Saturday, December 6

ವಯಾಗ್ರ ಮಾರಾಟ ದಂಧೆ; ನಕಲಿ ಕಾಲ್‌ಸೆಂಟರ್ ಪತ್ತೆ, 8 ಮಂದಿ ಬಂಧನ

ಮುಂಬೈ: ಅಮೆರಿಕದ ನಾಗರಿಕರಿಗೆ ನಕಲಿ ವಯಾಗ್ರ ಸೇರಿದಂತೆ ನಿಯಂತ್ರಿತ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ಅಂಟರ್‌ನ್ಯಾಷನಲ್ ನಕಲಿ ಕಾಲ್‌ಸೆಂಟರ್‌ ಮೇಲೆ ಮುಂಬೈ ಅಪರಾಧ ಶಾಖೆ ದಾಳಿ ನಡೆಸಿ, ಎಂಟು ಮಂದಿಯನ್ನು ಬಂಧಿಸಿದೆ. ಪ್ರಮುಖ ಆರೋಪಿ ಸೇರಿದಂತೆ ಇನ್ನಿಬ್ಬರು ಪರಾರಿಯಾಗಿದ್ದಾರೆ.

ಜೋಗೇಶ್ವರಿ (ಪಶ್ಚಿಮ)ಯ ಅಂಬೋಲಿ ಪ್ರದೇಶದ ಎಸ್‌.ವಿ.ರಸ್ತೆಯ ಕೆವ್ನಿಪಾದದಲ್ಲಿ “ಟೀಂ ಗ್ರ್ಯಾಂಡ್ 9 ಸೆಕ್ಯುರಿಟಿ ಸರ್ವೀಸಸ್ ಎಲ್‌ಎಲ್‌ಪಿ” ಹೆಸರಿನಲ್ಲಿ ಕಳೆದ ಆರು–ಏಳು ತಿಂಗಳಿಂದ ಕಾರ್ಯಾಚರಿಸುತ್ತಿದ್ದ ಈ ಕೇಂದ್ರದಲ್ಲಿ ನೌಕರರು ಯುಎಸ್ ಮೂಲದ ಟೆಲಿಮಾರ್ಕೆಟರ್‌ಗಳಂತೆ ನಟಿಸಿ, ಔಷಧ ಕಂಪನಿಗಳ ಪ್ರತಿನಿಧಿಗಳೆಂದು ಹೇಳಿಕೊಂಡು ಅಮೆರಿಕನ್ನರ ಖಾಸಗಿ ಡೇಟಾವನ್ನು ಬಳಸಿ ವಂಚನೆ ನಡೆಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಮೊಹಮ್ಮದ್ ಆಮಿರ್ ಇಕ್ಬಾಲ್ ಶೇಖ್ (40), ಮಹಿರ್ ಇಕ್ಬಾಲ್ ಪಟೇಲ್ (26), ಮೊಹಮ್ಮದ್ ಶಬೀಬ್ ಶೇಖ್ (26), ಮೊಹಮ್ಮದ್ ಅಯಾಜ್ ಶೇಖ್ (26), ಆಡಮ್ ಎಹ್ಸಾನುಲ್ಲಾ ಶೇಖ್ (32), ಆರ್ಯನ್ ಖುರೇಷಿ (19), ಅಮಾನ್ ಶೇಖ್ (19) ಮತ್ತು ಹಶ್ಮತ್ ಜರಿವಾಲಾ (29) ಎಂದು ಗುರುತಿಸಲಾಗಿದೆ.

ಮುಖ್ಯ ಆರೋಪಿ ಮುಜಾಫರ್ ಶೇಖ್ (43) ಮತ್ತು ಆಮಿರ್ ಮನಿಯಾರ್ ಸೇರಿ ಕೆಲವರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಬಂಧಿತರನ್ನು ಗುರುವಾರ ಎಸ್ಪ್ಲನೇಡ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿದೇಶಿ ದತ್ತಾಂಶ ಖರೀದಿ ಮತ್ತು ಹಣ ವರ್ಗಾವಣೆ ಮಾರ್ಗಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಅವರನ್ನು ಡಿಸೆಂಬರ್ 10ರವರೆಗೆ ಪೊಲೀಸ್ ಕಸ್ಟಡಿಗೆ ಹಸ್ತಾಂತರಿಸಲಾಗಿದೆ.

ಸ್ಥಳದಿಂದ ಲ್ಯಾಪ್‌ಟಾಪ್‌ಗಳು, ಹೆಡ್‌ಸೆಟ್‌ಗಳು, ಪೆನ್‌ಡ್ರೈವ್‌ಗಳು, ಹಾರ್ಡ್ ಡ್ರೈವ್‌ಗಳು ಸೇರಿದಂತೆ ಹಲವು ಡಿಜಿಟಲ್ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇವುಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಒಳಪಡಿಸಲಾಗಲಿದೆ. ವಂಚನೆಗೆ ಒಳಗಾದ ವಿದೇಶಿ ಪ್ರಜೆಗಳ ಸಂಖ್ಯೆ ಸೇರಿದಂತೆ ಸಂಪೂರ್ಣ ಜಾಲವನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.

“ಸುಳಿವಿನ ಮೇರೆಗೆ ದಾಳಿ ನಡೆಸಿದ್ದು, ಆರೋಪಿಗಳು ನಕಲಿ ಕಾಲ್‌ಸೆಂಟರ್ ನಡೆಸಿ ಅಮೆರಿಕನ್ನರನ್ನು ಗುರಿಯಾಗಿಸಿಕೊಂಡಿರುವುದು ಬಹಿರಂಗವಾಗಿದೆ. ಪರಾರಿಯಾದವರ ಪತ್ತೆಗೆ ಶೋಧ ಮುಂದುವರಿದಿದೆ” ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.