Blog

  • ಮುಡಾ ನಿವೇಶನ ಅಕ್ರಮ ಆರೋಪ; ಸಿಎಂಗೆ ಲೋಕಾಯುಕ್ತ ನೋಟೀಸ್

    ಮುಡಾ ನಿವೇಶನ ಅಕ್ರಮ ಆರೋಪ; ಸಿಎಂಗೆ ಲೋಕಾಯುಕ್ತ ನೋಟೀಸ್

    ಬೆಂಗಳೂರು: ಮುಡಾ ಹಗರಣ ಆರೋಪ ಕುರಿತಂತೆ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಂಯ್ಯ ಅವರು ಮೊದಲ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಹಲವರನ್ನು ವಿಚಾರಣೆಗೆ ಗುರಿಪಡಿಸಿರುವ ಲೋಕಾಯುಕ್ತ ಪೊಲೀಸರು ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೂ ನೋಟಿಸ್ ಜಾರಿ ಮಾಡಿದ್ದಾರೆ.

    ನವೆಂಬರ್ 6ರಂದು ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

  • ವಕ್ಫ್ ಆಸ್ತಿ ವಿಚಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ನೋಟಿಸ್ ನೀಡಲಾಗಿದೆ : ಸಿಎಂ ಸಿದ್ದರಾಮಯ್ಯ ಆರೋಪ

    ವಕ್ಫ್ ಆಸ್ತಿ ವಿಚಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ನೋಟಿಸ್ ನೀಡಲಾಗಿದೆ : ಸಿಎಂ ಸಿದ್ದರಾಮಯ್ಯ ಆರೋಪ

    ಹಾವೇರಿ: ವಕ್ಫ್ ಆಸ್ತಿ ವಿಚಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ನೋಟಿಸ್ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ವಕ್ಫ್ ವಿವಾದ ಕುರಿತು ಬಿಜೆಪಿ ನಡೆಸಿರುವ ಪ್ರತಿಭಟನೆ ಬಗ್ಗೆ ಹಾವೇರಿ ಜಿಲ್ಲೆ ಶಿಗ್ಗಾವಿ ಬಳಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಬಿಜೆಪಿಯವರು ಉಪ ಚುನಾವಣೆಗೋಸ್ಕರ ರಾಜಕೀಯ ಮಾಡ್ತಿದ್ದಾರೆ ಎಂದು ಆರೋಪಿಸಿದರು.

    ಉಪಚುನಾವಣೆ ನಡೆಯುತ್ತಿರುವ ಶಿಗ್ಗಾಂವ್ ತಾಲೂಕಿನ ಹುಲಗೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರಖಾನ್ ಪಠಾಣ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಕ್ಫ್ ಆಸ್ತಿ ವಿಚಾರದಲ್ಲಿ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ನೋಟಿಸ್ ಕೊಟ್ಟಿದಾರೆ. ಸದಾನಂದಗೌಡ, ಶೆಟ್ಟರ್, ಬೊಮ್ಮಾಯಿ ಇದ್ದಾಗಲೂ ನೋಟಿಸ್ ಕೊಟ್ಟಿದಾರೆ ಎಂದು ಆರೋಪಿಸಿದರು.

    ಯಾವ‌ ಕಾರಣಕ್ಕೂ ಕೂಡಾ ರೈತರನ್ನು ಒಕ್ಕಲೆಬ್ಬಿಸಲ್ಲ. ವಕ್ಫ್ ಬೋರ್ಡ್​ನವರು ಯಾವ ಕಾರಣಕ್ಕೂ ಖಾಲಿ ಮಾಡಿಸುವುದಿಲ್ಲ ಎಂದು ಭರವಸೆ ನೀಡಿದ ಸಿಎಂ, ಕಂದಾಯ ದಾಖಲೆಗಳಲ್ಲಿ ಇರುವ ವಕ್ಫ್ ಹೆಸರುಗಳನ್ನು ರದ್ದು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದವರು ತಿಳಿಸಿದರು.

  • ಉತ್ತರಾಖಂಡ್: ಪೌರಿ-ಅಲ್ಮೋರಾ ಗಡಿಯಲ್ಲಿ ಬಸ್ ಅಪಘಾತ; 36 ಮಂದಿ ಸಾವು

    ಉತ್ತರಾಖಂಡ್: ಪೌರಿ-ಅಲ್ಮೋರಾ ಗಡಿಯಲ್ಲಿ ಬಸ್ ಅಪಘಾತ; 36 ಮಂದಿ ಸಾವು

    ರಾಮನಗರ (ಉತ್ತರಾಖಂಡ): ಪೌರಿ-ಅಲ್ಮೋರಾ ಗಡಿಯಲ್ಲಿರುವ ರಾಮನಗರದ ಉತ್ತರಾಖಂಡದ ಕುಪಿ ಬಳಿ ಸೋಮವಾರ ಬಸ್ಸೊಂದು ಕಂದಕಕ್ಕೆ ಉರುಳಿ ಸಂಭವಿಸಿದ ಅಪಘಾತದಲ್ಲಿ 36 ಮಂದಿ ಸಾವನ್ನಪ್ಪಿದ್ದಾರೆ.

