
ನವದೆಹಲಿ: ದೆಹಲಿ, ಹರಿಯಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದ 12 ಜಿಲ್ಲೆಗಳನ್ನು ಒಳಗೊಂಡ ಮೂರು ಬಹು-ಟ್ರ್ಯಾಕಿಂಗ್ ರೈಲ್ವೆ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ನೀಡಿದೆ. ಯೋಜನೆಗಳ ಒಟ್ಟು ವೆಚ್ಚ ₹18,509 ಕೋಟಿ ಎಂದು ಅಧಿಕೃತ ಮಾಹಿತಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಸಾರಾ–ಮನ್ಮಾಡ್, ದೆಹಲಿ–ಅಂಬಾಲಾ ಹಾಗೂ ಬಳ್ಳಾರಿ–ಹೊಸಪೇಟೆ ಮಾರ್ಗಗಳಲ್ಲಿ 3ನೇ ಮತ್ತು 4ನೇ ಹಳಿ ನಿರ್ಮಾಣ ಯೋಜನೆಗಳು ಇದರಲ್ಲಿ ಸೇರಿವೆ.
ಈ ಯೋಜನೆಗಳೊಂದಿಗೆ ಭಾರತೀಯ ರೈಲ್ವೆಯ ಜಾಲವು ಸುಮಾರು 389 ಕಿ.ಮೀ. ವಿಸ್ತರಿಸಲಿದ್ದು, ಸುಮಾರು 97 ಲಕ್ಷ ಜನಸಂಖ್ಯೆ ಹೊಂದಿರುವ 3,902 ಹಳ್ಳಿಗಳಿಗೆ ಸಂಪರ್ಕ ಸುಧಾರಣೆ ದೊರೆಯಲಿದೆ. ಹೆಚ್ಚುವರಿ ಮಾರ್ಗ ಸಾಮರ್ಥ್ಯದಿಂದ ಸಂಚಾರ ದಟ್ಟಣೆ ತಗ್ಗಿ, ಕಾರ್ಯಾಚರಣಾ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಹೆಚ್ಚಲಿದೆ ಎಂದು ಸರ್ಕಾರ ತಿಳಿಸಿದೆ.
ಯೋಜನೆಗಳು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ರೂಪಿಸಲ್ಪಟ್ಟಿದ್ದು, ಬಹುಮಾದರಿ ಸಂಪರ್ಕ ಮತ್ತು ಲಾಜಿಸ್ಟಿಕ್ ದಕ್ಷತೆ ಹೆಚ್ಚಿಸುವ ಉದ್ದೇಶ ಹೊಂದಿವೆ. ಕಲ್ಲಿದ್ದಲು, ಉಕ್ಕು, ಕಬ್ಬಿಣದ ಅದಿರು, ಸಿಮೆಂಟ್, ಆಹಾರ ಧಾನ್ಯ, ರಸಗೊಬ್ಬರ ಸೇರಿದಂತೆ ವಿವಿಧ ಸರಕು ಸಾಗಣೆಗೆ ಅಗತ್ಯವಾದ ಮಾರ್ಗಗಳಾಗಿವೆ. ಸಾಮರ್ಥ್ಯ ವೃದ್ಧಿಯಿಂದ ವರ್ಷಕ್ಕೆ ಹೆಚ್ಚುವರಿ 96 ಮಿಲಿಯನ್ ಟನ್ ಸರಕು ಸಾಗಣೆ ಸಾಧ್ಯವಾಗಲಿದೆ.
ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದ್ದು, ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ, ಶ್ರೀ ಮಾತಾ ವೈಷ್ಣೋ ದೇವಿ, ಹಂಪಿ ಸೇರಿದಂತೆ ಹಲವು ಪ್ರಮುಖ ತಾಣಗಳಿಗೆ ರೈಲು ಸಂಪರ್ಕ ಸುಧಾರಣೆ ಆಗಲಿದೆ.
ಸಮಗ್ರ ಅಭಿವೃದ್ಧಿಯ ಮೂಲಕ ಉದ್ಯೋಗ ಹಾಗೂ ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶ ಈ ಯೋಜನೆಗಳಲ್ಲಿದೆ ಎಂದು ಸಿಸಿಇಎ ಹೇಳಿಕೆಯಲ್ಲಿ ತಿಳಿಸಲಾಗಿದೆ.
