Blog

  • ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ಸುಸಜ್ಜಿತ KSRTC ಬಸ್ ನಿಲ್ದಾಣ; ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪ್ರಾರಂಭ; ರಾಮಲಿಂಗಾ ರೆಡ್ಡಿ

    ಮೈಸೂರು: ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ಸುಸಜ್ಜಿತ KSRTC ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ನಿರ್ಮಿಸಲುದ್ದೇಶಿಸಿರುವ ಸುಸಜ್ಜಿತ ಬಸ್ ನಿಲ್ದಾಣ ಕಾಮಗಾರಿಯು ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

    ಮೈಸೂರು ನಗರದಲ್ಲಿ ಸುಮಾರು 14 ಎಕರೆ ಜಾಗದಲ್ಲಿ ಅಂದಾಜು 120 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಸಾರಿಗೆ ಸೌಲಭ್ಯ ಕಲ್ಪಿಸಲು ಪಾರಂಪರಿಕ ಹಾಗೂ ಆಧುನಿಕ ವಿನ್ಯಾಸ ಒಳಗೊಂಡಂತೆ ಬಸ್ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

    ಮೈಸೂರು ನಗರದ ಹೃದಯ ಭಾಗದ ಇಕ್ಕಟ್ಟಾದ ಜಾಗದಲ್ಲಿರುವ ಕೇಂದ್ರೀಯ ಬಸ್ ನಿಲ್ದಾಣ (ಸಬ್ ಅರ್ಬನ್)ದ ಮೇಲಿನ ಒತ್ತಡ ತಗ್ಗಿಸಿ, ಪ್ರಯಾಣಿಕರಿಗೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಬನ್ನಿಮಂಟಪದಲ್ಲಿರುವ ಡಿಪೋ ಪಕ್ಕದ ಜಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹೊರತುಪಡಿಸಿದರೆ ಅತೀ ಹೆಚ್ಚಾಗಿ ಜನಸಂದಣಿ ಕಾಣಸಿಗುವ ಬಸ್ ನಿಲ್ದಾಣ ಮೈಸೂರು ಬಸ್ ನಿಲ್ದಾಣ. ಅದರಲ್ಲೂ ವಿಶೇಷವಾಗಿ ವಿಶ್ಚವಿಖ್ಯಾತ ದಸರಾ ಸಮಯದಲ್ಲಿ ಉಂಟಾಗುವ ಜನಸಂದಣಿಗೆ ಅನುಗುಣವಾಗಿ ಬಸ್ಸುಗಳ ಕಾರ್ಯಾಚರಣೆ ನಡೆಸಿ, ಸಾರ್ವಜನಿಕರಿಗೆ ವ್ಯವಸ್ಥಿತ ಸಾರಿಗೆ ಸೌಲಭ್ಯ ಕಲ್ಪಿಸುವ ಕಾರ್ಯ ಉದ್ದೇಶಿತ ಹೊಸ ಬಸ್ ನಿಲ್ದಾಣದಿಂದ ಈಡೇರಲಿದೆ ಎಂದು ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

    ಪ್ರಸ್ತುತ ಸರಾಸರಿ 2100 ಟ್ರಿಪ್ ಗಳನ್ನು ಈ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ಇನ್ನು 10 ವರ್ಷಗಳ ಅಂತರದಲ್ಲಿ 2500 ರಿಂದ 3000 ಟ್ರಿಪ್ ಗಳಿಗೆ ಏರಿಕೆಯಾಗುವುದೆಂದು ಅಂದಾಜಿಸಲಾಗಿದೆ.ಹಾಲಿಯಿರುವ 30 ಬಸ್ ಬೇಗಳು ಹೆಚ್ಚುವರಿ ಬಸ್ ಗಳ ಕಾರ್ಯಾಚರಣೆ ಇದು ಸಾಲದಾಗಿದೆ ,ಹೊಸ ಯೋಜಿತ ಬಸ್ ನಿಲ್ದಾಣದಲ್ಲಿ 75 ಬಸ್ ಬೇ ಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಪ್ರತ್ಯೇಕ ಸುಸಜ್ಜಿತ ಶೌಚಾಲಯಗಳು, ಬೇಬಿ ಕೇರ್ ಸೆಂಟರ್, ಚಾಲನಾ ಸಿಬ್ಬಂದಿಗಳಿಗೆ ವಿಶ್ರಾಂತಿ ಗೃಹಗಳ ವ್ಯವಸ್ಥೆ ಇರಲಿದೆ ಎಂದವರು ವಿವರಿಸಿದ್ದಾರೆ.

    ಹೀಗಿರಲಿದೆ ಮೈಸೂರು ಬಸ್ ನಿಲ್ದಾಣ:

    • ತಳಮಹಡಿಯಲ್ಲಿದ್ವಿಚಕ್ರವಾಹನ ಹಾಗೂ ಕಾರುಗಳ ನಿಲುಗಡೆಗೆ ಅವಕಾಶ ಮಾಡಲಾಗುತ್ತದೆ.

    • ನೆಲ ಮಹಡಿಯಲ್ಲಿ ಬಸ್ ನಿಲ್ದಾಣ, ಕಚೇರಿ ಕೊಠಡಿಗಳು ವಿದ್ಯುತ್‌ ಚಾಲಿತ ಬಸ್‌ಗಳ ರೀಚಾರ್ಜ್ ಪಾಯಿಂಟ್‌ಗಳು ಪ್ರಯಾಣಿಕರ ನಿರೀಕ್ಷಣಾ ಕೊಠಡಿಗಳು, ಶೌಚಾಲಯ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತದೆ.

    • ಮೊದಲ ಅಂತಸ್ತಿನಲ್ಲಿ ವಿಭಾಗೀಯ ಕಚೇರಿಗಳು, ಸಿಬ್ಬಂದಿ ವಿಶ್ರಾಂತಿ ಕೊಠಡಿ ಹಾಗೂ ವಾಣಿಜ್ಯ ವಿಸ್ತೀರ್ಣವನ್ನು ಯೋಜಿಸಲಾಗಿದೆ .

    • ಎರಡನೇ ಅಂತಸ್ತಿನಲ್ಲಿ ಮಲ್ಟಿ ಪ್ಲೆಕ್ಸ್ ಚಿತ್ರ ಮಂದಿರಗಳು ಹಾಗೂ ಫುಡ್ ಕೋರ್ಟ್ ಮತ್ತು ವಾಣಿಜ್ಯ ವಿಸ್ತೀರ್ಣವನ್ನು ಯೋಜಿಸಲಾಗಿದೆ.