    ಗರ್ವಾಲ್ ಮೋಟಾರ್ಸ್ ಬಸ್ ಕಂದಕಕ್ಕೆ ಉರುಳಿಬಿದ್ದಿದ್ದು ಅನೇಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

    ಈ ನಡುವೆ, ಅಪಘಾತ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ ಮೃತರ ಕುಟುಂಬದವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ನೆರವು ಪ್ರಕಟಿಸಿದೆ.

  • ವಕ್ಫ್‌ ಮಂಡಳಿಯ ಎಲ್ಲ ಬಗೆಯ ಜಮೀನು ನೋಂದಣಿ ಸ್ಥಗಿತಗೊಳಿಸಲು ಸೂಚಿಸಿ; ರಾಜ್ಯ ಸರ್ಕಾರಕ್ಕೆ ಬಿಜೆಪಿ ಆಗ್ರಹ

    ಬೆಂಗಳೂರು: ಕರ್ನಾಟಕದ ವಕ್ಫ್‌ ಮಂಡಳಿಗೆ ಸಂಬಂಧಿಸಿದ ಎಲ್ಲ ಬಗೆಯ ಜಮೀನು ನೋಂದಣಿಯನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಬೇಕೆಂದು ಕೋರಿ ಪ್ರತಿಪಕ್ಷ ನಾಯಕ ಆರ್‌.ಅಶೋಕ ಕೇಂದ್ರ ಸಚಿವರಿಗೆ ಹಾಗೂ ವಕ್ಫ್‌ ಜಂಟಿ ಸಮಿತಿಗೆ ಪತ್ರ ಬರೆದಿದ್ದಾರೆ.

    ರೈತರ ಜಮೀನು ಹಾಗೂ ಹಿಂದೂ ಸಂಸ್ಥೆಗಳಿಗೆ ಸಂಬಂಧಿಸಿದ ಜಮೀನುಗಳನ್ನು ವಕ್ಫ್‌ ಮಂಡಳಿ ಕಬಳಿಸುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿರುವ ಅವರು, ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹಾಗೂ ವಕ್ಫ್‌ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್‌ ಅವರಿಗೆ ಪತ್ರ ಬರೆದಿದ್ದಾರೆ.

    ಕೇಂದ್ರ ಸರ್ಕಾರದಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ತರಲು ಜಂಟಿ ಸಂಸದೀಯ ಸಮಿತಿ ರಚಿಸಿದ್ದು, ವಕ್ಫ್‌ ಆಸ್ತಿಗಳ ನಿರ್ವಹಣೆಯಲ್ಲಿ ದಕ್ಷತೆ ಹಾಗೂ ಪಾರದರ್ಶಕತೆ ತರಲು ಈ ಸಮಿತಿ ಶ್ರಮಿಸುತ್ತಿದೆ. ಆದರೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ವಕ್ಫ್‌ ಮಂಡಳಿಯು ಕಂದಾಯ ದಾಖಲೆಗಳನ್ನು ತಿದ್ದುವ ಹಾಗೂ ರೈತರ ಜಮೀನುಗಳ ಮಾಲೀಕತ್ವ ವರ್ಗಾಯಿಸಿಕೊಳ್ಳುವ ಪ್ರಯತ್ನ ಆರಂಭವಾಗಿದೆ. ಈ ರೀತಿ ತರಾತುರಿಯಲ್ಲಿ ಜಮೀನುಗಳನ್ನು ವಕ್ಫ್‌ ಮಂಡಳಿ ನೋಂದಾಯಿಸಿಕೊಳ್ಳುತ್ತಿರುವ ಪರಿಣಾಮ ಸಾವಿರಾರು ಬಡವರು ಹಾಗೂ ರೈತರು ವಂಶಪಾರಂಪರ್ಯವಾಗಿ ಬಂದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆರ್‌.ಅಶೋಕ ಪತ್ರದಲ್ಲಿ ವಿವರಿಸಿದ್ದಾರೆ.

