Thursday, March 12

‘ಆಪರೇಷನ್ ಎಪಿಕ್ ಫ್ಯೂರಿ’: ಇಸ್ರೇಲ್‌ನಿಂದ ವ್ಯಾಪಕ ದಾಳಿ

ಜೆರುಸಲೇಮ್: ಇಸ್ರೇಲ್ ನಲ್ಲಿ ಇರಾನ್‌ನಿಂದ ಕ್ಷಿಪಣಿ ದಾಳಿ ಸಂಭವಿಸುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ ಕೆಲವೇ ನಿಮಿಷಗಳ ನಂತರ, ಇರಾನ್ ಮೇಲೆ ಹೊಸ “ವ್ಯಾಪಕ ಪ್ರಮಾಣದ ದಾಳಿಗಳ ಅಲೆ” ಪ್ರಾರಂಭಿಸಿರುವುದಾಗಿ ಇಸ್ರೇಲ್ ಮಿಲಿಟರಿ ತಿಳಿಸಿದೆ.

ಗುರುವಾರ ಮುಂಜಾನೆ ನಡೆದ ಈ ಬೆಳವಣಿಗೆಯಲ್ಲಿ, ಟೆಲ್ ಅವೀವ್ ನಿವಾಸಿಗಳು ಭಾರಿ ಸ್ಫೋಟಗಳ ಶಬ್ದವನ್ನು ಕೇಳಿದುದಾಗಿ ವರದಿ ಮಾಡಿದ್ದಾರೆ. ಇಸ್ರೇಲ್‌ನ ಸರ್ಕಾರಿ ಸ್ವಾಮ್ಯದ ಕಾನ್ ಟಿವಿ ಸುದ್ದಿ ಸಂಸ್ಥೆ ಹಲವಾರು ಪ್ರದೇಶಗಳಲ್ಲಿ ಶಿಲಾಖಂಡರಾಶಿಗಳು ಬಿದ್ದಿರುವುದಾಗಿ ತಿಳಿಸಿದೆ.

ಇಸ್ರೇಲ್‌ನ ತುರ್ತು ವೈದ್ಯಕೀಯ ಸೇವೆಯಾದ ಮ್ಯಾಗೆನ್ ಡೇವಿಡ್ ಅಡೋಮ್ (Magen David Adom) ತಂಡಗಳು ಕ್ಷಿಪಣಿ ದಾಳಿ ಅಥವಾ ಅದರ ತುಂಡುಗಳು ಬಿದ್ದಿರುವ ಸಾಧ್ಯತೆಯಿರುವ ಸ್ಥಳಗಳಿಗೆ ತೆರಳಿ ಗಾಯಾಳುಗಳನ್ನು ಹುಡುಕುತ್ತಿರುವುದಾಗಿ ತಿಳಿಸಿವೆ.

ಇದರ ಮೊದಲು ಬುಧವಾರ ರಾತ್ರಿ ಬೈರುತ್ ನಗರದ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ಭಾರಿ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಹೆಜ್ಬೊಲ್ಲಾ (Hezbollah) ಉಗ್ರಗಾಮಿ ಸಂಘಟನೆ ಉತ್ತರ ಇಸ್ರೇಲ್ ಮೇಲೆ ಹಲವು ಗಂಟೆಗಳ ಕಾಲ ರಾಕೆಟ್ ದಾಳಿಗಳನ್ನು ನಡೆಸಿದುದಾಗಿ ವರದಿಯಾಗಿದೆ.

ಇಸ್ರೇಲ್ ಮಿಲಿಟರಿ ಅಧಿಕಾರಿಗಳ ಪ್ರಕಾರ, ಹೆಜ್ಬೊಲ್ಲಾ ಸುಮಾರು 100 ರಾಕೆಟ್‌ಗಳು ಹಾಗೂ ಹಲವಾರು ಡ್ರೋನ್‌ಗಳನ್ನು ಉತ್ತರ ಇಸ್ರೇಲ್ ಕಡೆಗೆ ಹಾರಿಸಿದೆ. ಅದೇ ವೇಳೆ ಇರಾನ್ ಸಹ ಉತ್ತರ ಭಾಗ ಸೇರಿದಂತೆ ಇತರೆ ಪ್ರದೇಶಗಳತ್ತ ಹಲವಾರು ಕ್ಷಿಪಣಿಗಳನ್ನು ಉಡಾಯಿಸಿದೆ.

ಈ ದಾಳಿಗಳ ಪರಿಣಾಮವಾಗಿ ಕನಿಷ್ಠ ಇಬ್ಬರು ನಾಗರಿಕರು ಸಣ್ಣಪುಟ್ಟ ಗಾಯಗೊಂಡಿದ್ದಾರೆ ಎಂದು ಮ್ಯಾಗೆನ್ ಡೇವಿಡ್ ಅಡೋಮ್ ತಿಳಿಸಿದೆ.

ಇದರ ನಡುವೆ ಅಮೆರಿಕಾ–ಇಸ್ರೇಲ್ ಜಂಟಿ ಮಿಲಿಟರಿ ಕಾರ್ಯಾಚರಣೆಯಿಂದ ಆರಂಭವಾದ ಪ್ರಾದೇಶಿಕ ಸಂಘರ್ಷ ಈಗ 13ನೇ ದಿನಕ್ಕೆ ಕಾಲಿಟ್ಟಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದೇ ವೇಳೆ “ಆಪರೇಷನ್ ಎಪಿಕ್ ಫ್ಯೂರಿ (Operation Epic Fury)” ಕಾರ್ಯಾಚರಣೆಯ ಭಾಗವಾಗಿ ಅಮೆರಿಕಾ ಪಡೆಗಳು ಇರಾನ್ ಒಳಗೆ 5,500 ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ನಡೆಸಿವೆ ಎಂದು ಅಮೆರಿಕದ ಉನ್ನತ ಸೈನಿಕ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅಡ್ಮಿರಲ್ ಬ್ರಾಡ್ ಕೂಪರ್ (Admiral Brad Cooper), ಕಾರ್ಯಾಚರಣೆ ಮುಂದುವರಿಯುತ್ತಿದ್ದು ಬಹು ಕ್ಷೇತ್ರಗಳಲ್ಲಿ ದಾಳಿಗಳನ್ನು ತೀವ್ರಗೊಳಿಸಲಾಗಿದೆ ಎಂದು ಹೇಳಿದರು.

“ಇಲ್ಲಿಯವರೆಗೆ ವಿವಿಧ ನಿಖರ ಶಸ್ತ್ರಾಸ್ತ್ರ ವ್ಯವಸ್ಥೆಗಳ ಮೂಲಕ 60 ಕ್ಕೂ ಹೆಚ್ಚು ಹಡಗುಗಳು ಸೇರಿದಂತೆ 5,500 ಕ್ಕೂ ಹೆಚ್ಚು ಗುರಿಗಳನ್ನು ಹೊಡೆದಿದ್ದೇವೆ,” ಎಂದು ಅವರು ತಿಳಿಸಿದ್ದಾರೆ.

ಈ ಗುರಿಗಳಲ್ಲಿ ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ಸಾಮರ್ಥ್ಯಗಳು, ನೌಕಾ ಸಂಪತ್ತು ಮತ್ತು ರಕ್ಷಣಾ ಕೈಗಾರಿಕಾ ಮೂಲಸೌಕರ್ಯಗಳೂ ಸೇರಿವೆ ಎಂದು ಅವರು ವಿವರಿಸಿದರು.