    ಮೈಸೂರು ಬನ್ನಿಮಂಟಪದಲ್ಲಿರುವ KSRTC ಡಿಪೋಗೆ ಸೇರಿದ 61 ಎಕರೆ ಜಾಗದ ಪೈಕಿ 14 ಎಕರೆ ವಿಸ್ತೀರ್ಣದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಿ ಸಮಗ್ರ ಸಾರಿಗೆ ವ್ಯವಸ್ಥೆ ಕಲ್ಪಿಸಲು ವಿಸ್ತ್ರತ ಯೋಜನಾ ವರದಿ (ಡಿಪಿಆ‌ರ್) ಸಿದ್ಧಪಡಿಸಿ, ಯೋಜನೆಯ ಸಾಧಕ-ಬಾಧಕಗಳನ್ನು ಚರ್ಚಿಸಿ, ಬನ್ನಿಮಂಟಪದಲ್ಲಿ ನೂತನ ಬಸ್‌ ನಿಲ್ದಾಣ ನಿರ್ಮಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಡನೆ ಚರ್ಚೆ ನಡೆಸಿದ್ದು, ಯೋಜನಾ ನಕ್ಷೆ, ಕಾಮಾಗಾರಿ ವಿವರಗಳನ್ನು ಪರಾಮರ್ಶಿಸಿರುವ ಮುಖ್ಯಮಂತ್ರಿಗಳು ಸಾರ್ವಜನಿಕ ಪ್ರಯಾಣಿಕರಿಗೆ ಸುವ್ಯವಸ್ಥಿತ ಸಾರಿಗೆ ಸೌಲಭ್ಯ ನೀಡಲು ಈ ಉದ್ದೇಶಿತ ಬಸ್ ನಿಲ್ದಾಣದ ಅಗತ್ಯವಿರುವುದಾಗಿ DULT ಸಂಸ್ಥೆಯವರ ಹಣಕಾಸು ನೆರವಿನಿಂದ ಅನುದಾನ ನೀಡಲು ಸೂಚಿಸಿದ್ದಾರೆ. 2025ರಲ್ಲಿ ನೂತನ ಬಸ್‌ ನಿಲ್ದಾಣದ ಕಾಮಗಾರಿ ಆರಂಭವಾಗಲಿದೆ ಎಂದು ಸಚಿವರು ವಿವರಿಸಿದರು.

    ಬನ್ನಿಮಂಟಪದ ಉದ್ದೇಶಿತ ನೂತನ ಬಸ್ ನಿಲ್ದಾಣದಲ್ಲಿ ಬೆಂಗಳೂರು, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ದೂರದ ನಗರಗಳು ಹಾಗೂ ಅಂತಾರಾಜ್ಯ ಸಾರಿಗೆ ಬಸ್‌ಗಳು ಬಂದು ಹೋಗಲು ವ್ಯವಸ್ಥೆ ಕಲ್ಪಿಸುವುದು. ಸದ್ಯ ಕಾರ್ಯಾಚರಣೆಯಾಗುತ್ತಿರುವ ಗ್ರಾಮಾಂತರ ಬಸ್ ನಿಲ್ದಾಣವನ್ನು ಸಂಪೂರ್ಣ ಸ್ಥಳಾಂತರ ಮಾಡದೆ ಹಾಗೆಯೇ ಉಳಿಸಿಕೊಂಡು, 2024ರ ಜನವರಿ 1ರಂದು ಮೈಸೂರು ವಿಭಾಗದಿಂದ ಪ್ರತ್ಯೇಕವಾಗಿ ರಚಿಸಿರುವ ಮೈಸೂರು ಗ್ರಾಮಾಂತರ ವಿಭಾಗಕ್ಕೆ ಬಳಸಿಕೊಳ್ಳುವ ಮೂಲಕ ಮಂಡ್ಯ, ಚಾಮರಾಜ ನಗರ, ಕೊಡಗು, ಹಾಸನ ಜಿಲ್ಲೆಗಳಿಗೆ ಸಾರಿಗೆ ಬಸ್‌ಗಳ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ. ನೂತನ ಬಸ್ ನಿಲ್ದಾಣ ಮತ್ತು ಗ್ರಾಮಾಂತರ ಬಸ್‌ ನಿಲ್ದಾಣದ ನಡುವೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

    ಪ್ರಸ್ತುತ ಇರುವ ಗ್ರಾಮಾಂತರ ಬಸ್ ನಿಲ್ದಾಣದ ಮೇಲೆ ಹೆಚ್ಚಿನ ಸಂಚಾರ ಒತ್ತಡ:

    ಮೈಸೂರು ಗ್ರಾಮಾಂತರ ಸಾರಿಗೆ ವಿಭಾಗವು 6 ಬಸ್‌ ಡಿಪೋ, ಮೈಸೂರು ನಗರ ವಿಭಾಗವು 4 ಡಿಪೋ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 10 ಬಸ್‌ ಡಿಪೋಗಳು ಹಾಗೂ ಎರಡೂ ವಿಭಾಗಗಳ ವ್ಯಾಪ್ತಿಯಲ್ಲಿ 31 ಬಸ್ ನಿಲ್ದಾಣಗಳನ್ನು ಹೊಂದಿದ್ದು, 1,400 ಬಸ್‌ಗಳು ಇಲ್ಲಿಂದ 1,213 ಅನುಸೂಚಿಗಳಲ್ಲಿ ಕಾರ್ಯಾಚರಣೆ ಮಾಡಿಸಲಾಗುತ್ತದೆ.
    ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿರುವ
    ಗ್ರಾಮಾಂತರ ಬಸ್ ನಿಲ್ದಾಣವು ಚಿಕ್ಕದಾಗಿರುವುದರಿಂದ ಬನ್ನಿಮಂಟಪದ ಕೆಎಸ್‌ಆರ್‌ಟಿಸಿ ಡಿಪೋದ 14 ಎಕರೆ ಜಾಗದಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಸಂಬಂಧ ಪರಿಕಲ್ಪಿತ ನಕ್ಷೆಗೆ ಅನುಮೋದನೆ ಪಡೆದಿದ್ದು ವಿವರವಾದ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ. ಉದ್ದೇಶಿತ ಪ್ರಸ್ತಾವನೆಗೆ ಸರ್ಕಾರದಿಂದ ಅನುಮೋದನೆ ಪಡೆಯಬೇಕಾಗಿದೆ.