    ವಿಜಯಪುರ ಜಿಲ್ಲೆಯಲ್ಲಿ 15,000 ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ನೋಟಿಸ್‌ ನೀಡಲಾಗಿದೆ ಎಂದು ನೂರಾರು ರೈತರು ಹೇಳಿದ ಬಳಿಕ ಈ ಸಂಗತಿ ಬೆಳಕಿಗೆ ಬಂದಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಲಾ 10,000 ಎಕರೆ ಜಮೀನನ್ನು ವಕ್ಫ್‌ ನೋಂದಣಿ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೆ, ವಕ್ಫ್‌ ಮಂಡಳಿಯು ದೇವಸ್ಥಾನ, ಮಠ ಹಾಗೂ ಇತರೆ ಹಿಂದೂ ಧಾರ್ಮಿಕ ಸಂಸ್ಥೆಗಳ ಜಮೀನುಗಳನ್ನು ಕೂಡ ತನ್ನದು ಎಂದು ಹೇಳಿಕೊಂಡಿದೆ. ಹಿಂದೂ ಸ್ಮಶಾನ ಕೂಡ ತನ್ನದು ಎಂದು ವಕ್ಫ್‌ ಉಲ್ಲೇಖಿಸಿರುವುದು ಇನ್ನಷ್ಟು ಆಘಾತದ ಸಂಗತಿ. 13 ನೇ ಶತಮಾನದಷ್ಟು ಇತಿಹಾಸ ಹೊಂದಿರುವ ವಿರಕ್ತ ಮಠಕ್ಕೆ ಸೇರಿದ ಸಿಂಧಗಿಯ 1.28 ಎಕರೆ ಜಮೀನು, ವಿಜಯಪುರದ ಐತಿಹಾಸಿಕ ಸೋಮೇಶ್ವರ ದೇವಾಲಯ, ಕಲಬುರ್ಗಿಯ ಬೀರದೇವರ ಗುಡಿ ಸೇರಿದಂತೆ ಅನೇಕ ಜನಪ್ರಿಯ ಸ್ಥಳಗಳನ್ನು ಕೂಡ ವಕ್ಫ್‌ ತನ್ನದೆಂದು ಘೋಷಿಸಿಕೊಂಡಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಇದು ಜನರಲ್ಲಿ ಆತಂಕ ಉಂಟುಮಾಡಿದ್ದು, ಹಾವೇರಿಯಲ್ಲಿ ಹಿಂಸಾಚಾರ, ಗಲಭೆ ಕೂಡ ನಡೆದಿದೆ. ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ, ಜಂಟಿ ಸಮಿತಿಯು ಕೂಡಲೇ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಜೊತೆ ಮಾತನಾಡಬೇಕು ಹಾಗೂ ವಕ್ಫ್‌ಗೆ ಸಂಬಂಧಿಸಿದ ಜಮೀನು ನೋಂದಣಿ ಸ್ಥಗಿತಗೊಳಿಸಲು ಸೂಚಿಸಬೇಕೆಂದು ಆರ್‌.ಅಶೋಕ ಮನವಿ ಮಾಡಿದ್ದಾರೆ.

  • ವಕ್ಫ್ ವಿವಾದ ವಿರುದ್ದ ಬಿಜೆಪಿ ಪ್ರತಿಭಟನೆ; ವಕ್ಫ್‌ ಮಂಡಳಿ ಕಾಯ್ದೆಯಲ್ಲಿ ಬದಲಾವಣೆ ತರಲು ಆಗ್ರಹ

    ಬೆಂಗಳೂರು: ವಕ್ಫ್‌ ಮಂಡಳಿ ಭೂಮಿ ಕಬಳಿಸುತ್ತಿರುವುದು ರೈತರ ಪಾಲಿಗೆ ಮರಣಶಾಸನವಾಗಿದೆ. ಆದರೆ ಭೂ ಕಬಳಿಕೆಯ ಈ ಆಟ ನಡೆಯಲು ಹಿಂದೂಗಳು ಬಿಡುವುದಿಲ್ಲ. ಕೂಡಲೇ ಕಾಂಗ್ರೆಸ್‌ ಸರ್ಕಾರ ವಕ್ಫ್‌ ಕಾಯ್ದೆಯಲ್ಲಿ ಬದಲಾವಣೆ ತರಲಿ ಎಂದು ಬಿಜೆಪಿ ಆಗ್ರಹಿಸಿದೆ.

    ವಕ್ಫ್‌ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕೆ.ಆರ್‌.ಪುರದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಪಕ್ಷ ನಾಯಕ ಆರ್.ಅಶೋಕ್ ,ಜಮೀನು ಕಬಳಿಸುವ ಮೂಲಕ ಅನ್ನದಾತರ ಕಣ್ಣಲ್ಲಿ ನೀರು ಬರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಇವೆಲ್ಲಕ್ಕೂ ಸಚಿವ ಜಮೀರ್‌ ಅಹ್ಮದ್‌ ಕಾರಣ. ಹಿಂದೆ ಕೇಂದ್ರದ ಕಾಂಗ್ರೆಸ್‌ ಸರ್ಕಾರ ಮುಸ್ಲಿಮರನ್ನು ಓಲೈಸಲು ವಕ್ಫ್‌ ಬೋರ್ಡ್‌ಗೆ ಹೆಚ್ಚು ಅಧಿಕಾರ ನೀಡಿತು. ಸಿಎಂ ಸಿದ್ದರಾಮಯ್ಯ ಅವರೇ ಭೂಮಿ ಪಡೆಯಿರಿ ಎಂದು ಹೇಳಿದ್ದು, ಈಗ ಇದು ಬಿಜೆಪಿ ಮಾಡುವ ರಾಜಕೀಯ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರು ಈಗ ಟೋಪಿ ತೆಗೆದಿದ್ದಾರೆ. ಬಳಿಕ ಅವರೇ ರೈತರ ತಲೆ ಮೇಲೆ ಟೋಪಿ ಹಾಕುತ್ತಾರೆ. ಮುಸ್ಲಿಮರಿಗೆ 10 ಸಾವಿರ ಕೋಟಿ ರೂ. ನೀಡುತ್ತೇನೆಂದು ಹೇಳಿ ದಲಿತರ ಹಣ ಲೂಟಿ ಮಾಡಿದ್ದಾರೆ. ಕಾಂಗ್ರೆಸ್‌ಗೆ ಹಿಂದೂಗಳು ಮತ ನೀಡಿಲ್ಲವೇ? ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳೇ? ಎಂದು ಪ್ರಶ್ನಿಸಿದರು.

