Thursday, March 12

ಸಿಲಿಂಡರ್‌ಗಳನ್ನು ಮನೆಗಳಿಗೆ ವಿತರಿಸಲಾಗುವುದು; ಕೇಂದ್ರದ ಭರವಸೆ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಕರ್ನಾಟಕದಲ್ಲಿ ಎಲ್‌ಪಿಜಿ (LPG) ಸಿಲಿಂಡರ್ ಕೊರತೆ ಉಂಟಾಗಿರುವುದರಿಂದ ಹಲವು ಜಿಲ್ಲೆಗಳಲ್ಲಿ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ನಾಗರಿಕರಿಗೆ ಬುಕಿಂಗ್ ಕುರಿತು ಭಯಪಡಬೇಕಾಗಿಲ್ಲ ಎಂದು ಭರವಸೆ ನೀಡಿದೆ. ಮುಂದಿನ ಎರಡು ದಿನಗಳಲ್ಲಿ ಸಿಲಿಂಡರ್‌ಗಳನ್ನು ಮನೆಗಳಿಗೆ ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿಲಿಂಡರ್ ಸಿಗದೆ ಹೋಟೆಲ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ಹೋಟೆಲ್‌ಗಳು ಕಾರ್ಯಾಚರಣೆ ಸ್ಥಗಿತಗೊಳಿಸುವ ಪರಿಸ್ಥಿತಿಗೆ ತಲುಪಿದ್ದು, ಕೆಲವು ಹೋಟೆಲ್‌ಗಳು ಮೆನುವಿನ ಐಟಂಗಳನ್ನು ಗಣನೀಯವಾಗಿ ಕಡಿಮೆ ಮಾಡಿವೆ.

ಇದರಿಂದ ಹೋಟೆಲ್‌ಗಳನ್ನು ಅವಲಂಬಿಸಿರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಆಹಾರಕ್ಕಾಗಿ ಸಂಕಷ್ಟ ಎದುರಿಸುತ್ತಿರುವುದು ಕಂಡುಬಂದಿದೆ.

ಈ ನಡುವೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಸಿಲಿಂಡರ್ ಪೂರೈಕೆ ಶೀಘ್ರ ಸಾಮಾನ್ಯವಾಗಲಿದೆ ಎಂದು ತಿಳಿಸಿದೆ. ದೇಶದಲ್ಲಿ LPG ಉತ್ಪಾದನೆಯನ್ನು ಸುಮಾರು 25 ಶೇಕಡಾ ಹೆಚ್ಚಿಸಲಾಗಿದ್ದು, ಜೊತೆಗೆ ಪರ್ಯಾಯ ಮೂಲಗಳಿಂದ ಎಲ್‌ಎನ್‌ಜಿ (LNG) ಸರಕುಗಳನ್ನು ಖರೀದಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.