  • ಅಬಕಾರಿ ಇಲಾಖೆಯಲ್ಲಿ 900 ಕೋಟಿ ರೂ. ಹಗರಣ; ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

    ಅಬಕಾರಿ ಇಲಾಖೆಯಲ್ಲಿ 900 ಕೋಟಿ ರೂ. ಹಗರಣ; ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

    ಬೆಂಗಳೂರು; ಅಬಕಾರಿ ಇಲಾಖೆಯಲ್ಲಿ 900 ಕೋಟಿ ರೂ. ಭ್ರಷ್ಟಾಚಾರ ನಡೆದಿದ್ದು, ಇದನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು. ಸಚಿವ ಆರ್‌.ಬಿ.ತಿಮ್ಮಾಪುರ ರಾಜೀನಾಮೆ ನೀಡಬೇಕು. ಇದು ಹಣದ ಅವ್ಯವಹಾರವಾಗಿರುವುದರಿಂದ ಜಾರಿ ನಿರ್ದೇಶನಾಲಯ ಕೂಡ ಕ್ರಮ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಬೆಂಗಳೂರಿನಲ್ಲಿ ರೌಡಿಗಳು ಹಫ್ತಾ ವಸೂಲಿ ಮಾಡುತ್ತಿದ್ದರು. ಈಗ ರೌಡಿಗಳೇ ನಾಚುವಂತೆ ಅಬಕಾರಿ ಸಚಿವ ತಿಮ್ಮಾಪುರ ಅವರು ವಾರಕ್ಕೆ 18 ಕೋಟಿ ರೂ. ವಸೂಲಿ ಮಾಡುತ್ತಿದ್ದಾರೆ. ಅಂದರೆ ವರ್ಷಕ್ಕೆ ಸುಮಾರು 900 ಕೋಟಿ ರೂ. ಲಂಚ ಪಡೆಯಲಾಗುತ್ತಿದೆ. ಪ್ರತಿ ಹುದ್ದೆಯ ಅಧಿಕಾರಿಗಳಿಗೆ ಎಷ್ಟು ಲಂಚ ನೀಡಲಾಗುತ್ತಿದೆ ಎಂದು ಮದ್ಯ ಮಾರಾಟಗಾರರ ಸಂಘ ಪತ್ರದಲ್ಲಿ ವಿವರಿಸಿದೆ. ಮುಖ್ಯಮಂತ್ರಿ ಕಚೇರಿಯ ಅಧಿಕಾರಿ, ಪಿಎ, ಪಿಎಸ್‌ ಪಡೆಯುತ್ತಿರುವ ಲಂಚದ ಬಗ್ಗೆಯೂ ವಿವರವಿದೆ. ಸಮಬಾಳು ಸಮಪಾಲು ಎಂಬಂತೆ ಸಚಿವ ತಿಮ್ಮಾಪುರ ಎಲ್ಲರಿಗೂ ಲಂಚ ಹಂಚಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ 40 ಪರ್ಸೆಂಟ್‌ ಎಂದು ಆರೋಪ ಮಾಡಿದ್ದರೂ ಅದಕ್ಕೆ ಸೂಕ್ತ ದಾಖಲೆ ನೀಡಿಲ್ಲ. ಈಗ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ಭಿತ್ತಿಪತ್ರ ಅಂಟಿಸುವುದಾದರೆ ನಾನು ಕೂಡ ಬರುತ್ತೇನೆ ಎಂದು ವ್ಯಂಗ್ಯವಾಡಿದರು.

    ಮದ್ಯ ಮಾರಾಟಗಾರರು ಈ ಕಿರುಕುಳ ವಿರೋಧಿಸಿ ಒಂದು ದಿನ ಬಂದ್‌ ಮಾಡಲಿದ್ದಾರೆ. ಈ ಸರ್ಕಾರ ಆದಾಯಕ್ಕೆ ಮದ್ಯವನ್ನೇ ನಂಬಿಕೊಂಡಿದೆ. ಹೀಗೆ ಬಾರ್‌ಗಳನ್ನು ಬಂದ್‌ ಮಾಡಿದರೆ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಲಿದೆ ಎಂದರು.

    ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬದುಕಿನ ತೆರೆದ ಪುಸ್ತಕದಲ್ಲಿ ಕಪ್ಪು ಚುಕ್ಕೆಗಳೇ ತುಂಬಿದೆ. ಅವರ ಕೈ ಕೆಳಗೆ ಕೆಲಸ ಮಾಡುವ ಪೊಲೀಸ್‌ ಅಧಿಕಾರಿಯ ಮುಂದೆ ಅವರೇ ಕುಳಿತು ತನಿಖೆ ಎದುರಿಸುವುದೆಂದರೆ ಅವರಿಗೆ ನಾಚಿಕೆಯಾಗಬೇಕು. ಇಲ್ಲಿ ತನಿಖೆಗೂ ನಿರ್ದಿಷ್ಟ ಸಮಯ ನಿಗದಿಪಡಿಸಿದ್ದು, ಇದು ಹೇಗೆ ಸಾಧ್ಯ ಎಂದು ಅಚ್ಚರಿಯಾಗುತ್ತದೆ ಎಂದರು.

    ಬೆಳಗಾವಿಯ ಸರ್ಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿದ್ದರು. ಆದರೂ ಹಿರಿಯ ಅಧಿಕಾರಿಗಳು ಇದನ್ನು ಕಡೆಗಣಿಸಿದ್ದಾರೆ. ಇದು ಕರುಣೆಯೇ ಇಲ್ಲದ ಸರ್ಕಾರ. ಸುಮಾರು 2 ಲಕ್ಷ ರೂ. ಲಂಚವನ್ನು ರುದ್ರಣ್ಣ ಅವರಿಂದ ಪಡೆಯಲಾಗಿದೆ. ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪತ್ರ ಬರೆದ ಮಾದರಿಯಲ್ಲೇ ರುದ್ರಣ್ಣ ಕೂಡ ಭ್ರಷ್ಟಾಚಾರದ ವಿರುದ್ಧ ಹೋರಾಡಿ ಎಂದು ಸಂದೇಶ ಕಳುಹಿಸಿದ್ದಾರೆ. ಪಿಎಸ್‌ಐ ಪರಶುರಾಮ್‌ ಸತ್ತ ಬಳಿಕ ಯಾರನ್ನೂ ಬಂಧನ ಮಾಡಿಲ್ಲ. ರುದ್ರಣ್ಣ ಅವರ ಪ್ರಕರಣ ಅದೇ ರೀತಿ ಆಗುವ ಸಂಭವವಿದೆ. ಮಾಜಿ ಸಚಿವ ಈಶ್ವರಪ್ಪ ಅವರ ವಿರುದ್ಧ ತೊಡೆ ತಟ್ಟಿ ಹೋರಾಡಿದ್ದ ಸಿಎಂ ಸಿದ್ದರಾಮಯ್ಯ, ಈಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಕಾಂಗ್ರೆಸ್‌ ಸರ್ಕಾರ ಬಂದ ನಂತರ ಒಳ್ಳೆಯ ಕಾಲ ಬರುತ್ತದೆ ಎಂದುಕೊಂಡಿದ್ದೆ. ಆದರೆ ಇದು ಅಧಿಕಾರಿಗಳಿಗೆ ಯಮಗಂಡ ಕಾಲ, ಗುತ್ತಿಗೆದಾರರಿಗೆ ರಾಹುಕಾಲ, ರೈತರಿಗೆ ಕೊನೆಗಾಲ, ಜನರಿಗೆ ವಿನಾಶ ಕಾಲ ಎಂಬಂತಾಗಿದೆ. ವಿಧಾನಸೌಧದ ಮುಂಭಾಗ ಸರ್ಕಾರದ ಕೆಲಸ, ದೇವರ ಕೆಲಸ ಎಂದು ಬರೆಸಲಾಗಿದೆ. ಇನ್ನು ಕಾಂಗ್ರೆಸ್‌ ಸರ್ಕಾರದ ಜೇಬು ತುಂಬುವ ಕೆಲಸ ಎಂದು ಬದಲಾಯಿಸಿಕೊಳ್ಳಲಿ ಎಂದರು.