    ಬಾಬರ್‌, ಔರಂಗಜೇಬ ಮೊದಲಾದ ಮತಾಂಧ ರಾಜರು ವಕ್ಫ್‌ ಬೋರ್ಡ್‌ಗೆ ಮಾದರಿ. ಶ್ರೀರಂಗಪಟ್ಟಣದಲ್ಲಿ ನೂರಾರು ವರ್ಷಗಳಿಂದ ಇರುವ *ದೇವಸ್ಥಾನವನ್ನು ಖಬರ್‌ಸ್ಥಾನ* ಎಂದು ದಾಖಲೆಯಲ್ಲಿ ಬರೆಸಿದ್ದಾರೆ. ಲವ್‌ ಜಿಹಾದ್‌ ಮಾಡಿ ಹಿಂದೂ ಹೆಣ್ಣುಮಕ್ಕಳನ್ನು ಮತಾಂತರ ಮಾಡಲಾಗಿದೆ. ಈಗ ಲ್ಯಾಂಡ್‌ ಜಿಹಾದ್‌ ಮೂಲಕ ರೈತರ ಜಮೀನು ಪರಿವರ್ತನೆ ಮಾಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ನ *ಮಗುವಿನಂತೆ ನಿದ್ರಿಸಿ* ಎಂಬ ಘೋಷಣೆಯಂತೆ, ಭಯೋತ್ಪಾದಕರು ಹಾಗೂ ಮೂಲಭೂತವಾದಿಗಳು ಕರ್ನಾಟಕದಲ್ಲಿ ಮಗುವಿನಂತೆ ಆರಾಮಾಗಿ ನಿದ್ರಿಸಬಹುದು. ಭಯೋತ್ಪಾದಕರು ಡಿ.ಕೆ.ಶಿವಕುಮಾರ್‌ ಅವರ ಸಹೋದರರಾಗಿದ್ದಾರೆ. ಭಯೋತ್ಪಾದನೆ ಮಾಡಿದವರನ್ನು ನಮ್ಮವರು ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಂಬಿಕೆ ಉಳಿಸಿಕೊಳ್ಳದ ಮುಖ್ಯಮಂತ್ರಿ ನಮ್ಮ ರಾಜ್ಯದಲ್ಲಿದ್ದಾರೆ. ಮುಸ್ಲಿಂ ಗಲಭೆಕೋರರ ಕೇಸುಗಳನ್ನು ವಾಪಸ್‌ ಪಡೆದರು. ಗಣೇಶ ಮೂರ್ತಿಯನ್ನೇ ಬಂಧನ ಮಾಡಿದರು. ಕೇವಲ ಮತಕ್ಕಾಗಿ ಇಡೀ ಕರ್ನಾಟಕವನ್ನೇ ಹಾಳು ಮಾಡುತ್ತಿದ್ದಾರೆ. ಮುಡಾ ಹಗರಣವಾದ ನಂತರ ಸಿಎಂ ಸಿದ್ದರಾಮಯ್ಯನವರ ಹಣೆಯಲ್ಲಿ ಕುಂಕುಮ ಕಾಣಿಸಿಕೊಂಡಿದೆ ಎಂದು ಟೀಕಿಸಿದರು.

    ವಕ್ಫ್‌ ಬೋರ್ಡ್‌ ಈಗ ಸಾಬರ ಬೋರ್ಡ್‌ ಆಗಿದ್ದು, ಸಿಎಂ ಸಿದ್ದರಾಮಯ್ಯನವರು ಬೇಕಿದ್ದರೆ ಎಲ್ಲ ಭೂಮಿಯನ್ನು ಈ ಬೋರ್ಡ್‌ಗೆ ಬರೆದುಬಿಡಬಹುದು. ಇವೆಲ್ಲ ದಾನ ಕೊಟ್ಟ ಜಮೀನು ಎಂದು ವಕ್ಫ್‌ ಮಂಡಳಿ ಹೇಳುತ್ತಿದೆ. ಮುಜರಾಯಿ ಇಲಾಖೆಗೂ ದಾನದಿಂದ ಭೂಮಿ ಬಂದಿದೆ. ಆದರೆ ಅದು ಮಾತ್ರ ಸರ್ಕಾರಿ ಆಸ್ತಿಯಾಗುತ್ತದೆ. ಆದರೆ ವಕ್ಫ್‌ ಬೋರ್ಡ್‌ಗೆ ದಾನದಿಂದ ಬರುವ ಭೂಮಿ ಮಾತ್ರ ಸರ್ಕಾರಿ ಆಸ್ತಿಯಾಗುವುದಿಲ್ಲ. ಹೀಗೆಯೇ ಕಾಂಗ್ರೆಸ್‌ ರಾಜ್ಯವನ್ನು ಹಾಳು ಮಾಡಿದರೆ ಹಿಂದೂಗಳು ಈ ಆಟ ನಡೆಯಲು ಬಿಡುವುದಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಕಾಯ್ದೆಯಲ್ಲಿ ಬದಲಾವಣೆ ಮಾಡಲಿ ಎಂದು ಆಗ್ರಹಿಸಿದರು.

