Blog

  • ಕೋವಿಡ್‌ ಹಗರಣ: ಬಿಎಸ್‌ವೈ, ಶ್ರೀರಾಮುಲು ಬಗ್ಗೆ ತನಿಖೆಗೆ ಆಯೋಗ ಶಿಫಾರಸು; ಹೆಣ ಇಟ್ಟು ಹಣ ಮಾಡಿದ ಬಿಜೆಪಿ ನಾಯಕರು ಎಂದ ರಮೇಶ್ ಬಾಬು

    ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭ ಕೋವಿಡ್‌ 19 ಚಿಕಿತ್ಸೆ ಹಾಗೂ ನಿರ್ವಹಣೆ ಹೆಸರಿನಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಡಿ ಕುನ್ಹಾ ಅವರ ನೇತೃತ್ವದಲ್ಲಿ ರಚಿಸಿದ್ದ ಆಯೋಗವು ಹಿಂದಿನ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಆಗಿನ ಆರೋಗ್ಯ ಸಚಿವರನ್ನು ತನಿಖೆ ನಡೆಸಲು ಶಿಫಾರಸ್ಸು ಮಾಡಿದೆ. ಏಪ್ರಿಲ್‌ 2020ರಲ್ಲಿ ಚೀನಾದ ಎರಡು ಕಂಪನಿಗಳಿಂದ 3 ಲಕ್ಷ ಪಿಪಿಇ ಕಿಟ್‌ಗಳನ್ನು ಅತ್ಯಂತ ದುಬಾರಿ ದರಗಳಲ್ಲಿ ಖರೀದಿಸಿದ್ದಕ್ಕೆ ಯಾವುದೇ ನಿಖರವಾದ ಕಾರಣವಿಲ್ಲಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

    ಸಾಂದರ್ಭಿಕ ಚಿತ್ರ

    ಪಿಪಿಇ ಕಿಟ್‌ ಖರೀದಿ ಪ್ರಕ್ರಿಯೆ ಸಂದರ್ಭ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು ಮತ್ತು ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದರು. 1988ರ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ವಿಶ್ವಾಸಾರ್ಹತೆ ಉಲ್ಲಂಘನೆ ಅಪರಾಧದ ಅನ್ವಯ ಸೆಕ್ಷನ್‌ 7 ಮತ್ತು 11ರ ಅಡಿ ತನಿಖೆ ನಡೆಸುವಂತೆ ಆಯೋಗವು ಶಿಫಾರಸು ಮಾಡಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದೆ ಎಂದು ಮೂಲಗಳು ತಿಳಿಸಿವೆ.

    ಆಗಸ್ಟ್‌ 31ರಂದು ಡಿ ಕುನ್ಹಾ ಆಯೋಗವು ತನ್ನ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಪ್ರಸ್ತುತ ಸಂಪುಟದ ಉಪ ಸಮಿತಿಯು ವರದಿಯನ್ನು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಚೀನಾದಿಂದ ಪಿಪಿಇ ಕಿಟ್‌ ಚೀನಾದ ಡಿಎಚ್‌ಬಿ ಗ್ಲೋಬಲ್‌ ಹಾಂಗ್‌ ಕಾಂಗ್‌ ಮತ್ತು ಬಿಗ್‌ ಫಾರ್ಮಾಸ್ಯೂಟಿಕಲ್ಸ್‌ನಿಂದ ಪ್ರತಿ ಯನಿಟ್‌ಗೆ 2,000 ರೂ. ನಂತೆ 3 ಲಕ್ಷ ಪಿಪಿಇ ಕಿಟ್‌ಗಳನ್ನು ಖರೀದಿಸಲಾಗಿದೆ. ಈ ಖರೀದಿ ಪ್ರಕ್ರಿಯೆಯು ಯಾವುದೇ ಟೆಂಡರ್‌ ಕರೆಯದೆ ಅಥವಾ 1999ರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯ ವಿನಾಯಿತಿಯನ್ನು ಪಡೆಯದೆ ನೇರವಾಗಿ ನಡೆದಿದೆ ಎಂಬ ವಿಚಾರವೂ ತನಿಖೆಯ ವೇಳೆ ಗೊತ್ತಾಗಿದೆ ಎನ್ನಲಾಗಿದೆ.

    ಸಂಗ್ರಹಣೆ ನಿಯಮದ ಮೂಲ ಕಾರ್ಯವಿಧಾನವನ್ನು ಅನುಸರಿಸದೆ ನೇರವಾಗಿ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಆದೇಶದಂತೆ ಪಿಪಿಇ ಕಿಟ್‌ಗಳ ಸಂಗ್ರಹಣೆ ಮಾಡಲಾಗಿದೆ” ಎಂಬ ಆರೋಪ ಕೇಳಿಬಂದಿದ್ದು, ಪಿಪಿಇ ಕಿಟ್‌ ಖರೀದಿಯ ಇಡೀ ಪ್ರಕ್ರಿಯೆಯು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಆಪ್ತ ಪೂರೈಕೆದಾರರಿಗೆ ಅನುಕೂಲ ಮತ್ತು ಲಾಭ ಮಾಡಿಕೊಡುವ ರೀತಿಯಲ್ಲಿ ನಡೆದಿದೆ” ಎಂದೂ ಆಯೋಗ ಗಮನಸೆಳೆದಿದೆ ಎನ್ನಲಾಗಿದೆ.


    ಹೆಣ ಇಟ್ಟು ಹಣ ಮಾಡಿದ ಬಿಜೆಪಿ ?

    ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ‘ಹೆಣ ಇಟ್ಟು ಹಣ ಮಾಡಿದ ಬಿಜೆಪಿ ನಾಯಕರ ಕೋವಿಡ್ ಹಗರಣ ಬಟಾಬಯಲಾಗಿದೆ’ ಎಂದಿದ್ದಾರೆ. ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿರುವ ಮಾಜಿ ಶಾಸಕ ರಮೇಶ್ ಬಾಬು, ಪಿಪಿಪಿ ಕಿಟ್’ಗಳನ್ನು ಹತ್ತಾರು ಪಟ್ಟು ಹೆಚ್ಚು ದರಕ್ಕೆ ಚೀನಾ/ಖಾಸಗಿಯಿಂದ ಖರೀದಿಸಿ ಧೋಖ ಮಾಡಿ ಜನರ ಪ್ರಾಣ ದೊಂದಿಗೆ ಆಟವಾಡಿದ್ದಾರೆ. ಸರ್ಕಾರ ವರದಿ ಮೇಲೆ ಕ್ರಿಮಿನಲ್ ಕೇಸು ಧಾಖಲಿಸಿ ಜನರಿಗೆ ನ್ಯಾಯ ನೀಡಲಿ ಕೊಳ್ಳೆ ಹಣ ವಸೂಲಿ ಮಾಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಈ ಅವಧಿ ಪೂರ್ಣಗೊಳ್ಳುವ ವರೆಗೂ ನಾನೇ ಮುಖ್ಯಮಂತ್ರಿ’; ಸಿದ್ದರಾಮಯ್ಯ

    ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆದಿರುವಾಗಲೇ ಸಿಎಂ ಸಿದ್ದರಾಮಯ್ಯ ಅವರು ‘ಈ ಅವಧಿ ಪೂರ್ಣಗೊಳ್ಳುವ ವರೆಗೂ ನಾನೇ ಮುಖ್ಯಮಂತ್ರಿ’ ಎಂದು ಪ್ರತಿಕ್ರಿಯಿಸಿದ್ದಾರೆ.

