Sunday, April 5

ಕೇಂದ್ರದ ವಿರುದ್ಧ ಹರಿಪ್ರಸಾದ್ ವಾಗ್ದಾಳಿ, ಕಾಂಗ್ರೆಸ್‌ಗೆ ಮತ ನೀಡಲು ಮನವಿ

ಬಾಗಲಕೋಟೆ: ಉಪಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದು, ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಲಾಗಿದೆ ಎಂದು ಅವರು ಹೇಳಿದರು. “ಸರ್ವಜನಾಂಗದ ಶಾಂತಿಯ ತೋಟವನ್ನು ಶೇ.95ರಷ್ಟು ರಕ್ಷಿಸಿದ್ದೇವೆ,” ಎಂದು ಅವರು ತಿಳಿಸಿದರು.

ಉಪಚುನಾವಣೆಯಲ್ಲಿ ರಾಜ್ಯದ ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಮತದಾರರಿಗೆ ಮನವಿ ಮಾಡಿದ ಅವರು, ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆ ನಡೆಸಿದ ಹರಿಪ್ರಸಾದ್, “ಚುನಾವಣೆ ವೇಳೆ ಚಲನಚಿತ್ರಗಳನ್ನು ಪ್ರಚಾರ ಮಾಡುವ ಪ್ರಧಾನಿಯನ್ನು ನಾವು ನೋಡಿರಲಿಲ್ಲ. ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಸಿನಿಮಾಗಳ ಪ್ರಮೋಷನ್ ಮಾಡುವುದು ದುರಂತ,” ಎಂದು ಹೇಳಿದರು.

ನೋಟು ರದ್ದು, ಕೋವಿಡ್ ಸಂದರ್ಭಗಳಲ್ಲಿ ಜನರು ಸಂಕಷ್ಟ ಅನುಭವಿಸಿದ್ದನ್ನು ಉಲ್ಲೇಖಿಸಿದ ಅವರು, ಗ್ಯಾಸ್ ಸಿಲಿಂಡರ್ ಸಮಸ್ಯೆಯಿಂದ ಬಡವರು ಕಿಲೋಮೀಟರ್‌ಗಳಷ್ಟು ಸಾಲಿನಲ್ಲಿ ನಿಲ್ಲಬೇಕಾಗಿದೆ ಎಂದು ಆರೋಪಿಸಿದರು.

ದೇಶದ ಸಾಲ ಹೆಚ್ಚಿರುವುದಕ್ಕೂ ಕೇಂದ್ರ ಸರ್ಕಾರವೇ ಕಾರಣ ಎಂದು ಟೀಕಿಸಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಉದ್ಯೋಗ ಖಾತ್ರಿ, ಆರೋಗ್ಯ ಮಿಷನ್, ಆಹಾರ ಹಕ್ಕು ಕಾಯ್ದೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು.

ಇದೇ ವೇಳೆ, “ಬಿಜೆಪಿ ಎಲ್ಲಾ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದ್ದು, ಚುನಾವಣಾ ಆಯೋಗವೂ ಪಕ್ಷದ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದೆ,” ಎಂದು ಆರೋಪಿಸಿದರು.

ಚುನಾವಣೆಗಳು ಯಾವುದೇ ಅಡೆತಡೆಗಳಿಲ್ಲದೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯ ಸರ್ಕಾರ ಹಾಗೂ ನಾಯಕರು ಅಕ್ರಮಗಳಿಗೆ ಅವಕಾಶ ಕೊಡದಂತೆ ನಿಗಾ ವಹಿಸಿದ್ದಾರೆ ಎಂದು ಹೇಳಿದರು.