    ಸಿದ್ದರಾಮಯ್ಯನವರ ಮಾತನ್ನು ಯಾರೂ ನಂಬುವುದಿಲ್ಲ. ಅವರು ಯಾವಾಗ ಬೇಕಾದರೂ ಮಾತು ಬದಲಿಸುತ್ತಾರೆ. ರೈತರಿಗೆ ಸಂಪೂರ್ಣವಾಗಿ ಜಮೀನಿನ ದಾಖಲೆಗಳು ಸಿಕ್ಕಿ, ಅವರ ಹೆಸರಿಗೆ ಜಮೀನು ಸಂಪೂರ್ಣವಾಗಿ ನೋಂದಣಿಯಾಗುವವರೆಗೂ ಬಿಜೆಪಿ ಹೋರಾಟ ಮಾಡಲಿದೆ. ವಕ್ಫ್‌ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಗೆ ಈ ಕುರಿತು ಪತ್ರ ಬರೆದಿದ್ದೇನೆ. ಈ ಸಮಿತಿ ಕರ್ನಾಟಕಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ವಕ್ಫ್‌ ಬೋರ್ಡ್‌ ಆಸ್ತಿ ಕಬಳಿಕೆ ಒಂದು ದಂಧೆಯಾಗಿದ್ದು, ಇದನ್ನು ಮಟ್ಟ ಹಾಕಬೇಕಿದೆ ಎಂದರು.

  • ವಿರೋಧ ಪಕ್ಷದ ನಾಯಕ ಸ್ಥಾನ ಉಳಿಸಿಕೊಳ್ಳಲು ನವರಂಗಿ ಆಟ? ಅಶೋಕ್ ವಿರುದ್ಧ ರಮೇಶ್ ಬಾಬು ಟೀಕಾಸ್ತ್ರ

    ಬೆಂಗಳೂರು: ಪ್ರತಿಪಕ್ಷ ನಾಯಕ ಸ್ಥಾನ ಉಳಿಸಿಕೊಳ್ಳಲು ಆರ್.ಅಶೋಕ್ ನವರಂಗಿ ಆಟ ಆಡುತ್ತಿದ್ದಾರೆ ಎಂದು ಮಾಜಿ ಶಾಸಕರೂ ಆದ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಕಟುವಾಗಿ ಟೀಕಿಸಿದ್ದಾರೆ.

    ಚನ್ನಪಟ್ಟಣದ ಉಪಚುನಾವಣೆಯಲ್ಲಿ ಮಾತನಾಡುವಾಗ ಆರ್ ಅಶೋಕ್ ರವರು ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ಉಪಚುನಾವಣೆ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಖಂಡಿಸಿರುವ ರಮೇಶ್ ಬಾಬು, ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಅಥವಾ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಉಪಚುನಾವಣೆಗಳನ್ನು ದುರಾಡಳಿತದ ಮೇಲೆ ನಡೆಸುವ ಅವಶ್ಯಕತೆ ಇಲ್ಲ. ಅಂತಹ ಅವಶ್ಯಕತೆ ಏನಾದರೂ ಇದ್ದರೆ ಅದು ಭಾರತೀಯ ಜನತಾ ಪಕ್ಷದ ನಾಯಕರಿಗೆ ಮತ್ತು ಅವರ ಪಕ್ಷಕ್ಕೆ ಇರುತ್ತದೆ ಎಂದು ಎದಿರೇಟು ನೀಡಿದ್ದಾರೆ.

    ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿರುವುದು ಅವರ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಉಳಿಸಿಕೊಳ್ಳುವ ಹತಾಶ ಪ್ರಯತ್ನ. ಕರ್ನಾಟಕದ ನವರಂಗಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ರವರು ಚನ್ನಪಟ್ಟಣದ ಉಪಚುನಾವಣೆಯಲ್ಲಿ ಮಾತನಾಡುವಾಗ ಕಾಂಗ್ರೆಸ್ ಪಕ್ಷದ ದುರಳಿತದ ವಿರುದ್ಧ ಉಪಚುನಾವಣೆ ನಡೆಯುತ್ತಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಅಥವಾ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಉಪಚುನಾವಣೆಗಳನ್ನು ದುರಡಳಿತದ ಮೇಲೆ ನಡೆಸುವ ಅವಶ್ಯಕತೆ ಇರುವುದಿಲ್ಲ ಅಂತಹ ಅವಶ್ಯಕತ್ತೆ ಏನಾದರೂ ಇದ್ದರೆ ಅದು ಭಾರತೀಯ ಜನತಾ ಪಕ್ಷದ ನಾಯಕರಿಗೆ ಮತ್ತು ಅವರ ಪಕ್ಷಕ್ಕೆ ಇರುತ್ತದೆ.

    ಬಿಜೆಪಿ ನಾಯಕರಾದ ಯತ್ನಾಳ್ ಅವರು ಆರ್. ಅಶೋಕ್ ಅಡ್ಜಸ್ಟ್ಮೆಂಟ್ ಗಿರಾಕಿ ಎನ್ನುವ ವಿಷಯವನ್ನು ಹಲವಾರು ಬಾರಿ ಪ್ರಸ್ತಾಪ ಮಾಡಿರುತ್ತಾರೆ.ಇದರ ಜೊತೆಗೆ ಕರ್ನಾಟಕದ ಪದ್ಮನಾಭನಗರದ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಬಾರಿ ಜೆಡಿಎಸ್ ನಾಯಕರು ಜೊತೆ ಹೊಂದಾಣಿಕೆ ಮಾಡಿಕೊಂಡು ಗೆಲ್ಲುವ ಆರ್.ಅಶೋಕ್, ತಾವು ಸಮರ್ಥ ವಿರೋಧ ಪಕ್ಷದ ನಾಯಕರು ಎಂಬುದನ್ನ ಇದುವರೆಗೆ ರುಜುವಾತು ಮಾಡಲು ಸಾಧ್ಯವಾಗಿಲ್ಲ ಎಂದು ರಮೇಶ್ ಬಾಬು ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

