Saturday, December 6

ರಾಜ್ಯ ಸರ್ಕಾರದ ಶೇ.63 ರಷ್ಟು ಭ್ರಷ್ಟಾಚಾರ: ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ಶೇ.63ರಷ್ಟಿದೆ ಎಂಬ ಉಪಲೋಕಾಯುಕ್ತ ಬಿ. ವೀರಪ್ಪ ಅವರ ಹೇಳಿಕೆ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ವಿರುದ್ಧ ಬಿಜೆಪಿ ಟೀಕಾಸ್ತ್ರ ಪ್ರಯೋಗಿಸಿದೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, “ಇದು ಆಡಳಿತಕ್ಕೆ ಅವಮಾನ. ಸರ್ಕಾರಕ್ಕೆ ಸ್ವಾಭಿಮಾನ ಇದ್ದರೆ ವಿಸರ್ಜಿಸಲಿ. ಸಿಬಿಐ ತನಿಖೆಗೆ ಒಪ್ಪಿಗೆ ನೀಡಲಿ” ಎಂದು ಹೇಳಿದರು.

“ಕಮಿಷನ್‌ಗಳಲ್ಲಿ ಕರ್ನಾಟಕ ಎಟಿಎಂ” ಎಂದು ಅಶೋಕ ಆರೋಪಿಸಿದರು. ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ಹಣ ದುರುಪಯೋಗ, ಭೋವಿ ನಿಗಮದಲ್ಲಿ ಏಕರೆಗೆ ₹25 ಲಕ್ಷ ಕಮಿಷನ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಿವೇಶನ ಹಂಚಿಕೆ, ಬಾರ್ ಲೈಸೆನ್ಸ್‌ಗೆ ₹20 ಲಕ್ಷ ಬೇಡಿಕೆ, ಟ್ರಾನ್ಸ್‌ಫಾರ್ಮರ್‌ಗಳಲ್ಲಿ ₹90 ಕೋಟಿ ಹಗರಣ ನಡೆದಿದೆ ಎಂದು ಅಶೋಕ್ ಗಮನಸೆಳೆದರು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.