Category: ಪ್ರಮುಖ ಸುದ್ದಿ

  • ಮಹಿಳೆಯ ಕಿಡ್ನಾಪ್ ಕೇಸ್; ರೇವಣ್ಣ ಗ್ಯಾಂಗ್ ವಿರುದ್ದ ಪೊಲೀಸ್ ಚಾರ್ಜ್‌ಶೀಟ್

    ಬೆಂಗಳೂರು: ಮಹಿಳೆಯ ಅಪಹರಣ ಆರೋಪ ಕುರಿತಂತೆ ಮೈಸೂರಿನ ಕೆ.ಆರ್‌. ನಗರ ಠಾಣೆಯಲ್ಲಿ ಮಾಜಿ ಸಚಿವ ಹಾಗೂ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ವಿಶೇಷ ತನಿಖಾ ತಂಡವು ಚಾರ್ಜ್ಶೀಟ್ ಸಲ್ಲಿಸಿದೆ.

    ಮಾಜಿ ಸಚಿವ ರೇವಣ್ಣ, ಭವಾನಿ ರೇವಣ್ಣ ಹಾಗೂ ಇತರರು ಸೇರಿ ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ರೇವಣ್ಣ ಬಂಧನಕ್ಕೊಳಗಾಗಿದ್ದರೆ, ಪತ್ನಿ ಭವಾಣಿ ಅವರು ಜಾಮೀನು ಪಡೆದಿದ್ದಾರೆ. ಈ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರ ತಂಡ ಹಲವು ಮಹತ್ವದ ಸಾಕ್ಷಿಗಳೊಂದಿಗೆ ದೋಷಾರೋಪ ಪಟ್ಟಿಯನ್ನು 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ.

    ಜುಲೈ 29ರಂದು 42ನೇ ಎಸಿಎಂಎಂ ನ್ಯಾಯಾಲಯ ಚಾರ್ಜ್‌ಶೀಟ್ ಸಲ್ಲಿಸಿರುವ ಪೊಲೀಸರು, ಅಪಹರಣ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಎಚ್‌.ಡಿ. ರೇವಣ್ಣ ಹಾಗೂ ಇತರರ ವಿರುದ್ಧದ ಆರೋಪಗಳು ತನಿಖೆಯಿಂದ ದೃಢಪಟ್ಟಿರುವುದನ್ನು ಉಲ್ಲೇಖಿಸಿದ್ದಾರೆ.‌

  • ಮುಡಾ ಹಗರಣ; ಇದೀಗ ರಾಜಭವನ-ಸರ್ಕಾರ ನಡುವೆ ಸಂಘರ್ಷ; ರಾಜ್ಯಪಾಲರ ಶೋಕಾಸ್ ನೊಟೀಸ್ ಹಿಂಪಡೆಯುವಂತೆ ಒತ್ತಾಯಿಸಲು ಸಂಪುಟ ತೀರ್ಮಾನ

    ಮುಡಾ ಹಗರಣ; ಇದೀಗ ರಾಜಭವನ-ಸರ್ಕಾರ ನಡುವೆ ಸಂಘರ್ಷ; ರಾಜ್ಯಪಾಲರ ಶೋಕಾಸ್ ನೊಟೀಸ್ ಹಿಂಪಡೆಯುವಂತೆ ಒತ್ತಾಯಿಸಲು ಸಂಪುಟ ತೀರ್ಮಾನ

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವ ಮುಡಾ ಹಗರಣ ವಿಚಾರದಲ್ಲಿ ಈವರೆಗೂ ಕಾಂಗ್ರೆಸ್-ಬಿಜೆಪಿ ನಡುವೆ ನಡೆಯುತ್ತಿದ್ದ ಸಂಘರ್ಷ ಇದೀಗ ರಾಜಭವನ-ಸರ್ಕಾರ ನಡುವಿನ ಕಲಹದತ್ತ ತಿರುಗಿದಂತಿದೆ.

