂದು ಇನ್ನೊಂದು ಕಡೆ ಹೇಳಿಕೆ ನೀಡುತ್ತಾರೆ. ಹೀಗೆ ಘಳಿಗೆಗೊಂದು, ಗಂಟೆಗೊಂದು, ‌ಹೇಳಿಕೆ ನೀಡಿ ತಮ್ಮ ಬಣ್ಣ ಬಯಲು ಮಾಡಿಕೊಳ್ಳುತ್ತಿದ್ದಾರೆ. ಒಂದೆಡೆ ಕಾಂಗ್ರೆಸ್ ಬಯ್ಯುತ್ತಾರೆ, ಜತೆಗೆ ತಮ್ಮ ಮಿತ್ರ ಪಕ್ಷ ಬಿಜೆಪಿಯನ್ನೂ ಬಯ್ಯುತ್ತಾರೆ. ತಮ್ಮಿಂದಲೇ ಎಲ್ಲ ಎನ್ನುತ್ತಾರೆ ಇಂಥ ವ್ಯಕ್ತಿಯಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮೇಕೆದಾಟು ಯೋಜನೆಗೆ ಅನುಮತಿ ಕೊಡಲು ಕೇಂದ್ರಕ್ಕೆ ಎಲ್ಲ ಅವಕಾಶವಿದೆ. ಆದರೆ, “ನಿಮ್ಮ ಸ್ನೇಹಿತ ಸ್ಟಾಲಿನ್ ಬಳಿ ಮಾತನಾಡಿ ಎಂಬುದಾಗಿ ಸಿಎಂ ಸಿದ್ದರಾಮಯ್ಯನವರಿಗೆ ಕುಮಾರಸ್ವಾಮಿ ಅವರು ಸಲಹೆ ನೀಡುತ್ತಾರೆ. ಹಾಗಾದರೆ ಇವರಿಗೇನು ಸ್ಟಾಲಿನ್ ವೈರಿಯೇ..? ಎಂದು ಮಂಜುನಾಥ ಭಂಡಾರಿ ಪ್ರಶ್ನಿಸಿದ್ದಾರೆ.

    ಅಧಿಕಾರ ಹಿಡಿಯುವ ಸಲುವಾಗಿ ಕರುಳು ಎಂದು ಜನರನ್ನು ಮರಳು ಮಾಡಿದವರು ಈಗ ಕಾವೇರಿಯನ್ನು ನಡುನೀರಿನಲ್ಲಿ ಕೈ ಬಿಟ್ಟಿದ್ದಾರೆ. ಮೇಕೆದಾಟು ಯೋಜನೆಯ ಬಗ್ಗೆ ಮಾತನಾಡುತ್ತಿಲ್ಲ. ಕೈಗಾರಿಕೆ ತರುವುದಾಗಿ, ಉದ್ಯೋಗ ಕೊಡುವುದಾಗಿ ಹೊಸ ವರಸೆ ಪ್ರಾರಂಭಿಸಿದ್ದಾರೆ. ನಿರುದ್ಯೋಗಿಗಳ ಆಸೆಗೆ ಯಾವಾಗ ಮಣ್ಣೆರಚುತ್ತಾರೋ ಗೊತ್ತಿಲ್ಲ.
    ಜನರು ಇವರ ಕುಟುಂವದವರನ್ನು ಗೆಲ್ಲಿಸಲು ಹೋರಾಡಬೇಕು. ಆದರೆ, ಇವರನ್ನು ನಂಬಿಕೊಂಡಿರುವ ಮತದಾರರ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಎಚ್ ಡಿಕೆ ಅವರನ್ನು ಮಂಜುನಾಥ ಭಂಡಾರಿ ಕಟುವಾಗಿ ಟೀಕಿಸಿದ್ದಾರೆ.‌

    ಅಧಿಕಾರಕ್ಕಾಗಿ ನಾಟಕ? 

    ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮೊಳೆ ಹೊಡೆಯಬೇಕು. ಅದನ್ನು ಗುರಿಯಾಗಿಸಿಕೊಂಡು ಎಚ್‌ಡಿಕೆ ಈಗ ನಾಟಕ ಮಾಡುತ್ತಿದ್ದಾರೆ. ಜನರ ತಲೆಯ ಮೇಲೆ ಟೋಪಿ ಹಾಕುವುದು ಇವರಿಗೆ ರೂಢಿ. ಈಗ ಮತ್ತೊಂದು ದೊಡ್ಡ ಟೋಪಿ ಹಿಡಿದುಕೊಂಡು ಬೈ ಎಲೆಕ್ಷನ್ ಗೆ ಸಜ್ಜಾಗಿದ್ದಾರೆ. ಸಿ.ಪಿ.ಯೋಗೇಶ್ವರ್ ಅವರಿಗೂ ಇವರು ಟೋಪಿ ಹಾಕುವುದು ಶತಃ ಸಿದ್ಧ.‌ ಎಂಪಿ ಚುನಾವಣೆ ಗೆಲ್ಲುವವರೆಗೆ ಮೈತ್ರಿ ಎಂದವರು ಈಗ ಬಿಜೆಪಿಗೇ ನಾಮ ಹಾಕಲು ಸಜ್ಜಾಗಿದ್ದಾರೆ ಎಂದು ಕುಮಾರಸ್ವಾಮಿ ನಿಲುವಿನ ಬಗ್ಗೆ ಭಂಡಾರಿ ಲೇವಡಿ ಮಾಡಿದ್ದಾರೆ.

    ಮುಡಾ ಹಗರಣ ಆಗಿಲ್ಲ ಎಂದು ಕುಮಾರಸ್ವಾಮಿ ಅವರಿಗೂ ಗೊತ್ತು. ರಾಜ್ಯದಲ್ಲಿ ಪ್ರವಾಹ ಬಂದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಜಾಸ್ತಿಯಾಗಿದೆ‌. ಜನರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದ್ದರು. ಹೀಗಾಗಿ ಪಾದಯಾತ್ರೆ ಬೇಸದ ಎಂದಿದ್ದರು. ಮತ್ತೆ ವರಸೆ ಬದಲಿಸಿದರು ಎಂದು ಟೀಕಿಸಿದರು.

    ರಾಹುಲ್ ಗಾಂಧಿ ಅವರು ಪಾದಯಾತ್ರೆ ಮಾಡಿದಾಗ, ಬಡವರ, ಶ್ರೀಸಾಮಾನ್ಯರ, ಮಹಿಳೆಯರ, ರೈತರ ನಿರುದ್ಯೋಗಿಗಳ ಹೀಗೆ ಪ್ರತಿಯೊಬ್ಬರ ಸಮಸ್ಯೆ ಆಲಿಸಿದ್ದರು‌. ಹಳ್ಳಿ, ಹಳ್ಳಿಗಳಿಗೆ ಹೋಗಿ ಮಾತನಾಡಿದ್ದರು. ಆದರೆ, ಈಗ ಬಿಜೆಪಿ, ಜೆಡಿಎಸ್ ಪಾದಯಾತ್ರೆಯಲ್ಲಿ ಎಲ್ಲೂ ಜನರ ಸಮಸ್ಯೆ ಬಗ್ಗೆ ಮಾತನಾಡುತ್ತಲೇ ಇಲ್ಲ. ಅವರು, ಅಷ್ಟು ಹಣ ಮಾಡಿದ್ದಾರೆ. ಇವರು ಇಷ್ಟು ಹಣ ಮಾಡಿದ್ದಾರೆ ಎಂದು‌ ಹೇಳಿಕೊಂಡು, ವೈಯಕ್ತಿಕ ನಿಂದನೆ, ತೇಜೋವಧೆ ಮಾಡಿಕೊಂಡು ಹೋಗುತ್ತಿದ್ದಾರೆ. ಇದೊಂದು ನಾಯಕತ್ವದ ಪೈಪೋಟಿಯ ಪಾದಯಾತ್ರೆಯಾಗಿದೆ. ಆರಂಭದಲ್ಲೇ ಅಪಸ್ವರ ಶುರುವಾಗಿದೆ. ಒಬ್ಬರ ಕಾಲನ್ನು ಒಬ್ಬರು ಎಳೆಯುತ್ತಿದ್ದಾರೆ. ಇದು ದಡ ಸೇರುವ ಲಕ್ಷಣ ಕಾಣುತ್ತಿಲ್ಲ ಎಂದು ಮಂಜುನಾಥ ಭಂಡಾರಿ ಕಿಡಿಕಾರಿದ್ದಾರೆ.