    ಸಂಡೂರಿನಲ್ಲಿ ಉಪಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಸುತ್ತೇನೆ ಎಂದರು. ಸಿದ್ದರಾಮಯ್ಯ ಇರುವವರೆಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಬಿಜೆಪಿಯವರಿಗೆ ತಿಳಿದಿದೆ. ಹೀಗಾಗಿ ಸಿಬಿಐ, ಇಡಿ, ಐಡಿಯನ್ನು ಬಳಸಿಕೊಂಡು ನನ್ನನ್ನು ಮುಗಿಸಲು ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.

    ಇದೇ ವೇಳೆ, ನಾಯಕತ್ವ ಬದಲಾವಣೆ ವಿಚಾರವನ್ನು ಅವರು ತಳ್ಳಿಹಾಕಿದರು. ಉಪ ಚುನಾವಣೆ ನಡೆಯುತ್ತಿರುವ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

  • ಕೃಷಿ ಸಾಲ ಸಿಬಿಲ್ ಸ್ಕೋರ್ ಮಾನದಂಡ ನೀತಿ ರದ್ದು ಮಾಡಲು ಚಿಂತನೆ; ಕೇಂದ್ರ ಹಣಕಾಸು ಸಚಿವೆ ಭರವಸೆ

    ಕೃಷಿ ಉತ್ಪನ್ನಗಳ ಮೇಲಿನ ಜಿಎಸ್​ಟಿ ತೆರಿಗೆ ರದ್ದು ಮಾಡಿ. ರೈತ ಉತ್ಪಾದಕ ಸಂಸ್ಥೆಗಳ ವರಮಾನ ತೆರಿಗೆ ಹಾಗೂ ಎಂಐಟಿ ತೆರಿಗೆ ಕಾನೂನು ರದ್ದು ಮಾಡಿ ಎಂದು ರೈತ ಸಂಘಟನೆಗಳು ಮಾಡಿರುವ ಮನವಿಗೆ ಸ್ಪಂಧಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

    ರೈತರು ಖರೀದಿಸುವ ಕೃಷಿ ಬಳಕೆಗೆ ಹನಿ ನೀರಾವರಿ ಕೊಳವೆಗಳು. ಕೀಟನಾಶಕಗಳು. ರಸಗೊಬ್ಬರಗಳ ಮೇಲೆ ಜಿಎಸ್​ಟಿ ವಿಧಿಸಿರುವುರಿಂದ ರೈತರು ಖರೀದಿಸುವ ಬೆಲೆ ಹೆಚ್ಚಾಗುತ್ತಿದೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ ಇದನ್ನು ರದ್ದು ಮಾಡಬೇಕೆಂದು ಹಲವಾರು ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಿದ್ದೇವೆ ತಾವು ರೈತರ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೃಷಿ ಉಪಕರಣಗಳ ಖರೀದಿಯ ಮೇಲೆ ಜಿಎಸ್‌ಟಿಯನ್ನು ರದ್ದು ಮಾಡಬೇಕು ಎಂದು ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.

    ಕೃಷಿ ಸಾಲಕ್ಕೆ ರೈತರ ಸಿಬಿಲ್ ಸ್ಕೋರ್ ಪರಿಗಣಿಸುವ ನಿಯಮ ರದ್ದು ಮಾಡಿ. ಹಾಗೂ ಕೃಷಿ ಸಾಲ ವಸೂಲಿಗೆ ಬ್ಯಾಂಕುಗಳು ರೈತರ ಜಮೀನು ಮುಟ್ಟುಗೂಲು ಹಾಕಿ ಹರಾಜು ಮಾಡುವ ಸರ್ಫೈಸಿ ಕಾಯ್ದೆ ರದ್ದು ಮಾಡಿ. ಮಹಿಳಾ ಸ್ವಸಹಾಯ ಸಂಘಗಳಿಗೆ ಖಾಸಗಿ ಫೈನಾನ್ಸ್ ಗಳು ವಸುಲಾತಿ ಕಿರುಕುಳ ನೀಡುತ್ತಿರುವುದಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೆ ತನ್ನಿ ಎಂದೂ ಒತ್ತಾಯಿಸಲಾಗಿತ್ತು. ಈ ಬಗ್ಗೆ ಸೂಕ್ತ ಕ್ರಮವಹಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರ ರೈತ ಉತ್ಪಾದಕ ಸಂಸ್ಥೆಗಳನ್ನು ಆರಂಭಿಸಲು ಪ್ರೋತ್ಸಾಹ ಧನ ನೀಡಿದೆ. ಆದರೆ ಈ ಉತ್ಪಾದಕ ಸಂಸ್ಥೆಗಳಿಗೆ ವರಮಾನ ತೆರಿಗೆ ವಿಧಿಸಲಾಗುತ್ತಿದೆ ಹಾಗೂ ಎಂಎಟಿ ತೆರಿಗೆ ಪಾವತಿಸಬೇಕೆಂದು ಈಗಾಗಲೇ ನೂರಾರು ರೈತ ಉತ್ಪಾದಕ ಸಂಸ್ಥೆಗಳಿಗೆ ವಸುಲಾತಿ ನೋಟಿಸ್ ವರಮಾನ ತೆರಿಗೆ ಇಲಾಖೆಯಿಂದ ನೀಡಲಾಗಿದೆ ಇದರಿಂದ ನಷ್ಟದಲ್ಲಿರುವ ಸಂಕಷ್ಟ ಅನುಭವಿಸುತ್ತಿರುವ ರೈತ ಉತ್ಪಾದಕ ಸಂಸ್ಥೆಗಳ ಮುಖ್ಯಸ್ಥರು ಚಿಂತಾ ಕ್ರಾಂತರಾಗಿದ್ದಾರೆ. ಇದೆ ಕೇಂದ್ರ ಸರ್ಕಾರ ರೈತರಿಂದಲೇ ರೈತರಿಗಾಗಿ ಆರಂಬವಾಗಿರುವ ಸಹಕಾರ ಸಂಘಗಳಿಗೆ ತೆರಿಗೆ ವಿನಾಯಿತಿ ನೀಡಿದೆ. ಆದರೆ ರೈತರಿಂದಲೇ ರೈತರಿಗಾಗಿ ಕಂಪನಿ ಕಾಯ್ದೆಯಲ್ಲಿ ಆರಂಭವಾಗಿರುವ ಉತ್ಪಾದಕ ಸಂಸ್ಥೆಗಳಿಗೆ ಎಂಏಟಿ ತೆರಿಗೆ, ವರಮಾನ ತೆರಿಗೆ
    ವಿಧಿಸುವುದು ನ್ಯಾಯವಲ್ಲ. ಕೇಂದ್ರ ಸರ್ಕಾರ ಆದೇಶದಲ್ಲಿ ಸಹಕಾರ ಸಂಘಗಳು ಹಾಗೂ ರೈತ ಉತ್ಪಾದಕ ಸಂಸ್ಥೆಗಳು ಸಮಾನಾಂತರ ಅವಕಾಶಗಳನ್ನು ಹೊಂದಬಹುದು ಎಂದು ಕೇಂದ್ರ ಸರ್ಕಾರದ ಆದೇಶದಲ್ಲಿ ತಿಳಿಸಿದ್ದಾರೆ ಈ ಎಲ್ಲ ವಿಚಾರಗಳನ್ನ ಗಮನಿಸಿ ಹತ್ತು ವರ್ಷಗಳ ಕಾಲ ತೆರಿಗೆ ವಸುಲಾತಿ ಕಾನೂನು ರದ್ದು ಮಾಡುವ ಆದೇಶ ಹೊರಡಿಸಬೇಕೆಂದು ಕುರುಬೂರ್ ಶಾಂತಕುಮಾರ್ ಒತ್ತಾಯಿಸಿದ್ದಾರೆ.

    ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬುರ್ ಶಾಂತಕುಮಾರ್ ನೇತೃತ್ವದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ನಿಯೋಗದಲ್ಲಿ ರೈತ ಮುಖಂಡರುಗಳಾದ
    ಹತ್ತಳ್ಳಿ ದೇವರಾಜ್ ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ. ಕುರುಬೂರು ಸಿದ್ದೇಶ್, ಲಕ್ಷ್ಮಿಪುರ ವೆಂಕಟೇಶ್, ಅಂಬಳೆ ಮಂಜುನಾಥ್,
    ಕುರುಬೂರು ಪ್ರದೀಪ್, ಕಾಟೂರ್ ನಾಗೇಶ್, ಬನ್ನೂರ್ ಸೂರಿ ಮೊದಲಾದವರು ಇದ್ದರು.

  • ‘ನಿಮ್ಮ ಸರ್ಕಾರದ ಅವಧಿಯಲ್ಲಿ ನೋಟೀಸ್ ಕೊಟ್ಟಾಗ ಇವರೆಲ್ಲಾ ಬೆಟ್ಟು ಚೀಪುತ್ತಿದ್ದರಾ?’; ಬಿಜೆಪಿ ನಾಯಕರ ‘ಲ್ಯಾಂಡ್ ಜಿಹಾದ್’ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಎದಿರೇಟು

    ‘ನಿಮ್ಮ ಸರ್ಕಾರದ ಅವಧಿಯಲ್ಲಿ ನೋಟೀಸ್ ಕೊಟ್ಟಾಗ ಇವರೆಲ್ಲಾ ಬೆಟ್ಟು ಚೀಪುತ್ತಿದ್ದರಾ?’; ಬಿಜೆಪಿ ನಾಯಕರ ‘ಲ್ಯಾಂಡ್ ಜಿಹಾದ್’ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಎದಿರೇಟು

    ಬೆಂಗಳೂರು: ಹಾವೇರಿ ರೈತನ ಹೆಸರಲ್ಲೂ ಬಿಜೆಪಿಯವರು ಈಗ ರಾಜಕೀಯ ಮಾಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ವಕ್ಫ್ ವಿವಾದ ಕುರಿತಂತೆ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳ ಬಗ್ಗೆ ಬೆಂಗಳೂರಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

    ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಿಯಾಂಕ್ ಖರ್ಗೆ, ಲ್ಯಾಂಡ್ ಜಿಹಾದ್ ಎಂದು ಹೇಳುತ್ತಿದ್ದಾರಲ್ಲ. ಅವರು ಈಗಲೇ ಯಾಕೆ ಮಾತನಾಡುತ್ತಿದ್ದಾರೆ? ನಿಮ್ಮ ಸರ್ಕಾರದ ಅವಧಿಯಲ್ಲಿ ನೋಟೀಸ್ ಕೊಟ್ಟಾಗ ಇವರೆಲ್ಲಾ ಬೆಟ್ಟು ಚೀಪುತ್ತಿದ್ದರಾ? ಶಶಿಕಲಾ ಜೊಲ್ಲೆ ಅವರ 2021ರಲ್ಲಿ ನೀಡಿರುವ ಹೇಳಿಕೆಯಲ್ಲಿ, ‘ಅನ್ವರ್ ಮಾನ್ಪಡಿ ವರದಿ ನೀಡಿದ್ದು, ವರದಿ ನೀಡಿ 9 ವರ್ಷವಾಗಿದ್ದರೂ ಯಾವುದೇ ಕ್ರಮವಾಗಿಲ್ಲ. ಅದಕ್ಕೆ ಅಂದಿನ ಸಿಎಂ ಯಡಿಯೂರಪ್ಪ ಅವರು ಹಾಗೂ ಅವರ ಕುಟುಂಬದವರು ಕಾಂಗ್ರೆಸ್ ನಾಯಕರೊಂದಿಗೆ ಶಾಮೀಲಾಗಿರುವುದೇ ಕಾರಣ ಎಂದು ಅನ್ವರ್ ಮಾನ್ಪಡೆ ಅವರು ಆರೋಪ ಮಾಡಿದ್ದಾರೆ’ ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರ ಕುಟುಂಬ ಎಂದರೆ ಯಾರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ? ಆಗ ತೇಜಸ್ವಿ ಸೂರ್ಯ, ಯತ್ನಾಳ್ ಅವರ ರಕ್ತ ಕುದಿಯಲಿಲ್ಲವೇ? ಆಗ ಯಾರ ಸರ್ಕಾರವಿತ್ತು? ಎಂದು ಪ್ರಶ್ನಿಸಿದರು.

    ಕಾಂಗ್ರೆಸ್ ಪಕ್ಷ ಮೊದಲ ದಿನದಿಂದಲೂ ಈ ವರದಿಯನ್ನು ವಿರೋಧಿಸುತ್ತಲೇ ಬಂದಿದೆ. ಹೀಗಾಗಿ ಯಡಿಯೂರಪ್ಪ ಅವರು ಅನ್ವರ್ ಮಾನ್ಪಡೆ ಆರೋಪದ ಬಗ್ಗೆ ಉತ್ತರ ನೀಡಬೇಕು. ಶೋಭಾ ಕರಂದ್ಲಾಜೆ ಅವರು ಸಂಸತ್ತಿನಲ್ಲಿ ವಕ್ಫ್ ಆಸ್ತಿ ಬಗ್ಗೆ ಪ್ರಶ್ನೆ ಕೇಳಿದಾಗ, ಕೇಂದ್ರ ಸರ್ಕಾರವು ‘ನಾವು ವಕ್ಫ್ ಆಸ್ತಿಯನ್ನು ಜಿಐಎಸ್ ಮ್ಯಾಪಿಂಗ್ ಮಾಡಿ, ಬೌಂಡರಿ ಹಾಕುತ್ತಿದ್ದೇವೆ. ಒತ್ತುವರಿಯಾಗಿರುವ ಜಮೀನು ತೆರವುಗೊಳಿಸಿ ವಕ್ಫ್ ಆಸ್ತಿಯನ್ನು ಸಂರಕ್ಷಣೆ ಮಾಡುತ್ತೇವೆ. ಈ ತಂತ್ರಜ್ಞಾನದ ಬಳಕೆಗಾಗಿ ಪ್ರತಿ ರಾಜ್ಯಕ್ಕೆ 12 ಕೋಟಿಯಂತೆ 350 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಹೇಳುತ್ತಾರೆ. ಈ ರೀತಿ ಹೇಳಿದಾಗ, ಸಂಸದರಾಗಿ ನೀವು ಕತ್ತೆ ಕಾಯುತ್ತಿದ್ದರೇ? ಎಂದು ಪ್ರಶ್ನಿಸಿದರು.

    ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ವಕ್ಫ್ ಆಸ್ತಿ ಬಗ್ಗೆ ಆಡಿರುವ ಮಾತುಗಳನ್ನು ಗಮನಿಸಿರಲಿಲ್ಲವೇ? ಈಗ ಜೆಪಿಸಿ ಸಮಿತಿ ನಾಟಕವಾಡುತ್ತಿದ್ದಾರೆ. ನಿನ್ನೆ ಜೆಪಿಸಿಯು ಬಿಜೆಪಿಯ ಸಮಿತಿಯಾಗಿದೆ. ಜಂಟಿ ಸಂಸದೀಯ ಸಮಿತಿಯ ಕಾರ್ಯವೈಖರಿಗೆ ಅದರದೇ ಆದ ವ್ಯವಸ್ಥೆ ಇದೆ. ಅವರು ಪ್ರವಾಸಿಗರಾಗಿ ರಾಜ್ಯಕ್ಕೆ ಭೇಟಿ ನೀಡಲಿ. ಈ ವಿಚಾರವಾಗಿ ಮಾಹಿತಿ ಕಲೆಹಾಕುವುದಾದರೆ, ಸಮಿತಿಯ ಇತರೆ ಸದಸ್ಯರು ಯಾಕೆ ಬಂದಿಲ್ಲ? ಸಮಿತಿಗೆ ಸಂಬಂಧವಿಲ್ಲದ ಬಿಜೆಪಿ ನಾಯಕರ ಜತೆ ವಿಚಾರಣೆ ನಡೆಸುತ್ತಿರುವುದೇಕೆ? ಎಂದೂ ಪ್ರಶ್ನೆ ಮಾಡಿದರು.

    ಜಿಪಿಸಿ ಮೂಲಕ ಒತ್ತಡ ಹಾಕುವ ಪ್ರಯತ್ನ ನಡೆಸುತ್ತಿದೆ. ಜೆಪಿಸಿಯು ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದೆ. ಜಾರ್ಖಂಡ್, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದ್ದಾಗ ಈ ರೀತಿ ಮಾಡುತ್ತಿರುವುದು ರಾಜಕೀಯ ದುರುದ್ದೇಶ ಎಂದು ಪ್ರಿಯಾಂಕ್ ಖರ್ಗೆ ಆರೋಪ ಮಾಡಿದರು.

  • ‘ತೇಜಸ್ವಿ ಸೂರ್ಯ ಅವರು ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಬೆಂಗಳೂರು: ಹಾವೇರಿಯಲ್ಲಿ ರೈತ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ.

    ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು ಉಪಸ್ಥಿತಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಹಾವೇರಿಯ ರೈತನ ಆಸ್ತಿಯಲ್ಲಿ ವಕ್ಫ್ ಉಲ್ಲೇಖವಾಗಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಂಸದರು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ನಂತರ ಸರ್ಕಾರ ಸ್ಪಷ್ಟನೆ ನೀಡಿದ ನಂತರ ಅದನ್ನು ಡಿಲೀಟ್ ಮಾಡುತ್ತಾರೆ. ನಂತರ ಅವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಇದರಿಂದ ಸಮಾಜದಲ್ಲಿ ಘರ್ಷಣೆಗೆ ಪ್ರೇರಣೆಯಾಗಲಿದೆ ಎಂದು ದೂರು ನೀಡುತ್ತಾರೆ. ಈ ದೂರಿನನ್ವಯ ಪೊಲೀಸರು ತೇಜಸ್ವಿ ಸೂರ್ಯನ ಮೇಲೆ ಎಫ್ಐಆರ್ ದಾಖಲಿಸುತ್ತಾರೆ ಎಂದು ಪ್ರಕರಣದ ಹಿನ್ನೆಲೆಯನ್ನು ವಿವರಿಸಿದರು.

    ಇದಕ್ಕೆ ಹೆದರಿಕೊಂಡ ಆ ಪುಟ್ಟ, ‘ಪ್ರಿಯಾಂಕ್ ಖರ್ಗೆಗೆ ಕೆಲಸ ಇಲ್ಲ, ಎಫ್ಐಆರ್ ಹಾಕಿಸುವುದೇ ಕೆಲಸ” ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಾನೆ. ನಾನು ಇದುವರೆಗೂ ಅವರ ಮೇಲೆ, ಅವರ ಶಾಸಕರು, ಸಂಸದರು ಹಾಗೂ ಅವರ ಬಾಡಿಗೆ ಭಾಷಣಕಾರರ ಮೇಲೆ ಎಷ್ಟು ಎಫಐಆರ್ ಹಾಕಿಸಿದ್ದೇನೆ ಎಂದು ನೋಡಲಿ. ನನಗೆ ತಪ್ಪು ಮಾಹಿತಿ ಇತ್ತು, ಸುಳ್ಳು ಸುದ್ದಿಯಾದ ಕಾರಣ ಅದನ್ನು ಡಿಲೀಟ್ ಮಾಡಿದ್ದೇನೆ ಎಂದು ನೀವೇ ಒಪ್ಪಿಕೊಂಡಿದ್ದೀರಿ. ಸುಳ್ಳು ಸುದ್ದಿ ಹಬ್ಬಿಸುತ್ತಿರುವ ನಿಮಗೆ ಮೆರವಣಿಗೆ ಮೂಲಕ ಸನ್ಮಾನ ಮಾಡಬೇಕಾ? ಸರ್ಕಾರದ ವತಿಯಿಂದ ಪ್ರಕರಣ ದಾಖಲಿಸುತ್ತೇವೆ. ಸುಳ್ಳು ಹೇಳಿದ ಮೇಲೆ ಅದಕ್ಕೆ ಪ್ರಾಯಶ್ಚಿತವಾಗಬೇಕಲ್ಲವೇ? ನಾನು ಅದನ್ನು ಡಿಲೀಟ್ ಮಾಡಿದ್ದೇನೆ ಎಂದು ಈಗ ಅಳುತ್ತಾ ಕೂತರೆ ಏನು ಪ್ರಯೋಜನ? ನೀವೊಬ್ಬ ಸಂಸದ. ಬೇರೆ ಸಮಯದಲ್ಲಿ ಹಿಂದೂಗಳ ಸಂರಕ್ಷ ಎಂದು ಹೇಳುವವರು ಈಗ ಯಾಕೆ ಅಳುತ್ತಿದ್ದೀರಿ? ಎಂದ ಖರ್ಗೆ ವ್ಯಂಗ್ಯವಾಡಿದರು.

    ಇವರು ಹಾಗೂ ಇವರ ಬಾಡಿಗೆ ಭಾಷಣಕಾರರು ರಕ್ತಹೀರುವ ಕ್ರಿಮಿಗಳು ಎಂದು ತೇಜಸ್ವಿ ಸೂರ್ಯ ವಿರುದ್ಧ ವಾಕ್ಪ್ರಹಾರ ಮಾಡಿದ ಪ್ರಿಯಾಂಕ್ ಖರ್ಗೆ, ‘ಈ ಬಾರಿ ಎಮರ್ಜೆನ್ಸಿ ಎಕ್ಸಿಟ್ ಇಲ್ಲ. ಓಡಿ ಹೋಗಲು ಅವಕಾಶವಿಲ್ಲ. ಜನರಿಗೆ ನೀವು ಉತ್ತರಿಸಲೇಬೇಕು’ ಎಂದು ತರಾಟೆಗೆ ತೆಗೆದುಕೊಂಡರು. ಮಾತೆತ್ತಿದರೆ ಕುಟುಂಬ ರಾಜಕೀಯದ ಬಗ್ಗೆ ಮಾತನಾಡುವ ತೇಜಸ್ವಿ ಸೂರ್ಯ, ತಾವು ಯಾವ ಕುಟುಂಬದವರು ಎಂದು ಹೇಳುವುದಿಲ್ಲ. ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡರ ಬಗ್ಗೆ ಕುಟುಂಬ ರಾಜಕೀಯ ಎನ್ನುವ ಅವರಿಗೆ ವಿಜಯೇಂದ್ರ, ರಾಘವೇಂದ್ರ ಕಾಣುವುದಿಲ್ಲವೇ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ‘ನೀವು ಕುಟುಂಬ ರಾಜಕಾರಣ ಮಾಡುವ ಮುನ್ನ ನನಗೆ ಅವಕಾಶ ನೀಡಿ. ನಾನು ಬಿಜೆಪಿ ನಾಯಕರ ಡಿಎನ್ಎ ಪರೀಕ್ಷೆ ಮಾಡಿಸಿಕೊಡುತ್ತೇನೆ. ನಿಮ್ಮ ತಂದೆ, ತಾಯಿ, ಸಂಬಂಧಿಕರ ಬಗ್ಗೆ ಹೇಳಿಕೊಳ್ಳಲು ಅಷ್ಟೋಂದು ಅಸಹ್ಯವೇ? ನಿಮ್ಮಲ್ಲಿರುವ ಕುಟುಂಬ ರಾಜಕೀಯ ನೋಡಿಕೊಳ್ಳಿ’ ಎಂದು ಎದಿರೇಟು ನೀಡಿದರು. .