    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣ ಕುರಿತಂತೆ ಪ್ರಾಸಿಕ್ಯೂಷನ್ ಅನುಮತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಹಿನ್ನೆಲೆ ರಾಜ್ಯಪಾಲರು ಸಿಎಂಗೆ ನೀಡಿರುವ ನೊಟೀಸ್ ಇದೀಗ ವಿದ್ಯಮಾನಗಳ ಕೇಂದ್ರಬಿಂದುವಾಗಿದ್ದು, ಈ ವಿಚಾರದಲ್ಲಿ ಇಂದು (ಆ.1) ನಡೆದ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರವೊಂದು ರಾಜಭವನ ಮತ್ತು ಸರ್ಕಾರದ ನಡುವಿನ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಂತಿದೆ.

    ಅಷ್ಟಕ್ಕೂ ಸಂಪುಟದ ತೀರ್ಮಾನ ಏನು..?

    ರಾಜ್ಯಪಾಲರು ನೀಡಿರುವ ನೊಟೀಸ್ ಸಿದ್ದರಾಮಯ್ಯ ಅವರನ್ನು ಆತಂಕಕ್ಕೀಡು ಮಾಡಿದರೆ, ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೂ ಮುಜುಗರದ ಪರಿಸ್ಥಿತಿಯನ್ನು ತಂದೊಡ್ಡಿದೆ. ಇಂದು ವೇಳೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದೇ ಆದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡುವ ಪರಿಸ್ಥಿತಿಯೂ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಜಾಣ ನಡೆ ಅನುಸರಿಸಿರುವ ಸಿದ್ದರಾಮಯ್ಯ ಇಂದಿನ ಸಂಪುಟ ಸಭೆಯ ನಿರ್ಧಾರವನ್ನು ಉಪಮುಖ್ಯಮಂತ್ರಿ ಡಿ.ಕೆ‌.ಶಿವಕಮಾರ್ ಅವರಿಗೆ ಬಿಟ್ಟುಕೊಟ್ಟರು.

    ಡಿ.ಕೆ.ಶಿ.ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಎರಡು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್ ಅನುಮತಿ ಸಂಬಂಧ ರಾಜ್ಯಪಾಲರು ನೀಡಿರುವ ನೊಟೀಸ್​ ಹಿಂಪಡೆಯುವಂತೆ ಒತ್ತಾಯಿಸುವ ಹಾಗೂ ಈ ಬಗ್ಗೆ ಕಾನೂನು ಹೋರಾಟ ನಡೆಸಲು ಸಂಪುಟ ನಿರ್ಣಯ ಕೈಗೊಂಡಿತು.

    ಮೊಟ್ಟೆ ಹಗರಣಕ್ಕೆ ಸಂಬಂಧಿಸಿದಂತೆ ದೂರು ನೀಡಿ ಮೂರು ತಿಂಗಳಾದರೂ ರಾಜ್ಯಪಾಲರು ಕ್ರಮ ಕೈಗೊಂಡಿರಲಿಲ್ಲ. ಹಿಂದೆ ಬಿಜೆಪಿಯವರ ವಿರುದ್ದ ಖಾಸಗಿ ದೂರು ದಾಖಲಾದಾಗ ಪ್ರಾಸಿಕ್ಯುಷನ್‌ಗೂ ಅನುಮತಿ ನೀಡಿಲ್ಲ, ಶೋಕಾಸ್ ನೊಟೀಸ್ ಕೂಡ ನೀಡಿರಲಿಲ್ಲ. ಈ ಹಿಂದೆ ಬಿಜೆಪಿ ನಾಯಕರ ವಿರುದ್ದ ಅನೇಕ ದೂರುಗಳು ಸಲ್ಲಿಕೆಯಾಗಿದ್ದು, ಆ ದೂರುಗಳ ಬಗ್ಗೆ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಈಗ ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಒತ್ತಡ ಹೇರುತ್ತಿರುವುದು ಸರಿಯಲ್ಲ ಎಂದು ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ.

    ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ತರಾತುರಿಯಲ್ಲಿ ನೋಟೀಸ್ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿರುವುದರಿಂದ ಈ ನೊಟೀಸ್​ ಹಿಂಪಡೆಯುವಂತೆ ರಾಜ್ಯಪಾಲರನ್ನು ಒತ್ತಾಯಿಸಲು ಸಚಿವ ಸಂಪುಟ ನಿರ್ಧಾರಿಸಿದೆ.

    ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ರಾಜಣ್ಣ, 20 ವರ್ಷಗಳ ಹಿಂದೆಯೇ ಸಿಎಂ ಪತ್ನಿ ಕಾನೂನು ಪ್ರಕಾರವಾಗಿಯೇ ಮುಡಾ ಸೈಟ್​​ ಪಡೆದುಕೊಂಡಿದ್ದಾರೆ.ಯ ಹೀಗಿದ್ದರೂ ರಾಜಕೀಯ ಪ್ರೇರಿತವಾಗಿ ವಿವಾದ ಎಬ್ಬಿಸಲಾಗಿದೆ ಎಂದರು. ಈಗ ಗವರ್ನರ್ ಗೆಹ್ಲೋಟ್​ ಮುಂದೆ‌ ಎಷ್ಟು ಅರ್ಜಿಗಳು ಇವೆ?. ಇದು ರಾಜಕೀಯ ಪ್ರೇರಿತ ಹಾಗಾಗಿ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನೊಟೀಸ್ ಹಿಂಪಡೆಯಲು ಒತ್ತಾಯಿಸುವ ತೀರ್ಮಾನಿಸಲಾಯಿತು ಎಂದು ತಿಳಿಸಿದರು.

  • ವಾರಾಂತ್ಯದ ವರೆಗೂ ರಾಜ್ಯದಲ್ಲಿ ಭಾರೀ ಮಳೆ, ದಕ್ಷಿಣ ಕನ್ನಡ, ಉಡುಪಿ ಸಹಿತ ಹಲವು ಜಿಲ್ಲೆಗಳಲ್ಲಿ ಕಟ್ಟೆಚ್ಚರ

    ವಾರಾಂತ್ಯದ ವರೆಗೂ ರಾಜ್ಯದಲ್ಲಿ ಭಾರೀ ಮಳೆ, ದಕ್ಷಿಣ ಕನ್ನಡ, ಉಡುಪಿ ಸಹಿತ ಹಲವು ಜಿಲ್ಲೆಗಳಲ್ಲಿ ಕಟ್ಟೆಚ್ಚರ

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಬಿರುಸಾಗಿದ್ದು, ಕಳೆದೆರಡು ವಾರಗಳಲ್ಲಿ ಹಲವು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ. ಕರ್ನಾಟಕದಲ್ಲಿ ಈ ಮಳೆ ಪರಿಸ್ಥಿತಿ ಆಗಸ್ಟ್ 6ರವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ. ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಲ್ಲೂ ಧಾರಾಕಾರ ಮಳೆಯ ಮುನ್ಸೂಚನೆ ಸಿಕ್ಕಿದೆ.‌ ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ ಜಿಲ್ಲೆಳಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

    ಇದೇ ವೇಳೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಕೂಡ ಮಳೆಯಾಗುವ ಸಾಧ್ಯತೆಗಳಿವೆ. ಚಾಮರಾಜನಗರ, ಹಾಸನ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ವಯನಾಡ್ ಭೂಕುಸಿತ; ಸಾವಿನ ಸಂಖ್ಯೆ 275ಕ್ಕೆ ಏರಿಕೆ, ದೇಶವನ್ನೇ ಸೂತಕಕ್ಕೆ ತಳ್ಳಿದ ವಿಕೋಪ

    ವಯನಾಡ್: ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 275ಕ್ಕೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರೀ ಮಳೆಯ ಸಂದರ್ಭದಲ್ಲಿ ವಯನಾಡ್‌ನಲ್ಲಿ ಭೂ ಕುಸಿತ ಸಂಭವಿಸಿದೆ. ಅನೇಕ ಮನೆಗಳು ನೆಲಸಮವಾಗಿದ್ದು, ನೂರಾರು ಕುಟುಂಬಗಳು ನೆಲೆ ಕಳೆದುಕೊಂಡಿವೆ.

    ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಾಗಿವೆ. ಭಾನುವಾರದಿಂದೀಚೆಗೆ ನಿರಂತರ ರಕ್ಷಣಾ ಕಾರ್ಯಾಚರಣೆ ಸಾಗಿದ್ದು, ಮೃತದೇಹಗಳು ಪತ್ತೆಯಾಗುತ್ತಲೇ ಇವೆ. ಅಧಿಕಾರಿಗಳ ಪ್ರಕಾರ ಈವರೆಗೂ ಸಾವನ್ನಪ್ಪಿದವರ ಸಂಖ್ಯೆ 280 ದಾಟಿದೆ. ನಾರಕ್ಕೂ ಹೆಚ್ಚು‌ ಮಂದಿ‌ ನಾಪತ್ತೆಯಾಗಿದ್ದು ಮೃತದೇಹಗಳಿಗಾಗಿ ಹುಡುಕಾಟ ಸಾಗಿದೆ.

    ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಈ ಭಾರೀ ಭೂಕುಸಿತ ಸಂಭವಿಸಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ಬು ಮುಂದುವರಿಸಿದ್ದಾರೆ.‌

  • ಶಿಮ್ಲಾದಲ್ಲಿ ಮೇಘ ಸ್ಫೋಟ; ದಿಢೀರ್ ಪ್ರವಾಹದಿಂದ 20ಕ್ಕೂ ಹೆಚ್ಚು ಮಂದಿ ನಾಪತ್ತೆ

    ಶಿಮ್ಲಾದಲ್ಲಿ ಮೇಘ ಸ್ಫೋಟ; ದಿಢೀರ್ ಪ್ರವಾಹದಿಂದ 20ಕ್ಕೂ ಹೆಚ್ಚು ಮಂದಿ ನಾಪತ್ತೆ

    ಶಿಮ್ಲಾ: ಭಾರೀ ಮಳೆಯಿಂದಾಗಿ ದೇಶದ ಹಲವೆಡೆ ಸರಣಿ ದುರ್ಘಟನೆಗಳು ಸಂಭವಿಸುತ್ತಿವೆ. ಬುಧವಾರ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಿದ್ದು ಅಪಾರ ಪ್ರಮಾಣದ ಹಾನಿಯಾಗಿವೆ. ಜೊತೆಗೆ ಪ್ರಾಣ ಹಾನಿ ಬಗ್ಗೆಯೂ ವರದಿಯಾಗಿವೆ.

    ಅತ್ತ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಕೂಡ ಮೇಘಸ್ಫೋಟ ತಲ್ಲಣ ಸೃಷ್ಟಿಸಿದೆ. ದಿಡೀರ್ ಉಂಟಾದ ಪ್ರವಾಹದಿಂದಾಗಿ ಸುಮಾರು 20 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

    ಶಿಮ್ಲಾದಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿರುವ ರಾಂಪುರದ ಜಕ್ರಿಯಲ್ಲಿ ದಿಢೀರ್ ಪ್ರವಾಹದಿಂದ ಅವಾಂತರ ಸೃಷ್ಟಿಯಾಗಿದ್ದು, ಪೊಲೀಸ್, ಅಗ್ನಿಶಾಮಕ ದಳ, ಎನ್‌ಡಿ‌ಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ.

  • ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ ಹೆಚ್ಚಳ; ಇಂದಿನಿಂದ ಹೊಸ ದರ ಅನ್ವಯ

    ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸಿವೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಆಗಸ್ಟ್ 1 ರಿಂದ ಅನ್ವಯವಾಗುವಂತೆ ಹೆಚ್ಚಿಸಿವೆ.

    ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆ 8.50 ರೂಪಾಯಿ ದುಬಾರಿಯಾಗಿದೆ. ಈ ದರ ಪರಿಷ್ಕರಣೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗಷ್ಟೇ ಅನ್ವಯವಾಗಲಿದ್ದು, ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿತರಕರು ತಿಳಿಸಿದ್ದಾರೆ.

  • ರಾಜಸ್ಥಾನದಿಂದ ಬಂದಿದ್ದು ನಾಯಿ ಮಾಂಸವಲ್ಲ, ಕುರಿ ಮಾಂಸ; ಸರ್ಕಾರದ ಸ್ಪಷ್ಟನೆ

    ರಾಜಸ್ಥಾನದಿಂದ ಬಂದಿದ್ದು ನಾಯಿ ಮಾಂಸವಲ್ಲ, ಕುರಿ ಮಾಂಸ; ಸರ್ಕಾರದ ಸ್ಪಷ್ಟನೆ

    ಬೆಂಗಳೂರು: ವಾರದಿಂದ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕುರಿ ಮಾಂಸದ ಜೊತೆ ನಾಯಿ ಮಾಂಸ ಬೆರೆಸಿ ತರಲಾಗಿದೆ ಎಂಬ ಆರೋಪ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಸಂಗತಿಯನ್ನು ಬಹಿರಂಗಪಡಿಸಿದೆ. ಮಾಂಸದ ಮಾದರಿ ಬಗ್ಗೆ ಪರೀಕ್ಷಾ ವರದಿ ಬಂದಿದ್ದು, ರಾಜಸ್ಥಾನದಿಂದ ರೈಲಿನಲ್ಲಿ ಬಂದಿರುವುದು ಕುರಿ ಮಾಂಸ ಎಂಬುದು ವರದಿಯಲ್ಲಿ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಜುಲೈ 26ರಂದು ರಾಜಸ್ಥಾನದ ಜೈಪುರದಿಂದ ರೈಲಿನಲ್ಲಿ ಕುರಿ ಮಾಂಸ ಬಂದಿದ್ದು, ಅದರಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂದು ಆರೋಪಿಸಿ ಹಿಂದೂ ಪರ ಹೋರಾಟಗಾರ ಪುನೀತ್‌ ಕೆರೆಹಳ್ಳಿ ತಂಡವು ರೈಲು ನಿಲ್ದಾಣದಲ್ಲಿ ಪ್ರತಿಭಟಿಸಿತ್ತು. ಈ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿ, ಪುನೀತ್ ಕೆರೆಹಳ್ಲಿಯನ್ನು ಪೊಲೀಸರು ಬಂಧಿಸಿದ್ದರು. ಇದೇ ವೇಳೆ ರೈಲಿನಲ್ಲಿ ರವಾನೆಯಾಗಿದ್ದ ಮಾಂಸದ ಮಾದರಿಯನ್ನು ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿದ್ದರು.

    ಇದೀಗ ಪರೀಕ್ಷಾ ವರದಿ ಸರ್ಕಾರದ ಕೈಸೇರಿದ್ದು, ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದಾರೆ.‌ ಇತ್ತೀಚೆಗೆ ರಾಜಸ್ಥಾನದಿಂದ ಸರಬರಾಜಾಗುತ್ತಿದ್ದ ಮಾಂಸದ ಕುರಿತಾದ ಘಟನೆಗಳ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಬಂದಿದ್ದ ಮಾಂಸದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಇದೀಗ ಪ್ರಯೋಗಾಲಯಗಳಿಂದ ಪರೀಕ್ಷಾ ವರದಿ ಬಂದಿದ್ದು ರಾಜಸ್ಥಾನದಿಂದ ಬಂದ ಮಾಂಸವು ‘ಕುರಿ’ಯದ್ದೇ ಆಗಿದೆ ಎಂಬುದನ್ನು ಪ್ರಯೋಗಾಲಯವು ಖಚಿತಪಡಿಸಿದೆ ಎಂದು ತಿಳಿಸಿದ್ದಾರೆ. ಈ ವಿಚಾರದಲ್ಲಿ ಯಾವುದೇ ಅನಗತ್ಯ ಗೊಂದಲ ಸೃಷ್ಟಿಸದಂತೆ ಮತ್ತು ಈ ಕುರಿತ ಗಾಳಿ ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಅವರು ಮನವಿ ಮಾಡಿದ್ದಾರೆ.