    ಯಡಿಯೂರಪ್ಪ ತನ್ನ ಮಗನ ನಾಯಕತ್ವಕ್ಕಾಗಿ ಹೋರಾಡುತ್ತಿದ್ದರೆ, ಕುಮಾರಸ್ವಾಮಿ ತನ್ನ ಮಗನನ್ನು ನಾಯಕ ಎಂದು ಬಿಂಬಿಸಲು ಹೋರಾಡುತ್ತಿದ್ದಾರೆ. ಈ ನಡುವೆ ಕಾರ್ಯಕರ್ತರು ಬಡವಾಗುತ್ತಿದ್ದಾರೆ. ಹೀಗಾಗಿ ಅವರೆಲ್ಲರೂ ಈಗ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎಂದು ಮಂಜುನಾಥ್ ಭಂಡಾರಿ ಹೇಳಿದ್ದಾರೆ.

  • ದೇವೇಗೌಡರ ಕಟುಂಬದ ವಿರುದ್ದ ಮಾಡಿದ್ದ ಆರೋಪವನ್ನು ಹಿಂಪಡೆಯುತ್ತೀರ? BSYಗೆ ರಮೇಶ್ ಬಾಬು ಮಾರ್ಮಿಕ ಪ್ರಶ್ನೆ..!

    ಬೆಂಗಳೂರು: ಮುಡಾ ಸೈಟ್ ಹಗರಣ ಇದೀಗ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಸಂಘರ್ಷವನ್ನು ಹುಟ್ಟುಹಾಕಿದೆ. ಸಿಎಂ ಸಿದ್ದರಾಮಯ್ಯ ವಿರುದ್ದ ಆರೋಪ ಕೇಳಿದ ತಕ್ಷಣ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ನಾಯಕರ ನಿಲುವಿನ ಬಗ್ಗೆ ಪ್ರದೇಶ ಕಾಂಗ್ರೆಸ್ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಕಿಡಿ ಕಾರಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಆರೋಪ ಕೇಳಿಬಂದ ತಕ್ಷಣ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು ತಾವೇ ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ದ ಮಾಡಿರುವ ಆರೋಪಗಳನ್ನು‌ ಹಿಂಪಡೆಯುತ್ತಾರ ಹಾಗೂ ಅಶೋಕ್ ಅವರ ಭೂ ಅಕ್ರಮ ಬಗ್ಗೆ ತನಿಖೆಗೆ ಒತ್ತಾಯಿಸುತ್ತಾರ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಾಜಿ ಶಾಸಕರೂ ಆಗಿರುವ ರಮೇಶ್ ಬಾಬು ಅವರು ಈ ಸಂಬಂಧ ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆ ಗಮನಸೆಳೆದಿದೆ. ಕರ್ನಾಟಕದಲ್ಲಿ ಜನನಾಯಕರಾಗಿ ಬೆಳೆದವರಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ಒಬ್ಬರು. ಜನನಾಯಕರು ಸಂದರ್ಭಕ್ಕೆ ಪೂರಕವಾಗಿ ತಮ್ಮ ನಿಲುವು ಮತ್ತು ಹೇಳಿಕೆಗಳನ್ನು ಬದಲಾಯಿಸಿದರೆ ಅವರು ಜನನಾಯಕರಾಗುವುದಿಲ್ಲ ಎಂದು ರಮೇಶ್ ಬಾಬು ಪ್ರತಿಪಾದಿಸಿದ್ದಾರೆ.

    ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಕುಮಾರ ಸ್ವಾಮಿ ಅವರೊಂದಿಗೆ ಸಮ್ಮಿಶ್ರ ಸರ್ಕಾರ ನಡೆಸಿದ ಯಡಿಯೂರಪ್ಪನವರು, ಕುಮಾರಸ್ವಾಮಿ ಅವರಿಂದ ಅಧಿಕಾರ ವಂಚಿತರಾಗಿ ವಚನ ಭ್ರಷ್ಟತೆಯ ಆರೋಪ ಮಾಡಿ ಇದೇ ಕಾರಣಕ್ಕಾಗಿ ಹೋರಾಟ ಮಾಡಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರು. ತದನಂತರ ಬೇರೆಬೇರೆ ಸಂದರ್ಭಗಳಲ್ಲಿ ಜೆಡಿಎಸ್ ಪಕ್ಷದ ಮೇಲೆ, ದೇವೇಗೌಡರ ಮೇಲೆ ಮತ್ತು ಅವರ ಕುಟುಂಬದ ಮೇಲೆ ವಿಧಾನ ಮಂಡಲದ ಒಳಗಡೆ ಗುರುತರವಾದ ಆರೋಪಗಳನ್ನು ಮಾಡಿ ಆ ಆರೋಪಗಳು ಧಾಖಲೆ ಆಗಿರುತ್ತವೆ. ಆದರೆ ಮಗನ ರಾಜಕಾರಣದ ಭವಿಷ್ಯದ ಅನಿವಾರ್ಯತೆಗಾಗಿ ಜೆಡಿಎಸ್ ಪಕ್ಷ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕೈ ಜೋಡಿಸಿ ಶನಿವಾರ (ಆ.3) ಪಾದಯಾತ್ರೆಗೆ ಚಾಲನೆ ನೀಡುವ ಮೂಲಕ ವರ್ತಮಾನ ಕಾಲದ ದುರಂತ ನಾಯಕರಾಗಿ ಕಾಣಿಸಿಕೊಂಡಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.

    ಇದೇ ವೇಳೆ, ಕರ್ನಾಟಕದ ಜನರಿಗೆ ಕೆಲವು ಪ್ರಶ್ನೆಗಳಿಗೆ ಯಡಿಯೂರಪ್ಪ ಅವರು ಸಾರ್ವಜನಿಕವಾಗಿ  ಕಾಂಗ್ರೆಸ್ ಪಕ್ಷದ ಪರವಾಗಿ ಉತ್ತರಿಸಬೇಕಿದೆ ಎಂದಿರುವ ರಮೇಶ್ ಬಾಬು, 10 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.‌