    ಟ್ವೀಟ್ ಮಾಡುವುದು, ನಂತರ ಡಿಲೀಟ್ ಮಾಡುವುದು ಸಂಸದ ಸೂರ್ಯ ಅವರಿಗೆ ಹವ್ಯಾಸವಾಗಿಬಿಟ್ಟಿದೆ. ಸೂರ್ಯ ಅವರು ಮಹಿಳಾ ಪೀಡಕ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೊಬ್ಬಳು ಆರೋಪ ಮಾಡುತ್ತಾರೆ. ಇದರ ಬಗ್ಗೆ ಸುದ್ದಿಯಾಗದಂತೆ 49 ಮಾಧ್ಯಮಗಳ ಮೇಲೆ ನ್ಯಾಯಾಲಯದಲ್ಲಿ ನಿರ್ಬಂಧ ಆದೇಶ ತಂದಿದ್ದಾರೆ. ಮೀಟೂ ಸೂರ್ಯ ಅವರು ಈ ಕಾರಣಕ್ಕೆ ತಡೆಯಾಜ್ಞೆ ತಂದಿದ್ದಾರೆ ಎಂದು ಕಾಟು ಟೀಕೆ ಮಾಡಿದ ಪ್ರಿಯಾಂಕ್ ಖರ್ಗೆ, ಸನಾತನ ಧರ್ಮ ಕುರಿತು ನೀಡಿದ್ದ ಹೇಳಿಕೆಯನ್ನು ಸೂರ್ಯ ಅವರು ಈ ಹಿಂದೆ ಹಿಂಪಡೆದಿದ್ದರು. ವಿಮಾನ ಹಾರಾಟದಲ್ಲಿರುವಾಗ ತುರ್ತು ನಿರ್ಗಮನ ಬಾಗಿಲು ತೆರೆಯಲು ಮುಂದಾಗಿದ್ದ ಸೂರ್ಯ ಅವರು ನಂತರ ಕ್ಷಮೆ ಕೇಳಿದ್ದರು. ಅರಬ್ ಮಹಿಳೆ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಅರಬ್ ಸರ್ಕಾರ ಕೂಡ ಎಚ್ಚರಿಕೆ ನೀಡಿತ್ತು. ಇವರು ರಾಷ್ಟ್ರಕ್ಕೆ ಅಪಮಾನ ಮಾಡಿದ ವ್ಯಕ್ತಿ. ಕೋವಿಡ್ ಸಮಯದಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದು ಹಿರೋ ಆಗಲು ಹೋಗಿ ಬಿಜೆಪಿ ನಾಯಕರನ್ನೇ ಸಿಲುಕಿಸಿದ್ದು ತೇಜಸ್ವಿ ಸೂರ್ಯ ಎಂದು ಕಾಟು ಟೀಕೆ ಮಾಡಿದರು.

    ಗುರು ರಾಘವೇಂದ್ರ ಬ್ಯಾಂಕ್ ಠೇವಣಿದಾರರ ರಕ್ಷಣೆ ಮಾಡುತ್ತೇವೆ ಎಂದವರು 2 ಬಾರಿ ಸಂಸದರಾದರೂ ಸಿಬಿಐಗೆ ಪ್ರಕರಣ ಕೊಟ್ಟರೂ ಅದು ಎಲ್ಲಿವರೆಗೆ ಬಂದಿದೆ? ಎಲ್ಲಾ ವಿಚಾರದಲ್ಲೂ ಸಿಬಿಐ ತನಿಖೆ ಆಗ್ರಹಿಸುವ ಸೂರ್ಯ ಅವರು ಕೊಟ್ಟಿರುವ ಪ್ರಕರಣಗಳ ಬಗ್ಗೆ ತನಿಖೆ ಏನಾಗಿದೆ? ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದೇಶದ್ರೋಹಿ ಎಂದಿದ್ದು ನೆನಪಿದೆಯಾ? ಎಂದು ಆರೋಪಿಸಿದ ಪ್ರಿಯಾಂಕ್ ಖರ್ಗೆ, ಸುಳ್ಳು ಮಾಹಿತಿಯೇ ಅವರ ಬಂಡವಾಳ. ಈತನೊಬ್ಬ ಡಿಲೀಟ್ ರಾಜ. ಈತ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುತ್ತಾನೆ. ಯಾರಾದರೂ ಅದನ್ನು ಗುರುತಿಸಿ ಟೀಕೆ ಮಾಡಿದರೆ ಡಿಲೀಟ್ ಮಾಡುತ್ತಾರೆ ಎಂದು ಕಿಡಿಕಾರಿದರು.

    ಶೋಭಾ ಕರಂದ್ಲಾಜೆ ಅವರದೂ ಇದೇ ಕತೆ. ಸಧ್ಯ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ ಎಂದು ಬೊಬ್ಬೆ ಹೊಡೆಯುತ್ತಿರುವ ಇವರ ಹೊಣೆಗಾರಿಕೆ ನಾವು ಅರಿಯಬೇಕು. 2017ರಲ್ಲಿ 19 ವಯಸ್ಸಿನ ಶಿವಕುಮಾರ್ ಉಪ್ಪಾರ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಗೋರಕ್ಷನಾಗಿದ್ದು ಹಾಡಹಗಲೇ ಹತ್ಯೆ ಮಾಡಲಾಗಿದೆ ಎಂದು ಶೋಭಾ ಅವರು ಟ್ವೀಟ್ ಮಾಡುತ್ತಾರೆ. ಇದು ಆತ್ಮಹತ್ಯೆ ಎಂದು ಗೊತ್ತಾದ ನಂತರ ಇದನ್ನು ಡಿಲೀಟ್ ಮಾಡುತ್ತದೆ. ರುದ್ರೇಶ್ ಸಾವಿನ ಪ್ರಕರಣದಲ್ಲಿ ಆಗಿನ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ವಿರುದ್ಧ ಟ್ವೀಟ್ ಮಾಡುತ್ತಾರೆ. ಕಾಂಗ್ರೆಸ್ ಮಾತ್ರವಲ್ಲ ಆರ್ ಎಸ್ಎಸ್ ಕೂಡ ಶೋಭಾ ಅವರ ಹೇಳಿಕೆ ನಿರಾಕರಿಸಿತ್ತು. ಈವರೆಗೂ ಅದರ ಬಗ್ಗೆ ಸಾಕ್ಷ್ಯಗಳಿಲ್ಲ. ಜುಲೈ 8, 2017ರಂದು ಆಗಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಜಿಹಾದಿಗಳಿಂದ 23 ಹಿಂದೂಗಳ ಹತ್ಯೆಯಾಗಿದೆ ಎಂದು ಒಂದು ಪಟ್ಟಿ ನೀಡುತ್ತಾರೆ. ಅದರಲ್ಲಿ ಮೂಡಿಬಿದರೆ ಅಶೋಕ್ ಪೂಜಾರಿ ಹತ್ಯೆಯಾಗಿದ್ದಾನೆ ಎಂದು ಹೇಳಲಾಗಿರುತ್ತದೆ. ಇದರ ತನಿಖೆ ಮಾಡಿದಾಗ ಆತ ಇನ್ನು ಬದುಕಿರುತ್ತಾನೆ. ರಾಜೂ ಮಡಿಕೇರಿ ಟಿಪ್ಪು ಜಯಂತಿ ಆಚರಣೆ ವೇಳೆ ಹತ್ಯೆ ಮಾಡಲಾಗಿದೆ ಎಂದು ಹೇಳುತ್ತಾರೆ, ಆದರೆ ಆಸ್ಪತ್ರೆಯಲ್ಲಿ ಆತ್ಮಹತ್ಯೆ ವರದಿ ಬರುತ್ತದೆ. 2017-18ರಲ್ಲಿ ಪರೇಶ್ ಮೇಸ್ತಾ ಸಾವಿನ ಮೇಲೆ ಕರಾವಳಿ ಭಾಗದಲ್ಲಿ ಚುನಾವಣೆಯನ್ನೇ ಮಾಡುತ್ತಾರೆ. ನಂತರ ಸಿಬಿಐ ಈ ಪ್ರಕರಣ ತನಿಖೆ ನಡೆಸಿ ಇದು ಹತ್ಯೆಯಲ್ಲ, ನೀರಿಗೆ ಬಿದ್ದು ಆಗಿರುವ ಸಾವು ಎಂದು ಹೇಳಿತು ಎಂದು ಪ್ರಿಯಾಂಕ್ ಖರ್ಗೆಟೀಕಿಸಿದರು.

