Blog

  • ವಕ್ಫ್ ವಿವಾದ; ನೋಟಿಸ್‌ ರದ್ದಾಗುವುದರಿಂದ ಪ್ರಯೋಜನವಿಲ್ಲ, ಆದೇಶ ರದ್ದಾಗಬೇಕು

    ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನೀಡುವ ನೋಟಿಸ್‌ಗೆ ಯಾವುದೇ ಬೆಲೆ ನೀಡುವುದಿಲ್ಲ. ವಕ್ಫ್‌ ಮಂಡಳಿ ಮಾಡುತ್ತಿರುವ ಭೂ ಕಬಳಿಕೆಯ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.

    ಮಂಡ್ಯ ಜಿಲ್ಲೆಯ, ಚಂದ್ಗಾಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅವರು ಮಾತನಾಡಿದರು. ವಿರೋಧ ಪಕ್ಷದ ನಾಯಕನಾಗಿ ನಾನು ಎಲ್ಲಿ ಬೇಕಾದರೂ ಓಡಾಡಬಹುದು. ಆ ಅಧಿಕಾರ, ಸ್ವಾತಂತ್ರ್ಯ ನನಗಿದೆ. ಅದಕ್ಕಾಗಿ ವಕ್ಫ್‌ ಭೂಮಿ ಕಬಳಿಸಿದ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇನೆ. ಚಂದ್ಗಾಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗವನ್ನು ಒತ್ತುವರಿ ಮಾಡಲಾಗಿದೆ. ಕಣ್ಣ ಮುಂದೆ ಇರುವ ಶಾಲೆ ಪಹಣಿಯಲ್ಲಿ ಖಬರಸ್ಥಾನ ಆಗಿದೆ. ಇದು ಹೆಣ ಹೂಳುವ ಜಾಗವೇ ಎಂದು ಗ್ರಾಮಸ್ಥರೇ ಹೇಳಬೇಕು. ನಮ್ಮ ಶಾಲೆ ನಮ್ಮ ಹಕ್ಕು ಎಂಬ ಘೋಷಣೆಯಡಿ ಹೋರಾಟ ಮಾಡಬೇಕು ಎಂದರು.

    ಯಾವುದೇ ಜಮೀನು ತಕಾರರು ಬಂದರೆ ಜಿಲ್ಲಾಧಿಕಾರಿಗೆ ಅರ್ಜಿ ನೀಡಬೇಕು. ಆದರೆ ವಕ್ಫ್‌ಗೆ ಸಂಬಂಧಿಸಿದ ಜಮೀನು ವಿವಾದ ಬಂದರೆ ಅದನ್ನು ವಕ್ಫ್‌ನಲ್ಲೇ ಬಗೆಹರಿಸಬೇಕೆಂದು ಕೇಂದ್ರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಕಾನೂನು ತಿದ್ದುಪಡಿ ಮಾಡಿದೆ. ಇದರಿಂದಾಗಿ ಜನರ ಜಮೀನು ಕಬಳಿಕೆಯಾಗುತ್ತಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳ ಆಸ್ತಿ ಮುಜರಾಯಿ ಇಲಾಖೆಯಡಿ ಬಂದು ಸರ್ಕಾರಿ ಆಸ್ತಿಯಾಗುತ್ತದೆ. ಆದರೆ ಮುಸ್ಲಿಂ ಸಂಸ್ಥೆಗಳ ಆಸ್ತಿ ಮಾತ್ರ ವಕ್ಫ್‌ ಅಡಿ ಬರುತ್ತದೆ ಎಂದು ದೂರಿದರು.

    ವಿರಕ್ತ ಮಠದ ಆಸ್ತಿಯನ್ನು ಪಹಣಿಯಲ್ಲಿ ವಕ್ಫ್‌ ಭೂಮಿ ಎಂದು ಬರೆಯಲಾಗಿದೆ. ಇದರಿಂದಾಗಿ ಸ್ವಾಮೀಜಿಗಳು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. 15 ಸಾವಿರ ಎಕರೆ ಜಾಗವನ್ನು ವಕ್ಫ್‌ಗೆ ಬರೆಯಲಾಗಿದೆ. ದೇಶ, ಧರ್ಮ, ಕನ್ನಡ ಭಾಷೆ ಉಳಿಯಲು ಇದರ ವಿರುದ್ಧ ಹೋರಾಡಬೇಕಿದೆ. ರಾಜ್ಯದ ಪ್ರತಿಯೊಬ್ಬರೂ ಪಹಣಿಯಲ್ಲಿ ಪರಿಶೀಲಿಸಬೇಕು. ಅದರಲ್ಲಿ ವಕ್ಫ್‌ ಎಂದು ಇದ್ದರೆ, ನನಗೆ ತಿಳಿಸಿದರೆ ಬಂದು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

    ಇದೇ ವೇಳೆ, ನೋಟಿಸ್‌ ರದ್ದಾಗುವುದರಿಂದ ಪ್ರಯೋಜನವಿಲ್ಲ. ಜಿಲ್ಲಾಧಿಕಾರಿ ಮಾಡಿದ ಆದೇಶ ರದ್ದಾಗಬೇಕು. ವಕ್ಫ್‌ ಮಂಡಳಿ ಹೆಸರಿನಲ್ಲಿ ಕಾಂಗ್ರೆಸ್‌ ಲೂಟಿ ಮಾಡಲು ಮುಂದಾಗಿದೆ. ರಾಜಕೀಯವಾಗಿ ಇದನ್ನು ನಾವು ಬಳಸಿಕೊಳ್ಳುವುದಿಲ್ಲ. ಕೂಡಲೇ ವಕ್ಫ್‌ ಬೋರ್ಡ್‌ನ ಆಸ್ತಿ ಸರ್ಕಾರದ ಆಸ್ತಿ ಎಂದು ಘೋಷಣೆ ಮಾಡಿ. ಆಗ ಯಾವುದೇ ಸಮಸ್ಯೆ ಇರುವುದಿಲ್ಲ. ಇದು ಭಾರತಮಾತೆಯ ಜಮೀನು, ಯಾವುದೇ ಸಮುದಾಯದ ಆಸ್ತಿಯಲ್ಲ. ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ನೋಡುವುದನ್ನು ಈ ಸರ್ಕಾರ ನಿಲ್ಲಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಮರ ಸಾಮ್ರಾಟ್‌ ಆಗಲು ಯತ್ನಿಸುತ್ತಿದ್ದಾರೆ ಎಂದರು.

  • ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಕಂಟಕ; ಕೆಐಎಡಿಬಿ ಹಗರಣ ಬಗ್ಗೆ ಇ.ಡಿ.ಗೆ ದೂರು; ಪ್ರಧಾನಿ ಮೋದಿ, ಷಾ ಅವರಿಗೂ ಅಹವಾಲು

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಮುಡಾ ನಿವೇಶನ ಅಕ್ರಮ, ವಾಲ್ಮೀಕಿ ನಿಗಮದ ಕರ್ಮಕಾಂಡದ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರಕ್ಕೆ KIADB ಬಹುಕೋಟಿ ಹಗರಣವೂ ಸಂಕಷ್ಟ ತಂದೊಡ್ಡಿದೆ. ಕುತೂಹಲಕಾರಿ ಬೆಳವಣಿಗೆಯಲ್ಲಿ ‘ದೇವನಹಳ್ಳಿ KIADB ಭೂಸ್ವಾಧೀನ ಅವ್ಯವಹಾರ’ ಆರೋಪ ಕುರಿತಂತೆ ಸಿಎಂ ಸಿದ್ದರಾಮಯ್ಯ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಕೆ.ಎ.ಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ಧ ಜಾರಿ ನಿರ್ದೇಶನಾಲಯ (ED)ದ ನಿರ್ದೇಶಕರಿಗೆ ದೂರು ಸಲ್ಲಿಕೆಯಾಗಿದೆ. ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಈ ದೂರನ್ನು ಸಲ್ಲಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಿರ್ದೇಶನ ಕೋರಿ ಕೇಂದ್ರ ಸರ್ಕಾರಕ್ಕೂ ದೂರು ಸಲ್ಲಿಕೆಯಾಗಿದೆ.

    ಕೈಗಾರಿಕೋದ್ಯಮಗಳನ್ನು ಉತ್ತೇಜಿಸಲು, ಉದ್ಯಮ ಸಂಸ್ಥೆಗಳಿಗೆ ಮೂಲಸೌಕರ್ಯ ಕಲ್ಪಿಸುವ ಸಂಬಂಧ ಸ್ಥಾಪಿಸಲಾಗಿರುವ ರಾಜ್ಯ ಸರ್ಕಾರದ ಅಧೀನದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಇದೀಗ ಹಗರಣಗಳ ಕೂಪವಾಗಿದ್ದು, ಒಂದೊಂದೇ ಕರ್ಮಕಾಂಡಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಸರ್ಕಾರಿ ಜಮೀನಿಗೆ ನಕಲಿ ಮಾಲೀಕರನ್ನು ಸೃಷ್ಟಿಸಿ ಪರಿಹಾರದ ಮೊತ್ತವನ್ನು ಪಾವತಿಸಿರುವ ಆರೋಪ ಕೇಳಿಬಂದಿದೆ. ಈ ಹಗರಣದಲ್ಲಿ KIADB ಭೂಸ್ವಾಧೀನಾಧಿಕಾರಿಯಾಗಿರುವ KAS ಅಧಿಕಾರಿ ಬಾಳಪ್ಪ ಹಂದಿಗುಂದ ಅವರು ಅಧಿಕಾರ ದುರುಪಯೋಗಪಡಿಸಿದ್ದಾರೆ ಎಂದು ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಅಧ್ಯಕ್ಷ ಕೆ.ಎ.ಪಾಲ್ ಅವರು ಈ ದೂರು ಸಲ್ಲಿಸಿದ್ದಾರೆ.

    KIADB ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀಪ ನೂರಾರು ಎಕ್ರೆ ಜಮೀನನ್ನು ಕೈಗಾರಿಕಾ ಉದ್ದೇಶಗಳಿಗಾಗಿ ವಶಪಡಿಸಿಕೊಳ್ಳಲು ನೋಟಿಫಿಕೇಶನ್ ಹೊರಡಿಸಲಾಗಿತ್ತು. ಈ ಪೈಕಿ ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಚಪ್ಪರದಹಳ್ಳಿ ಗ್ರಾಮದಲ್ಲಿ ನಡೆದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ. ಕುಂದಾಣ ಹೋಬಳಿಯ ಚಪ್ಪರದಹಳ್ಳಿ ಗ್ರಾಮದ ಸರ್ವೇ ನಂಬರ್ 7ರಲ್ಲಿ ಅನಧಿಕೃತವಾಗಿ ಕೃಷಿ ಮಾಡುತ್ತಿದ್ದ ಹಲವರಿಗೆ 1984ರಲ್ಲಿ ಆಗಿನ ತಹಸೀಲ್ದಾರರು ‘ಎವಿಕ್ಷನ್ ನೋಟಿಸ್’ ಜಾರಿ ಮಾಡಿದ್ದರು. ಅನಂತರ ಸದರಿ ಜಮೀನನ್ನು ‘ಸರ್ಕಾರಿ ಫಡಾ’ ಎಂದು ಘೋಷಿಸಲಾಗಿತ್ತು. ಆದರೆ, ಕೆಐಎಡಿಬಿ ವತಿಯಿಂದ ಭೂಸ್ವಾಧೀನ ಪ್ರಸ್ತಾಪವಾದ ಸಂದರ್ಭದಲ್ಲಿ ಹಲವರನ್ನು ಜಮೀನು ಮಾಲೀಕರೆಂದು ಗುರುತಿಸಿ ಪರಿಹಾರ ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. 27.07.202 ರಂದು ಬಾಳಪ್ಪ ಹಂದಿಗುಂದ (ವಿಶೇಷ ಭೂಸ್ವಾಧೀನಾಧಿಕಾರಿ-2) ಅವರ ಉಪಸ್ಥಿತಿಯಲ್ಲಿ ನಡೆದ ತೀರ್ಮಾನ ಹಾಗೂ ಅವರ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು EDಗೆ ಸಲ್ಲಿಸಲಾಗಿರುವ ದೂರಿನಲ್ಲಿ ಗಮನಸೆಳೆಯಲಾಗಿದೆ.

