Monday, March 23

ದಾವಣಗೆರೆ: ಸಿಎಂ–ಡಿಸಿಎಂ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ನಾಮಪತ್ರ

ದಾವಣಗೆರೆ: ಏಪ್ರಿಲ್ 9ರಂದು ನಡೆಯಲಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಈ ಹಿನ್ನೆಲೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರು ಇಂದು ನಾಮಪತ್ರ ಸಲ್ಲಿಸಿದರು.

ದಾವಣಗೆರೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತರಿದ್ದು ಬೆಂಬಲ ಸೂಚಿಸಿದರು. ಇದೇ ಸಂದರ್ಭದಲ್ಲಿ ಅಭ್ಯರ್ಥಿಯ ತಂದೆ ಮಲ್ಲಿಕಾರ್ಜುನ ಹಾಗೂ ತಾಯಿ ಪ್ರಭಾ ಮಲ್ಲಿಕಾರ್ಜುನ ಕೂಡ ಭಾಗವಹಿಸಿದ್ದರು.

ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವಾಗಿದ್ದರೂ, ಅಂತಿಮವಾಗಿ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಲಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ನಾವು ಸಮರ್ಥ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದೇವೆ. ನಾನೂ ನಾಮಪತ್ರ ಸಲ್ಲಿಕೆ ವೇಳೆ ಭಾಗಿಯಾಗಿದ್ದೇನೆ. ಬ್ಲಾಕ್ ಸಮಿತಿ ಅಧ್ಯಕ್ಷ ಅಯುಬ್ ಸಹ ಉಪಸ್ಥಿತರಿದ್ದರು” ಎಂದು ಹೇಳಿದರು.

“ನಮ್ಮ ಪಕ್ಷ ಎಲ್ಲರನ್ನು ಒಳಗೊಂಡಿರುವುದು. ಯಾವ ಶಾಸಕರು ನಿಧನರಾದರೂ ಅವರ ಕುಟುಂಬದವರಿಗೆ ಟಿಕೆಟ್ ನೀಡುವುದು ಕಾಂಗ್ರೆಸ್‌ನ ನೀತಿ. ಬಾಗಲಕೋಟೆಯಲ್ಲಿ ಮೇಟಿ ಅವರ ಮಗನಿಗೆ ಟಿಕೆಟ್ ನೀಡಿದ್ದೇವೆ, ದಾವಣಗೆರೆಯಲ್ಲಿ ಸಮರ್ಥ್ ಅವರಿಗೆ ಅವಕಾಶ ನೀಡಿದ್ದೇವೆ” ಎಂದು ಸಿಎಂ ಸ್ಪಷ್ಟಪಡಿಸಿದರು.