  • ಕನಕಪುರದಲ್ಲಿ ಶಾಲೆಗಳಿಗೆ 25 ಎಕರೆ ಜಾಗ ದಾನ ಮಾಡಿದ್ದೇನೆ, ದೇವೇಗೌಡರ ಕುಟುಂಬದವರು ಒಂದು ಗುಂಟೆ ಜಾಗ ದಾನ ಮಾಡಿದ್ದಾರಾ?: ಡಿಕೆಶಿ

    ರಾಮನಗರ: “ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕೆ ನಾವು ಕನಕಪುರದ ಮೂರು ಕಡೆಗಳಲ್ಲಿ ದೊಡ್ದಆಲಹಳ್ಳಿ ಕೆಂಪೇಗೌಡರ 25 ಎಕರೆ ಜಮೀನು ದಾನ ಮಾಡಿದ್ದೇವೆ. ದೇವೇಗೌಡರ ಕುಟುಂಬದವರು ಹಾಸನ, ರಾಮನಗರ, ಚನ್ನಪಟ್ಟಣದಲ್ಲಿ ಒಂದೇ ಒಂದು ಗುಂಟೆ ಜಾಗ ದಾನ ಮಾಡಿದ್ದಾರಾ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.

    ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಪರವಾಗಿ ಶುಕ್ರವಾರ ಚಕ್ಕೆರೆ, ಹೊನ್ನನಾಯಕನಹಳ್ಳಿ ಮತ್ತಿತರ ಚುನಾವಣೆ ಪ್ರಚಾರ ಸಭೆ ನಡೆಸಿದ ಡಿಕೆಶಿ, ದೇವೇಗೌಡರ ಹೇಳಿಕೆ ಬಗ್ಗೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದರು. ದೇವೇಗೌಡರು ಗುರುವಾರ ಭಾಷಣ ಮಾಡುತ್ತಾ, “ಒಂದು ಶಾಲೆ ಮಾಡಲು ಜಾಗ ಕೇಳಿದರೆ ಡಿ.ಕೆ. ಶಿವಕುಮಾರ್ ದುಡ್ಡು, ದುಡ್ಡು ಅಂತಾರೆ” ಎಂದು ಮಾಡಿದ್ದ ಟೀಕೆಗೆ ಪ್ರತಿಕ್ರಿಯಿಸಿದ ಡಿಕೆಶಿ,
    “ದೇವೇಗೌಡರು ನಿನ್ನೆ ಚುನಾವಣೆ ಪ್ರಚಾರ ಮಾಡುತ್ತಾ ಡಿ.ಕೆ. ಸಹೋದರರು ಜಮೀನು ಕಬ್ಜ ಮಾಡಿಕೊಂಡಿದ್ದು, ಶಾಲೆ ಕಟ್ಟಲು ಜಾಗ ನೀಡುತ್ತಿಲ್ಲ. ಜಾಗ ಕೇಳಿದರೆ ದುಡ್ಡು, ದುಡ್ಡು ಅಂತಾರೆ ಎಂದು ಆರೋಪ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ನಿಮಗೆ ಕನಕಪುರದಲ್ಲಿ ಸಂಬಂಧಿಕರಿದ್ದರೆ ಕೇಳಿ ನೋಡಿ. ಹಳ್ಳಿಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದು ಶಾಲೆಗಳ ನಿರ್ಮಾಣಕ್ಕೆ ನಾವು ಮೂರು ಕಡೆ ನಮ್ಮ ತಂದೆ ದೊಡ್ಡಆಲಹಳ್ಳಿ ಕೆಂಪೇಗೌಡರಿಗೆ ಸೇರಿದ 25 ಎಕರೆ ಜಾಗವನ್ನು ದಾನ ಮಾಡಿದ್ದೇವೆ. ಯಾರು ಬೇಕಾದರೂ ಹೋಗಿ ನೋಡಬಹುದು ಎಂದರು.

    ಕುಮಾರಸ್ವಾಮಿ ಹಾಗೂ ದೇವೇಗೌಡರೇ, ನೀವು ಎಲ್ಲಾದರೂ ಒಂದು ಎಕರೆ ಜಾಗ ದಾನ ಮಾಡಿದ್ದೀರಾ? ನಾನು ನಿಮ್ಮ ಹಾಗೂ ನಿಮ್ಮ ಜಮೀನಿನ ವಿಚಾರಗಳನ್ನು ಈಗ ಮಾತನಾಡಲು ಹೋಗುವುದಿಲ್ಲ. ಚುನಾವಣೆಗಾಗಿ ನಿಮ್ಮನ್ನು ಟೀಕಿಸುವುದಿಲ್ಲ. ನಿಮ್ಮ ವಯಸ್ಸಿಗೆ ನಾನು ಗೌರವ ನೀಡುತ್ತೇನೆ. ಬಡವರಿಗೆ ಆಗಿರುವ ಮೋಸದ ಬಗ್ಗೆ ಧ್ವನಿ ಎತ್ತಲು ನಾನು ಈ ಪ್ರಶ್ನೆ ಕೇಳಬೇಕಾಗಿದೆ. ಹಾಸನ, ರಾಮನಗರ, ಚನ್ನಪಟ್ಟಣದಲ್ಲಿ ನೀವು ಹಾಗೂ ನಿಮ್ಮ ಕುಟುಂಬದವರು ಒಂದು ಗುಂಟೆ ಜಮೀನನ್ನು ನೀಡಿದ್ದೀರಾ? ಎಂದು ಶಿವಕುಮಾರ್ ಪ್ರಶ್ನಿಸಿದರು.

    ಕುಮಾರಸ್ವಾಮಿ ಕ್ಷೇತ್ರಕ್ಕೆ ಏನು ಮಾಡಿದ್ದಾರೆ?