    ಈ ಸಂಬಂಧ ತನಿಖೆಗೆ ಕೋರಿ 12.09.2024ರಂದು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಕೈಗಾರಿಕಾ ಸಚಿವರಿಗೆ ದೂರು ನೀಡಲಾಗಿತ್ತು. ಇದಕ್ಕೆ ಸ್ಪಂಧಿಸದಿದ್ದಾಗ 09.10.2024ರಂದು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಅದಕ್ಕೂ ಸರ್ಕಾರ ಸ್ಪಂಧಿಸದ ಹಿನ್ನೆಲೆ ಅಕ್ಟೊಬರ್ 23ರಂದು EDಗೆ ಅಹವಾಲು ಸಲ್ಲಿಸಲಾಗಿದ್ದು, ಬುಧವಾರ (06.11.2024) ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ ದೂರು ಸಲ್ಲಿಸಿ ಬಹುಕೋಟಿ KIADB ಹಗರಣ ಬಗ್ಗೆ ಸಮಗ್ರ ತನಿಖೆ ನಡೆಸಲು ಕೆ.ಎ.ಪಾಲ್ ಮನವಿ ಮಾಡಿದ್ದಾರೆ.

    ದೇವನಹಳ್ಳಿಯ ಗೊಲ್ಲಹಳ್ಳಿ, ದೊಡ್ಡಗೊಲ್ಲಹಳ್ಳಿ, ಜೋಡಿಗ್ರಾಮ, ಕುಂದಾಣ, ಚಪ್ಪರದಹಳ್ಳಿ, ಕೋಡಿಹಳ್ಳಿ ಕೋಣಗಟ್ಟಿ, ಬೈದೇನಹಳ್ಳಿ, ಹಾರೋನಹಳ್ಳಿ, ಹರಳೂರು, ಮೊದಲಾದ ಹತ್ತಾರು ಹಳ್ಳಿಗಳಲ್ಲಿ ಜಮೀನನ್ನು ಕೆಐಎಡಿಬಿ ವತಿಯಿಂದ ಸ್ವಾಧೀನಪಡಿಸಿ ವಿವಿಧ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ. ಸರ್ಕಾರದ ಭೂಮಿಯನ್ನು ಸ್ವಾಧೀನ ಪಡೆದು ನಕಲಿ ವ್ಯಕ್ತಿಗಳಿಗೆ ಪರಿಹಾರ ಪಾವತಿಸಲಾಗಿದೆ. ಚಪ್ಪರದಹಳ್ಳಿ ಗ್ರಾಮದ ಸರ್ವೇ ನಂಬರ್ 7ರಲ್ಲಿ 45 ಎಕರೆ 15 ಗುಂಟೆ ಪೈಕಿ 5.5 ಎಕರೆ ಜಮೀನನ್ನು ಹಂಗಾಮಿ ಸಾಗುವಳಿ ಭೂಮಿಯೇ ಎಂದು ಪರಿಶೀಲಿಸದೆ ಹಲವರ ಹೆಸರಿನಲ್ಲಿ ಪರಿಹಾರ ಪ್ರಕಟಿಸಲಾಗಿದೆ. 38.5 ಎಕರೆ ಹಂಗಾಮಿ ಸಾಗುವಳಿ ಜಾಮೀನು ‘ಸರ್ಕಾರಿ ಫಡಾ’ ಎಂದು ತಿಳಿದಿದ್ದರೂ ಅಕ್ರಮವಾಗಿ ಪರಿಹಾರದ ಮೊತ್ತ ಪಾವತಿಯಾಗಿದೆ ಎಂದು ಈ ದೂರಿನಲ್ಲಿ ಗುರುತರ ಆರೋಪ ಮಾಡಲಾಗಿದೆ.

    ಬಾಳಪ್ಪ ಹಂದಿಗುಂದ ವಿರುದ್ದದ ಇತರ ಪ್ರಕರಣಗಳ ಬಗ್ಗೆಯೂ ಈ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಾಳಪ್ಪ ಹಂದಿಗುಂದ ರವರು 2020ರಲ್ಲಿ ಬೇರೆ ಇಲಾಖೆಯ ಹೆಚ್ಚವರಿ ಅಧಿಕಾರಿಗಳಾಗಿರುವಾಗ ಸಾದಳ್ಳಿ ಗ್ರಾಮದ ರೈತರಿಗೆ 83 ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿ ಗೋಲ್ ಮಾಲ್ ಮಾಡಿರುವ ಆರೋಪವೂ ಇದೆ. ಒಂದೇ ಜಮೀನಿಗೆ ಎರಡೆರಡು ಬಾರಿ ಪರಿಹಾರದ ಹಣ ಪಾವತಿಸಿರುವ ಅಕ್ರಮವೂ ನಡೆದಿದೆ. ಕೆಲವು ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲಾಗಿದೆ.

    ದೇವನಹಳ್ಳಿ ತಾಲೂಕಿನ ಬೈದೇನಹಳ್ಳಿ, ದೊಡ್ಡಗೊಲ್ಲಹಳ್ಳಿ, ಚಪ್ಪರದಹಳ್ಳಿ, ಹರೋನಹಳ್ಳಿ ಮೊದಲಾದ ಗ್ರಾಮಗಳಲ್ಲಿ ಕೆಐಎಡಿಬಿ ಭೂಸ್ವಾಧೀನ ನಡೆಸಿದ್ದು, ಭೂಮಿಯ ಮಾಲೀಕರಿಗೆ ಪ್ರತೀ ಎಕರೆಗೆ 1.35 ಕೋಟಿ ರೂಪಾಯಿ ಪಾವತಿಸಿ, ಆ ಮೊತ್ತದಿಂದ ಕಮೀಷನ್ ಸಂಗ್ರಹಿಸಲಾಗಿದೆ ಎಂಬ ರೈತರು ‘ಸಿಟಿಜನ್ ರೈಟ್ಸ್ ಫೌಂಡೇಷನ್’ಗೆ ದೂರು ನೀಡಿದ್ದು, ಮುಖ್ಯಮತ್ರಿ ಸಿದ್ದರಾಮಯ್ಯ ಮತ್ತು ಸಚಿವ ಎಂ.ಬಿ.ಪಾಟೀಲ್ ರವರಿಗೆ ತಲುಪಿಸಲು ಪ್ರತೀ ಎಕರೆಗೆ 35 ಲಕ್ಷ ರೂಪಾಯಿ ಕಮೀಷನ್ ಸಂಗ್ರಹಿಸಲಾಗಿದೆ ಎಂದೂ ಆರೋಪಿಸಿದ್ದಾರೆ. ಅನೇಕ ಭೂ ಮಾಲೀಕರಿಗೆ ಹಣ ನೀಡುವ ಬದಲು 50:50 ಅನುಪಾತದಲ್ಲಿ ನಿವೇಶನ ಪಡೆಯುವ ಒಪ್ಪಂದ ಮಾಡಿಸಿ, ಆ ಜಮೀನನ್ನು ತಮ್ಮ ಬೇನಾಮಿ ವ್ಯಕ್ತಿಗಳಿಗೆ ಸೇಲ್ ಅಗ್ರಿಮೆಂಟ್ ಮಾಡಿಸಲಾಗಿದೆ ಎಂದೂ ಈ ದೂರಿನಲ್ಲಿ ಆರೋಪಿಸಲಾಗಿದೆ.