  • ಈ ತಿಂಗಳ 25 ರಿಂದ ಡಿಸೆಂಬರ್ 20 ರವರೆ ಸಂಸತ್ತಿನ ಚಳಿಗಾಲದ ಅಧಿವೇಶನ

    ಈ ತಿಂಗಳ 25 ರಿಂದ ಡಿಸೆಂಬರ್ 20 ರವರೆ ಸಂಸತ್ತಿನ ಚಳಿಗಾಲದ ಅಧಿವೇಶನ

    ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಈ ತಿಂಗಳ 25 ರಿಂದ ನಡೆಯಲಿದೆ. ಈ ಕುರಿತಂತೆ ಮಂಗಳವಾರ ಮಾಹಿತಿ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಈ ತಿಂಗಳ 25 ರಿಂದ ಡಿಸೆಂಬರ್ 20 ರವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.

    ನವೆಂಬರ್ 26 ಸಂವಿಧಾನ ದಿನ ಆಚರಿಸಲಾಗುತ್ತದೆ. ಭಾರತ ಸಂವಿಧಾನ ಅಳವಡಿಸಿಕೊಂಡು 75 ವರ್ಷಗಳು ಪೂರ್ಣಗೊಂಡ ಹಿನ್ನೆಯಲ್ಲಿ ಈ ತಿಂಗಳ 26 ರಂದು ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಕಿರಣ್ ರಿಜಿಜು ತಿಳಿಸಿದ್ದಾರೆ.

  • ಸಚಿವೆ ಹೆಬ್ಬಾಳ್ಕರ್ ಪಿಎ ಕಿರುಕುಳಕ್ಕೆ ಅಧಿಕಾರಿ ಸಾವು ಪ್ರಕರಣ; ಅಧಿಕಾರಿಗಳು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಇಲ್ಲ ಎಂದು ಪ್ರತಿಪಕ್ಷ ಆಕ್ರೋಶ

    ರಾಮನನಗರ: ಸಚಿವೆ ಹೆಬ್ಬಾಳ್ಕರ್ ಪಿಎ ಕಿರುಕುಳಕ್ಕೆ ಬೇಸತ್ತು ಅಧಿಕಾರಿ ಸಾವಿಗೆ ಶರಣಾಗಿದ್ದಾರೆ ಎಂಬ ಪ್ರಕರಣ ಬಗ್ಗೆ ಪ್ರತಿಪಕ್ಷ ಬಿಜೆಪಿ ಕಳವಳ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಅಧಿಕಾರಿಗಳು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಇಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

    ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಖಾಡದಲ್ಲಿ ಎನ್‌ಡಿಎ ಅಭ್ಯರ್ಥಿ ಪರ ಪ್ರಚಾರ ಕೈಗೊಂಡ ಆರ್.ಅಶೋಕ್, ಅಧಿಕಾರಿ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದರು.

    ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕಿರುಕುಳ ತಾಳಲಾರದೆ ಅಧಿಕಾರಿ ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಂಡರು. ಇದೇ ರೀತಿ ಬೆಳಗಾವಿಯ ಸರ್ಕಾರಿ ಕಚೇರಿಯಲ್ಲಿ ಎಸ್‌ಡಿಎ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಸರ್ಕಾರಿ ಕಚೇರಿಗಳಲ್ಲಿ ಇಲ್ಲ. ಹಣ ನೀಡಿದರೆ ಮಾತ್ರ ಇಲ್ಲಿ ಬದುಕಲು ಸಾಧ್ಯ ಎಂದು ಟೀಕಿಸಿದರು.

    ಏನೇ ಕೇಳಿದರೂ ಎಸ್‌ಐಟಿ ರಚನೆ ಎಂದು ಹೇಳುತ್ತಾರೆ. ಯಾರು ಸತ್ತರೂ ಎಸ್‌ಐಟಿ ರಚನೆ ಮಾಡುತ್ತಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರ ಪಿಎ ಸೋಮು ಅವರಿಂದಾಗಿ ಅಧಿಕಾರಿ ಸತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಇದಕ್ಕಾಗಿ ಎಸ್‌ಐಟಿ ರಚನೆ ಮಾಡಲಿ. ಅಧಿಕಾರಿಗಳು ಯಾಕೆ ಸಾಯುತ್ತಿದ್ದಾರೆ, ಯಾರು ಎಷ್ಟು ಲಂಚ ಕೇಳುತ್ತಿದ್ದಾರೆ ಎಂದು ಜನರಿಗೆ ತಿಳಿಯಲಿ. . ಸರ್ಕಾರದ ಬಂಡವಾಳ ಬಯಲಾಗಲು ಎಸ್‌ಐಟಿ ಬೇಕಿದೆ ಎಂದು ಅಶೋಕ್ ಪ್ರತಿಪಾದಿಸಿದರು.

    ಅಧಿಕಾರಿಗಳು ಭಯಕ್ಕೊಳಗಾದರೆ ವಸೂಲಿ ಇನ್ನಷ್ಟು ಹೆಚ್ಚಾಗುತ್ತದೆ. ಯಾರೂ ಧೈರ್ಯ ಕಳೆದುಕೊಳ್ಳಬಾರದು ಎಂದು ಅಶೋಕ್ ಹೇಳಿದರು. ಅಬಕಾರಿ ಇಲಾಖೆಯಲ್ಲಿ ಹಗರಣ ನಡೆದಿದೆ ಎಂಬ ಪತ್ರ ರಾಜ್ಯಪಾಲರಿಗೆ ಬಂದಿದೆ. ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ. ಈ ಉಪಚುನಾವಣೆಯಲ್ಲಿ ಜನರು ಈ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು ಎಂದರು.

