Sunday, December 7

ಕಿದ್ವಾಯಿ ಆಸ್ಪತ್ರೆ: ವಿಲ್ಮ್ಸ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದ ಏಕ ಕಿಡ್ನಿಯ ಬಾಲಕನಿಗೆ ಮೂಳೆ ಮಜ್ಜೆಯ ಕಸಿ ಯಶಸ್ವಿ

ಬೆಂಗಳೂರು: ಅಪರೂಪದ ಕಾಯಿಲೆಗಳಿಗೆ ಯಶಸ್ವಿ ಚಿಕಿತ್ಸೆ ನೀಡುವಲ್ಲಿ ಸಾಕಷ್ಟು ಖ್ಯಾತಿ ಪಡೆದಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಈಗ ಮತ್ತೊಂದು ಸಾಧನೆ ಮಾಡಿದೆ.

ವಿಲ್ಮ್ಸ್ ಟ್ಯೂಮರ್ ಎಂಬ ಮೂತ್ರಪಿಂಡದ ಕ್ಯಾನ್ಸರ್‌ಗೆ ತುತ್ತಾಗಿ, ಒಂದೇ ಒಂದು ಮೂತ್ರಪಿಂಡದಿಂದ ಜೀವನ ಸಾಗಿಸುತ್ತಿದ್ದ 9 ವರ್ಷದ ಬಾಲಕನಿಗೆ ಅಸ್ಥಿ ಮಜ್ಜೆ ಕಸಿ/ ಮೂಳೆ ಮಜ್ಜೆಯ ಕಸಿ (ಬಿಎಂಟಿ)ಯನ್ನು ಯಶಸ್ವಿಯಾಗಿ ನಿರ್ವಹಿಸಿ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದೆ.

ಬಾಲಕನಿಗೆ ಡಿಸೆಂಬರ್ 2022 ರಲ್ಲಿ ವಿಲ್ಮ್ಸ್ ಟ್ಯೂಮರ್ ಇರುವುದು ಪತ್ತೆಯಾಯಿತು. ಕೀಮೋಥೆರಪಿ ಚಿಕಿತ್ಸೆ ನೀಡಿ ಎಡ ಮೂತ್ರಪಿಂಡಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ತದನಂತರ ರೇಡಿಯೇಷನ್ ಚಿಕಿತ್ಸೆ ನೀಡಲಾಯಿತು. ದುರದೃಷ್ಟವಶಾತ್, ಏಪ್ರಿಲ್ 2025 ರಲ್ಲಿ ಮರುಕಳಿಸಿತು. ಆಗ ಅವನು ಬದುಕುಳಿಯುವ ಅತ್ಯುತ್ತಮ ಅವಕಾಶವೆಂದರೆ ಹೆಚ್ಚಿನ ಪ್ರಮಾಣದ ಕೀಮೋಥೆರಪಿ ಮತ್ತು ನಂತರ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇಶನ್ ಎಂದು ಕಿದ್ವಾಯಿ ವೈದ್ಯರು ತೀರ್ಮಾನಿಸಿದರು.

ಕಿದ್ವಾಯಿ ಆಸ್ಪತ್ರೆಯ ವೈದ್ಯರಾದ ಡಾ. ವಸುಂಧರಾ ಕೈಲಾಸನಾಥ್, ಬಿಎಂಟಿ – ಸಹ ಪ್ರಾಧ್ಯಾಪಕರು ಮತ್ತು ಅವರ ತಂಡವು ಬಿಎಂಟಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿತು. ಚಿಕ್ಕ ವಯಸ್ಸಿನಲ್ಲಿಯೇ ಕೀಮೊಥೆರಪಿ ಚಿಕಿತ್ಸೆ ನೀಡಿದ್ದರಿಂದ, ಹೆಚ್ಚಿನ ಪ್ರಮಾಣದ ಬಿಎಂಟಿ ಔಷಧಿಗಳ ಅಗತ್ಯತೆ ಮತ್ತು ತೀವ್ರವಾದ, ಕಾಯಿಲೆಯಿಂದ ಜೀವಕ್ಕೆ ಅಪಾಯಕಾರಿಯಾಗಿತ್ತು. ಈ ನಿಟ್ಟಿನಲ್ಲಿ ಈ ಚಿಕಿತ್ಸೆ ವಿಶೇಷವಾಗಿತ್ತು ಹಾಗೂ ಸವಾಲಿನಿಂದ ಕೂಡಿತ್ತು ಎಂದು ಡಾ. ವಸುಂಧರಾ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಇಲ್ಲಿಯವರೆಗೆ 130 ಬಿಎಂಟಿ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರಾದ ಡಾ. ನವೀನ್. ಟಿ ತಿಳಿಸಿದ್ದಾರೆ.

ಬಾಲಕನಿಗೆ ಅತ್ಯಂತ ಯಶಸ್ವಿಯಾಗಿ ಚಿಕಿತ್ಸೆ ನೀಡಿರುವ ವೈದ್ಯರ ತಂಡವನ್ನು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅಭಿನಂದಿಸಿ ಶ್ಲಾಘಿಸಿದ್ದಾರೆ.

ವಿಶೇಷ ಪರವಾನಗಿ ಪಡೆದ ಕಿದ್ವಾಯಿ ಸಂಸ್ಥೆ:

ಬಿಎಂಟಿ ಸೇವೆಗಳಿಗಾಗಿ ಹೋಟಾ (ಮಾನವ ಅಂಗಗಳು ಮತ್ತು ಅಂಗಾಂಶಗಳ ಕಸಿ ಕಾಯ್ದೆ, 1994) ಪರವಾನಗಿಯನ್ನು ಪಡೆಯುವ ಮೂಲಕ ಕಿದ್ವಾಯಿ ಸಂಸ್ಥೆಯು ಮತ್ತೊಂದು ಸಾಧನೆಯನ್ನು ಮಾಡಿದೆ. ಈ ಪ್ರಮಾಣ ಪತ್ರವನ್ನು ಪಡೆದ ಕರ್ನಾಟಕದ ಕೆಲವೇ ಆಸ್ಪತ್ರೆಗಳಲ್ಲಿ ಕಿದ್ವಾಯಿ ಕೂಡ ಒಂದಾಗಿದೆ. ಸಂಸ್ಥೆಯ ನಿರ್ದೇಶಕರಾದ ಡಾ. ನವೀನ್ .ಟಿಗೆ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ಪ್ರಮಾಣ ಪತ್ರವನ್ನು ಔಪಚಾರಿಕವಾಗಿ ಹಸ್ತಾಂತರಿಸಿದರು.