    ಬಾಳಪ್ಪ ಹಂದಿಗುಂದ ಒಬ್ಬ ಪ್ರಭಾವಿ ಅಧಿಕಾರಿಯಾಗಿದ್ದು, ಅವ್ಯವಹಾರ ಪ್ರಕರಣದಲ್ಲಿ ಅಮಾನತಾಗಿದ್ದರೂ ಅದೇ ಇಲಾಖೆಯ ಹುದ್ದೆಯಲ್ಲಿ ಮುಂದುವರಿಯುವಷ್ಟು ಪ್ರಭಾವಿ. ಲೋಕಾಯುಕ್ತ ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಇವರ ವಿರುದ್ಧ ಪ್ರಕರಣಗಳಿದ್ದರೂ ಕೆಐಎಡಿಬಿಯಲ್ಲೇ ಮುಂದುವರಿಸಲು ಸಚಿವ ಎಂಬಿ ಪಾಟೀಲ್ ಶಿಫಾರಸು ಮಾಡಿದ್ದು, ಸಿಎಂ ಅದಕ್ಕೆ ಒಪ್ಪಿರುವ ಕ್ರಮವೂ ಆಕ್ಷೇಪಾರ್ಹ ಎಂದು ದೂರುದಾರ ಕೆ.ಎ.ಪಾಲ್ ಅವರು ಈ ದೂರಿನಲ್ಲಿ ಹೇಳಿದ್ದಾರೆ.

    ಈ ನಡುವೆ ಕೆಐಎಡಿಬಿ ವತಿಯಿಂದ ನಡೆದಿದೆ ಎನ್ನಲಾಗಿರುವ ಅಕ್ರಮಗಳ ವಿರುದ್ಧ ‘ರೈತ ಹೋರಾಟ ಸಮಿತಿ’ ನೇತೃತ್ವದಲ್ಲಿ ಕಳೆದ 6-7 ತಿಂಗಳುಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದರೂ ಸರ್ಕಾರ ಸಮಸ್ಯೆ ಬಗೆಹರಿಸದೆ ಇರುವುದರಿಂದ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಿಸಬೇಕೆಂದು ಕೆ.ಎ.ಪಾಲ್ ಆಗ್ರಹಿಸಿದ್ದಾರೆ.

  • ನ.8, 9ರಂದು ಮಂಗಳೂರಿನಲ್ಲಿ ಜಾಗತಿಕ ಸಂವಹನ ಸಮಾವೇಶ; ವಿವಿಧ ದೇಶಗಳ ಗಣ್ಯರ ಸಮಾಗಮ

    ನ.8, 9ರಂದು ಮಂಗಳೂರಿನಲ್ಲಿ ಜಾಗತಿಕ ಸಂವಹನ ಸಮಾವೇಶ; ವಿವಿಧ ದೇಶಗಳ ಗಣ್ಯರ ಸಮಾಗಮ

    ಬೆಂಗಳೂರು: ಪ್ರತಿಷ್ಠಿತ ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) 18ನೇ ಜಾಗತಿಕ ಸಂವಹನ ಸಮಾವೇಶ 2024ರ ನವೆಂಬರ್ 8 ಮತ್ತು 9ರಂದು ಮಂಗಳೂರಿನಲ್ಲಿ ನಡೆಯಲಿದೆ. PRCI ಸಂಸ್ಥೆಯು ಸಾರ್ವಜನಿಕ ಸಂಪರ್ಕ ಮತ್ತು ಸಂವಹನ ವೃತ್ತಿಪರತೆಯ ಪ್ರಮಾಣಿತ ಮಾನದಂಡಗಳನ್ನು ಉತ್ತೇಜಿಸುವ ಪ್ರಮುಖ ಸಂಸ್ಥೆಯಾಗಿದ್ದು ಈ ಬಾರಿ ಕಡಲತಡಿಯ ನಗರಿಯಲ್ಲಿ ಆಯೋಜಿಸಲಾಗಿದ್ದು ದೇಶ ವಿದೇಶಗಳ ಪ್ರತಿನಿಧಿಗಳ ಸಮಾಗಮಕ್ಕೆ ಈ ಸಮಾವೇಶ ಸಾಕ್ಷಿಯಾಗಲಿದೆ. .