    ಲೋಕಾಯುಕ್ತದಿಂದ ಸಿದ್ದರಾಮಯ್ಯನವರ ಪತ್ನಿಗೆ ನೋಟಿಸ್‌ ನೀಡಲಾಗಿದೆ. ಮೊದಲಿಗೆ ಆರೋಪಿ 1 ಗೆ ನೋಟಿಸ್‌ ನೀಡಬೇಕಿತ್ತು. ಇವೆಲ್ಲವೂ ಒಂದು ನಾಟಕ. ಇದನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ದೂರುದಾರರು ಅಪೀಲು ಮಾಡಿದ್ದಾರೆ. ಆರೋಪಿ 2 ಗೆ ಮೊದಲಿಗೆ ನೋಟಿಸ್‌ ನೀಡಿದ್ದು ಏಕೆಂದು ನಮಗೂ ಅರ್ಥವಾಗುತ್ತಿಲ್ಲ ಎಂದು ಅಶೋಕ್ ಹೇಳಿದರು.

  • ಸಚಿವ ಭೈರತಿ ಹೆಸರಲ್ಲಿ ಯುವಕರ ಪುಂಡಾಟ;  ಕೇರಳ ಮೂಲದ ವ್ಯಕ್ತಿಯ ಆಸ್ತಿಗಾಗಿ ಕಿತ್ತಾಟ; ಪೊಲೀಸರ ಮೇಲೂ ಗೃಹ ಇಲಾಖೆಗೆ ದೂರು

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿದ್ದ ಕೇರಳ ಮೂಲದ ದಂಪತಿಗಳನ್ನು ದೂರಮಾಡಿ ಅಸ್ತಿ ಕಬಳಿಸಲು ಸಚಿವ ಭೈರತಿ ಸುರೇಶ್ ಅಪ್ತರೆಂದು ಹೇಳಿಕೊಂಡು ಯುವಕರ ಗುಂಪು ದಾಂಧಲೆ ನಡೆಸಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ರೌಡಿಗಳ ಅಟ್ಟಹಾಸಕ್ಕೆ ಪೊಲೀಸರೂ ಸಾಥ್ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ. ಡಿಜಿಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ಸೋಮವಾರ ದೂರು ಸಲ್ಲಿಕೆಯಾಗಿದೆ.

    ದಂಪತಿಗಳ ನಡುವಿನ ವಿರಸದ ಪ್ರಕರಣದ ಲಾಭ ಪಡೆಯಲು ರೌಡಿ ಗುಂಪು ಹೆಣ್ಣೂರು ಬಳಿ ನಿವೇಶನವೊಂದಕ್ಕೆ ಏಕಾಏಕಿ ನುಗ್ಗಿ ಪುಂಡಾಟ ಪ್ರದರ್ಶಿಸಿದೆ. ಹೆಣ್ಣೂರು ಗೋಪಿ ಮತ್ತು ಇಪ್ಪತ್ತು ಅಪರಿಚಿತ ವ್ಯಕ್ತಿಗಳ ದಾಂಧಲೆಯನ್ನು ಪ್ರತಿಭಟಿಸಿದ ಜಮೀನು ಮಾಲೀಕ ಶಾಜಿ ಜೋಸೆಫ್ ಅವರ ಕೊಲೆಗೆ ಯತ್ನ ನಡೆದಿದೆ. ಅಷ್ಟೇ ಅಲ್ಲ, ಮಾರಣಾಂತಿಕ ದಾಳಿ ನಡೆಸುವ ರಾಟ್‌ವೀಲರ್ ನಾಯಿಯನ್ನೂ ಕರೆತಂದು ದಾಳಿಗೆ ಯತ್ನಿಸಿದ್ದಾರೆಂದೂ ಸಂತ್ರಸ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಹೆಣ್ಣೂರು ಸಮೀಪ ವಾಸವಿರುವ ಸಾಜಿ ಜೋಸೆಫ್ ಹಾಗೂ ಸಿನಿ ಸಾಜಿ ದಂಪತಿ ನಡುವೆ ವೈವಾಹಿಕ ಕಲಹಗಳು ನಡೆಯುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಸಾಜಿ ಜೋಸೆಫ್ ಅವರು ವಾಸವಿರುವ ಮನೆ ಸಮೀಪವೇ ತಮ್ಮ ಪತ್ನಿ ಹೆಸರಲ್ಲೂ ನಿವೇಶನ ಖರೀದಿಸಿದ್ದು, ಪತ್ನಿಯ ಜಿಪಿಎ ಮೂಲಕ ನಿವೇಶನ ಉಪಯೋಗಿಸುತ್ತಾ ಬಂದಿದ್ದಾರೆ. ಆದರೆ ಯಾವಾಗ ತಮ್ಮ ದಾಂಪತ್ಯದಲ್ಲಿ ವಿರಸ ಉಂಟಾಯಿತೋ, ತಮ್ಮ ವಿರುದ್ಧ ಹಲವಾರು ದೂರುಗಳನ್ನು ಸಲ್ಲಿಸಿ ಪತ್ನಿ ಸಿನಿ ಸಾಜಿ ಕಿರುಕುಳ ನೀಡಿದ್ದಾರೆ ಎಂದು ಸಾಜಿ ಜೋಸೆಫ್ ಆರೋಪಿಸಿದ್ದಾರೆ. ತಮ್ಮ ಹೆಸರಲ್ಲಿ ನಕಲಿ ಜಿಪಿಎ ಮಾಡಿಸಲಾಗಿದೆ ಎಂದೂ ಆರೋಪಿಸಿ ಪತ್ನಿ ಪ್ರಕರಣ ದಾಖಲಿಸಿದ್ದಾರೆ ಎಂದು ಪತಿ ಆರೋಪ ಮಾಡಿದ್ದಾರೆ.

