Friday, April 10

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ, ದಾಖಲೆ ಸಾಧನೆ

ಬೆಂಗಳೂರು: 2025-26 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ವಿದ್ಯಾರ್ಥಿಗಳು ದಾಖಲೆ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಒಟ್ಟು ಶೇ.86ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷದಿಗಿಂತ ಗಮನಾರ್ಹ ಏರಿಕೆ ಕಂಡಿದೆ.

ರಾಜ್ಯಾದ್ಯಂತ 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ ಸುಮಾರು 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದರು.

ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ 600ಕ್ಕೆ 600 ಅಂಕಗಳನ್ನು ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡು ವಿಶೇಷ ಸಾಧನೆ ಮಾಡಿದ್ದಾರೆ.

ಈ ವರ್ಷದ ಪರೀಕ್ಷೆಗಳು ಫೆಬ್ರವರಿ 28ರಿಂದ ಮಾರ್ಚ್ 12ರವರೆಗೆ ರಾಜ್ಯದ 1217 ಕೇಂದ್ರಗಳಲ್ಲಿ ನಡೆದಿದ್ದು, 5174 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸೈನ್ಸ್ ವಿಭಾಗದಲ್ಲಿ 2.92 ಲಕ್ಷ, ವಾಣಿಜ್ಯದಲ್ಲಿ 2.11 ಲಕ್ಷ ಮತ್ತು ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು https://karresults.nic.in
ವೆಬ್‌ಸೈಟ್ ಮೂಲಕ ವೀಕ್ಷಿಸಬಹುದಾಗಿದೆ. ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕ ನಮೂದಿಸಿದರೆ ಅಂಕಪಟ್ಟಿ ಲಭ್ಯವಾಗುತ್ತದೆ.

ಇದೇ ಮೊದಲ ಬಾರಿಗೆ ಡಿಜಿಲಾಕರ್ ಮೂಲಕವೂ ಫಲಿತಾಂಶ ಲಭ್ಯವಾಗಿದ್ದು, ವೆಬ್‌ಸೈಟ್‌ನಲ್ಲಿ ಸರ್ವರ್ ಸಮಸ್ಯೆ ಎದುರಾದರೆ ವಿದ್ಯಾರ್ಥಿಗಳು ಡಿಜಿಲಾಕರ್ ಮೂಲಕವೇ ಸುಲಭವಾಗಿ ತಮ್ಮ ಮಾರ್ಕ್ಸ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮೊಬೈಲ್ ನಲ್ಲಿ ‘DigiLocker’ ಡೌನ್‌ಲೋಡ್ ಮಾಡಬಹುದು ಅಥವಾ ನೇರವಾಗಿ digilocker.gov.in ವೆಬ್‌ಸೈಟ್‌ಗೂ ಭೇಟಿ ನೀಡಬಹುದು. ಕರ್ನಾಟಕ ಒನ್ ಮೊಬೈಲ್ ಆಪ್ ಹಾಗೂ SMS ಮೂಲಕವೂ ಫಲಿತಾಂಶದ ಮಾಹಿತಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.