Saturday, December 6

ಮಾಲೂರು ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ಆಯ್ಕೆ ಅಸಿಂಧು; ಹೈಕೋರ್ಟ್‌ ತೀರ್ಪು

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ್ದ ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ಅವರ ಆಯ್ಕೆಯನ್ನು ಹೈಕೋರ್ಟ್‌ ಅಸಿಂಧು ಎಂದು ಘೋಷಿಸಿದೆ. ಮಹತ್ವದ ತೀರ್ಪು ಪ್ರಕಟಿಸಿರುವ ಹೈಕೋರ್ಟ್, ಮತಗಳ ಮರು ಎಣಿಕೆ ಮಾಡುವಂತೆ ನಿರ್ದೇಶನ ನೀಡಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಂಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಅವರ ವಿರುದ್ಧ ಕೇವಲ 248 ಮತಗಳ ಅಂತರದಿಂದ ಗೆದ್ದಿದ್ದರು. ಹೀಗಾಗಿ ಮತ ಎಣಿಕೆ ವೇಳೆ ಲೋಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಆರೋಪಿಸಿದ್ದರು. ಈ ಸಂಬಂಧದ ತಕರಾರು ಕುರಿತಂತೆ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಿದೆ. ನಂಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಮಂಜುನಾಥಗೌಡ ಅವರ ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಜಿಲ್ಲಾ ಚುನಾವಣಾ ಅಧಿಕಾರಿ ಮತ ಎಣಿಕೆಯ ವಿಡಿಯೋ ಸಲ್ಲಿಸಿಲ್ಲ ಎಂಬ ಆರೋಪವನ್ನೂ ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾ ಚುನಾವಣಾಧಿಕಾರಿ ವಿರುದ್ಧ ಕ್ರಮಕ್ಕೆ ಸೂಚಿಸಿ ನಾಲ್ಕು ವಾರದಲ್ಲಿ ಮರು ಮತ ಎಣಿಕೆ ನಡೆಸಲು ಆದೇಶಿಸಿದೆ.