    1. ಯಡಿಯೂರಪ್ಪನವರು 2008ರಲ್ಲಿ JDS ಪಕ್ಷದ ಮೇಲೆ, ಹೆಚ್.ಡಿ.ಕುಮಾರಸ್ವಾಮಿ ಮೇಲೆ ಮಾಡಿದ್ದ ವಚನ ಭ್ರಷ್ಟತೆಯ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
    2. ಈ ರಾಜ್ಯದ ಸಿಎಂ ಆಗಿ 17-03-2011ರಲ್ಲಿ ವಿಧಾನ ಪರಿಷತ್‌ನಲ್ಲಿ ಮಾತನಾಡಿ ದೇವೇಗೌಡರು ತನ್ನ ಕುಟುಂಬದವರಿಗೆ ಮೈಸೂರಿನ ಮೂಡ’ದಲ್ಲಿ ಅಕ್ರಮವಾಗಿ 48 ನಿವೇಶನಗಳನ್ನು ನೀಡಿರುವುದಾಗಿ ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
    3. ಅದೇ ದಿನ ವಿಧಾನ ಪರಿಷತಿನಲ್ಲಿ ಆರೋಪ ಮಾಡಿ ಜಂತ್ ಕಲ್ ಮೈನಿಂಗ್ ನವೀಕರಣದಲ್ಲಿ ದೇವೇಗೌಡರ ಕುಟುಂಬದವರು ಪಾಲುಗರಿಕೆ ಪಡೆದಿದ್ದಾರೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
    4. ಕುಮಾರ ಸ್ವಾಮಿ ಅವರಿಗೆ ಮೂಡದಲ್ಲಿ ನಿವೇಶನ ಸಂಖ್ಯೆ. 17B(1) ವಿಸ್ತೀರ್ಣ 75X280 ಅಡಿ 1984 ರಲ್ಲಿ ಅಕ್ರಮವಾಗಿ ಹಂಚಿಕೆಯಾಗಿದೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
    5. 25-05-2018 ರಲ್ಲಿ ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡುವಾಗ, ಹೆಚ್. ಡಿ. ಕುಮಾರ ಸ್ವಾಮಿ ರವರು ತಾವು ಬೆಂಬಲ ವಾಪಸ್ಸು ಪಡೆದ ನಂತರ ಅಂದಿನ ಮುಖ್ಯ ಮಂತ್ರಿಯಾಗಿ 22 ಗಣಿಗಾರಿಕೆ ಗುತ್ತಿಗೆ ಅನುಮೋದನೆ ಮಾಡಿ ಅಕ್ರಮ ಎಸಗಿದ್ದಾರೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
    6. ಅದೇ ದಿನ ವಿಧಾನ ಸಭೆಯಲ್ಲಿ ಮಾತನಾಡುವಾಗ 1984 ರಲ್ಲಿ ದೇವೇಗೌಡರು ಅವರ ಕುಟುಂಬದವರಿಗೆ ಮೂಡದಲ್ಲಿ 46 ನಿವೇಶನ ಹಂಚಿಕೆ ಮಾಡಿದ್ದರು ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
    7. ಬಿ.ಎಸ್.ಯಡಿಯೂರಪ್ಪನವರು ಅಂದಿನ ರಾಜ್ಯಪಾಲರು ತಮ್ಮ ವಿರುದ್ದ ಬಂದ ಆರೋಪದ ಮೇಲೆ Prosecution ವಿಚಾರಣೆಗೆ ಅನುಮತಿ ನೀಡಿದ್ದನ್ನು ಕರ್ನಾಟಕ ಹೈ ಕೋರ್ಟ್ ನಲ್ಲಿ ರಿಟ್ ಪಿಟಿಷನ್ ಮುಖಾಂತರ ಪ್ರಶ್ನೆ ಮಾಡಿದ್ದು, ಹೈ ಕೋರ್ಟ್ ಇವರ ಅರ್ಜಿಯನ್ನು ಮಾನ್ಯ ಮಾಡಿ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ್ದು, ತಪ್ಪು ಎಂದು ಹೇಳಿರುತ್ತದೆ. ಯಡಿಯೂರಪ್ಪನವರು ಈ ತೀರ್ಪುನ್ನು ಒಪ್ಪುತ್ತಾರೆಯೇ ಅಥವಾ ನಿರಾಕರಿಸುತ್ತಾರೆಯೇ?
    8. ಯಡಿಯೂರಪ್ಪನರು ತಮ್ಮ ಪ್ರಕರಣದಲ್ಲಿ ಅರ್ಜಿದಾರರಾದ ಬಾಲರಾಜ್ ಮತ್ತು ಶಿರಾಜಿನ್ ಭಾಷಾ ರವರನ್ನು ಬಳಸಿಕೊಂಡು ಹೆಚ್.ಡಿ.ದೇವೇಗೌಡರು ತಮ್ಮ ವಿರುದ್ಧ ದೂರು ದಾಖಲಿಸಿದ್ದರು ಎಂದು ಅನೇಕ ಸಂಧರ್ಭಗಳಲ್ಲಿ ಆರೋಪ ಮಾಡಿದ್ದರು. ಯಡಿಯೂರಪ್ಪನವರು ಈ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
    9. ಯಡಿಯೂರಪ್ಪನವರು ಪಾದಯಾತ್ರೆಯ ಉದ್ಘಾಟನೆಗೆ ತಮ್ಮ ಪ್ರಕರಣದ ದೂರುದಾರರಾದ ಬಾಲರಾಜ್ ಮತ್ತು ಶಿರಾಜಿನ್ ಭಾಷರವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲು ತಮ್ಮ ಪಕ್ಷದ ಹೈ ಕಮಾಂಡ್ ನಿಂದ ಯಾವುದೇ ನಿರ್ಬಂಧ ಇತ್ತೇ?
    10. ಮೂಡ ಪ್ರಕರಣದಲ್ಲಿ ಪಾದಯಾತ್ರೆ ಉದ್ಘಾಟಿಸಿದ ಯಡಿಯೂರಪ್ಪನವರು ಬೆಂಗಳೂರು ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿ ಬಿ. ಎಂ. ಕಾವಲು ಗ್ರಾಮದ ಸುಮಾರು 2500 ಎಕರೆ ಅಕ್ರಮ ಭೂಮಿ ಹಂಚಿಕೆ ಆರೋಪದ ಸಂಬಂಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ತನಿಖೆಗೆ ಒತ್ತಾಯಿಸುವರೇ?