    ಮಾಧ್ಯಮ ಹೇಳಿಕೆ ನೀಡಿರುವ ರಮೇಶ್ ಬಾಬು, ಬೆಂಗಳೂರು ದಕ್ಷಿಣ ತಾಲೂಕಿನ ಬಿ.ಎಮ್. ಕಾವಲು ಗ್ರಾಮದಲ್ಲಿ 2500 ಎಕರೆ ಅಕ್ರಮ ಮಂಜೂರಾತಿಗೆ ಸಂಬಂಧ ಪಟ್ಟಂತೆ ಗುರುತರವಾದ ಆರೋಪವನ್ನು ಎದುರಿಸುತ್ತಿರುವ ಅಶೋಕ್ ರವರು, ಈ ಪ್ರಕರಣದ ಮಾಹಿತಿಯನ್ನು ತಮ್ಮ ಚುನಾವಣಾ ಪ್ರಮಾಣ ಪತ್ರದಲ್ಲಿ ನೀಡದೆ ಪ್ರಮಾದವನ್ನು ಎಸಗಿರುತ್ತಾರೆ.ಇದರ ಜೊತೆಗೆ ಅವರು ಕರ್ನಾಟಕದ ಕಂದಾಯ ಸಚಿವರಾಗಿ ಬಿಜೆಪಿ ಸರ್ಕಾರದಲ್ಲಿ ಅನೇಕ ವೈಫಲ್ಯಗಳನ್ನು ಕಂಡಿರುತ್ತಾರೆ. ಅವರ ಅವಧಿಯಲ್ಲಿ ಸುಮಾರು 5 ಲಕ್ಷ ಪೋಡಿ ಪ್ರಕರಣಗಳು ಬಾಕಿ ಇದ್ದು, ಇದರಿಂದ ಇಡೀ ರಾಜ್ಯದ ರೈತರು ಸಂಕಷ್ಟ ಅನುಭವಿಸಿದರು. ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರಾಗಿ ವೈಫಲ್ಯ ಕಂಡ ಇವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಿಲ್ಲ. ಬೆಂಗಳೂರು ಜಯನಗರದ ಡಬಲ್ ಕೊಲೆ ಇದುವರೆಗೂ ಪತ್ತೆ ಆಗಲಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಲೊಟ್ಟೆಗೊಲ್ಲ ಹಳ್ಳಿ ಭೂ ಪ್ರಕರಣದಲ್ಲಿ ಮಾಡಿರಬಹುದಾದ ವಂಚನೆ, ಅವರ ಶಿಕ್ಷಣ ಸಂಸ್ಥೆಗೆ ಪಡೆದಿರುವ ಅಕ್ರಮ ಭೂಮಿ, ಕಂದಾಯ ಸಚಿವರಾಗಿ ಅಕ್ರಮವಾಗಿ ಹಂಚಿರುವ ಭೂಮಿಯ ಆರೋಪಗಳಿಗೆ ಸಾರ್ವಜನಿಕವಾಗಿ ಇಲ್ಲಿಯವರೆಗೆ ಉತ್ತರ ನೀಡದೆ ಪಲಾಯನ ಮಾಡುತ್ತಿರುವ ಆರ್. ಅಶೋಕ್ ರವರು, ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಮೇಲೆ ಮಾತನಾಡುವ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.

    ಕರ್ನಾಟಕದ ಹೊಂದಾಣಿಕೆ ರಾಜಕಾರಣದ ಪಿತಾಮಹ ಖ್ಯಾತಿಯ ಆರ್. ಅಶೋಕ್ ರವರು 2013ರ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಹೊಂದಾಣಿಕೆ ಮಾಡಿಸಿ ಅನಿತಾ ಕುಮಾರಸ್ವಾಮಿ ಮತ್ತು ಪುಟ್ಟರಾಜು ಅವರಿಗೆ ಕೈಕೊಟ್ಟು ದೇವೇಗೌಡರಿಂದ ಚೀಮಾರಿ ಹಾಕಿಸಿಕೊಂಡ ಘಟನೆ ಮಾಸುವ ಮುನ್ನವೇ ಚೆನ್ನಪಟ್ಟಣ ದಲ್ಲಿ ಹೊಸ ನಾಟಕ ಆರಂಭಿಸಿದ್ದಾರೆ. ಉಪ ಚುನಾವಣೆ ಪೂರ್ವದಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡುವಂತೆ ಯೋಗೀಶ್ವರ್ ಅವರಿಗೆ ಚಿತಾವಣೆ ಮಾಡಿದ ಅಶೋಕ್, ಪ್ರತಿದಿನ ಒಂದೊಂದು ವೇಷ ಹಾಕುತ್ತಿದ್ದಾರೆ.
    ಬಿಜೆಪಿ ಯಲ್ಲಿ ಅನೇಕ ಹಿರಿಯರ ತುಳಿದು ವಿರೋಧ ಪಕ್ಷದ ಸ್ಥಾನ ಪಡೆದಿರುವ ಇವರು, ರಾಜ್ಯದ ಸಮಸ್ಯೆಗಳ ಮೇಲೆ ಬೆಳುಕು ಚೆಲ್ಲುವ ಬದಲು, ರಾಜಕೀಯ ಭಾಷಣ ಮಾಡಿಕೊಂಡು ಅಲೆದಾಡುತ್ತಿದ್ದಾರೆ. ಇದು ಈ ರಾಜ್ಯದ ದುರಂತ ಮತ್ತು ಬಿಜೆಪಿ ಅಧೋಗತಿ ಎಂದು ರಮೇಶ್ ಬಾಬು ವಿಶ್ಲೇಷಿಸಿದ್ದಾರೆ.