    2004ರ ಮಾರ್ಚ್ 3 ರಂದು PRCIಯು ಸ್ಥಾಪನೆಯಾಗಿದ್ದು, ಅದಕ್ಕೂ ಮೊದಲು 17 ಜಾಗತಿಕ ಸಂವಹನ ಸಮಾವೇಶಗಳನ್ನು ಜಯಪುರ, ಪುಣೆ, ಕೊಲ್ಕತ್ತಾ, ನವದೆಹಲಿ, ಮುಂಬೈ, ಹೈದರಾಬಾದ್, ಚಂಡೀಗಢ್, ಬೆಂಗಳೂರು ಮತ್ತು ಗೋವಾ ನಗರಗಳಲ್ಲಿ ಯಶಸ್ವಿಯಾಗಿ ಆಯೋಜಿಸಿತ್ತು. ದೇಶದಾದ್ಯಂತ ಮತ್ತು ವಿಶ್ವದ ಪ್ರಮುಖ ಉದ್ಯಮಗಳಿಂದ 500ಕ್ಕೂ ಹೆಚ್ಚು ಸಂವಹನ ವೃತ್ತಿಪರರು ಮತ್ತು ನಿರ್ಧಾರಮೇಕರ್‌ಗಳು ಪಬ್ಲಿಕ್ ರಿಲೇಶನ್ಸ್ ಮತ್ತು ಸಂವಹನ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳು, ಹೊಸ ವಿಚಾರಗಳು, ಮತ್ತು ಉತ್ತಮ ಅಭ್ಯಾಸಗಳ ಬಗ್ಗೆ ಚರ್ಚಿಸಲು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

    ವರ್ಷದ ಸಮಾವೇಶದ ವಿಷಯ ‘ಮರುಸಂಪರ್ಕ,’ ಇಂದಿನ ತೀವ್ರಗತಿಯ ಜೀವನದಲ್ಲಿ ಮತ್ತು ಡಿಜಿಟಲ್ ಮಾಧ್ಯಮದ ಪ್ರಭಾವದಿಂದ ಗಮನಾರ್ಹವಾಗದ ಆದ್ಯತೆಯಾದ ಸುತ್ತಮುತ್ತಲಿನ ಎಲ್ಲರೊಂದಿಗೆ ಮರುಸಂಪರ್ಕದ ಮಹತ್ವವನ್ನು ಬೆಳಕುಹಾಕಲಿದೆ. ಈ ಸಮಾವೇಶದಲ್ಲಿ 11 ಉಲ್ಲೇಖನೀಯ ಪ್ಯಾನೆಲ್ ಚರ್ಚೆಗಳು ನಡೆಯಲಿದ್ದು, ಕೈಗಾರಿಕಾ ತಜ್ಞರು, ಆಲೋಚನಾಪ್ರೇರಕರು, IAS ಅಧಿಕಾರಿಗಳು, ಮತ್ತು ಯುರೋಪ್ ಹಾಗೂ ಗಲ್ಪ್ ದೇಶಗಳಿಂದ ಬಂದ ಸಂವಹನ ವೃತ್ತಿಪರರು ಪಾಲ್ಗೊಳ್ಳಲಿದ್ದಾರೆ. ಚರ್ಚೆಯ ವಿಷಯಗಳು ಸರ್ಕಾರಿ ಪಬ್ಲಿಕ್ ರಿಲೇಶನ್ಸ್ ಮತ್ತು ಸಾರ್ವಜನಿಕತೆಯನ್ನು ಉತ್ತೇಜಿಸುವುದು, ಗಿಗ್ ಆರ್ಥಿಕತೆಯ ಪ್ರಭಾವ, ಜಾಗತಿಕ ಕಥೆಗಳು ಮತ್ತು ಡಿಜಿಟಲ್ ಮಾಧ್ಯಮದ ಬಳಕೆ ಹಾಗೂ ಮಾನವರು ಮತ್ತು ಯಂತ್ರಗಳು ಭವಿಷ್ಯದಲ್ಲಿ ಒಟ್ಟಾಗಿ ಹೇಗೆ ಜೀವಿಸಬಹುದು ಎಂಬ ಬಗ್ಗೆ ಚಿಂತನ ಮಂಥನ ನಡೆಯಲಿದೆ ಎಂದು ಸಂಘಟಕರು ಮಾಹಿತಿ ಒದಗಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ, PRCI 15 ಮಂದಿ ವಿಸಿ ಗಳನ್ನು ಏಕಕಾಲದಲ್ಲಿ ಸೇರಿಸುವ ‘ವೈಸ್ ಚಾನ್ಸಲರ್‌ಗಳ ವಿಶೇಷ ಮೃತ್ತಸಂವಾದ’ ಅನ್ನು ಆಯೋಜಿಸುತ್ತಿದೆ, ಇದು ಉನ್ನತ ಶಿಕ್ಷಣದ ಭವಿಷ್ಯ ಮತ್ತು ಹೊಸ ಆವಿಷ್ಕಾರಗಳೊಂದಿಗೆ ಮರುಸಂಪರ್ಕದ ಬಗ್ಗೆ ಚರ್ಚೆ ನಡೆಲಿದೆ.

    ಈ ಸಮಾರಂಭವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಮಂಗಳೂರು ಮೇಯರ್ ಮನುಜ್ ಕುಮಾರ್ ಕೊಡಿಕಲ್ ಅವರು ಉದ್ಘಾಟಿಸಲಿದ್ದು, PRCIಯ ವಿಶೇಷ ನಿಯತಕಾಲಿಕೆಗಳಾದ ಚಾಣಕ್ಯ, ಆಧ್ವಿಕಾ, ಮತ್ತು ಕೌಟಿಲ್ಯ ಬಿಡುಗಡೆ ಮಾಡಲಾಗುತ್ತದೆ. ಇದೇ ವೇಳೆ, ಸಂವಹನ, ಪಬ್ಲಿಕ್ ರಿಲೇಶನ್ಸ್, ಮತ್ತು ಅಕಾಡೆಮಿಯಾ ಕ್ಷೇತ್ರದಲ್ಲಿ ಯಶಸ್ವಿ ಸಾಧನೆ ಮಾಡಿದ ವೃತ್ತಿಪರರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ, ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್, ಹೊಸ ಮತ್ತು ನವೀನೀಕೃತ ವಿದ್ಯುತ್ ಸಚಿವರು, ಶ್ರೀ ಪಿ. ಕೃಷ್ಣ ಭಟ್, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು, ಶ್ರೀ ರವಿ ಕಿರಣ್, ಕನ್ನಡ ಚಲನಚಿತ್ರ ನಟ ಮತ್ತು ನಿರ್ದೇಶಕ, ಮತ್ತು ಹಲವಾರು ಗಣ್ಯ ವ್ಯಕ್ತಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

