
ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ ವಿಧಾನಸಭೆಯಲ್ಲಿ ತೀವ್ರಗೊಂಡಿದ್ದ ವೇಳೆ, ಹೈಕಮಾಂಡ್ ತೀರ್ಮಾನಿಸಿದಾಗ ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಚರ್ಚೆಯ ವೇಳೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರನ್ನು ಉದ್ದೇಶಿಸಿ, “ನಿಮಗೆ ಸಿಎಂ ಆಗುವ ಆಸೆ ಇಲ್ಲವಾ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದಕ್ಕೆ ಅಶೋಕ್ ನಕ್ಕು ಪ್ರತಿಕ್ರಿಯಿಸಿದ ಘಟನೆ ಸಭೆಯಲ್ಲಿ ಹಾಸ್ಯ ವಾತಾವರಣ ಮೂಡಿಸಿತು.
ಇದನ್ನು ಮುಂದುವರೆಸಿದ ಸಿಎಂ, “ಅಶೋಕ್ ಆದರೂ ಸಿಎಂ ಆಗಲಿ, ಬೆಲ್ಲದ ಆದರೂ ಸಿಎಂ ಆಗಲಿ, ಅಶ್ವತ್ ನಾರಾಯಣ ಸಿಎಂ ಆದರೂ ಸಂತೋಷವೇ. ಆದರೆ ಬಿ.ವೈ. ವಿಜಯೇಂದ್ರ ನಿಮಗೆ ಅವಕಾಶ ಕೊಡಲ್ಲ” ಎಂದು ಬಿಜೆಪಿ ನಾಯಕರ ಕಾಲು ಎಳೆದರು.
ಈ ವೇಳೆ ಶಾಸಕ ಸುನಿಲ್ ಕುಮಾರ್ “ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ನೀವು ನೇರವಾಗಿ ಹೇಳಲಿಲ್ಲ” ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಹೈಕಮಾಂಡ್ ಯಾವಾಗ ತೀರ್ಮಾನ ಮಾಡುತ್ತದೆಯೋ ಆಗ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ” ಎಂದು ಪುನರುಚ್ಚರಿಸಿದರು.
ರಾಜ್ಯದಲ್ಲಿ 224 ಶಾಸಕರು ಇದ್ದು, ಪ್ರತಿಯೊಬ್ಬರಿಗೂ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ. ನಮ್ಮ ಪಕ್ಷದಲ್ಲೇ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಹಲವರಿಗೆ ಸಿಎಂ ಆಗುವ ಸಾಮರ್ಥ್ಯವಿದೆ. ಆದರೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