    ಅತ್ಯಂತ ಹಿರಿಯರು ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ ಸದನದ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಅವರಂತೆಯೇ ಆರ್. ಅಶೋಕ್ ಅವರೂ ಸಾದ್ಯವಾದರೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಗೌರವ ತುಂಬಲಿ. ಇಲ್ಲದೇ ಹೋದರೆ ರಾಜೀನಾಮೆ ನೀಡಿ ಮನೆ ಸೇರಲಿ. ಒಬ್ಬ ವಿರೋಧ ಪಕ್ಷದ ನಾಯಕರಾಗಿ ವೈಫಲ್ಯದಿಂದ ಸೋತಿರುವ ಆರ್. ಅಶೋಕ್, ಕಾಂಗ್ರೆಸ್ ಟೀಕೆಗೆ ಮುನ್ನ ಅವರ ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ರಮೇಶ್ ಬಾಬು ಸಲಹೆ ನೀಡಿದ್ದಾರೆ.

  • ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ: ಪ್ರತಿಪಕ್ಷ ನಾಯಕ ಆರ್.ಅಶೋಕ

    ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ: ಪ್ರತಿಪಕ್ಷ ನಾಯಕ ಆರ್.ಅಶೋಕ

    ಚನ್ನಪಟ್ಟಣ: ಇದು ವ್ಯಕ್ತಿಗಳ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ, ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ ಎಂದು ಪ್ರತಿಪಕ್ಷ ‌ನಾಯಕ ಆರ್.ಅಶೋಕ ಹೇಳಿದರು.

    ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ವ್ಯಕ್ತಿ ಹೆಸರಲ್ಲಿ ಚುನಾವಣೆ ನಡೆಯುತ್ತಿಲ್ಲ. ಇದು ಎನ್‌ಡಿಎ ಹಾಗೂ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ. ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಜನರ ಅನುಕಂಪವಿದೆ. ಅವರು ಈ ಹಿಂದೆ ಸೋತಿದ್ದರು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ಜನರು ಗುರುತಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಲೂಟಿ ಮಾಡುತ್ತಲೇ ಇದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದಲಿತರ ಹಣ ಕೊಳ್ಳೆ ಹೊಡೆಯಲಾಗಿದೆ ಎಂದು ದೂರಿದರು.

    ಗ್ಯಾರಂಟಿಗಳಿಂದಾಗಿ ಮಣ್ಣು ಎತ್ತಿ ಹಾಕಲು ‌ಕೂಡ ಹಣವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 16 ತಿಂಗಳಿಂದ ರೈತರಿಗೆ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. ವಕ್ಫ್ ಬೋರ್ಡ್ ಮುಸ್ಲಿಮರ ಬೋರ್ಡ್ ಆಗಿ ಬದಲಾಗಿದ್ದು, ದೇವಸ್ಥಾನ, ಸ್ಮಶಾನ, ಶಾಲೆ, ರೈತರ ಭೂಮಿ ಎಂದು‌ ನೋಡದೆ ಎಲ್ಲ ಜಮೀನುಗಳನ್ನು ಕಬಳಿಸಲಾಗುತ್ತಿದೆ. ಸಚಿವ ಜಮೀರ್ ಅಹ್ಮದ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಜಮೀನು ಬರೆಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದರು.

    ನಾನು ಕೋಲಾರ, ಶ್ರೀರಂಗಪಟ್ಟಣಕ್ಕೂ ಹೋಗಿ ಪ್ರತಿಭಟನೆ ಮಾಡುತ್ತೇನೆ. ಶಾಲೆ, ದೇವಸ್ಥಾನಗಳ ಜಮೀನಿನ ಪಹಣಿಯಲ್ಲಿ ಸರ್ಕಾರದ ಜಾಗವೆಂದು ನಮೂದಿಸುವವರೆಗೆ ಹಾಗೂ ರೈತರ ಜಾಗವನ್ನು ರೈತರಿಗೆ ನೀಡುವವರೆಗೆ ಪ್ರತಿಭಟಿಸುತ್ತೇವೆ. ಮುಸ್ಲಿಮರು ನಮಗೆ ಮತ ಹಾಕಬೇಕೆಂದು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಮುಸ್ಲಿಮರ ಓಲೈಕೆ ಮಾಡಲು ಕಾಂಗ್ರೆಸ್ ಈ ತಂತ್ರ ಮಾಡಿದೆ. ದೇಶ ಉಳಿಸಿ, ರೈತರನ್ನು ಉಳಿಸಿ ಎಂದು ಬಿಜೆಪಿ ಹೋರಾಟ ಮಾಡುತ್ತಿದೆ. ಚನ್ನಪಟ್ಟಣದ ಜನರು ಎನ್‌ಡಿಎ ಬೆಂಬಲಿಸಿ, ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಬೇಕು ಎಂದರು.