    ಮಂಗಳೂರಿನಲ್ಲಿ ಈ 18ನೇ ಜಾಗತಿಕ ಸಮಾವೇಶವನ್ನು ಆಯೋಜಿಸುತ್ತಿರುವಾಗ, ‘ಮರುಸಂಪರ್ಕ’ ಎಂಬ ವಿಷಯವನ್ನು ಅಳವಡಿಸಿಕೊಳ್ಳೋಣ. ನಾವು ನಮ್ಮ ಬದುಕಿನ ಮುಖ್ಯ ಮೂಲ್ಯಗಳಾದ ಪಾರದರ್ಶಕತೆ ಮತ್ತು ನಂಬಿಕೆಗಳಿಗೆ ಮರುಸಂಪರ್ಕ ಮಾಡೋಣ, ಎಂದು PRCI ಸ್ಥಾಪಕ ಅಧ್ಯಕ್ಷ ಶ್ರೀ ಎಂ ಬಿ ಜಯರಾಮ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    PRCI ರಾಷ್ಟ್ರೀಯ ಅಧ್ಯಕ್ಷರಾದ ಗೀತಾ ಶಕಾರ್ ಮಾತನಾಡಿ, ಸಂಬಂಧಗಳ ನಿರ್ಮಾಣ ಮತ್ತು ನಂಬಿಕೆಯನ್ನು ರೂಪಿಸುವುದು ಪಬ್ಲಿಕ್ ರಿಲೇಶನ್ಸ್ ವೃತ್ತಿಯ ಗುರಿ. PR ಮಾತ್ರ ಸಂದೇಶ ರವಾನಿಸುವುದಲ್ಲ, ಅದನ್ನು ಅರ್ಥಪೂರ್ಣವಾಗಿ ಜಗತ್ತಿನೊಂದಿಗೆ ಮರುಸಂಪರ್ಕಿಸಲು ಪಬ್ಲಿಕ್ ರಿಲೇಶನ್ಸ್ ವೃತ್ತಿಪರರು ಪ್ರಯತ್ನಿಸುತ್ತಾರೆ ಎಂದರು.

  • ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಆಗ್ರಹ; ವಿಧಾನಸಭೆಯಲ್ಲಿ ಕೋಲಾಹಲ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಮುಂದುವರಿಸಬೇಕು ಹಾಗೂ ಆರ್ಟಿಕಲ್ 370 ಮತ್ತು 35 ಎ ನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ರಾಜಕೀಯ ಪಕ್ಷಗಳು ಆಗ್ರಹಿಸಿವೆ. ಈ ಆಗ್ರಹದಿಂದಾಗಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಯಲ್ಲಿ ಗುರುವಾರ ಕೋಲಾಹಲದ ಪರಿಸ್ಥಿತಿ ನಿರ್ಮಾಣವಾಯಿತು.

    ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಕ್ಕೆ ಕೆಲವು ಶಾಸಕರು ಒತ್ತಾಯಿಸಿದರೆ ಕೆಲವರು ವಿರೋಧಿಸಿದ್ದಾರೆ. ವಿಶೇಷ ಸ್ಥಾನಮಾನ ಕುರಿತು ಬುಧವಾರ ಕೈಗೊಂಡ ನಿರ್ಣಯವನ್ನು ಬಿಜೆಪಿ ಶಾಸಕರು ಗುರುವಾರ ವಿರೋಧಿಸಿದರು. ಈ ಸಂದರ್ಭದಲ್ಲಿ ಅವಾಮಿ ಇತ್ತೆಹಾದ್ ಪಕ್ಷದ ನಾಯಕ ಮತ್ತು ಶಾಸಕ ಲಂಗೇಟ್ ಶೇಖ್ ಖುರ್ಷೀದ್ ಅವರು ಆರ್ಟಿಕಲ್ 370 ಮತ್ತು 35 ಎ ಯನ್ನು ಮರುಸ್ಥಾಪಿಸುವಂತೆ ಬ್ಯಾನರ್ ಪ್ರದರ್ಶಿಸಿ ಸದನದ ಬಾವಿಗಿಳಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಬ್ಯಾನರ್ ಕಿತ್ತು ಹಾಕಿದರು. ಈ ವೇಳೆ ಕೈ ಕೈ ಮಿಲಾಯಿಸುವ ಹಂತ ತಲುಪಿತು. ಈ ಗದ್ದಲ ಹಿನ್ನೆಲೆ ಕಲಾಪವನ್ನು ಕೆಲಕಾಲ ಸ್ಪೀಕರ್ ಮುಂದೂಡಿದರು.

  • ನಟ ಶಾರುಖ್ ಖಾನ್’ಗೂ ಕೊಲೆ ಬೆದರಿಕೆ; ಆರೋಪಿಗಾಗಿ ಪೊಲೀಸ್ ಬಲೆ

    ನಟ ಶಾರುಖ್ ಖಾನ್’ಗೂ ಕೊಲೆ ಬೆದರಿಕೆ; ಆರೋಪಿಗಾಗಿ ಪೊಲೀಸ್ ಬಲೆ

    ಮುಂಬೈ: ಬಾಲಿವುಡ್ ತಾರೆಯರಿಗೆ ಜೀವಬೆದರಿಕೆಯ ಪ್ರಕರಣ ಮರುಕಳಿಸುತ್ತಲಿದ್ದು, ನಟ ಸಲ್ಮಾನ್ ಖಾನ್ ಬಳಿಕ ಶಾರುಖ್​ ಖಾನ್​ಗೆ ಕೊಲೆ ಬೆದರಿಕೆಯೊಡ್ಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಮುಂಬೈ ಪೊಲೀಸರು ಆರೋಪಿಗಾಗಿ ಬಲೇ ಬೀಸಿದ್ದಾರೆ.