    ಈ ನಡುವೆ ನಿವೇಶನ ವಿವಾದವು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದು, 01.11.2024 ರಂದು ಬೆಳಿಗ್ಗೆ 11:30 ಗಂಟೆ ಸುಮಾರಿಗೆ ಸುನಿ ಸಾಜಿ ಅವರು, ಹೆಣ್ಣೂರು ಗೋಪಿ ಮತ್ತು ಇಪ್ಪತ್ತು ಅಪರಿಚಿತ ವ್ಯಕ್ತಿಗಳೊಂದಿಗೆ ವಿವಾದಿತ ನಿವೇಶನಕ್ಕೆ ಅಕ್ರಮ ಪ್ರವೇಶ ಮಾಡಿ, ಅಲ್ಲಿದ್ದ ಗುಡಿಸಲಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಆ ವೇಳೆ ಸ್ಥಳಕ್ಕೆ ಆಗಮಿಸಿದ ಹೆಣ್ಣೂರು ಠಾಣಾ ವ್ಯಾಪ್ತಿಯ ಹೊಯ್ಸಳ ಪೋಲೀಸರೂ ಯಾವುದೇ ಕ್ರಮ ವಹಿಸದೆ ಗೂಂಡಾಗಳ ಕೃತ್ಯಗಳಿಗೆ ಬೆಂಗಾವಲಾಗಿ ನಿಂತಿದ್ದರು ಎಂದು ಸಾಜಿ ಜೋಸೆಫ್ ದೂರಿನಲ್ಲಿ ಆರೋಪಿಸಿದ್ದಾರೆ.

    ಅಪರಿಚಿತರು ಮಾರುತಿ ಇಸಿಒ ವ್ಯಾನ್ (KA01 MT 0568)ನಲ್ಲಿ ನಿಷೇಧಿತ, ರೊಟ್ವೀಲರ್ ನಾಯಿಯನ್ನು ಕರೆತಂದಿದ್ದು ಆ ಮೂಲಕ ತಮ್ಮ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಸಿನಿ ಸಾಜಿ ಉಪಸ್ಥಿತಿಯಲ್ಲೇ ದಾಂಧಲೆ ನಡೆಸಿರುವ ಹೆಣ್ಣೂರು ಗೋಪಿ, ತಾನು ಸಚಿವ ಭೈರತಿ ಅವರ ಆಪ್ತನಾಗಿದ್ದು ಸಚಿವರು ಈ ನಿವೇಶನವನ್ನು ಖರೀದಿಸುತ್ತಿದ್ದಾರೆ. ಅಡ್ಡಿಪಡಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಸಿದ್ದಾನೆ ಎಂದು ಸಾಜಿ ಜೋಸೆಫ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಸುಪಾರಿ ಕಿಲ್ಲರ್ ಎಂದು ಹೇಳಿಕೊಂಡು ಸುಮಾರು 20-30 ಜನರು ತಮ್ಮ ನಿವೇಶನದಲ್ಲೇ ಅಕ್ರಮವಾಗಿ ಉಳಿದುಕೊಂಡು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ತಮ್ಮ ನಿವೇಶನ ಸಮೀಪದ ಕ್ಯಾಮರಾವನ್ನು ತಿರುಗಿಸಿ ತನ್ನನ್ನು ಕೊಲ್ಲಲು ಪ್ರಯತ್ನ ನಡೆಸಿದ್ದಾರೆ, ನಿವೇಶನದ ಕಟ್ಟಡದಲ್ಲಿ ವಾಸ್ತವ್ಯವಿರುವ ಬಾಡಿಗೆದಾರರಿಗೂ ಬೆದರಿಕೆ ಹಾಕುತ್ತಿದ್ದಾರೆ ಎಂದು ಈ ದೂರಿನಲ್ಲಿ ಆರೋಪ ಮಾಡಿದ್ದಾರೆ.

    ಸಚಿವ ಭೈರತಿ ಸುರೇಶ್ ಅವರ ಆಪ್ತರೆಂದು ಹೇಳಿ ರೌಡಿ ಗ್ಯಾಂಗ್ ನಡೆಸಿರುವ ಕೃತ್ಯದ ಬಗ್ಗೆ ಹೆಣ್ಣೂರು ಠಾಣೆಯ ಪೊಲೀಸರ ಗಮನಕ್ಕೆ ತಂದರೂ ಯಾವುದೇ ರೀತಿ ಪ್ರಕರಣ ದಾಖಲಿಸದೆ ಏನ್.ಸಿ.ಆರ್.ದಾಖಲಿಸಿಕೊಂಡಿದ್ದಾರೆ ಎಂದು ಸಾಜಿ ಜೋಸೆಫ್ ಅವರು ಪೊಲೀಸ್ ಮಹಾ ನಿರ್ದೇಶಕರಿಗೆ ನೀಡಿರುವ ದೂರಿನಲ್ಲಿ ಗಮನಸೆಳೆದಿದ್ದಾರೆ. ಯುವಕರ ಪುಂಡಾಟದ ವೀಡಿಯೋ ಹಾಗೂ ಫೋಟೋಗಳನ್ನು ಸಂಗ್ರಹಿಸಿರುವ ಸಾಜಿ ಜೋಸೆಫ್, ಈ ದಾಖಲೆಗಳೊಂದಿಗೆ ದೂರು ನೀಡಿದ್ದು, ಭೈರತಿ ಸುರೇಶ ಸಹಚರರೆನ್ನಲಾದ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ.

  • ಚಿಕ್ಕಬಳ್ಳಾಪುರ ರೈಲು ನಿಲ್ದಾಣಕ್ಕೆ ಕೈವಾರ ತಾತಯ್ಯ ಯೋಗಿ ನಾರೇಯಣ ನಾಮಕರಣ ಮಾಡಲು ಮನವಿ

    ಬೆಂಗಳೂರು: ಕರ್ನಾಟಕ ಬಲಿಜ ಜಾಗೃತಿ ವೇದಿಕೆ ವತಿಯಿಂದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವರಾದ ವಿ.ಸೋಮಣ್ಣರವರಿಗೆ ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣಕ್ಕೆ ಕಾಲಜ್ಞಾನಿ, ಮಹಾನ್ ಸಂತ ಕೈವಾರ ತಾತಯ್ಯ ಖ್ಯಾತಿಯ ಯೋಗಿ ನಾರೇಯಣ ರೈಲು ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂದು ಕರ್ನಾಟಕ ಬಲಿಜ ಜಾಗೃತಿ ವೇದಿಕೆ ಮನವಿ ಮಾಡಿದೆ.

    ಕರ್ನಾಟಕ ಬಲಿಜ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಮುನಿರಾಜುರವರು, ಕಾರ್ಯದರ್ಶಿ ಜಿ.ಜ್ಞಾನೇಶ್, ಕನ್ನಡ ಪರ ಹೋರಾಟಗಾರ ಖಾಜಾ ಹುಸೇನ್ ಅವರ ನಿಯೋಗ ಕೇಂದ್ರ ರೈಲ್ವೇ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಮನವಿ ಪತ್ರ ನೀಡಿದೆ..

