Thursday, January 29

ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ರೋಚಕ ಗೆಲುವು; ತಂಡವನ್ನು ಅಭಿನಂದಿಸಿದ ಹೆಚ್ಡಿಕೆ

ನವದೆಹಲಿ: ಐಪಿಎಲ್ 2025 ಟೂರ್ನಿಯಲ್ಲಿ ರೋಚಕ ಗೆಲುವು ಸಾಧಿಸಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅಭಿನಂದಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಸಲ ಕಪ್ ನಮ್ದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ತಂಡ ಸ್ಪೂರ್ತಿಯಿಂದ ಆಡಿದ ಪಟಿದಾರ್ ಪಡೆಯನ್ನು ಹಾಗೂ ವಿಶೇಷವಾಗಿ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಐತಿಹಾಸಿಕ ದ್ವಿಗಿಜಯ ಸಾಧಿಸಿದ ಆರ್ ಸಿಬಿ ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರೂವರೆ ಕೋಟಿ ಕನ್ನಡಿಗರ ಕನಸನ್ನು ನನಸು ಮಾಡಿದ ಪಟಿದಾರ್ ಪಡೆಯ ಶ್ರೇಷ್ಠ ಕ್ರಿಕೆಟ್ ಕನ್ನಡಿಗರು ಮಾತ್ರವಲ್ಲದೆ ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿದೆ. ಕರ್ನಾಟಕದ ಕ್ರಿಕೆಟ್ ಇತಿಹಾಸದಲ್ಲಿಯೇ ಈ ಗೆಲುವು ಮಹೋನ್ನತ ಮೈಲುಗಲ್ಲು ಎಂಬುದು ನನ್ನ ಅಭಿಪ್ರಾಯ. ಮುಖ್ಯವಾಗಿ 18 ವರ್ಷಗಳಷ್ಟು ಸುದೀರ್ಘ ಕಾಲ ತಂಡ ಶ್ರೇಯಸ್ಸಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸುತ್ತೇನೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.