Tuesday, March 17

ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದುಃಖ

ಬೆಂಗಳೂರು: ಹಿರಿಯ ರಾಜಕಾರಣಿಗಳು, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದುಃಖ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣಗಳಲ್ಲಿ ಸಕ್ರಿಯರಾಗಿದ್ದ ಅವರು ಶಾಸಕರಾಗಿ, ಸಚಿವರಾಗಿ ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಸಹಕಾರ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ ಕೂಡ ಉತ್ತಮ ಸೇವೆ ಸಲ್ಲಿಸಿದ್ದರು ಎಂದವರು ನೆನಪಿಸಿದ್ದಾರೆ.

ವೈಯಕ್ತಿಕವಾಗಿ ಕೂಡ ಅವರೊಂದಿಗೆ ಅತ್ಯಂತ ಗೌರವದ ಒಡನಾಟ ಹೊಂದಿದ್ದು, ಅಭಿವೃದ್ಧಿ ಕಾರ್ಯಗಳು, ಸಮಾಜದ ಹಿತರಕ್ಷಣೆ ಇತ್ಯಾದಿ ಹಲವಾರು ವಿಷಯಗಳ ಕುರಿತು ಅವರೊಂದಿಗೆ ನಡೆಸಿದ್ದ ಚರ್ಚೆ, ಸಮಾಲೋಚನೆಗಳನ್ನು ನಾನೆಂದಿಗೂ ಮರೆಯುವುದು ಸಾಧ್ಯವಿಲ್ಲ. ಅವರ ನಿಧನದಿಂದ ರಾಜ್ಯ ರಾಜಕಾರಣದ ಒಂದು ಸುದೀರ್ಘ ಮತ್ತು ಸಜ್ಜನಿಕೆಯ ಅಧ್ಯಾಯ ಅಂತ್ಯಗೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ದೇವರು ನೀಡಲಿ ಎಂದು ಬಿಎಸ್ವೈ ಪ್ರಾಥಿಸಿದ್ದಾರೆ.