Tuesday, March 24

ಯುಎಸ್–ಇರಾನ್ ವಿರಾಮದ ಒಳಮರ್ಮ ಬಗ್ಗೆ ಚರ್ಚೆ

ವಾಷಿಂಗ್ಟನ್: ಇರಾನ್ ಮೇಲಿನ ಯೋಜಿತ ದಾಳಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರದ ಹಿಂದೆ ಗುಪ್ತ (ಬ್ಯಾಕ್‌ಚಾನೆಲ್) ರಾಜತಾಂತ್ರಿಕ ಮಾತುಕತೆಗಳು ಪ್ರಮುಖ ಪಾತ್ರವಹಿಸಿವೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಸಂಘರ್ಷವನ್ನು ತಣಿಸಲು ಈಜಿಪ್ಟ್, ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ದೇಶಗಳ ಅಧಿಕಾರಿಗಳು ಮುಚ್ಚಿದ ಬಾಗಿಲಿನ ಹಿಂದೆ ಮಾತುಕತೆ ನಡೆಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶ್ವೇತಭವನ, ಯಾವುದೇ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದೆ. “ಇವು ಸೂಕ್ಷ್ಮ ರಾಜತಾಂತ್ರಿಕ ಚರ್ಚೆಗಳು. ಅಮೆರಿಕ ಮಾಧ್ಯಮಗಳ ಮೂಲಕ ಮಾತುಕತೆ ನಡೆಸುವುದಿಲ್ಲ” ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ.

ಈ ಮಧ್ಯೆ, ಹಾರ್ಮುಜ್ ಜಲಸಂಧಿ ಮತ್ತೆ ತೆರೆಯಲು ಇರಾನ್‌ಗೆ ಟ್ರಂಪ್ ನೀಡಿದ್ದ 48 ಗಂಟೆಗಳ ಗಡುವು ಮುಗಿಯುವ ಹಂತದಲ್ಲಿದ್ದುದರಿಂದ ಪರಿಸ್ಥಿತಿ ತೀವ್ರಗೊಂಡಿತ್ತು. ಈ ಗಡುವು ಇರಾನ್‌ನ ವಿದ್ಯುತ್ ಮೂಲಸೌಕರ್ಯಗಳ ಮೇಲೆ ದಾಳಿಯ ಭೀತಿಯನ್ನು ಹೆಚ್ಚಿಸಿತ್ತು.

ವರದಿ ಪ್ರಕಾರ, ಅರಬ್ ರಾಷ್ಟ್ರಗಳ ಅಧಿಕಾರಿಗಳು ಇರಾನ್ ನಾಯಕತ್ವದ ಒಳವಲಯದೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದು, ಮಾತುಕತೆಗಳಿಗೆ ಅವಕಾಶ ಕಲ್ಪಿಸಲು ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಮಾರ್ಗಗಳನ್ನು ಹುಡುಕಿದ್ದಾರೆ.

ಒಮಾನ್ ಸಹ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮಧ್ಯವರ್ತಿತ್ವ ವಹಿಸಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಾಗಣೆಗೆ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದೆ.

ಇನ್ನೊಂದೆಡೆ, ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಅಮೆರಿಕ ಮತ್ತು ಇರಾನ್ ಮಧ್ಯವರ್ತಿಗಳ ಮೂಲಕ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದರೂ, ನೇರ ಮಾತುಕತೆಗಳ ಲಕ್ಷಣಗಳು ಕಾಣಿಸಿಲ್ಲ. ಇರಾನ್ ಅಧಿಕಾರಿಗಳು ಮಾತುಕತೆ ನಡೆಯುತ್ತಿರುವುದನ್ನು ತಳ್ಳಿಹಾಕಿದ್ದಾರೆ.

ಆದರೆ, ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಭದ್ರತಾ ಭರವಸೆಗಳಂತಹ ಪ್ರಮುಖ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಮುಂದುವರಿದಿರುವುದರಿಂದ ತಕ್ಷಣದ ಒಪ್ಪಂದ ಸಾಧ್ಯತೆ ಕುರಿತು ಮಧ್ಯವರ್ತಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ತಟಸ್ಥ ರಾಷ್ಟ್ರಗಳಾದ ಪಾಕಿಸ್ತಾನ ಅಥವಾ ಟರ್ಕಿಯಲ್ಲಿ ಸಭೆ ನಡೆಸುವ ಕುರಿತು ಪ್ರಾಥಮಿಕ ಚರ್ಚೆಗಳು ನಡೆದಿದ್ದರೂ, ಯಾವುದೇ ಸಭೆ ಇನ್ನೂ ದೃಢಪಟ್ಟಿಲ್ಲ.

ಈ ಸಂಪರ್ಕ ಕಾರ್ಯಾಚರಣೆಯಲ್ಲಿ ಅಮೆರಿಕದ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.