  • ಮುಡಾ ಹಗರಣ ಖಂಡಿಸಿ ಬೈಂದೂರಿನಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಪ್ರತಿಭಟನೆ

    ಉಡುಪಿ: ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲೆ ಇದರ ವತಿಯಿಂದ ಓಬಿಸಿ ಜಿಲ್ಲಾಧ್ಯಕ್ಷರಾದ ವಿಜಯ್ ಕೊಡವೂರು ನೇತೃತ್ವದಲ್ಲಿ ಮೂಡ ಹಗರಣ ಹಾಗೂ ವಾಲ್ಮೀಕಿ ಹಗರಣ ಖಂಡಿಸಿ ಬೈಂದೂರಿನಲ್ಲಿ ಪ್ರತಿಭಟನೆ ನಡೆಯಿತು.

    ಮೈಸೂರು ನಗರಾಭಿವೃದ್ಧಿ ಇಲಾಖೆ (ಮುಡಾ)ಮೂಲಕ ಸಿಎಂ ಕುಟುಂಬದವರು ಅಕ್ರಮವಾಗಿ ಸೈಟ್ ಪಡೆದಿದ್ದಾರೆ‌ ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ನಾಯಕರು ಒತ್ತಾಯಿಸಿದರು.

    ಪ್ರತಿಭಟನೆಯಲ್ಲಿ ಬೈಂದೂರು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಶಿವರಾಜ್ ಪೂಜಾರಿ, ಜಿಲ್ಲಾ ಒಬಿಸಿ ಕಾರ್ಯದರ್ಶಿ ಚಂದ್ರ ಜೋಗಿ, ಜಿಲ್ಲಾ ಒಬಿಸಿ ಉಪಾಧ್ಯಕ್ಷ ರಾಜಶೇಖರ್ ದೇವಾಡಿಗ, ವಿನೋದ್ ಗುಜ್ಜಾಡಿ,ಜಿಲ್ಲಾ ಒಬಿಸಿ ಕಾರ್ಯಕಾರಣಿ ಸದಸ್ಯ ಉಮೇಶ್ ಕಂಡ್ಲೂರು, ಒಬಿಸಿ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ ದೇವಾಡಿಗ, ಕಾರ್ಯದರ್ಶಿ ಅನಿಲ್ ಮೆಂಡನ್, ರಾಜೇಶ್ ಕೊಠಾರಿ, ಮಹೇಂದ್ರ ಬೋವಿ, ಸಂತೋಷ್ ಮೊಗವೀರ ಕಿರುಮಂಜೇಶ್ವರ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರವಿ ಮಡಿವಾಳ, ಚಂದ್ರಶೇಖರ್ ದೇವಾಡಿಗ, ಸುಧಾಕರ್ ನೆಂಪು, ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ತ್ರಾಸಿ, ಅರವಿಂದ್ ಬಾಡ, ಹಿರಿಯರಾದ ಕೃಷ್ಣದೇವಾಡಿಗ, ದಯಾನಂದ್ ಶೆಟ್ಟಿ, ಯುವ ಮೋರ್ಚಾ ಪ್ರದಾನಕಾರ್ಯದರ್ಶಿ ಪ್ರಸಾದ್ ಪಿ ಬೈಂದೂರು, ಆಕಾಶ್ ಪೂಜಾರಿ, ಗುರುರಾಜ ದೇವಾಡಿಗ, ಚಂದ್ರ ದೇವಾಡಿಗ ತಲ್ಲೂರ ಮಯೂರ್, ಗುರುರಾಜ್,ಸತೀಶ್ ನಾಯ್ಕ್, ಚಂದ್ರ ಗೊಂಡ, ಸಂಕೇತ್ ಕೊಠಾರಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.