    ಯಡಿಯೂರಪ್ಪನವರು ಈ ರಾಜ್ಯದ ಒಬ್ಬ ಜನನಾಯಕರಾಗಿದ್ದು, ಸದನದ ಒಳಗಡೆ ಅವರು ಹೆಚ್.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಮೇಲೆ ಆರೋಪಗಳನ್ನು ಮಾಡಿದ್ದು, ಇವುಗಳು ಅಧಿಕೃತ ದಾಖಲೆಗಳಾಗಿ ಉಳಿದುಕೊಂಡಿರುತ್ತವೆ. ಮಾನ್ಯ ಯಡಿಯೂರಪ್ಪನವರು ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಅವರ ನಾಯಕತ್ವಕ್ಕೆ ಅನುಗುಣವಾಗಿ ಮೇಲಿನ 10 ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎಂದು ರಮೇಶ್ ಬಾಬು ಹೇಳಿದ್ದಾರೆ.

  • ಮೃತ ಪಿಎಸ್‌ಐ ಪರಶುರಾಮ್ ಪತ್ನಿಗೆ ಸರ್ಕಾರಿ ಉದ್ಯೋಗ: ಪರಮೇಶ್ವರ್ ಭರವಸೆ

    ಬೆಂಗಳೂರು: ಯಾದಗಿರಿಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪರಶುರಾಮ್ ಸಾವಿನ ಪ್ರಕರಣ ರಾಜ್ಯ ರಾಜಕೀಯ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಪೊಲೀಸ್ ಅಧಿಕಾರಿ ಬಲಿಯಾಗಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.

    ಇದೇ ವೇಳೆ ಮೃತ ಪಿಎಸ್‌ಐ ಪತ್ನಿಗೆ ಸರ್ಕಾರಿ ಕೆಲಸ ಕೊಡಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತ ಪಿಎಸ್‌ಐ ಪರಶುರಾಮ್ ಪತ್ನಿಗೆ ಕೆಲಸ ಹಾಗೂ ಪರಿಹಾರ ಕೊಡುವುದಕ್ಕೆ ಸರ್ಕಾರ ತೀರ್ಮಾನ ಮಾಡಿದೆ ಎಂದು ತಿಳಿಸಿದರು.

    ಶಾಸಕ ಮೇಲೆ ಆರೋಪ ಕೇಳಿ ಬಂದಿದ್ದು ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದೂ ಅವರು ತಿಳಸಿದರು.‌ ಪರಶುರಾಮ್ ಸಾವಿನ ಪ್ರಕರಣವು ಆತ್ಮಹತ್ಯೆ ಅಲ್ಲ ಎಂದು ಇಲಾಖೆ ಹೇಳಿದೆ. ಅವರು ಯಾವುದೇ ಸೂಸೈಡ್ ನೋಟ್ ಕೂಡಾ ಬರೆದಿಲ್ಲ ಎಂದಿರುವ ಪರಮೇಶ್ವರ್, ಆದರೂ ಆರೋಪ ಕೇಳಿಬಂದಿರಿವ ಹಿನ್ನೆಲೆಯಲ್ಲಿ ಶಾಸಕರ ವಿರುದ್ದ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು.