Blog

  • ಫೋಗಟ್‌ಗೆ ಭಾರತ ರತ್ನ ಪ್ರಶಸ್ತಿ ಅಥವಾ ರಾಜ್ಯಸಭಾ ಸದಸ್ಯತ್ವ ನೀಡಬೇಕು; ತೃಣಮೂಲ ಕಾಂಗ್ರೆಸ್ ಸಲಹೆ

    ನವದೆಹಲಿ: ತೂಕ ಹೆಚ್ಚಳದ ಕಾರಣ ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿ ಫೈನಲ್‌ನಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್‌ಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಅಥವಾ ರಾಜ್ಯಸಭಾ ಸದಸ್ಯತ್ವ ನೀಡಬೇಕೆಂದು ತೃಣಮೂಲ ಕಾಂಗ್ರೆಸ್ ಆಗ್ರಹಿಸಿದೆ.

    ಪೋಗಟ್ ಅವರು ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರಿಗೆ ಈ ಬಾರಿ ಅನ್ಯಾಯವಾಗಿದೆ ಎಂದು ಇಡೀ ದೇಶ ಬೇಸರಗಿಂಡಿದೆ. ಪೋಗಟ್ ಅವರಿಗೆ ಧೈರ್ಯ ತುಂಬುವ ಪ್ರಯತ್ನ ನಡೆಯುತ್ತಿದೆ. ಇದೇ ವೇಳೆ ತೃಣಮೂಲ ಕಾಂಗ್ರೆಸ್ ಪಕ್ಷ ಹೊಸ ಸಲಹೆ ನೀಡಿ ಗಮನಸೆಳೆದಿದೆ.

    ಒಲಿಂಪಿಕ್ಸ್ ನಲ್ಲಿ ಆಕೆಯ ಕುಸ್ತಿ ಪ್ರದರ್ಶನವನ್ನು ಪರಿಗಣಿಸಿ ಆಕೆಗೆ ಭಾರತ ರತ್ನ ನೀಡಬೇಕು ಎಂದಿರುವ ಟಿಎಂಸಿ, ಪೋಗಟ್ ಅವರು ಭಾರತದ 1.4 ಬಿಲಿಯನ್ ಜನತೆಗೆ ಆಕೆ ಚಾಂಪಿನ್ ಗಳ ಚಾಂಪಿಯನ್ ಹಾಗೂ ದೇಶದ ಹೆಮ್ಮೆ. ಹಾಗಾಗಿ ಅವರಿಗೆ ಭಾರತ ರತ್ನ ಅಥವಾ ರಾಷ್ಟ್ರಪತಿಗಳ ಮೂಲಕ ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಬಗ್ಗೆ ಪಕ್ಷಾತೀತವಾಗಿ ನಿರ್ಧರಿಸಬೇಕು ಎಂದು ಪ್ರತಿಪಾದಿಸಿದೆ.

  • ಮೂಡ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಲೂಟಿ ಕಳಂಕವಲ್ಲವೇ? ಸಿ.ಟಿ.ರವಿ ಪ್ರಶ್ನೆ

    ಬೆಂಗಳೂರು: ತಮ್ಮ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಒಂದೇ ಒಂದು ಕಳಂಕ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೊಂಡಿದ್ದಾರೆ. ಹಾಗಿದ್ದರೆ ಮೂಡ ಹಗರಣ ಕಳಂಕ ಅಲ್ಲವೇ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

    ಮೈಸೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಲೂಟಿ ನಿಮ್ಮ ಸರಕಾರಕ್ಕೆ ಕಪ್ಪು ಚುಕ್ಕಿ ಅಲ್ಲವೇ? ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕಾಯಿದೆ ಉಲ್ಲಂಘಿಸಿ, ನಿಯಮ ಉಲ್ಲಂಘನೆ ಮಾಡಿ ಒಂದೇ ಕಂಪೆನಿಗೆ 600 ಕೋಟಿಯ ಟೆಂಡರ್ ಕೊಟ್ಟಿರುವುದು ಕಪ್ಪುಚುಕ್ಕಿ ಅಲ್ಲವೇ? ಎಂಬ ಪ್ರಶ್ನೆಯನ್ನು ಮುಂದಿಟ್ಟರು.

    ಪೊಲೀಸ್, ಕಂದಾಯ ಇಲಾಖೆ ಸೇರಿ ಎಲ್ಲ ಇಲಾಖೆಗಳಲ್ಲಿ ಪ್ರತಿ ಹುದ್ದೆಗೆ ರೇಟ್ ಕಾರ್ಡ್ ನಿಗದಿ ಮಾಡಿರುವುದು, ಸಬ್ ರಿಜಿಸ್ಟಾçರ್‌ಗಳ ಹುದ್ದೆಯ ನೇಮಕಾತಿಗೆ ಬಹಿರಂಗ ಹರಾಜು, ಅಬಕಾರಿ ಇಲಾಖೆಯಲ್ಲಿ ಉನ್ನತ ಹುದ್ದೆಗೆ ದರ ನಿಗದಿ ಮಾಡಿದ್ದಾರೆ. ಸಾರಿಗೆ ಇಲಾಖೆಯಲ್ಲಿ ಆರ್‌ಟಿಒಗಳ ಬಹಿರಂಗ ಹರಾಜು ನಡೆಯುತ್ತಿದೆ. ಇದು ತಮ್ಮ ಆಡಳಿತದ ಕಳಂಕವಲ್ಲವೇ ಎಂದು ಕೇಳಿದರು.
    ಬೆಂಗಳೂರಿನಲ್ಲಿ ಪ್ರತಿ ತಿಂಗಳು ಸಂಗ್ರಹವಾಗುವ 500ರಿಂದ 600 ಕೋಟಿ ಲಂಚ ಎಲ್ಲಿ ಹೋಗುತ್ತಿದೆ? ಚೇಂಜ್ ಆಫ್ ಲ್ಯಾಂಡ್ ಯೂಸ್‌ಗೆ ಪ್ರತಿ ಎಕರೆಗೆ 25 ಲಕ್ಷ ಲಂಚ ಕೊಡಬೇಕಿದೆ. ಅದೆಲ್ಲಿ ಹೋಗುತ್ತಿದೆ? ಇದೆಲ್ಲವೂ ಆಡಳಿತಕ್ಕೆ ಕಳಂಕವಲ್ಲವೇ ಎಂದು ಪ್ರಶ್ನಿಸಿದರು.

    ಮುಖ್ಯಮಂತ್ರಿಗಳೇ, ಸಾರ್ವಜನಿಕ ಬದುಕು ಸ್ವಚ್ಛವಾಗಿದ್ದರೆ ಮಾತ್ರ ಕಳಂಕರಹಿತ ಆಡಳಿತ ಎನ್ನಬಹುದು. ನಿಮ್ಮ ಸಾರ್ವಜನಿಕ ಬದುಕಿನಲ್ಲಿ ಸ್ವಚ್ಛತೆ ಎಲ್ಲಿದೆ? ಈ ಎಲ್ಲ ಭ್ರಷ್ಟಾಚಾರ ಏನನ್ನು ಸೂಚಿಸುತ್ತದೆ ಎಂದು ಅವರು ಕೇಳಿದರು.
    ಇದೇ 3ರಂದು ಪ್ರಾರಂಭವಾದ ಬಿಜೆಪಿ- ಜೆಡಿಎಸ್ ಜಂಟಿ ಪಾದಯಾತ್ರೆಯು ಈಗ ಜನಾಂದೋಲನವಾಗಿ ರೂಪುಗೊಂಡಿದೆ. ಆಡಳಿತ ಪಕ್ಷ ಪಾದಯಾತ್ರೆಗೆ ಲಭಿಸುತ್ತಿರುವ ಜನಬೆಂಬಲ ನೋಡಿ ಮುಖ್ಯಮಂತ್ರಿ, ಸಚಿವಸಂಪುಟ ಮತ್ತು ಕಾಂಗ್ರೆಸ್ ಹೈಕಮಾಂಡ್ ಗಾಬರಿಗೊಂಡಿದೆ. ಅವರು ಭಯಭೀತರಾಗಿ ಬೆದರಿಕೆ ತಂತ್ರವನ್ನು ಅನುಸರಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.

    ನಮ್ಮ ಪಾದಯಾತ್ರೆಯು ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ವಿರುದ್ಧ ಎಂದು ಸ್ಪಷ್ಟಪಡಿಸಿದ ಅವರು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ನಕಲಿ ಖಾತೆಗೆ ವರ್ಗಾಯಿಸಿದ ಕಾಂಗ್ರೆಸ್ ಲೂಟಿಯ ವಿರುದ್ಧ, ಮುಡಾ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ನಮ್ಮ ಪಾದಯಾತ್ರೆ ಎಂದು ವಿವರಿಸಿದರು.
    ಮಾನ್ಯ ಮುಖ್ಯಮಂತ್ರಿಗಳೇ, ನೀವು ಆಡಳಿತಕ್ಕೆ ಬಂದ ತಕ್ಷಣ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಎಸಿಬಿ ರಚನೆ ಮಾಡಿಕೊಂಡಿದ್ದೀರಿ. ನಿಮ್ಮ ಸರಕಾರದ ಮೇಲೆ ಬರುವ ಆರೋಪಗಳನ್ನು ಮುಚ್ಚಿಹಾಕಲು ಲೋಕಾಯುಕ್ತವನ್ನು ದುರ್ಬಲಗೊಳಿಸಿದ್ದೀರಿ ಎಂದು ಆಕ್ಷೇಪಿಸಿದರು.

  • ಶೀಘ್ರದಲ್ಲೇ ವೈದ್ಯಕೀಯ ಕಾಲೇಜುಗಳಿಗೆ 650 ಸಹಾಯಕ ಪ್ರಾಧ್ಯಾಪಕರು ಮತ್ತು 1200 ದಾದಿಯರ ನೇಮಕ

    ಶೀಘ್ರದಲ್ಲೇ ವೈದ್ಯಕೀಯ ಕಾಲೇಜುಗಳಿಗೆ 650 ಸಹಾಯಕ ಪ್ರಾಧ್ಯಾಪಕರು ಮತ್ತು 1200 ದಾದಿಯರ ನೇಮಕ

    ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಗ್ರೂಪ್‌-ಎ ನ 650 ಸಹಾಯಕ ಪ್ರಾಧ್ಯಾಪಕರು ಮತ್ತು 1200 ನರ್ಸ್‌ಗಳನ್ನು (ದಾದಿಯರು) ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ ನೇಮಕ ಮಾಡಿಕೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್ ರವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

     ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ವಿಕಾಸ ಸೌಧದಲ್ಲಿ ಬುಧವಾರ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಸ್ಪರ್ಧಾತಕ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಭರ್ತಿ ಮಾಡಿಕೊಳ್ಳಬೇಕೆಂದು ವೈದ್ಯಕೀಯ ಶಿಕ್ಷಣ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

    ಸಹಾಯಕ ಪ್ರಾಧ್ಯಾಪಕರು ಹಾಗೂ ನರ್ಸ್‌ಗಳ ನೇಮಕಾತಿ ಸಂದರ್ಭದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪದ ನಡುವೆ ವೈದ್ಯಕೀಯ ಕಾಲೇಜು ಸಂಸ್ಥೆಗಳ ಮುಖ್ಯಸ್ಥರು ನೇಮಕಾತಿ ನಡೆಸುತ್ತಿದ್ದ ಪ್ರಸ್ತುತ ನೇಮಕಾತಿ ಪ್ರಕ್ರಿಯೆಯಿಂದ ತೃಪ್ತರಾಗದ ಸಚಿವರು, ಮುಂಬರುವ ಗ್ರೂಪ್‌-ಎ ಮತ್ತು ದಾದಿಯರ ನೇಮಕಾತಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಭರ್ತಿ ಮಾಡಿಕೊಳ್ಳಬೇಕೆಂದು ಪಾಟೀಲ್‌ ನಿರ್ದೇಶನ ನೀಡಿದರು.

    ರಾಜ್ಯಾದ್ಯಂತ 22 ವೈದ್ಯಕೀಯ ಕಾಲೇಜುಗಳು ಮತ್ತು 11 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು ಸೇರಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುತ್ತಿವೆ. ಈ ಹುದ್ದೆಗಳನ್ನು ನಿಯಮದಂತೆ ಯಾವುದೇ ಮುಲಾಜಿಗೊಳಗಾಗದೇ ಭರ್ತಿ ಮಾಡಬೇಕೆಂದು ಸಚಿವರು ತಾಕೀತು ಮಾಡಿದರು.

    ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಖಾಲಿ ಇರುವ ಹ್ದುೆಗಳಿಗೆ ಪರೀಕ್ಷೆಗಳನ್ನು ನಡೆಸಲು ಕೆಇಎಗೆ ಅಗತ್ಯವಾದ ಸಹಕಾರ ನೀಡಬೇಕು ಜೊತೆಗೆ ಇಲಾಖೆಯ ನೇಮಕಾತಿ ಬೈಲಾಗಳನ್ನು ತಿದ್ದುಪಡಿ ಮಾಡಲಾಗುವುದು ಎಂದು ಪಾಟೀಲ್‌ ಹೇಳಿದರು.

    ಕೆಇಎ ಮೂಲಕ ಶುಶ್ರೂಷಕರನ್ನು ನೇಮಕ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಸರಕಾರ ಕಳೆದೆರಡು ವರ್ಷಗಳ ಹಿಂದೆಯೇ ಕಳುಹಿಸಿತ್ತು. ಆದಾಗ್ಯೂ, ಸರಿಯಾದ ಸಿ ಅಂಡ್‌ ಆರ್‌ ನಿಯಮಗಳು, ರೋಸ್ಟರ್‌ ಸಿಸ್ಟಮ್‌ ಇಲ್ಲದಿದ್ದಲ್ಲಿ ಪರೀಕ್ಷೆಯನ್ನು ನಡೆಸುವುದು ಕಷ್ಟ ಎಂದು ಕೆಇಎ ಉತ್ತರಿಸಿದೆ ಎಂಬ ಮಾಹಿತಿಯನ್ನು ಸಭೆಯಲ್ಲಿ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ದಾದಿಯರ ನೇಮಕಾತಿಗೆ ಅನ್ವಯವಾಗುವ ಸಿ ಮತ್ತು ಆರ್‌ ನಿಯಮಗಳನ್ನು ಅನುಸರಿಸುವಂತೆ ಸಚಿವರು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಜಂಟಿ ಕಾರ್ಯದರ್ಶಿಗೆ ಸೂಚಿಸಿದರು.

    ನೇಮಕಾತಿ ನಿಲುವಳಿಯನ್ನು ಕೆಇಎಗೆ ಹಸ್ತಾಂತರಿಸುವ ಸುಗಮ ಪ್ರಕ್ರಿಯೆಗಾಗಿ, ಪರೀಕ್ಷೆಗಳನ್ನು ನಡೆಸಲು ಕೆಇಎಗೆ ಪಠ್ಯಕ್ರಮಕ್ಕಾಗಿ ತಜ್ಞರ ಸಮಿತಿಯನ್ನು ರಚಿಸುವಂತೆ ಸಚಿವರು ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಸುಜಾತಾ ರಾಥೋಡ್‌ ಅವರಿಗೆ ಸೂಚಿಸಿದರು.

  • 27 ಹಕ್ಕುದಾರರಿರುವ ಪಿತ್ರಾರ್ಜಿತ ಆಸ್ತಿಯನ್ನು ಒಬ್ಬನ ಸಹಿಯಿಂದ ಪಡೆದರೇ ಸಿಎಂ ಸಿದ್ದರಾಮಯ್ಯ?

    27 ಹಕ್ಕುದಾರರಿರುವ ಪಿತ್ರಾರ್ಜಿತ ಆಸ್ತಿಯನ್ನು ಒಬ್ಬನ ಸಹಿಯಿಂದ ಪಡೆದರೇ ಸಿಎಂ ಸಿದ್ದರಾಮಯ್ಯ?

    ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಖರೀದಿಸಿದ ಜಮೀನು ಪಿತ್ರಾರ್ಜಿತ ಆಸ್ತಿಯಾಗಿದ್ದು, ಅದಕ್ಕೆ 27 ಹಕ್ಕುದಾರರಿದ್ದರೂ ಕೇವಲ ಒಬ್ಬರ ಬಳಿ ಸಹಿ ಹಾಕಿಸಿಕೊಳ್ಳಲಾಗಿದೆ. ಇದು ಸಂಪೂರ್ಣ ಅಕ್ರಮ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.

    ಬುಧವಾರ ಪತ್ರಿಕಾಗೋಷ್ಠಿಯಲ್ಲಿ ನಡೆಸಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಜಮೀನಿನ ಮೂಲ ಹಕ್ಕುದಾರರು, ಇತಿಹಾಸದ ಕುರಿತು ವಿವರಿಸಿದರು. ಸಿಎಂ ಸಿದ್ದರಾಮಯ್ಯ ಖರೀದಿಸಿದ ಜಾಗ ನಿಂಗ ಎಂಬುವರಿಗೆ ಸೇರಿದ ಜಮೀನಾಗಿದ್ದು, 1936 ರಲ್ಲಿ ನಿಂಗ ಜಮೀನು ಖರೀದಿಸಿದ್ದರು. ಅವರು 28 ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಪತ್ನಿ ನಿಂಗಮ್ಮ 1990 ರಲ್ಲಿ ಮೃತರಾಗಿದ್ದರು. ಇದು ನಿಂಗ ಮತ್ತು ನಿಂಗಮ್ಮ ಅವರ ಸ್ವಯಾರ್ಜಿತ ಆಸ್ತಿಯಾಗಿದ್ದು, ಅವರ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಾಗಿದೆ. ನಿಂಗ ಅವರಿಗೆ ಮೂರು ಮಕ್ಕಳಿದ್ದು, ಅವರ ಕುಟುಂಬದವರು 27 ಜನರಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ದೇವರಾಜು ಎಂಬ ಒಬ್ಬ ವ್ಯಕ್ತಿಯಿಂದ ಮಾತ್ರ ಸಹಿ ಹಾಕಿಸಿಕೊಂಡಿದ್ದಾರೆ ಎಂದು ವಿವರಿಸಿದರು.

    1968 ರಲ್ಲಿ ಸರ್ವೆ ಸಂಖ್ಯೆ 464 ರಲ್ಲಿ ನಿಂಗ ಅವರ ಪುತ್ರ ಮಲ್ಲಯ್ಯ ಅವರ ಹೆಸರಿಗೆ ಈ ಜಮೀನು ನೋಂದಣಿಯಾಗಿತ್ತು. 1990 ರಲ್ಲಿ ಒಟ್ಟು 462 ಎಕರೆ ಜಮೀನಿನಲ್ಲಿ ದೇವನೂರು ಬಡಾವಣೆ ಮುಡಾ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಬಳಿಕ ಜಮೀನು ಸಂಬಂಧ ದೇವರಾಜು ಅವರಿಗೆ ಮುಡಾದಿಂದ 3 ಲಕ್ಷ ರೂ. ಅವಾರ್ಡ್ ನೀಡಲಾಗಿತ್ತು. ಈ ಅವಾರ್ಡ್ ನೋಟಿಸ್ಗೆ ಮಲ್ಲಯ್ಯ ಸಹಿ ಹಾಕಿದ್ದರು. ನಂತರ 1998 ರಲ್ಲಿ ಮುಡಾ ಸರ್ವೆ ಸಂಖ್ಯೆ 464 ನ್ನು ಭೂ ಸ್ವಾಧೀನದಿಂದ ಕೈ ಬಿಟ್ಟಿತ್ತು ಎಂದು ತಿಳಿಸಿದರು.

    ಈ ಜಮೀನು 1998 ರಲ್ಲಿ ಮುಡಾದಿಂದ ಡಿ ನೋಟಿಫಿಕೇಶನ್‌ ಆಗಿತ್ತು. ಆಗ ಸಿದ್ದರಾಮಯ್ಯನವರೇ ಉಪಮುಖ್ಯಮಂತ್ರಿಯಾಗಿದ್ದರು. ತಂದೆ ತಾಯಿ ಸತ್ತ ನಂತರ ಕುಟುಂಬದ ಎಲ್ಲರ ಸಹಿ ಪಡೆಯಬೇಕಾಗುತ್ತದೆ. 2004 ರಲ್ಲಿ ದೇವರಾಜು ಅವರಿಂದ ಸಿದ್ದರಾಮಯ್ಯ ಅವರ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ 3 ಎಕರೆ 16 ಗುಂಟೆ ಜಮೀನನ್ನು ಕ್ರಯಕ್ಕೆ ಪಡೆದು ಕಾನೂನು ಬಾಹಿರವಾಗಿ ನೋಂದಣಿ ಮಾಡಿಸಿಕೊಂಡಿದ್ದರು. 2005 ರಲ್ಲಿ ಇದು ಭೂ ಪರಿವರ್ತನೆಯಾಯಿತು. 2001 ರಲ್ಲೇ ಬಡಾವಣೆ ಮಾಡಲು ಇದನ್ನು ಎಲ್‌ಆಂಡ್‌ಟಿ ಗೆ ನೀಡಲಾಗಿತ್ತು. ಅದಾದ ನಂತರ ಈ ಜಮೀನು ಪರಿವರ್ತನೆಯಾಗಿದೆ ಎಂದು ಹೇಳಿದರು.

    ಈ ಜಮೀನು ಮೂಲೆಯಲ್ಲಿದ್ದುದರಿಂದ ಇದು ಬೇಕಿಲ್ಲ ಎಂದು ಕೈ ಬಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಆದರೆ ಇದು ಮಧ್ಯಭಾಗದಲ್ಲಿ ಬರುತ್ತದೆ. ದಲಿತ ವ್ಯಕ್ತಿ ನಿಂಗನಿಗೆ ಸೇರಿದ ಜಮೀನಿನ ದಾಖಲೆಗಳ ವಿವರ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದ ಸಿದ್ದರಾಮಯ್ಯನವರಿಗೆ ತಿಳಿಯಲೇ ಇಲ್ಲ. ಈ ಜಮೀನನ್ನು ಸಿದ್ದರಾಮಯ್ಯ ಪತ್ನಿಗೆ ಭಾವ ಅರಿಶಿನ ಕುಂಕುಮಕ್ಕೆ ನೀಡಿದ್ದಾರೆ. ಇದು ಪೂರ್ವ ಯೋಜಿತ ಅಕ್ರಮವಾಗಿದೆ ಎಂದರು.

    ಸಿಎಂ ಸಿದ್ದರಾಮಯ್ಯ ಪತ್ನಿ 2014 ರಲ್ಲಿ ಮುಡಾಗೆ ಪತ್ರ ಬರೆದು ಬದಲಿ ಪರಿಹಾರ ಜಮೀನು ನೀಡುವಂತೆ ಕೋರಿದ್ದರು. ಇದಕ್ಕೆ ಉತ್ತರ ಬರೆದ ಮುಡಾ ಆಯುಕ್ತರು, ಬದಲಿ ಜಮೀನು ಇಲ್ಲವೆಂದು, ಅದಕ್ಕೆ ತತ್ಸಮಾನ ಜಮೀನು ನೀಡಲಾಗುವುದು ಎಂದು ತಿಳಿಸುತ್ತಾರೆ. ನಂತರ 2014 ರಲ್ಲಿ 50:50 ವಿಧಾನದಲ್ಲಿ ಪರಿಹಾರ ನೀಡಲಾಯಿತು. 2023 ರಲ್ಲಿ ನಗರಾಭಿವೃದ್ಧಿ ಇಲಾಖೆ ಇವೆಲ್ಲವೂ ನಿಯಮಬಾಹಿರ ಎಂದು ಆದೇಶ ಮಾಡಿತ್ತು ಎಂದರು.

    ಈ ಜಮೀನಿನ ಮಾಲಿಕತ್ವದ ವಿಷಯದಲ್ಲೇ ಇನ್ನೂ ತೀರ್ಮಾನ ಆಗಿಲ್ಲ. ಆದರೂ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರು ಅದನ್ನು ಪರಿಶೀಲಿಸಿಲ್ಲ. ಈ ಜಮೀನನ್ನು ಮೃತರಾದ ನಿಂಗ ಅವರ ಹೆಸರಿನಲ್ಲಿ ಡಿ ನೋಟಿಫೈ ಮಾಡಿದ್ದಾರೆ. ಬದಲಿ ಜಮೀನು ಪರಿಹಾರ ನೀಡುವುದಾದರೆ ಅದೇ ಜಾಗದಲ್ಲಿ ನಿವೇಶನ ನೀಡಬೇಕು. ಆದರೆ ಬೆಲೆಬಾಳುವ ಸೈಟುಗಳನ್ನು ನೀಡಿದ್ದಾರೆ. ಇದಕ್ಕೆ ಅಧಿಕಾರಿಗಳ ಮೇಲೆ ಯಾರು ಒತ್ತಡ ಹೇರಿದ್ದಾರೆ? ಎಂದು ಪ್ರಶ್ನೆ ಮಾಡಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ 40 ವರ್ಷಗಳ ರಾಜಕೀಯದಲ್ಲಿ ಕ್ಲೀನ್‌ ಎಂದು ಹೇಳಿ, ಕ್ಲೀನ್‌ ಆಗಿ 14 ಸೈಟುಗಳನ್ನು ನುಂಗಿದ್ದಾರೆ. ಈ ಹಿಂದೆ ರೀಡು ಪ್ರಕರಣದಲ್ಲಿ ಕೆಂಪಣ್ಣ ಆಯೋಗ ನೇಮಿಸಿ ಆರು ವರ್ಷ ಕಳೆದರೂ ವರದಿ ಬರಲಿಲ್ಲ. ಅದೇ ತಂತ್ರವನ್ನು ಪ್ರಯೋಗಿಸಿ ದೇಸಾಯಿ ಆಯೋಗ ರಚಿಸಿದ್ದು, ಇದಕ್ಕೆ 60 ವರ್ಷ ಅವಧಿ ನೀಡುತ್ತಾರಾ ಎಂದು ಸ್ಪಷ್ಟಪಡಿಸಬೇಕು ಎಂದರು.

    ಕ್ಲೀನ್‌ ಎಂಬ ಪಟ್ಟವನ್ನು ರಾಜ್ಯ ಜನರು ನೀಡಬೇಕಿದ್ದರೂ, ಮುಖ್ಯಮಂತ್ರಿಯವರು ತಮ್ಮನ್ನು ತಾವೇ ಕ್ಲೀನ್‌ ಎಂದು ಹೇಳಿಕೊಳ್ಳುತ್ತಿದ್ದಾರೆ. ಸದನದಲ್ಲಿ ಮಾತನಾಡಿದ್ದನ್ನು ಮರುದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಾರೆ. ಹಣದ ಬಲ ಇದ್ದವರಿಗೆ ಮಾತ್ರ ಸದನದಲ್ಲಿ ಸ್ಥಾನ ಎಂದು ಅವರೇ ತೋರಿಸಿದಂತಾಗಿದೆ. ಈಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

  • ಕಾಳಿ ನದಿ ಸೇತುವೆ ದುರಂತ; ಗೋವಾ-ಕರ್ನಾಟಕವನ್ನು ಸಂಪರ್ಕಿಸುವ ಬ್ರಿಡ್ಜ್ ಕುಸಿದು ಅವಾಂತರ

    ಕಾರವಾರ: ಕರ್ನಾಟಕ ಮತ್ತು ಗೋವಾ ರಾಜ್ಯಗಳನ್ನು ಸಂಪರ್ಕಿಸುವ ಸೇತುವೆ ಕುಸಿದು ಬಿದ್ದಿದ್ದು ವಾಹನ ಸಂಚಾರ ಏರುಪೇರಾಗಿದೆ.‌ ಉತ್ತರಕನ್ನಡ ಜಿಲ್ಲೆ ಕಾರವಾರ ನಗರದ ಕೋಡಿಭಾಗ್ ನಲ್ಲಿ ಕಾಳಿ ನದಿಗೆ ಅಡ್ಡಲಾಗಿ ಸುಮಾರು 40 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಹಳೆಯ ಸೇತುವೆ ಕಳೆದ ರಾತ್ರಿ ಕಿಸಿದುಬಿದ್ದಿದೆ.‌

      ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಳಿ ನದಿಗೆ ಒಂದು ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಪಕ್ಕದಲ್ಲೇ ಹಳೆ ಸೇತುವೆಯನ್ನೂ ವಾಹನಗಳ ಸಂಚಾರಕ್ಕೆ ಬಳಸಲಾಗುತ್ತಿತ್ತು. ಈ ಹಳೆಯ ಸೇತುವೆ ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಏಕಾಏಕಿ ಕುಸಿದಿದೆ. ಆ ವೇಳೆ ಸೇತುವೆ ಮೇಲೆ ಸಂಚರಿಸುತ್ತಿದ್ದ ಲಾರಿ ನದಿ ಪಾಲಾಗಿದೆ. ಲಾರಿಯ ಮುಂಭಾಗದ ಗ್ಲಾಸ್ ಒಡೆದು ಕ್ಯಾಬಿನ್ ಮೇಲೆ ನಿಂತು ಚಾಲಕ ಬಾಲ ಮುರುಗನ್ ರಕ್ಷಣೆಗೆ ಕೂಗಿದ್ದಾರೆ. ಸ್ಥಳೀಯ ಮೀನುಗಾರರ ನೆರವಿನೊಂದಿಗೆ ಕಾರ್ಯಾಚರಣೆಗಿಳಿದ ಪೊಲೀಸರು ಚಾಲಕನನ್ನು ರಕ್ಷಿಸಿದ್ದಾರೆ.

  • ಬೌರಿಂಗ್ ಹಾಸ್ಪಿಟಲ್ ನೆಲಸಮಗೊಳಿಸಿ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ತಯಾರಿ

    ಬೌರಿಂಗ್ ಹಾಸ್ಪಿಟಲ್ ನೆಲಸಮಗೊಳಿಸಿ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ತಯಾರಿ

    ಬೆಂಗಳೂರು: ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವ ಸದುದ್ದೇಶದಿಂದ ಶಿವಾಜಿ ನಗರದಲ್ಲಿರುವ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಾ ಬೌರಿಂಗ್ ಆಸ್ಪತ್ರೆ ಮುಂದಿನ ತಿಂಗಳು ಶಂಕುಸ್ಥಾಪನೆಗೊಳ್ಳಲಿದೆ.

    ಈ ಹಿಂದೆ ಇದ್ದ ಬೌರಿಂಗ್ ಆಸ್ಪತ್ರೆಯನ್ನು ನೆಲಸಮಗೊಳಿಸಿ ನೂತನ ಹತ್ತು ಅಂತಸ್ತಿನ 500 ಹಾಸಿಗೆಗಳ ಸೌಲಭ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಂದಿನ ತಿಂಗಳು ಶಂಕುಸ್ಥಾಪನೆಗೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಸೋಮವಾರ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದ ವೇಳೆ ವರಿದಿಗಾರರಿಗೆ ಹೇಳಿದರು.

    ಇದೆ ವೇಳೆ ಅಲ್ಲಿನ ಡೆಂಘೀ ವಾರ್ಡ್ ಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಅಸ್ಪತ್ರೆಯಲ್ಲಿ ವೈದ್ಯರು ಸೂಕ್ತವಾದ ಚಿಕಿತ್ಸೆ ನೀಡುತ್ತಿದ್ದಾರೆಯೇ? ಬೆಳಗಿನ ಉಪಹಾರ, ಮಧ್ಯಾಹ್ನಾದ ಬೋಜನ ಸಮಯಕ್ಕೆ ಸರಿಯಾಗಿ ನೀಡುತ್ತಿದ್ದಾರೆಯೇ ಎಂದು ರೋಗಿಗಳಿಂದ ಮಾಹಿತಿ ಪಡೆದುಕೊಂಡರು.

    ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜುನಿಂದ ಶಿವಾಜಿನಗರದ ಚರಕ ಆಸ್ಪತ್ರೆಗೆ ಕಾಲ್ನಡಿಗೆಯಲ್ಲಿ ಭೇಟಿ ನೀಡಿದ ಸಚಿವ ಪಾಟೀಲ್ ಮಧ್ಯಮ ವರ್ಗದ ಜನರಿಗೆ ಅನುಕೂಲ ಅಗುವಂತೆ ಚರಕ ಆಸ್ಪತ್ರೆ ರೆಡಿಯಾಗ್ತಿದೆ..ಕೆಲವೇ ದಿನದಲ್ಲಿ ಲೋಕಾರ್ಪಣೆ ಆಗಲಿದೆ ಎಂದು ಹೇಳಿದರು.

    “ಈ ಕಟ್ಟಡ ಬಿಬಿಎಂಪಿ ಮಾಡಿದೆ, ಇನ್ಫ್ರಾಸ್ಟ್ರಕ್ಚರ್ ಕೊಟ್ಟಿದ್ದು ಇನ್ಫೋಸಿಸ್. ಲೋಕಾರ್ಪಣೆ ಮಾಡೋದಕ್ಕೆ ಸರ್ಕಾರದಿಂದ ಏನೆನು ಬೇಕು ಅದನ್ನುಮಾಡಿಕೊಳ್ಳಲಾಗಿದೆ. ಕಾರ್ಡಿಯಾಕ್, ನ್ಯೂರೋ, ನೆಫ್ರಾಲಜಿ ಸೇರಿದಂತೆ ಎಲ್ಲಾ ಚಿಕಿತ್ಸೆ ಚರಕ ಆಸ್ಪತ್ರೆಯಲ್ಲಿ ನೀಡಲಾಗುತ್ತೆ. ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಚಿಕಿತ್ಸೆ ಸಿಗಲಿದೆ,” ಎಂದು ಪಾಟೀಲ್ ಮಾಹಿತಿ ನೀಡಿದರು.

    ಈ ಸಂದರ್ಭದಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹಾಗೂ ಹಿರಿಯ ಅಧಿಕಾರಿಗಳು ಡಾ.ಪಾಟೀಲ್ ಜೊತೆಗಿದ್ದರು.

  • ಬಿಜೆಪಿ-ಜೆಡಿಎಸ್‌ನಿಂದ ಬಡಜನರ ವಿರುದ್ದ ಪಾದಯಾತ್ರೆ?

     

    ಮಂಡ್ಯ: ಬಿಜೆಪಿ, ಜೆಡಿಎಸ್ ಪಾದಯಾತ್ರೆ ಮಾಡುತ್ತಿರುವುದು ನನ್ನ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧವಲ್ಲ. ಈ ರಾಜ್ಯದ ಬಡಜನರ ವಿರುದ್ದ ಪಾದಯಾತ್ರೆ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಮಂಡ್ಯದಲ್ಲಿ ಮಂಗಳವಾರ ಕಾಂಗ್ರೆಸ್ ಆಯೋಜಿಸಿದ್ದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿ, ಬಿಜೆಪಿ-ಜೆಡಿಎಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು. “ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಧಮ್ ಇಲ್ಲ. ಹೀಗಾಗಿ ಮಾಧ್ಯಮಗಳಲ್ಲಿ ಕೇವಲ ನನ್ನ ಮತ್ತು ಕುಮಾರಸ್ವಾಮಿ ಅವರ ವಿಚಾರವನ್ನೇ ಮಾಧ್ಯಮಗಳು ತೆಗೆದುಕೊಳ್ಳುತ್ತಿವೆ” ಪಾದಯಾತ್ರೆ ಬಗ್ಗೆ ಲೇವಡಿ ಮಾಡಿದರು.

    “ಬಿಜೆಪಿ, ಜೆಡಿಎಸ್ ಪಾದಯಾತ್ರೆ ಮಾಡುತ್ತಿರುವುದು ನನ್ನ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧವಲ್ಲ. ಈ ರಾಜ್ಯದ ಬಡಜನರ ವಿರುದ್ದ ಪಾದಯಾತ್ರೆ ಮಾಡುತ್ತಿದ್ದಾರೆ. ಈ ರಾಜ್ಯದ ಜನ ಕಾಂಗ್ರೆಸ್ ಗೆ ಶೇ. 43 ರಷ್ಟು ಮತ ನೀಡಿ 136 ಸ್ಥಾನ ನೀಡಿದ್ದಾರೆ. ಮಂಡ್ಯದಲ್ಲಿ 7 ಸ್ಥಾನ ಕೊಟ್ಟಿದ್ದಾರೆ. ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಇದನ್ನು ನಿಲ್ಲಿಸಲು ಸರ್ಕಾರ ಬೀಳಿಸುವ ಹುನ್ನಾರ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ಯಡಿಯೂರಪ್ಪ ಅವರೇ ಸರ್ಕಾರ ಬೀಳಿಸುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ. ಅಶೋಕಣ್ಣ ನಿನ್ನ ಕೈಯಲ್ಲಿ ಧಮ್ ಇಲ್ಲ. ವಿಜಯೇಂದ್ರಣ್ಣ ಕಾಂಗ್ರೆಸ್ ಪಕ್ಷದ ಬಿಕ್ಷೆಯಿಂದ ವಿಧಾನಸಭೆಗೆ ಬಂದಿದ್ದೀಯ. ನಾಗರಾಜ್ ಗೌಡನಿಗೆ ಟಿಕೆಟ್ ನೀಡಿದ್ದರೆ ನೀನು ಗೆಲ್ಲುತ್ತಿರಲಿಲ್ಲ. ಇದನ್ನು ಗಮನದಲ್ಲಿಟ್ಟುಕೋ” ಎಂದು ಡಿಕೆಶಿ ಹೇಳಿದರು.

    “ವಿಜಯೇಂದ್ರ ನನ್ನನ್ನು ಭ್ರಷ್ಟಾಚಾರದ ಪಿತಾಮಹ ಎನ್ನುತ್ತೀಯಲ್ಲ. ನಿಮ್ಮ ತಂದೆ ಏತಕ್ಕೆ ರಾಜಿನಾಮೆ ನೀಡಿದರು. ಲಕ್ಷ್ಮೀವಿಲಾಸ್ ಬ್ಯಾಂಕ್ ನಲ್ಲಿ ದುಬೈಯಲ್ಲಿ ಖಾತೆ ತೆರೆದು ಕೋಟ್ಯಂತರ ರೂಪಾಯಿ ವರ್ಗಾವಣೆಯಾಯಿತಲ್ಲ ಇನ್ನೂ ಏಕೆ ನಿಮ್ಮ ಸರ್ಕಾರ ಇದರ ಬಗ್ಗೆ ತನಿಖೆ ಮಾಡಿಸಿಲ್ಲ. ನಿನ್ನಿಂದಾಗಿ ನಿಮ್ಮ ತಂದೆಯಿಂದ ಏಕೆ ರಾಜಿನಾಮೆ ಕೊಡಿಸಿದರು. ತಂಗಿಮಕ್ಕಳು, ನೆಂಟರು ಸೇರಿದಂತೆ ಇತರರ ಹೆಸರಿನಲ್ಲಿ ಅಕ್ರಮ ನಡೆಯಿತಲ್ಲ ಅದರ ಬಗ್ಗೆ ಬಿಚ್ಚಿಡಲೇ? ಈ ವಿಚಾರಗಳೆಲ್ಲ ವಿಧಾನಸಭೆಯಲ್ಲಿ ಚರ್ಚೆಯಾಗಿ ದಾಖಲೆಗೆ ಹೋಗಬೇಕು. ಸರಿಯಾದ ಸಂದರ್ಭದಲ್ಲಿ ಇದರ ಬಗ್ಗೆ ಮಾತನಾಡುತ್ತೇನೆ” ಎಂದರು.

    “ಬಿಜೆಪಿ, ಜೆಡಿಎಸ್ ಪಾದಯಾತ್ರೆಯು ಪಾಪ ವಿಮೋಚನೆಯ ಯಾತ್ರೆ. ನೀವು ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೀರಿ. ಕುಮಾರಸ್ವಾಮಿ ಅವರೇ ನಿಮ್ಮ ಸಹೋದರರ ಆಸ್ತಿಪಟ್ಟಿ ಬಿಚ್ಚಿಡಿ ಎಂದರೂ ಬಿಚ್ಚಿಡುತ್ತಿಲ್ಲ. ನೀವು ಎಲ್ಲಿಗೆ ಬೇಕಾದರೂ ಚರ್ಚೆಗೆ ಕರೆಯಿರಿ ನಾನು ಸಿದ್ದನಿದ್ದೇನೆ” ಎಂದು ಹೇಳಿದರು.

  • ಬಾಂಗ್ಲಾದೇಶ ಹಿಂಸಾಚಾರ ಬಗ್ಗೆ ಬ್ರಿಟೀಷ್ ಲೇಬರ್ ಪಾರ್ಟಿ ಕಳವಳ; ಶೀಘ್ರ ಶಾಂತಿ ಸ್ಥಾಪನೆಗೆ ಡಾ.ನೀರಜ್ ಪಾಟೀಲ್ ಕರೆ

    ಬಾಂಗ್ಲಾದೇಶ ಹಿಂಸಾಚಾರ ಬಗ್ಗೆ ಬ್ರಿಟೀಷ್ ಲೇಬರ್ ಪಾರ್ಟಿ ಕಳವಳ; ಶೀಘ್ರ ಶಾಂತಿ ಸ್ಥಾಪನೆಗೆ ಡಾ.ನೀರಜ್ ಪಾಟೀಲ್ ಕರೆ

    📝 ಜಯ ಪ್ರಕಾಶ್

    ಲಂಡನ್: ಭೀಕರ ಹಿಂಸಾಚಾರದಿಂದ ಬಾಂಗ್ಲಾದೇಶ ತ್ತರಿಸಿದೆ. ಉದ್ಯೋಗ ನೀತಿ ವಿರುದ್ದ ವಿದ್ಯಾರ್ಥಿಗಳು ಹಾಗೂ ವಿರೋಧ ಪಕ್ಷಗಳು ದಂಗೆ ಎದ್ದಿದ್ದು ನಿರಂತರ ಹಿಂಸಾಚಾರದಿಂದಾಗಿ ನೂರಾರು ಮಂದಿ ಬಲಿಯಾಗಿದ್ದಾರೆ. ಈ ಹಿಂಸಾಚರದಿಂದ ಬೆಚ್ಚಿದ ಶೇಖ್ ಹಸೀನಾ ಅವರು ಪ್ತಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನವಾಗಿದ್ದಾರೆ.

    ಬಾಂಗ್ಲಾದೇಶದ ಈ ಪರಿಸ್ಥಿತಿ ಬಗ್ಗೆ ಲಂಡನ್‌‌ನಲ್ಲಿರುವ ಬ್ರಿಟಿಷ್ ಲೇಬರ್ ಪಾರ್ಟಿ ಕಳವಳ ವ್ಯಕ್ತಪಡಿಸಿದೆ.
    ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬ್ರಿಟಿಷ್ ಲೇಬರ್ ಪಾರ್ಟಿ ನಾಯಕರೂ ಆದ, ಭಾರತ ಮೂಲದ ಮಾಜಿ ಲಂಡನ್ ಮೇಯರ್ ಡಾ.ನೀರಜ್ ಪಾಟೀಲ್, ಬಾಂಗ್ಲಾದೇಶದಲ್ಲಿ ಶೀಘ್ರ ಶಾಂತಿ ಮರುಸ್ಥಾಪಿಸಲು ವಿಶ್ವ ಸಮುದಾಯ ಸಹಕಾರ ನೀಡಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.

    ಬಾಂಗ್ಲಾದೇಶ ಸಂಸತ್ತು ವಿಸರ್ಜನೆಯಾಗಿದೆ, ಅದರ ಪ್ರಧಾನಿ ಈಗ ದೆಹಲಿಯಲ್ಲಿದ್ದಾರೆ. ಮುಂದಿನ ಮೂರು ತಿಂಗಳೊಳಗೆ ಚುನಾಯಿತ ಸರ್ಕಾರವನ್ನು ಮರುಸ್ಥಾಪಿಸುವ ಭರವಸೆಯೊಂದಿಗೆ ಮಿಲಿಟರಿ ಸ್ವಾಧೀನವಿದೆ. ಇದು ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯಾಗಿದೆ ಮತ್ತು ಬ್ರಿಟಿಷ್ ವಿದೇಶಾಂಗ ಕಚೇರಿ ಕೂಡಾ ಕಳವಳ ವ್ಯಕ್ತಪಡಿಸಿದೆ ಎಂದವರು ಹೇಳಿದ್ದಾರೆ.

    ಬಾಂಗ್ಲಾದೇಶದಲ್ಲಿ ಹಿಂದೂಗಳ ಜನಸಂಖ್ಯೆ 8% ರಷ್ಟಿದೆ. ಹಿಂದೂ ಮತ್ತು ಇತರ ಜನಾಂಗೀಯ ಅಲ್ಪಸಂಖ್ಯಾತರು ಉದ್ರಿಕ್ತರ ಗುರಿಯಾಗುತ್ತಿದ್ದಾರೆ ಎಂದು ವರದಿಯಾಗುತ್ತಿದೆ. ಇಂತಹಾ ಬೆಳವಣಿಗೆ ಒಳ್ಳೆಯದಲ್ಲ ಎಂದು ನೀರಜ್ ಪಾಟೀಲ್ ಹೇಳಿದ್ದಾರೆ.

    ಬಾಂಗ್ಲಾದೇಶದಲ್ಲಿ ಹಿಂದೂ, ಸಿಖ್, ಕ್ರಿಶ್ಚಿಯನ್, ಬೌದ್ಧ ಮತ್ತು ಇತರ ಜನಾಂಗೀಯ ಅಲ್ಪಸಂಖ್ಯಾತರ ಸುರಕ್ಷತೆ ಬಗ್ಗೆ ಗಮನಹರಿಸಬೇಕಿದೆ. ಮಾನವ ಹಕ್ಕುಗಳನ್ನು ಸಂರಕ್ಷಿಸಬೇಕಿದೆ. ಕಾನೂನುಬದ್ದ ಸರ್ಕಾರ ಮರುಸ್ಥಾಪನೆಯ ಪ್ರಯತ್ನ ಮುಂದುವರಿದಿರುವುದರಿಂದ ಆಶಾದಾಯಕ ಬೆಳವಣಿಗೆಯನ್ನು ನಿರೀಕ್ಷಿಸಬಹುದಾಗಿದೆ ಎಂದವರು ಹೇಳಿದ್ದಾರೆ.

    ಜಗತ್ತು ನಿರೀಕ್ಷಿಸುತ್ತಿರುವ ಸುರಕ್ಷಾ ಕ್ರಮಗಳನ್ನು ಉಸ್ತುವಾರಿ ಸರ್ಕಾರ ತುರ್ತಾಗಿ ಕೈಹೊಳ್ಳಬೇಕೆಂದು ನಮ್ಮ ಲೇಬರ್ ಪಾರ್ಟಿ ಒತ್ತಾಯಿಸುತ್ತಿದೆ ಎಂದು ನೀರಜ್ ಪಾಟೀಲ್ ಹೇಳಿದ್ದಾರೆ.

  • ಹಿಂದು ಸೇವಾ ಪ್ರತಿಷ್ಠಾನ: ‘ಮನೆ ಮನಗಳ ಭೂಷಣ’ ಕೃತಿ ಬಿಡುಗಡೆ

    ಬೆಂಗಳೂರು: ವನವಾಸಿ ಕಲ್ಯಾಣ ಕರ್ನಾಟಕ ಮತ್ತು ಹಿಂದು ಸೇವಾ ಪ್ರತಿಷ್ಠಾನ ವತಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸ್ವರ್ಗೀಯ ಶ್ರೀ ಕೆ. ಎಸ್.ನಾಗಭೂಷಣ ಅವರ ಸ್ಮರಣಾರ್ಥ ‘ಮನೆ ಮನಗಳ ಭೂಷಣ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಆಗಸ್ಟ್ 6, 2024 ಸಂಜೆ ಶಂಕರಪುರದ ರಂಗರಾವ್ ರಸ್ತೆಯ ಉತ್ತುಂಗದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು. ರಾಮಣ್ಣ, ಹಿರಿಯ ಕಾರ್ಯಕರ್ತ ವೈ.ಕೆ.ರಾಘವೇಂದ್ರ ರಾವ್, ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ, ಸಹಸರಕಾರ್ಯವಾಹ ಮುಕುಂದ ಸಿ.ಆರ್. ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ಹಿಂದಿನ ಹೇಳಿಕೆಗಳ ಬಗ್ಗೆ ಯು ಟರ್ನ್ ಯಾಕೆ? ಹೆಚ್ಡಿಕೆ ಉತ್ತರಿಸಬೇಕು ಎಂದ ಡಿಕೆಶಿ 

    ಹಿಂದಿನ ಹೇಳಿಕೆಗಳ ಬಗ್ಗೆ ಯು ಟರ್ನ್ ಯಾಕೆ? ಹೆಚ್ಡಿಕೆ ಉತ್ತರಿಸಬೇಕು ಎಂದ ಡಿಕೆಶಿ 

    ಮಂಡ್ಯ: “ಕುಮಾರಸ್ವಾಮಿ ಅವರು ಈ ಹಿಂದೆ ತಾವೇ ನೀಡಿರುವ ಯು ಟರ್ನ್ ಹೇಳಿಕೆಗಳ ಬಗ್ಗೆ ಉತ್ತರ ನೀಡಲಿ. ಅವರು ನುಡಿದಂತೆ ನಡೆಯಲಿ, ಕೊಟ್ಟ ಮಾತು ತಪ್ಪುವುದನ್ನು ಬಿಡಲಿ” ಎಂದು ಡಿಸಿಎಂ ಡಿಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

    ಮಂಡ್ಯದ ಮೈಶುಗರ್ ಕಾರ್ಖಾನೆ ಮೈದಾನದಲ್ಲಿ ಮಂಗಳವಾರ ನಡೆದ ʼಜನಾಂದೋಲನ ಸಭೆʼ ಯಲ್ಲಿ ಈ ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ, ಅಶ್ವಥ್ ನಾರಾಯಣ್, ಯೋಗಿಶ್ವರ್ ಅವರು ಪರಸ್ಪರ ಆರೋಪ, ಪ್ರತ್ಯಾರೋಪ, ಯೂ ಟರ್ನ್ ಹೊಡೆದಿದ್ದ ಹೇಳಿಕೆಗಳನ್ನು ವಿಡಿಯೋ ಮೂಲಕ ತೆರೆಯ ಮೇಲೆ ಪ್ರದರ್ಶಿಸಿದ ನಂತರ ಡಿಸಿಎಂ ಶಿವಕುಮಾರ್ ಮಾತನಾಡಿದರು.“ಜನ ತೀರ್ಪು ನೀಡಿದ್ದಾರೆ. ಆದ ಕಾರಣಕ್ಕೆ ಗಂಡು ಭೂಮಿ ಮಂಡ್ಯದಲ್ಲಿ ಗೆಲುವು ಕಂಡಿದ್ದೀರಿ. ಇಲ್ಲಿಗೆ ಬಂದು ನಿಮ್ಮ ತಿರುವು-ಮುರುವು ಹೇಳಿಕೆಗಳ ಬಗ್ಗೆ ಉತ್ತರ ನೀಡಬೇಕು. ನಿಮ್ಮ ಅಮೃತದ ನುಡಿಮುತ್ತುಗಳನ್ನು ಈ ನೆಲದ ಮೇಲೆ ಉದುರಿಸಬೇಕು. ಯೂಟರ್ನ್ ಕುಮಾರ, ಕ್ಷಣಕ್ಕೊಂದು ಮಾತು ಕ್ಷಣಕ್ಕೊಂದು ಬಣ್ಣ”ಎಂದು ಶಿವಕುಮಾರ್ ಅವರು ಕುಮಾರಸ್ವಾಮಿ ಅವರನ್ನು ಛೇಡಿಸಿದರು.

    “ಮೋದಿ ಅವರ ಕೈ ಹಿಡಿದು ಕೇವಲ ಐದು ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಕುಮಾರಣ್ಣ ಹೇಳಿದ್ದರು. ಆದರೆ ಈಗ ನಾವು ಐದು ಜನ ಮಂತ್ರಿಗಳಿದ್ದೇವೆ, ನಾನು ಆ ರೀತಿ ಮಾತು ಕೊಡಲು ಮೂರ್ಖನೇ ಎಂದು ಹೇಳುತ್ತಿದ್ದಾರೆ. ಈ ಹೇಳಿಕೆಗಳಿಗೆ ಬಿಜೆಪಿ ಹಾಗೂ ಕುಮಾರಸ್ವಾಮಿ ಇಬ್ಬರೂ ಉತ್ತರ ಕೊಡಬೇಕು. 10ನಿಮಿಷದಲ್ಲಿ ನಾನು ತೋರಿಸಿದ ಮೈತ್ರಿ ನಾಯಕರ ಮಾತುಗಳಿಗೆ ಉತ್ತರ ಕೊಡಲಿ” ಎಂದು ಆಗ್ರಹಿಸಿದರು.

    “ಕುಮಾರಸ್ವಾಮಿ ಅವರನ್ನು ಕಾವೇರಿ ನೀರಿನ ವಿಚಾರದ ಸಭೆಗೆ ಕರೆದಿದ್ದೆವು. ಅದಕ್ಕೆ ಅವರು ದ್ರಾಕ್ಷಿ, ಗೋಡಂಬಿ ತಿನ್ನಲು ಬರಬೇಕೆ ಎಂದಿದ್ದರು. ಆದರೆ ಅದೇ ದಿನ ಪಾಂಡವಪುರದಲ್ಲಿ ಬಾಡೂಟದಲ್ಲಿ ಭಾಗವಹಿಸಿದ್ದರು. ಕಾವೇರಿ ನೀರು, ರೈತರು, ರಾಜ್ಯದ ಹಿತ ಅವರಿಗೆ ಮುಖ್ಯವಾಗಿರಲಿಲ್ಲ. ಕುಮಾರಣ್ಣ ಏನೂ ಬೇಕಾದರೂ ಮಾಡಿಕೊಳ್ಳಲಿ, ಆದರೆ ನಮಗೆ ಮಾತ್ರ ನಿಮ್ಮ ಹಿತ ಮುಖ್ಯ” ಎಂದರು.

    “148 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಅಲ್ಲದೇ 64 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗಿದೆ. ಹೆಚ್ಚಾಗಿ ಸಮುದ್ರಕ್ಕೆ ಹರಿದು ಹೋದ ನೀರನ್ನು ಹಿಡಿದಿಡುವ ಸಲುವಾಗಿ ಮೇಕೆದಾಟು ಯೋಜನೆ ಸಾಕಾರಕ್ಕಾಗಿ ಪಾದಯಾತ್ರೆ ಮಾಡಿದೆವು” ಎಂದು ಹೇಳಿದರು

    “ಕುಮಾರಸ್ವಾಮಿ ನನ್ನ ಕುಟುಂಬದ ಬಗ್ಗೆ ಮಾತನಾಡಲಿ ಎಂದೇ ಅವರ ಕುಟುಂಬದ ಬಗ್ಗೆ ಮಾತನಾಡುತ್ತಾ ಬರುತ್ತಿದ್ದೇನೆ. ನಿಮ್ಮ ಅತ್ತೆಯ ಕೆಐಡಿಬಿ ಭೂಮಿ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಇದೇ ಬಿಜೆಪಿಯವರು ನಿನ್ನ ಕುಟುಂಬಕ್ಕೆ ಹಂಚಿಕೆಯಾಗಿರುವ ಮುಡಾ ಸೈಟುಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ” ಎಂದು ಸವಾಲು ಹಾಕಿದರು.

    “ನನ್ನ ಅಧ್ಯಕ್ಷತೆಯಲ್ಲಿ, ಸಿದ್ದರಾಮಯ್ಯ ಅವರ ಮುಖಂಡತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ. ಬಿಜೆಪಿಗೆ 65 ಜೆಡಿಎಸ್ ಗೆ 19 ಸ್ಥಾನಗಳು ಬಂದವು. ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಆಗಿದ್ದಾರೆ. ನಮ್ಮ ಸರ್ಕಾರವನ್ನು ಬೀಳಿಸಲು ಆಗುವುದಿಲ್ಲ. ಮುಂದಿನ 10 ವರ್ಷವೂ ಕಾಂಗ್ರೆಸ್ ಸರ್ಕಾರವಿರುತ್ತದೆ” ಎಂದರು.

    ಭಾಷಣದ ಮಧ್ಯೆ ವೇದಿಕೆಯ ಎಲ್ಇಡಿ ಮೂಲಕ ಮೈತ್ರಿ ನಾಯಕರ ಹೇಳಿಕೆಗಳ ವಿಡಿಯೋ ಪ್ರದರ್ಶಿಸಿದ ನಂತರ ಮಾತು ಮುಂದುವರೆಸಿದ ಡಿಸಿಎಂ ಅವರು “ಯಾರ ಮಾತನ್ನು ನಂಬಬೇಡಿ ಎಂದು ಶಾಸಕ ಮಿತ್ರ ಪ್ರಿಯಾಕ್ ಖರ್ಗೆ ಅವರು ಹೇಳಿದರು. ಅವರ ಮಾತಿನಂತೆ ನನಗೆ ಮುನಿಯಪ್ಪ ಅವರು, ಚೆಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಯಾರ ಮೇಲೂ ನಂಬಿಕೆಯಿಲ್ಲ ನನಗೆ ಕುಮಾರಸ್ವಾಮಿ ಅವರ ಮೇಲೆ, ಬೂಕನಕೆರೆ ಯಡಿಯೂರಪ್ಪ, ಯೋಗಿಶ್ವರ್, ಯತ್ನಾಳ್ ಮೇಲೆ ಮಾತ್ರ ನನಗೆ ನಂಬಿಕೆ” ಎಂದು ವ್ಯಂಗ್ಯವಾಡಿದರು.