Sunday, March 29

ಅಮೆರಿಕದಲ್ಲಿ ‘ರಾಜರಿಲ್ಲ’ ಘೋಷಣೆ; ಟ್ರಂಪ್ ವಿರುದ್ಧ ಲಕ್ಷಾಂತರ ಜನರ ಪ್ರತಿಭಟನೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ಹಾಗೂ ವಿದೇಶಾಂಗ ನೀತಿಗಳ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದ್ದು, “ರಾಜರಿಲ್ಲ” ಎಂಬ ಘೋಷಣೆಯಡಿ ಲಕ್ಷಾಂತರ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ದೇಶದ ವಿವಿಧ ನಗರಗಳಲ್ಲಿ 3,000 ಕ್ಕೂ ಹೆಚ್ಚು ಪ್ರತಿಭಟನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದು ಸಂಘಟಿತ ರಾಷ್ಟ್ರೀಯ ಚಳುವಳಿಯ ರೂಪ ಪಡೆದಿದೆ ಎಂದು ಆಯೋಜಕರು ತಿಳಿಸಿದ್ದಾರೆ. Minnesota State Capitol ನಲ್ಲಿ ನಡೆದ ಪ್ರಮುಖ ರ್ಯಾಲಿಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಇದು ದಿನದ ಅತಿದೊಡ್ಡ ಸಮಾವೇಶಗಳಲ್ಲಿ ಒಂದಾಗಿದೆ.

ಪ್ರತಿಭಟನಾಕಾರರು ಮೆರವಣಿಗೆ ನಡೆಸಿ, ಘೋಷಣೆಗಳನ್ನು ಕೂಗಿ, ಟ್ರಂಪ್ ಆಡಳಿತದ ವಿರುದ್ಧ ಫಲಕಗಳನ್ನು ಪ್ರದರ್ಶಿಸಿದರು. ವಿಶೇಷವಾಗಿ ವಲಸೆ ಜಾರಿ ಕ್ರಮಗಳು ಹಾಗೂ ಇರಾನ್ ಸಂಘರ್ಷದಲ್ಲಿ ಅಮೆರಿಕದ ಪಾತ್ರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು.

ಮಿನ್ನೇಸೋಟದ ಸೇಂಟ್ ಪಾಲ್‌ನಲ್ಲಿ ನಡೆದ ಕೇಂದ್ರ ರ್ಯಾಲಿಯಲ್ಲಿ ಗವರ್ನರ್ ಟಿಮ್ ವಾಲ್ಜ್ ಭಾಗವಹಿಸಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಖ್ಯಾತ ಸಂಗೀತಗಾರ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಕಾರ್ಯಕ್ರಮಕ್ಕೆ ಹಾಜರಾಗಿ ಸಾಂಸ್ಕೃತಿಕ ಬೆಂಬಲ ಸೂಚಿಸಿದರು.

ಇನ್ನೂ ಸೆನೆಟರ್ ಬರ್ನಿ ಸ್ಯಾಂಡರ್ಸ್, ಗಾಯಕಿ ಜೋನ್ ಬೇಜ್, ಕಲಾವಿದೆ ಮ್ಯಾಗಿ ರೋಜರ್ಸ್ ಹಾಗೂ ನಟಿ ಜೇನ್ ಫೋಂಡಾ ಸೇರಿದಂತೆ ಹಲವು ಗಣ್ಯರು ಪ್ರತಿಭಟನೆಗೆ ಬೆಂಬಲ ನೀಡಿದರು.

ನ್ಯೂಯಾರ್ಕ್, ವಾಷಿಂಗ್ಟನ್, ಲಾಸ್ ಏಂಜಲೀಸ್, ಚಿಕಾಗೋ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಸೇರಿದಂತೆ ಪ್ರಮುಖ ನಗರಗಳಲ್ಲಿ ಸಾವಿರಾರು ಮಂದಿ ಬೀದಿಗಿಳಿದು ಸರ್ಕಾರದ ಕಟ್ಟಡಗಳ ಮುಂದೆ ರ್ಯಾಲಿ ನಡೆಸಿದರು.

ಲಾಸ್ ಏಂಜಲೀಸ್‌ನಲ್ಲಿ ಪ್ರತಿಭಟನಾಕಾರರು ಸಿಟಿ ಹಾಲ್ ಹೊರಗೆ ಸೇರಿ ಬಳಿಕ ಬೀದಿಗಳಲ್ಲಿ ಮೆರವಣಿಗೆ ನಡೆಸಿದರೆ, ಹ್ಯೂಸ್ಟನ್‌ನಲ್ಲಿ ಪ್ರತಿಭಟನಾಕಾರರು ಅಮೆರಿಕ ಸಂವಿಧಾನದ ದೈತ್ಯ ಪ್ರತಿಕೃತಿಯನ್ನು ಹೊತ್ತು ಪ್ರತಿಭಟನೆ ನಡೆಸಿದರು. ಇದು ಪ್ರಜಾಪ್ರಭುತ್ವ ಮೌಲ್ಯಗಳ ರಕ್ಷಣೆಯ ಸಂಕೇತ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರತಿಭಟನಾಕಾರರು ವಲಸೆ ನೀತಿ, ಆರ್ಥಿಕ ಸಮಸ್ಯೆಗಳು ಹಾಗೂ ಆಡಳಿತದ ನಿರ್ಧಾರಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರತಿನಿಧಿ ಜಾನ್ ಲಾರ್ಸನ್ “ಅಮೆರಿಕದಲ್ಲಿ ರಾಜರು ಇಲ್ಲ ಎಂಬುದನ್ನು ಹೇಳಲು ನಾವು ಇಲ್ಲಿ ಸೇರಿದ್ದೇವೆ” ಎಂದು ಹೇಳಿದರೆ, ಸೆನೆಟರ್ ಕ್ರಿಸ್ಟಿನ್ ಗಿಲ್ಲಿಬ್ರಾಂಡ್ “ನಾವು ಯಾರಿಗೂ ತಲೆಬಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಸೆನೆಟರ್ ಬರ್ನಿ ಸ್ಯಾಂಡರ್ಸ್ ಮಾತನಾಡಿ, “ಈ ದೇಶವನ್ನು ಸರ್ವಾಧಿಕಾರ ಅಥವಾ ಒಲಿಗಾರ್ಕಿಯ ದಿಕ್ಕಿಗೆ ಕೊಂಡೊಯ್ಯಲು ನಾವು ಅವಕಾಶ ನೀಡುವುದಿಲ್ಲ. ಅಮೆರಿಕದಲ್ಲಿ ಜನರೇ ಆಡಳಿತ ನಡೆಸುತ್ತಾರೆ” ಎಂದು ಎಚ್ಚರಿಕೆ ನೀಡಿದರು.

ಒಟ್ಟಾರೆ, ಟ್ರಂಪ್ ಆಡಳಿತದ ನೀತಿಗಳ ವಿರುದ್ಧ ಅಮೆರಿಕಾದ್ಯಂತ ಜನರ ಅಸಮಾಧಾನ ತೀವ್ರಗೊಳ್ಳುತ್ತಿದ್ದು, ರಾಜಕೀಯ ವಾತಾವರಣ ಮತ್ತಷ್ಟು ಉದ್ವಿಗ್ನಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.