Saturday, December 6

ರಾಜ್ಯ ಜಲಾನಯನ ಅಭಿವೃದ್ಧಿ ಇಲಾಖೆ ಇತರೆ ರಾಜ್ಯಗಳಿಗೆ ಮಾದರಿ: ಚಲುವರಾಯಸ್ವಾಮಿ

ಬೆಂಗಳೂರು: ಹವಾಮಾನ ಬದಲಾವಣೆ, ಭೂಕ್ಷಯ ಮತ್ತು ಶಾಶ್ವತ ಜಲಾನಯನ ನಿರ್ವಹಣೆಗೆ ಸಂಬಂಧಿಸಿದ ಜ್ಞಾನ ಮತ್ತು ಅನುಭವ ವಿನಿಮಯಕ್ಕೆ ಜಾಗತಿಕ ತಜ್ಞರು, ಸಂಶೋಧಕರು ಮತ್ತು ವಿಜ್ಞಾನಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಮೂಲಕ ರೈತರ ಹಾಗೂ ಕೃಷಿ ಅಭಿವೃದ್ಧಿಗೆ ಪೂರಕವಾದ ನಿರ್ಣಯಗಳನ್ನು ಕೈಗೊಳ್ಳುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿಯವರು ಕರೆ ನೀಡಿದ್ದಾರೆ.

ಜಲಾನಯನ ಅಭಿವೃದ್ಧಿ ಇಲಾಖೆ, ಕೇಂದ್ರದ ಭೂ ಸಂಪನ್ಮೂಲ ಇಲಾಖೆ, ವಿಶ್ವ ಬ್ಯಾಂಕ್ ಹಾಗೂ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಮೂರು ದಿನಗಳ ಜಲಾನಯನ ಸ್ಥಿತಿಸ್ಥಾಪಕತ್ವ, ವಿಜ್ಞಾನ ಸುಸ್ಥಿರತೆ ಮತ್ತುಸಮಾಜವನ್ನು ಸಂಯೋಜಿಸುವ ಕುರಿತ ಅಂತರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ಚಲುವರಾಯಸ್ವಾಮಿ, ಕಳೆದ ನಾಲ್ಕು ದಶಕಗಳಿಂದ ಜಲಾನಯನ ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂದರು. ವಿಶ್ವಬ್ಯಾಂಕ್ REWARD ಕಾರ್ಯಕ್ರಮದಡಿ ನಡೆಯುತ್ತಿರುವ LRI ಆಧಾರಿತ ಜಲಾನಯನ ಅಭಿವೃದ್ಧಿಯಿಂದ ರಾಜ್ಯದ ಸ್ಥೈರ್ಯವನ್ನು ಹೆಚ್ಚಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಭೂಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ನಿತಿನ್ ಕಾಡೆ ಮಾತನಾಡಿ, ಯಶಸ್ವಿ ಜಲಾನಯನ ಅಭಿವೃದ್ಧಿಯ ಎರಡುಸ್ತಂಭಗಳು—ತಾಂತ್ರಿಕ ಸಾಮರ್ಥ್ಯ ಮತ್ತು ಬಲವಾದ ಆಡಳಿತ ಎಂದು ಹೇಳಿದರು. REWARD ಕಾರ್ಯಕ್ರಮವು ದೇಶವ್ಯಾಪಿ PMKSY ಕಾರ್ಯಕ್ರಮದಲ್ಲಿ ವಿಸ್ತರಿಸಲು ಅಗತ್ಯವಾದ ತಾಂತ್ರಿಕ ಬಲವನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು. ಸ್ಥಳೀಯ ಸಮುದಾಯಗಳು ಮತ್ತು ಸಂಸ್ಥೆಗಳನ್ನು ಬಲಪಡಿಸು ಮೂಲಕ ಅಭಿವೃದ್ಧಿ ಗೆ ಒತ್ತು ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.

ವಿಶ್ವ ಬ್ಯಾಂಕಿನ ಮುಖ್ಯ ಕೃಷಿ ತಜ್ಞ ಆಂಡ್ರೂ ವುಡ್ ಲ್ಯಾಂಡ್ ಮಾತನಾಡಿ, ಕರ್ನಾಟಕದಲ್ಲಿ REWARD ಕಾರ್ಯಕ್ರಮವು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರುವುದಕ್ಕೆ ಮೆಚ್ಚಿ, ಇತರ ರಾಜ್ಯಗಳಿಗೆ ಕರ್ನಾಟಕ ಮಾದರಿಯಾಗಿದೆ ಎಂದು ಹೇಳಿದರು.

ಸಮ್ಮೇಳನದಲ್ಲಿ ಇಥಿಯೋಪಿಯಾ, ನೈಜೀರಿಯಾ, ಕಾಂಗೋ, ಕೆನಡಾ, ನೈರೋಬಿ, ಪ್ರಾನ್ಸ್, ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ದೇಶದ 24 ರಾಜ್ಯಗಳ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳ ನೋಡಲ್ ಎಜೆನ್ಸಿಗಳ ಮುಖ್ಯ ಕಾರ್ಯನಿರ್ವಹಕರು,ಮತ್ತು ನಿರ್ದೇಶಕರು, ಕರ್ನಾಟಕ ಜಲ ಸಂರಕ್ಷಣಾ ಮತ್ತು ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಸುರೇಶ್, ಸೇರಿದಂತೆ ಗಣ್ಯರು ಭಾಗವಹಿಸಿದ್ದರು.