Saturday, March 7

ಎಲ್‌ಪಿಜಿ ದರ ಏರಿಕೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ

ಬೆಂಗಳೂರು: ಗೃಹ ಬಳಕೆಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ದರವನ್ನು ₹60 ಹೆಚ್ಚಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.

ಇತ್ತೀಚೆಗೆ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರಗಳನ್ನು ಮತ್ತೊಮ್ಮೆ ಪರಿಷ್ಕರಿಸಿದ್ದು, ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ₹60 ಹಾಗೂ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ ಸುಮಾರು ₹115 ಹೆಚ್ಚಳ ಮಾಡಲಾಗಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಮತ್ತೊಂದು ಭಾರೀ ಹೊರೆ ಬಿದ್ದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈಗಾಗಲೇ ದುಬಾರಿ ಬೆಲೆಯಿಂದ ಸಂಕಷ್ಟದಲ್ಲಿರುವ ಸಾಮಾನ್ಯ ಜನತೆಗೆ ಈ ನಿರ್ಧಾರ ದೊಡ್ಡ ಹೊಡೆತವಾಗಿದೆ. ಚುನಾವಣೆಯ ಮುನ್ನ ಅಡುಗೆ ಅನಿಲ, ಪೆಟ್ರೋಲ್ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಿ, ನಂತರ ಮತ್ತೆ ಬೆಲೆ ಏರಿಕೆ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರ ತಂತ್ರಗಾರಿಕೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತೇವೆ ಮತ್ತು ದೇಶವನ್ನು ಆರ್ಥಿಕವಾಗಿ ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುತ್ತೇವೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಸರ್ಕಾರ ಈಗ ತನ್ನದೇ ಮಾತುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಅವರು ಟೀಕಿಸಿದರು.

2014ರಿಂದ 2025ರವರೆಗೆ ಎಲ್‌ಪಿಜಿ ಸಿಲಿಂಡರ್ ಬೆಲೆಗಳಲ್ಲಿ ನಡೆದ ನಿರಂತರ ಏರಿಕೆ ಸಾಮಾನ್ಯ ಕುಟುಂಬಗಳ ಜೀವನವನ್ನು ದುಬಾರಿಯಾಗಿಸಿದೆ. ಸಬ್ಸಿಡಿ ವ್ಯವಸ್ಥೆಯನ್ನು ಕ್ರಮೇಣ ಕಡಿಮೆ ಮಾಡುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಸರ್ಕಾರ ಆರ್ಥಿಕ ಹೊರೆ ಹಾಕುತ್ತಿದೆ ಎಂದು ಅವರು ಆರೋಪಿಸಿದರು.

ಇದೇ ವೇಳೆ ವಿದೇಶಾಂಗ ಮತ್ತು ಆರ್ಥಿಕ ನೀತಿಗಳ ವಿಚಾರದಲ್ಲಿಯೂ ಕೇಂದ್ರ ಸರ್ಕಾರದ ನಿಲುವು ದುರ್ಬಲವಾಗುತ್ತಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ನೀಡಿರುವ ಹೇಳಿಕೆಗಳ ನಡುವೆ ಭಾರತದ ಹಿತಾಸಕ್ತಿಯನ್ನು ದೃಢವಾಗಿ ರಕ್ಷಿಸುವ ಬದಲು ಕೇಂದ್ರ ಸರ್ಕಾರ ಮೌನ ವಹಿಸಿರುವುದು ದೇಶದ ಗೌರವಕ್ಕೆ ಧಕ್ಕೆ ತರುವಂತಾಗಿದೆ ಎಂದು ಅವರು ಹೇಳಿದರು.

ಭಾರತದಂತಹ ಬಲಿಷ್ಠ ರಾಷ್ಟ್ರವು ಯಾವುದೇ ವಿದೇಶಿ ಒತ್ತಡದ ಆಧಾರದ ಮೇಲೆ ತನ್ನ ಆರ್ಥಿಕ ಮತ್ತು ಇಂಧನ ನೀತಿಗಳನ್ನು ರೂಪಿಸಬಾರದು. ಆದರೆ ಇತ್ತೀಚಿನ ಬೆಳವಣಿಗೆಗಳು ದೇಶದ ವಿದೇಶಾಂಗ ನೀತಿಯಲ್ಲಿ ಸ್ಪಷ್ಟತೆ ಮತ್ತು ದೃಢತೆಯ ಕೊರತೆಯಿರುವುದನ್ನು ತೋರಿಸುತ್ತಿವೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಮೂಡುತ್ತಿವೆ ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಎಲ್‌ಪಿಜಿ ದರ ಏರಿಕೆ ಸೇರಿದಂತೆ ಸಾಮಾನ್ಯ ಜನರ ಬದುಕನ್ನು ದುಬಾರಿಯಾಗಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ನೀತಿಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಎಸ್. ಮನೋಹರ್, ಆನಂದ್ ಕುಮಾರ್ ಎಂ ಎಸ್ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಸುಂಕದಕಟ್ಟೆ ನವೀನ್, ಓಬಳೇಶ್, ಚಿನ್ನಿ ಪ್ರಕಾಶ್ ಹೇಮರಾಜ್, ಪುಟ್ಟರಾಜು, ಉಮೇಶ್, ರಂಜಿತ್, ಸಂಜಯ್, ಸಾಯಿ ನವೀನ್, ಸ್ಯಾಮ್ಯುವೇಲ್, ಪ್ರವೀಣ್, ಅಪ್ಪಾರಾಯ್, ಪವನ್ ಹಾಗೂ ಹಲವು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.