    ನಟ ಶಾರುಖ್ ಖಾನ್ ಅವರಿಗೆ ಕರೆ ಮಾಡಿದ ವ್ಯಕ್ತಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. 50 ಲಕ್ಷ ರೂ. ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ನವೆಂಬರ್ 5 ರಂದು ಪ್ರಕರಣ ದಾಖಲಿಸಿಕೊಂಡ ಬಾಂದ್ರಾ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಯು ಛತ್ತೀಸ್ ಘಡದ ರಾಯ್‌ಪುರದಲ್ಲಿ ಇರಬಹುದೆಂಬ ಸುಳಿವು ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಅಬಕಾರಿ ಲಂಚಾವತಾರ; ಸಚಿವ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಆಗ್ರಹ

    ಅಬಕಾರಿ ಲಂಚಾವತಾರ; ಸಚಿವ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಆಗ್ರಹ

    ಬೆಂಗಳೂರು; ಅಬಕಾರಿ ಇಲಾಖೆಯಲ್ಲಿ 900 ಕೋಟಿ ರೂ. ಭ್ರಷ್ಟಾಚಾರ ನಡೆದಿದ್ದು, ಇದನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು. ಸಚಿವ ಆರ್‌.ಬಿ.ತಿಮ್ಮಾಪುರ ರಾಜೀನಾಮೆ ನೀಡಬೇಕು. ಇದು ಹಣದ ಅವ್ಯವಹಾರವಾಗಿರುವುದರಿಂದ ಜಾರಿ ನಿರ್ದೇಶನಾಲಯ ಕೂಡ ಕ್ರಮ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಬೆಂಗಳೂರಿನಲ್ಲಿ ರೌಡಿಗಳು ಹಫ್ತಾ ವಸೂಲಿ ಮಾಡುತ್ತಿದ್ದರು. ಈಗ ರೌಡಿಗಳೇ ನಾಚುವಂತೆ ಅಬಕಾರಿ ಸಚಿವ ತಿಮ್ಮಾಪುರ ಅವರು ವಾರಕ್ಕೆ 18 ಕೋಟಿ ರೂ. ವಸೂಲಿ ಮಾಡುತ್ತಿದ್ದಾರೆ. ಅಂದರೆ ವರ್ಷಕ್ಕೆ ಸುಮಾರು 900 ಕೋಟಿ ರೂ. ಲಂಚ ಪಡೆಯಲಾಗುತ್ತಿದೆ. ಪ್ರತಿ ಹುದ್ದೆಯ ಅಧಿಕಾರಿಗಳಿಗೆ ಎಷ್ಟು ಲಂಚ ನೀಡಲಾಗುತ್ತಿದೆ ಎಂದು ಮದ್ಯ ಮಾರಾಟಗಾರರ ಸಂಘ ಪತ್ರದಲ್ಲಿ ವಿವರಿಸಿದೆ. ಮುಖ್ಯಮಂತ್ರಿ ಕಚೇರಿಯ ಅಧಿಕಾರಿ, ಪಿಎ, ಪಿಎಸ್‌ ಪಡೆಯುತ್ತಿರುವ ಲಂಚದ ಬಗ್ಗೆಯೂ ವಿವರವಿದೆ. ಸಮಬಾಳು ಸಮಪಾಲು ಎಂಬಂತೆ ಸಚಿವ ತಿಮ್ಮಾಪುರ ಎಲ್ಲರಿಗೂ ಲಂಚ ಹಂಚಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ 40 ಪರ್ಸೆಂಟ್‌ ಎಂದು ಆರೋಪ ಮಾಡಿದ್ದರೂ ಅದಕ್ಕೆ ಸೂಕ್ತ ದಾಖಲೆ ನೀಡಿಲ್ಲ. ಈಗ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ಭಿತ್ತಿಪತ್ರ ಅಂಟಿಸುವುದಾದರೆ ನಾನು ಕೂಡ ಬರುತ್ತೇನೆ ಎಂದು ವ್ಯಂಗ್ಯವಾಡಿದರು.

    ಮದ್ಯ ಮಾರಾಟಗಾರರು ಈ ಕಿರುಕುಳ ವಿರೋಧಿಸಿ ಒಂದು ದಿನ ಬಂದ್‌ ಮಾಡಲಿದ್ದಾರೆ. ಈ ಸರ್ಕಾರ ಆದಾಯಕ್ಕೆ ಮದ್ಯವನ್ನೇ ನಂಬಿಕೊಂಡಿದೆ. ಹೀಗೆ ಬಾರ್‌ಗಳನ್ನು ಬಂದ್‌ ಮಾಡಿದರೆ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಲಿದೆ ಎಂದರು.

    ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬದುಕಿನ ತೆರೆದ ಪುಸ್ತಕದಲ್ಲಿ ಕಪ್ಪು ಚುಕ್ಕೆಗಳೇ ತುಂಬಿದೆ. ಅವರ ಕೈ ಕೆಳಗೆ ಕೆಲಸ ಮಾಡುವ ಪೊಲೀಸ್‌ ಅಧಿಕಾರಿಯ ಮುಂದೆ ಅವರೇ ಕುಳಿತು ತನಿಖೆ ಎದುರಿಸುವುದೆಂದರೆ ಅವರಿಗೆ ನಾಚಿಕೆಯಾಗಬೇಕು. ಇಲ್ಲಿ ತನಿಖೆಗೂ ನಿರ್ದಿಷ್ಟ ಸಮಯ ನಿಗದಿಪಡಿಸಿದ್ದು, ಇದು ಹೇಗೆ ಸಾಧ್ಯ ಎಂದು ಅಚ್ಚರಿಯಾಗುತ್ತದೆ ಎಂದರು.

  • ನಟ ದರ್ಶನ, ಅಭಿಮಾನಿಗಳ ವಿರುದ್ಧ ಬಿಗ್ ಬಾಸ್ ಸ್ಪರ್ಧಿಯಿಂದ ದೂರು

    ನಟ ದರ್ಶನ, ಅಭಿಮಾನಿಗಳ ವಿರುದ್ಧ ಬಿಗ್ ಬಾಸ್ ಸ್ಪರ್ಧಿಯಿಂದ ದೂರು

    ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ವಿರುದ್ಧ ಮತ್ತೊಂದು ದೂರು ಸಲ್ಲಿಕೆಯಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಜಗದೀಶ್ ಅವರು ಈ ದೂರು ಸಲ್ಲಿಸಿದ್ದಾರೆ.

