
ಬೆಂಗಳೂರು: ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಲ್ಲಿ ಕರ್ನಾಟಕ ಪೊಲೀಸರು ಪ್ರಮುಖ ಪಾತ್ರವಹಿಸಿದ್ದು, ದೇಶದ ಅತ್ಯುತ್ತಮ ಪೊಲೀಸ್ ವ್ಯವಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
ಬೆಂಗಳೂರಿನ ಕೋರಮಂಗಲದಲ್ಲಿರುವ ಕೆಎಸ್ಆರ್ಪಿ ಪರೇಡ್ ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಸೇವೆಯನ್ನು ಶ್ಲಾಘಿಸಿದರು.
1965ರ ಏಪ್ರಿಲ್ 2ರಂದು ಪೊಲೀಸ್ ಕಾಯ್ದೆ ಜಾರಿಗೆ ಬಂದ ದಿನವನ್ನು ಸ್ಮರಿಸಲು ಈ ದಿನಾಚರಣೆ ಆಚರಿಸಲಾಗುತ್ತದೆ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಅವಿರತವಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು.
ಇಂಡಿಯಾ ಜಸ್ಟೀಸ್ ರಿಪೋರ್ಟ್ ಪ್ರಕಾರ, ನ್ಯಾಯವನ್ನು ನಾಗರಿಕರಿಗೆ ತಲುಪಿಸುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಇದರಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ತರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ದೇಶದ ಮೂರನೇ ಅತ್ಯುತ್ತಮ ಠಾಣೆ ಎಂದು ಕೇಂದ್ರ ಗೃಹ ಸಚಿವಾಲಯ ಗುರುತಿಸಿರುವುದನ್ನು ಉಲ್ಲೇಖಿಸಿದ ಅವರು, ರಾಜ್ಯದ ಎಲ್ಲಾ ಠಾಣೆಗಳು ಇದೇ ಮಟ್ಟ ತಲುಪಬೇಕು ಎಂದು ಆಶಿಸಿದರು.
ಮಾದಕ ದ್ರವ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಸಾವಿರಾರು ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ ಅವರು, ರಾಜ್ಯವನ್ನು ಡ್ರಗ್-ಫ್ರೀ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು.
ಸೈಬರ್ ಅಪರಾಧವನ್ನು ತಡೆಗಟ್ಟಲು ಕರ್ನಾಟಕವು ವಿಶೇಷ ಸೈಬರ್ ಕಮಾಂಡ್ ಘಟಕವನ್ನು ಸ್ಥಾಪಿಸಿರುವ ಮೊದಲ ರಾಜ್ಯವಾಗಿದ್ದು, ಇದರಿಂದ ಅಪರಾಧ ನಿಯಂತ್ರಣಕ್ಕೆ ನೆರವಾಗಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ದಕ್ಷತೆ ಹೆಚ್ಚಿಸಲು ನಿರಂತರ ತರಬೇತಿ ಅಗತ್ಯವಿದೆ ಎಂದು ಒತ್ತಿಹೇಳಿದ ಅವರು, 8,000 ಕಾನ್ಸ್ಟೆಬಲ್ ಹಾಗೂ 600 ಪಿಎಸ್ಐ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ಜಾರಿಗೆ ತರಲಾಗುವುದು ಎಂದು ಪರಮೇಶ್ವರ ತಿಳಿಸಿದ್ದಾರೆ.