    ಯೋಗೇಶ್ವರ್ ಅವರು 4-5 ಕೋಟಿ ರೂ. ವೆಚ್ಚ ಮಾಡಿ ಬಿಸಿಲಮ್ಮ ದೇವಾಲಯ ಅಭಿವೃದ್ಧಿ ಮಾಡಿದ್ದಾರೆ. ಮಹದೇಶ್ವರ ದೇವಾಲಯ ಅಭಿವೃದ್ಧಿ ಮಾಡಿದ್ದಾರೆ. ಅದನ್ನು ನೋಡಿ ಸಂತೋಷವಾಗಿದೆ. ಕುಮಾರಸ್ವಾಮಿ ಅವರು ರಾಮನಗರ, ಚನ್ನಪಟ್ಟಣ ಕ್ಷೇತ್ರದಲ್ಲಿ ಒಂದು ದೇವಾಲಯ ಅಭಿವೃದ್ಧಿ ಮಾಡಿದ್ದಾರಾ? ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕ ನೀಡಿದ್ದಾರಾ? ಇಲ್ಲವಾದರೆ, ಮತ್ತೆ ಯಾಕೆ ನೀವು ಮತ ಕೇಳುತ್ತಿದ್ದೀರಿ? ನಿಮಗೆ ಹಣವೇ ಮುಖ್ಯವೇ? ನೀವು ಒಂದೊಂದು ಮತಕ್ಕೆ 2-3 ಸಾವಿರ ಹಣ ನೀಡಬಹುದು. ಆದರೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರು ಬದುಕು ಕಟ್ಟಿಕೊಳ್ಳಲು ದಾರಿದೀಪವಾಗಿದೆ. ಇದಕ್ಕಾಗಿ 56 ಸಾವಿರ ಕೋಟಿ ನೀಡುತ್ತಿದ್ದೇವೆ ಎಂದರು.

    ಕುಮಾರಸ್ವಾಮಿ ಅವರೇ ನೀವು ಹಾಗೂ ನಿಮ್ಮ ಧರ್ಮಪತ್ನಿ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಶಾಸಕರಾಗಿದ್ದವರು. ನೀವು ಕೋವಿಡ್ ಸಮಯದಲ್ಲಿ ಜನರಿಗೆ ನೆರವಾಗಿದ್ದೀರಾ? ಡಿ.ಕೆ. ಸುರೇಶ್ ಜನರಿಗೆ ನೆರವಾಗಲಿಲ್ಲವೇ? ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡಲಿಲ್ಲವೇ? ಇಂತಹ ಒಂದು ಕೆಲಸವನ್ನು ನೀವು ಮಾಡಲಿಲ್ಲ. ಮನೆಯಲ್ಲಿ ಅವಿತು ಕುಳಿತ್ತಿದ್ರಿ. ಯಾರಿಗೂ ಸಹಾಯ ಮಾಡಲಿಲ್ಲ. ಕಷ್ಟಕ್ಕೆ ಆಗಲಿಲ್ಲವಾದರೆ ಮತ್ತೆ ಯಾವಾಗ ಜನರ ಜೊತೆ ನಿಲ್ಲುತ್ತೀರಾ? ಎಂದು ಪ್ರಶ್ನಿಸಿದರು.

  • ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದೇಕೆ? ಡಿಕೆಶಿ ಕೊಟ್ಟ ಉತ್ತರ ಇದು

    ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದೇಕೆ? ಡಿಕೆಶಿ ಕೊಟ್ಟ ಉತ್ತರ ಇದು

    ಮಂಡ್ಯ: ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ತಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಸೋತಿದ್ದೇಕೆ ಎಂಬ ಬಗ್ಗೆ ಈಗಿನ್ನೂ ಚರ್ಚೆ ಸಾಗಿದೆ. ಕಾಂಗ್ರೆಸ್ ನಾಯಕರ ಪಿತೂರಿಯಿಂದಲೇ ನಿಖಿಲ್ ಸೋತಿದ್ದಾರೆ ಎಂದು ಜೆಡಿಎಸ್ ನಾಯಕರು ಆರೋಪಿಸುತ್ತಿದ್ದಾರೆ. ನಿಖಿಲ್ ತಂದೆ ಕುಮಾರಸ್ವಾಮಿಯವರೂ ಅದೇ ರೀತಿಯ ವ್ಯಾಖ್ಯಾನವನ್ನು ನೀಡಿ ಕಾಂಗ್ರೆಸ್ ನಾಯಕರ ಉಬ್ಬೇರಿಸುವಂತೆ ಮಾಡಿದ್ದಾರೆ. ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ತಮ್ಮದೇ ದಾಟಿಯಲ್ಲಿ ಉತ್ತರ ನೀಡಿದ್ದಾರೆ.

    ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಮನಗರದಲ್ಲಿ ಕುಮಾರಸ್ವಾಮಿ ಅವರೂ ಶಾಸಕರಾಗಿದ್ದರು, ಮುಖ್ಯಮಂತ್ರಿಯೂ ಆದರು. ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರು ಕೂಡ ಶಾಸಕರಾಗಿದ್ದರು. ಆದರೂ ನಿಖಿಲ್ ರಾಮನಗರದಲ್ಲಿ ಯಾಕೆ ಸೋತರು? ಅವರು ಕೆಲಸ ಮಾಡಿದ್ದರೆ ಜನ ಸೋಲಿಸುತ್ತಿದ್ದರಾ? ಕೆಲಸ ಮಾಡಿ, ಜನರ ಸೇವೆ ಮಾಡಿದ್ದರೆ ಸೋಲುತ್ತಿರಲಿಲ್ಲ. 5 ವರ್ಷಕ್ಕೊಮ್ಮೆ ಬಂದು ಮತ ನೀಡಿ ಎಂದರೆ ಹೇಗೆ? ಮತದಾರರು ಏನು ಕೂಲಿಕಾರ್ಮಿಕರೇ? ಮತದಾನದ ಹಕ್ಕು ಸ್ವಾಭಿಮಾನದ ಪ್ರತೀಕ. ಅದನ್ನು ಯಾರೂ ಮಾರಿಕೊಳ್ಳುವುದಿಲ್ಲ ಎಂದರು.

    ಕೊಟ್ಟ ಕುದುರೆ ಏರಲು ಅರಿಯದೆ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ. ಅಧಿಕಾರ ಇದ್ದಾಗ ಈ ಕ್ಷೇತ್ರದ ಹಳ್ಳಿಗಳಿಗೆ ಹೋಗಿ ಬಡವರಿಗೆ ಸಹಾಯ ಮಾಡದಿದ್ದರೆ, ಜನರಿಗೆ ನೆರವಾಗದಿದ್ದರೆ, ಶಾಸಕನಾಗಿ ಒಂದೇ ಒಂದು ಬಗರ್ ಹುಕ್ಕುಂ ಸಭೆ ಮಾಡಲಿಲ್ಲ. ಈ ಕ್ಷೇತ್ರದಲ್ಲಿ ಒಮ್ಮೆಯೂ ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸಲಿಲ್ಲ. ಈ ದೇಶಕ್ಕೆ ಗೌರವ ಕೊಡದಿದ್ದರೆ, ಜನರಿಗೆ ಗೌರವ ಕೊಡುತ್ತಾರಾ? ಕುಮಾರಸ್ವಾಮಿಗೆ ಅವರಾಯ್ತು, ಅವರ ಕುಟುಂಬವಾಯ್ತು ಎಂದು ಡಿಕೆಶಿ ಟೀಕಿಸಿದರು.

