
ವಾಷಿಂಗ್ಟನ್: ಇರಾನ್ ವಿರುದ್ಧ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಯಲ್ಲಿ ಇದುವರೆಗೆ 48 ಇರಾನಿನ ರಾಜಕೀಯ ಹಾಗೂ ಸೈನಿಕ ನಾಯಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಅವರು, ಕಾರ್ಯಾಚರಣೆಯನ್ನು “ದೊಡ್ಡ ಯಶಸ್ಸು” ಎಂದು ಬಣ್ಣಿಸಿದರು. ಒಂದೇ ದಾಳಿಯಲ್ಲಿ 48 ನಾಯಕರನ್ನು ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆ ನಿರೀಕ್ಷೆಗಿಂತ ವೇಗವಾಗಿ ಮುಂದುವರಿಯುತ್ತಿದೆ. ನಮ್ಮ ಯಶಸ್ಸನ್ನು ಹಲವರು ನಂಬಲಾರರು ಎಂದು ಟ್ರಂಪ್ ಹೇಳಿದರು.
ಇರಾನ್‌ನಲ್ಲಿ ಅಮೆರಿಕ ಮಿಲಿಟರಿ ಕ್ರಮ ನಿಗದಿತ ವೇಳಾಪಟ್ಟಿಗಿಂತ ಮುಂಚೆಯೇ ಸಾಗುತ್ತಿದೆ. ಪ್ರಗತಿ ಉತ್ತಮವಾಗಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟರು.
ಇದೇ ವೇಳೆ, ಇರಾನ್‌ನ ಹೊಸ ನಾಯಕತ್ವವು ಅಮೆರಿಕದೊಂದಿಗೆ ಸಂಪರ್ಕದಲ್ಲಿದೆ. ಮಾತುಕತೆಗೆ ಸಮ್ಮತಿ ಸೂಚಿಸಿದೆ ಎಂದು ಅವರು ತಿಳಿಸಿದರು. ಹೊಸ ನಾಯಕರು ಸಂಭಾಷಣೆಗೆ ಆಸಕ್ತಿ ತೋರಿದ್ದಾರೆ. ನಾನು ಮಾತುಕತೆಗೆ ಸಿದ್ಧನಿದ್ದೇನೆ ಎಂದು ಅವರು ಹೇಳಿದರು.
ಇರಾನ್ ಆಡಳಿತವು ಮೊದಲೇ ರಾಜಿ ಮಾಡಿಕೊಳ್ಳಬಹುದಿತ್ತು. ಆದರೆ ಅವರು ಅತಿಯಾದ ಆತ್ಮವಿಶ್ವಾಸ ತೋರಿದರು ಎಂದು ಟೀಕಿಸಿದ ಅವರು, ದೇಶದಲ್ಲಿ ಜನರು ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ ಭಾರೀ ದಾಳಿಗಳು ನಡೆಯುತ್ತಿವೆ ಎಂದು ಹೇಳಿದರು.