  • ನಟ, ನಿರ್ದೇಶಕ ಗುರುಪ್ರಸಾದ್ ವಿಧಿವಶ; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ಬೆಂಗಳೂರು: ಕನ್ನಡ ಸಿನಿಲೋಕದ ಖ್ಯಾತ ನಟ, ನಿರ್ದೇಶಕ ಗುರುಪ್ರಸಾದ್ ವೇಳೆ ಧಿವಶರಾಗಿದ್ದಾರೆ. ಭಾನುವಾರ ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಮಠ, ಎದ್ದೇಳು ಮಂಜುನಾಥ ಸಹಿತ ಅನೇಕ ಸಿನಿಮಾಗಳ ಮೂಲಕ ಖ್ಯಾತಿಯಾಗಿದ್ದ ನಿರ್ದೇಶಕ 52 ವರ್ಷ ಹರೆಯದ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

    ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಅವರು ವಾಸವಿದ್ದರು. ಭಾನುವಾರ ಬೆಳಿಗ್ಗೆ ಅಪಾರ್ಟ್‌ಮೆಂಟ್‌ ಆವರಣದಲ್ಲಿ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ನಿವಾಸಿಗಳ ವಾಟ್ಸಪ್ ಗ್ರೂಪ್‌ನಲ್ಲಿ ಸಂದೇಶ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಶೋಧಿಸಿದಾಗ ಗುರುಪ್ರಸಾದ್ ವಾಸವಿದ್ದ ಫ್ಲಾಟ್‌ನಲ್ಲಿ ವಾಸನೆ ಬರುತ್ತಿದ್ದುದು ಗೊತ್ತಾಯಿತು. ಕೂಡಲೇ ಮನೆಯನ್ನು ಪರಿಶೀಲಿಸಿದಾಗ ಗುರುಪ್ರಸಾದ್ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

  • ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೂರು ದಿನ ಮಳೆ ಸಾಧ್ಯತೆ

    ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೂರು ದಿನ ಮಳೆ ಸಾಧ್ಯತೆ

    ಬೆಂಗಳೂರು: ರಾಜ್ಯದ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಸಹಿತ ಕರಾವಳಿ ಮಾಲೆನಾಡಿನ ಜಿಲ್ಲೆಗಳಲ್ಲಿ ನವೆಂಬರ್​ 6ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ತುಮಕೂರು, ಚಾಮರಾಜನಗರ, ಮಂಡ್ಯ, ಮೈಸೂರು, ಬೆಳಗಾವಿ, ಧಾರವಾಡ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲೂ ಮಳೆಯಾ ಮಳೆಯಾಗುವ ಸಾಧ್ಯತೆಗಳಿವೆ. ಕರ್ನಾಟಕದ 17ಕ್ಕೂ ಅಧಿಕ ಜಿಲ್ಲೆಗಳಲ್ಲಿ ನವೆಂಬರ್ 6ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ಸಿದ್ದಿಕಿ ರೀತಿ ಸಿಎಂ ಯೋಗಿ ಹತ್ಯೆಗೂ ಸಂಚು? ಬೆಚ್ಚಿ ಬೀಳಿಸಿದ ನಿಗೂಢ ಸಂದೇಶ

    ಸಿದ್ದಿಕಿ ರೀತಿ ಸಿಎಂ ಯೋಗಿ ಹತ್ಯೆಗೂ ಸಂಚು? ಬೆಚ್ಚಿ ಬೀಳಿಸಿದ ನಿಗೂಢ ಸಂದೇಶ

    ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 10 ದಿನಗಳಲ್ಲಿ ರಾಜೀನಾಮೆ ನೀಡದಿದ್ದರೆ ಬಾಬಾ ಸಿದ್ದಿಕ್ ಅವರಂತೆಯೇ ಹತ್ಯೆ ಮಾಡಲಾಗುವುದು ಎಂಬ ಸಂದೇಶ ಬಂದಿದೆ.

    ಅಕ್ಟೋಬರ್ 12 ರಂದು ದಸರಾ ಸಂದರ್ಭದಲ್ಲಿ ಪಟಾಕಿ ಸಿಡಿಸುತ್ತಿದ್ದಾಗ ಬಾಬಾ ಸಿದ್ದಿಕಿ ಅವರ ಮಗ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು. ಈ ಪ್ರಕರಣ ಬಗ್ಗೆ ತನಿಖೆ ಸಾಗಿರುವಾಗಲೇ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 10 ದಿನಗಳಲ್ಲಿ ರಾಜೀನಾಮೆ ನೀಡದಿದ್ದರೆ ಬಾಬಾ ಸಿದ್ದಿಕ್ ಅವರಂತೆಯೇ ಹತ್ಯೆ ಮಾಡಲಾಗುವುದು ಎಂಬ ಸಂದೇಶ ಮುಂಬೈ ಪೊಲೀಸರಿಗೆ ಸಿಕ್ಕಿದೆ. ಶನಿವಾರ ಸಂಜೆ ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಸೆಲ್‌ಗೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದೆ.

    ಈ ಬೆದರಿಕೆ ಸಂದೇಶ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದೇ ವೇಳೆ, ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.