    ಇಡೀ ಸರ್ಕಾರ ಯೋಗೇಶ್ವರ್ ಹಾಗೂ ನಿಮ್ಮ ಜತೆಗಿದೆ. ಈ ಅವಕಾಶವನ್ನು ನೀವು ಬಿಡುತ್ತೀರಾ? ಜೆಡಿಎಸ್ ನವರು ಅತ್ತರೆ ಅಳಲಿ, ಕುಣಿದರೆ ಕುಣಿಯಲಿ, ಏನಾದರೂ ಮಾಡಿಕೊಳ್ಳಲಿ. ನಿಮ್ಮ ಕಷ್ಟ ಸುಖಕ್ಕೆ ಆಗುವವರು ನಾವು, ನಿಮ್ಮ ಋಣ ತೀರಿಸುವವರು ನಾವು. ನಾವು ನಿಮ್ಮನ್ನು ಹಾಗೂ ಈ ಜಿಲ್ಲೆ ಬಿಟ್ಟು ಹೋಗುವುದಿಲ್ಲ. ನಿಮ್ಮ ಸೇವೆ ಮಾಡುತ್ತೇವೆ. ಹೀಗಾಗಿ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ, ಆಶೀರ್ವಾದ ಮಾಡಿ. ನಿಮ್ಮ ಜತೆಗೆ ನಾವು ನಿಂತು ನಿಮ್ಮ ಸೇವೆ ಮಾಡುತ್ತೇವೆ ಎಂದು ಭರವಸೆ ನೀಡಿದ ಡಿಕೆಶಿ, ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈಗೆ ಅಧಿಕಾರ ಸಿಕ್ಕ ಕಾರಣಕ್ಕೆ ನಾವು ಗ್ಯಾರಂಟಿ ಯೋಜನೆ ನೀಡಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ನಿಮ್ಮ ಕೈಗಳು ಬಲಿಷ್ಠವಾದವು ಎಂದರು.

  • ‘ಬಿಗ್‌ಬಾಸ್’ ಸ್ಪರ್ಧಿ ಧರ್ಮ, ಮಂಜ ಅಭಿನಯದ ‘ಟೆನೆಂಟ್’ ಬಿಡುಗಡೆಗೆ ಸಜ್ಜು

    ರಿಯಾಲಿಟಿ ಶೋ ‘ಬಿಗ್‌ಬಾಸ್’ ಸ್ಪರ್ಧಿಗಳಾಗಿರುವ ಧರ್ಮಕೀರ್ತಿರಾಜ್‌, ಉಗ್ರಂ ಮಂಜು ಅಭಿನಯದ ‘ಟೆನಂಟ್’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ತಿಂಗಳ 22ರಂದು ಈ ಸಿನಿಮಾ ಪ್ರದರ್ಶನ ಆರಂಭವಾಗಲಿದೆ.

    ಬಿಗ್‌ಬಾಸ್’ ಸ್ಪರ್ಧಿಗಳಾಗಿರುವ ಧರ್ಮಕೀರ್ತಿರಾಜ್‌, ಉಗ್ರಂ ಮಂಜು ಅವರು ಇದೀಗ ರಿಯಾಲಿಟಿ ಶೋ ಮನೆಯೊಳಗಿದ್ದಾರೆ. ಅವರಷ್ಟೇ ಅಲ್ಲ, ತಿಲಕ್, ರಾಕೇಶ್ ಮಯ್ಯ, ಸೋನು ಗೌಡ ಸಹಿತ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿ ಪಾತ್ರಗಳನ್ನು ಹಂಚಿಕೊಂಡಿವೆ. ಮಾಸ್ಟರ್ ಚಾಯ್ಸ್ ಕ್ರಿಯೇಶನ್‌ನಡಿ ನಾಗರಾಜ್ ಟಿ. ನಿರ್ಮಾಣ ಮಾಡಿರಿವ ಈ ಸಿನಿಮಾಕ್ಕೆ ಶ್ರೀಧರ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ.

  • ಚಿನ್ನದ ದರ ದಾಖಲೆ ಪ್ರಮಾಣದಲ್ಲಿ ಇಳಿಕೆ

    ಚಿನ್ನದ ದರ ದಾಖಲೆ ಪ್ರಮಾಣದಲ್ಲಿ ಇಳಿಕೆ

    ನವದೆಹಲಿ: ಚಿನ್ನದ ದರ ಮತ್ತೆ ಇಳಿಕೆಯಾಗಿದೆ. ದೀಪಾವಳಿ ಹೊತ್ತಲ್ಲಿ ಗಗನಮುಖಿಯಾಗಿದ್ದ ಆಭರಣ ಲೋಹದ ಧಾರಣೆ ಗುರುವಾರ ಚಿನಿವಾರ ಪೇಟೆಯಲ್ಲಿ ಬಹಳಷ್ಟು ಇಳಿಕೆಉಅಗಿತ್ತು.

    ಬೆಂಗಳೂರಿನಲ್ಲಿ ಸುಮಾರು 20 ದಿನಗಳ ಬಳಿಕ 10 ಗ್ರಾಂ ಚಿನ್ನದ ಬೆಲೆ 80 ಸಾವಿರದ ಗಡಿಯಿಂದ ಕೆಳಗಿಳಿದಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1790 ರೂ. ಇಳಿಕೆಯಾಗಿ 78560 ರೂಪಾಯಿ ಗಳಿಗೆ ತಲುಪಿದೆ.

  • ಮಹಾ ಚುನಾವಣಾ ಅಖಾಡದಲ್ಲಿ ಭರವಸೆಗಳ ಹೊಳೆ; ಗ್ಯಾರೆಂಟಿಗಳ ಸುರಿಮಳೆ

    ಮಹಾ ಚುನಾವಣಾ ಅಖಾಡದಲ್ಲಿ ಭರವಸೆಗಳ ಹೊಳೆ; ಗ್ಯಾರೆಂಟಿಗಳ ಸುರಿಮಳೆ

    ಮುಂಬಯಿ: ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಭರವಸೆಗಳ ಮಹಾಪೂರವೇ ಹರಿದಿದೆ.

    ಮಹಿಳೆಯರಿಗೆ ಪ್ರತೀ ತಿಂಗಳು 3,000 ರೂಪಾಯಿ. ಸಹಾಯ ಧನ, ರಾಜ್ಯ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಗ್ಯಾರೆಂಟಿ ಭರವಸೆಯನ್ನು ಮಹಾ ವಿಕಾಸ ಅಘಾಡಿ (ಎಂವಿಎ) ನೀಡಿದೆ.

    3 ಲಕ್ಷ ರೂಪಾಯಿ ವರೆಗಿನ ರೈತರ ಸಾಲ ಮನ್ನಾ ಮಾಡಲಾಗುತ್ತದೆ ಜೊತೆಗೆ, ನಿರುದ್ಯೋಗಿ ಯುವಜನರಿಗೆ ಪ್ರತೀ ತಿಂಗಳು 4,000 ರೂಪಾಯಿ ನೆರವು ನೀಡಲಾಗುತ್ತದೆ ಎಂದು ಎಂವಿಎ ತನ್ನ ಪ್ರಣಾಳಿಕೆಯಲ್ಲಿ ಆಶ್ವಾಸನೆಗಳ ಪಟ್ಟಿಯನ್ನು ನೀಡಿದೆ.

    ತಮ್ಮ ಒಕ್ಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ‘ಲಡ್ಕಿ ಬಹೀನ್‌’ ಯೋಜನೆಯ ಮೊತ್ತವನ್ನು 2,100 ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಎಂವಿಎ ನಾಯಕರು ಘೋಷಿಸಿದ್ದಾರೆ.