    ತಮ್ಮ ಬಗ್ಗೆ ಸಾಮಾಜಿಕ ಜಾನತಾಣಗಳಲ್ಲಿ ಅವಹೇಳನ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿರುವ ಜಗದೀಶ್ ಅವರು ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಬೆಂಗಳೂರಿನ ಕೋಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

    ಜಗದೀಶ್ ಅವರು ಬಿಗ್​ಬಾಸ್​ ಸ್ಪರ್ಧಿಯಾಗಿದ್ದಾಗ ವಿವಾದಾತ್ಮಕ ಮಾತುಗಳಿಂದಾಗಿ ಸ್ಪರ್ಧೆಯಿಂದ ಹೊರಬಂದಿದ್ದಾರೆ. ನಟ ದರ್ಶನ್ ಪ್ರಕರಣ ಬಗ್ಗೆಯೂ ಮಾತನಾಡಿರುವ ಜಗದೀಶ್ ಅವರು ನಟನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆದಿದ್ದು, ಜಗದೀಶ್ ಬಗ್ಗೆ ದರ್ಶನ್ ಅಭಿಮಾನಿಗಳು ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಗದೀಶ್ ಅವರು ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

  • ಸರ್ಕಾರಿ ನೌಕರ ರುದ್ರಣ್ಣ ಆತ್ಮಹತ್ಯೆ ಪ್ರಕರಣ; ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆಗೆ ಅಶೋಕ್ ಆಗ್ರಹ

    ಬೆಂಗಳೂರು: ಹಿಂದೆ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿದ್ದ ಸಿದ್ದರಾಮಯ್ಯ, ಇದೀಗ ಸರ್ಕಾರಿ ನೌಕರ ರುದ್ರಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡುತ್ತ ಸರ್ಕಾರಿ ನೌಕರ ರುದ್ರಣ್ಣ ಆತ್ಮಹತ್ಯೆ ಪ್ರಕರಣ ಬಗ್ಗೆ ಪ್ರತಿಕ್ರಿಯಿಸದ್ದಾರೆ. ಬೆಳಗಾವಿಯ ಸರ್ಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿದ್ದರು. ಆದರೂ ಹಿರಿಯ ಅಧಿಕಾರಿಗಳು ಇದನ್ನು ಕಡೆಗಣಿಸಿದ್ದಾರೆ ಎಂದು ದೂರಿದರು.

    ಇದು ಕರುಣೆಯೇ ಇಲ್ಲದ ಸರ್ಕಾರ. ಸುಮಾರು 2 ಲಕ್ಷ ರೂ. ಲಂಚವನ್ನು ರುದ್ರಣ್ಣ ಅವರಿಂದ ಪಡೆಯಲಾಗಿದೆ. ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪತ್ರ ಬರೆದ ಮಾದರಿಯಲ್ಲೇ ರುದ್ರಣ್ಣ ಕೂಡ ಭ್ರಷ್ಟಾಚಾರದ ವಿರುದ್ಧ ಹೋರಾಡಿ ಎಂದು ಸಂದೇಶ ಕಳುಹಿಸಿದ್ದಾರೆ. ಪಿಎಸ್‌ಐ ಪರಶುರಾಮ್‌ ಸತ್ತ ಬಳಿಕ ಯಾರನ್ನೂ ಬಂಧನ ಮಾಡಿಲ್ಲ. ರುದ್ರಣ್ಣ ಅವರ ಪ್ರಕರಣ ಅದೇ ರೀತಿ ಆಗುವ ಸಂಭವವಿದೆ. ಮಾಜಿ ಸಚಿವ ಈಶ್ವರಪ್ಪ ಅವರ ವಿರುದ್ಧ ತೊಡೆ ತಟ್ಟಿ ಹೋರಾಡಿದ್ದ ಸಿಎಂ ಸಿದ್ದರಾಮಯ್ಯ, ಈಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಆಗ್ರಹಿಸಿದರು.

  • ನವೆಂಬರ್ ಅಂತ್ಯಕ್ಕೆ ‘ಮೇಘ’ ಆಗಮನ

    ಕಿರಣ್ ರಾಜ್ -ಕಾಜಲ್ ಕುಂದರ್ ನಟಿಸಿರುವ ‘ಮೇಘ’ ಚಿತ್ರ ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರವನ್ನು ಚರಣ್ ನಿರ್ದೇಶಿಸಿದ್ದಾರೆ.

    ಶೋಭರಾಜ್, ಸುಂದರ್ ವೀಣಾ, ಸಂಗೀತಾ ಮುಂತಾದ ಕಲಾವಿದರು ‘ಮೇಘ’ ಚಿತ್ರದಲ್ಲಿ ನಟಿಸಿದ್ದಾರೆ. ಹನುಮಂತೇಗೌಡ, ಗಿರೀಶ್ ಶಿವಣ್ಣ, ತರಂಗ ವಿಶ್ವ ಅವರ ನಟನೆಯೂ ಗಮನಸೆಳೆಯಲಿದೆ. ಡಾ. ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ಫ್ರಾಂಕ್ಲಿನ್ ರಾಕಿ ಅವರ ಹಿನ್ನೆಲೆ ಸಂಗೀತ ಹಾಗೂ ಜೋಯಲ್ ಸಕ್ಕರಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

  • ‘45’ ಸಿನಿಮಾ, ಅರ್ಜುನ್ ಜನ್ಯ ಕನಸು, ಶಿವಣ್ಣ-ಉಪ್ಪಿ ಅಭಿನಯಕ್ಕೆ ಶೆಟ್ಟಿ ಸಾಥ್

    ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ‘45’ ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದ್ದು ಬಿಡುಗಡೆಗೆ ತಯಾರಿ ನಡೆದಿದೆ.
    ದೀಪಾವಳಿ ಹಬ್ಬದ ನಡುವೆಯೇ ಟೀಸರ್ ಬಿಡುಗಡೆಯಾಗಿದ್ದು ‘45’ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.

    ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದ್ದು, ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಒಟ್ಟಿಗೆ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ ಅವರೂ ಕಾಣಿಸಿಕೊಂಡಿದ್ದಾರೆ. ಶಿವರಾಜ್‌ಕುಮಾರ್ ಮತ್ತು ಉಪೇಂದ್ರ ಅವರ ಫರ್ಸ್ಟ್ ಲುಕ್ ಅನಾವರಣಗೊಳಿಸುವ ‘45’ ಸಿನಿಮಾ ಬಗ್ಗೆ ಕುತೂಹಲವನ್ನು ಚಿತ್ರ ತಂಡ ಹೆಚ್ಚಿಸಿದೆ.