    ಈ ಸಂದರ್ಭದಲ್ಲಿ ಮಾತನಾಡಿ ಸಚಿವ ವಿ.ಸೋಮಣ್ಣ ಸರ್ವರಿಗೂ ಅನ್ನ ಅಕ್ಷರ, ಆಶ್ರಯ ಮೂರು ಸಿದ್ದಾಂತದ ಮೇಲೆ ಸಾಧು ಸಂತರು ನಾಡಿನ ಜನರ ಒಳಿತಿಗೆ ಶ್ರಮಿಸಿದರು. ಸಾಧು ಸಂತರ ಕೊಡುಗೆಯಿಂದ ನಾಡು ಶ್ರೀಮಂತಿವಾಗಿದೆ. ಕೈವಾರ ತಾತಯ್ಯ ಶ್ರೀ ಯೋಗಿ ನಾರೇಯಣರವರು ಲೋಕಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ಸಂತರು ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಚಿಕ್ಕಬಳ್ಳಾಪುರ ರೈಲು ನಿಲ್ದಾಣಕ್ಕೆ ಹೆಸರು ನಾಮಕರಣಕ್ಕೆ ಪರಿಶೀಲನೆ ಮಾಡಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಕರ್ನಾಟಕ ಬಲಿಜ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಮುನಿರಾಜು ಮಾತನಾಡಿ, ಕಾಲಜ್ಞಾನಿ, ಮಹಾತಪಸ್ವಿ ಆಧ್ಯಾತ್ಮಕ ಚಿಂತಕ ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆ ಪಾಂಡಿತ್ಯ ಮೇರು ಪರ್ವತ ಕೈವಾರ ತಾತಯ್ಯರವರ ಆದರ್ಶ ಚಿಂತನೆ ಮಾರ್ಗದರ್ಶನ ಎಲ್ಲರಿಗೂ ಸಿಗಬೇಕು ಅವರ ಹೆಸರು ವಿಶ್ವವ್ಯಾಪಿ ಪಸರಿಸಬೇಕು ಎಂದರು.

    ವಿದೇಶದ ಕಾಲಜ್ಞಾನಿಗಳ ಬಹಳ ಪ್ರಚಾರವಿದೆ ಅದರೆ ನಮ್ಮ ಕನ್ನಡ ನಾಡಿನ ಕಾಲಜ್ಞಾನಿ ಯೋಗಿ ನಾರೇಯಣ ರವರ ಕಾಲಜ್ಞಾನದ ಕುರಿತು ಪ್ರಚಾರವಿಲ್ಲದೇ ಇತಿಹಾಸ ಮರೆಚಿಕೆಯಾಗುತ್ತಿದೆ. ಲೋಕಕಲ್ಯಾಣಕ್ಕಾಗಿ ಶ್ರಮಿಸಿದ ಕೈವಾರ ತಾತಯ್ಯ ಯೋಗಿ ನಾರೇಯಣರವರ ಹೆಸರು ಚಿರಸ್ಥಾಯಿ ಉಳಿಯಬೇಕು ಅವರ ಸಾಧನೆ ಮುಂದಿನ ಪೀಳಿಗೆಗೆ ತಿಳಿಯಬೇಕು ಎಂದು ಚಿಕ್ಕಬಳ್ಳಾಪುರದ ರೈಲು ನಿಲ್ದಾಣಕ್ಕೆ ಹೆಸರು ನಾಮಕರಣ ಮಾಡಿ ಎಂದು ನಮ್ಮ ಮನವಿ, ಇದಕ್ಕೆ ಕೇಂದ್ರ ರೈಲ್ವೆ ಸಚಿವರಾದ ವಿ.ಸೋಮಣ್ಣರವರು ಉತ್ತಮ ಸ್ಪಂದನೆ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

    ಕರ್ನಾಟಕ ಬಲಿಜ ಜಾಗೃತಿ ವೇದಿಕೆ ಕಾರ್ಯದರ್ಶಿ ಜಿ.ಜ್ಞಾನೇಶ್ ಮಾತನಾಡಿ ಕೈವಾರ ತಾತಯ್ಯರವರ ಸಾಧನೆ ಕುರಿತು ಇಂದಿನ ಪೀಳಿಗೆಯ ಜನರಿಗೆ ಅರಿವು ಇಲ್ಲ. ಜನಕಲ್ಯಾಣಕ್ಕೆ ಶ್ರಮಸಿದ ಮಹಾನ್ ಸಂತರ ಹೆಸರು ಉಳಿಯಬೇಕು. ಅವರ ಸಾಧನೆ ಆದರ್ಶ ಮಾರ್ಗದರ್ಶನ ಎಲ್ಲರಿಗೂ ಸಿಗಬೇಕು ಅದ್ದರಿಂದ ರೈಲು ನಿಲ್ದಾಣಕ್ಕೆ ಯೋಗಿ ನಾರೇಯಣ ರವರು ಹೆಸರು ನಾಮಕರಣ ಮಾಡಬೇಕು ಎಂದು ರಾಜ್ಯದ ಸಮಸ್ತ ಬಲಿಜ ಸಮುದಾಯದ ಪರವಾಗಿ ನಮ್ಮ ಮನವಿ ಎಂದು ಹೇಳಿದರು.

  • ದೊಡ್ಡಬಳ್ಳಾಪುರ: ಅರಳು ಮಲ್ಲಿಗೆ ಕೆರೆ ಏರಿ ಮೇಲೆ ರಸ್ತೆ ಅಪಘಾತ: ಬೈಕ್ ಸವಾರ ಸಾವು

    ದೊಡ್ಡಬಳ್ಳಾಪುರ: ಬೈಕ್‌ಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ತಾಲೂಕಿನ ಅರಳು ಮಲ್ಲಿಗೆ ಕೆರೆ ಏರಿ ಮೇಲೆ ನಡೆದಿದೆ.

