
ಕಾರವಾರ: ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಚುನಾವಣೆಗಳನ್ನು ಮುಂದಿನ ಜೂನ್ ತಿಂಗಳೊಳಗೆ ನಡೆಸಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜಗುಣಿ–ಗಂಗಾವಳಿ ಸೇತುವೆ ಉದ್ಘಾಟನೆ ಬಳಿಕ ಅವರು ಮಾತನಾಡಿದರು. ಗೋಕರ್ಣವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಬೇಡಿಕೆ ಇದ್ದು, ಚುನಾವಣೆಗಳ ಬಳಿಕ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು. ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದರಿಂದ ಪುನಃ ಪ್ರಸ್ತಾವ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ ಎಂದೂ ತಿಳಿಸಿದರು.
ಈ ವೇಳೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು ಹಾಗೂ ಶಾಸಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