    ಲೋಕೇಶ್ (28) ಮೃತಪಟ್ಟ ಬೈಕ್ ಸವಾರ ಎನ್ನಲಾಗಿದೆ. ಲಾರಿಯು ಚಾಲಕನ ನಿರ್ಲಕ್ಷದಿಂದ ಮೊದಲು ಆಲಹಳ್ಳಿ ಬಳಿ ಕಾರಿಗೆ ಡಿಕ್ಕಿ ಹೊಡೆಯಲಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಲು ವೇಗವಾಗಿ ಸಾಗಿ ಕೆರೆ ಏರಿ ಮೇಲೆ ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

    ಬೈಕ್ ಗೆ ಢಿಕ್ಕಿಯಾದ ಲಾರಿ ಅಲ್ಲಿಂದಲೂ ಪರಾರಿಯಾಗಿದೆ. ಇದನ್ನು ಕಂಡ ಮಧುರೆ ಹೋಬಳಿ ನಿವಾಸಿ ಚೇತನ್ ಎಂಬವರು ಲಾರಿಯನ್ನು ಹಿಂಬಾಲಿಸಿ ನೆಲಮಂಗಲದ ಬಿನ್ನಮಂಗಲದ ಬಳಿ ಲಾರಿ ಸಮೇತ ಚಾಲಕನನ್ನ ಹಿಡಿದು ನೆಲಮಂಗಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಪಘಾತ ಘಟನೆ ಬಗ್ಗೆ ಪರಿಶೀಲಿಸಿರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಕೋವಿಡ್’ಗೆ ಬಲಿಯಾದವರ ಹೆಣಗಳ ಮೇಲೂ ಲಂಚ ಪಡೆದಿರುವ ಬೊಮ್ಮಾಯಿ? ಸಿಎಂ ಸಿದ್ದರಾಮಯ್ಯ ಆರೋಪ

    ಕೋವಿಡ್’ಗೆ ಬಲಿಯಾದವರ ಹೆಣಗಳ ಮೇಲೂ ಲಂಚ ಪಡೆದಿರುವ ಬೊಮ್ಮಾಯಿ? ಸಿಎಂ ಸಿದ್ದರಾಮಯ್ಯ ಆರೋಪ

    ಹಾವೇರಿ: ಕೋವಿಡ್ 19 ಸೋಂಕಿನ ಸಂದರ್ಭದಲ್ಲಿ ಹೆಣಗಳಿಂದಲೂ ಬಿಜೆಪಿಯವರು ಲಂಚ ಪಡೆದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

    ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಹುಲಗೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರಖಾನ್ ಪಠಾಣ್ ಪರ ಮತಯಾಚನೆ ಸಭೆಯಲ್ಲಿ ಸಿಎಂ ಮಾತನಾಡಿದರು. ಹಿಂದಿನ ಬಿಜೆಪಿ ಸರ್ಕಾರದ ಬಗ್ಗೆ ಕಾಟು ಟೀಕೆ ಮಾಡಿದ ಸಿದ್ದರಾಮಯ್ಯ, ಇತಿಹಾಸದಲ್ಲಿ ಸತ್ತ ಹೆಣಗಳ ವಿಚಾರದಲ್ಲೂ ಲಂಚ ಪಡೆದ ನಾಯಕರು ಯಾರಾದರೂ ಇದ್ದರೆ ಅದು ಬಸವರಾಜ ಬೊಮ್ಮಾಯಿ ಎಂದು ವಾಗ್ದಾಳಿ ನಡೆಸಿದರು.

    ಸತ್ತ ಹೆಣಗಳಿಂದ ಲಂಚ ಪಡೆಡಿರುವ ಬಸವರಾಜ ಬೊಮ್ಮಾಯಿ ಮಗ ಭರತ್ ಗೆಲ್ಲಬೇಕಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಅವರನ್ನು ಗೆಲ್ಲಿಸುವಂತೆ ಅವರು ಮತದಾರರಲ್ಲಿ ಮನವಿ ಮಾಡಿದರು.

  • HSRP ನಂಬರ್ ಪ್ಲೇಟ್ ಅಳವಡಿಸಲು ನವೆಂಬರ್ 30ರವರೆಗೆ ಅವಧಿ ವಿಸ್ತರಣೆ; ಸರ್ಕಾರದ ಆದೇಶ

    ಬೆಂಗಳೂರು: ವಾಹನಗಳಿಗೆ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ (ಹೆಚ್ಎಸ್ಆರ್​​ಪಿ) ನಂಬರ್ ಪ್ಲೇಟ್ ಅಳವಡಿಸಲು ಮೂರ್ನಾಲ್ಕು ಬಾರಿ ಬಾರಿ ಗಡುವು ವಿಸ್ತರಿಸಿರುವ ಸರ್ಕಾರ ಇದೀಗ ಗಡುವನ್ನು ವಿಸ್ತರಿಸಿದೆ. HSRP ನಂಬರ್ ಪ್ಲೇಟ್ ಅಳವಡಿಕೆಗೆ ನವೆಂಬರ್ 30ರವರೆಗೆ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಮೂಲಗಳ ಪ್ರಕಾರ 1.90 ಕೋಟಿ ಹಳೆಯ ವಾಹನಗಳ ಪೈಕಿ ಸುಮಾರು 55 ಲಕ್ಷ ವಾಹನಗಳಿಗೆ ಮಾತ್ರ ಹೆಚ್ಎಸ್ಆರ್​​ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಹೀಗಾಗಿ ರಾಜ್ಯ ಸಾರಿಗೆ ಇಲಾಖೆಯು ನವೆಂಬರ್ 30ರವರೆಗೆ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಇದು ಅಂತಿಮ ಗಡುವು ಆಗಿದ್ದು HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದ ವಾಹನಗಳಿಗೆ ಡಿಸೆಂಬರ್ 1ರಿಂದ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

  • ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಸುಪ್ರೀಂ ಡಿಕೆಶಿಗೆ ಸ್ವಲ್ಪ ನಿರಾಳ

    ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಸುಪ್ರೀಂ ಡಿಕೆಶಿಗೆ ಸ್ವಲ್ಪ ನಿರಾಳ

    ನವದೆಹಲಿ: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಾಲ್ಕು ವಾರಗಳ ಕಾಲ ಮುಂದೂಡಿದೆ. ಈ ಬೆಳವಣಿಗೆಯಿಂದಾಗಿ ಡಿಕೆಶಿ ಅವರು ಸ್ವಲ್ಪ ನಿರಾಳರಾಗಿದ್ದಾರೆ.

    ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಆರೋಪ ಕುರಿತ ಸಿಬಿಐ ತನಿಖೆಯ ಅನುಮತಿಯನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಅರ್ಜಿ ಸೋಮವಾರ ವಿಚಾರಣೆಗೆ ಬಂದಿತ್ತು. ಆದರೆ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ಕಾಲ ಮುಂದೂಡಿತು.

    ಇದೇ ವೇಳೆ, ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶದ ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯಾತ್ನಾಳ್ ಸಲ್ಲಿಸಿರುವ ಅರ್ಜಿ ಕೂಡಾ ಸುಪ್ರೀಂಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಪೀಠವು ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.