
ನವದೆಹಲಿ: ಇ-ಕಾಮರ್ಸ್ ತಾಣಗಳಲ್ಲಿ ಗ್ರಾಹಕರನ್ನು ಮೋಸಗೊಳಿಸುವ ವಿನ್ಯಾಸ ಶೈಲಿಗಳನ್ನು (ಡಾರ್ಕ್ ಪ್ಯಾಟರ್ನ್ಸ್) ನಿಯಂತ್ರಣಕ್ಕೆ ತರುವ ಕಾರ್ಯದಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಡಿಜಿಟಲ್ ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಭಾನುವಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
“ಜಾಗೋ ಗ್ರಾಹಕ್ ಜಾಗೋ” ಅಭಿಯಾನದ ಚಟುವಟಿಕೆಗಳು, ಇ-ಕಾಮರ್ಸ್ ಕ್ಷೇತ್ರದಲ್ಲಿ ಪತ್ತೆಯಾಗುತ್ತಿರುವ ಮೋಸದ ಮಾದರಿಗಳು ಹಾಗೂ ಗ್ರಾಹಕರಿಗೆ ಹಾನಿಯುಂಟುಮಾಡುವ ವಿನ್ಯಾಸಗಳ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಜೋಶಿ ಟ್ವೀಟ್ ಮೂಲಕ ಮಾಹಿತಿ ನೀಡಿದರು.
ಡಿಜಿಟಲ್ ವಾಣಿಜ್ಯದಲ್ಲಿ ಡಾರ್ಕ್ ಪ್ಯಾಟರ್ನ್‌ಗಳ ಹೆಚ್ಚುತ್ತಿರುವ ಪ್ರಮಾಣದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸರ್ಕಾರ, ಇ-ಕಾಮರ್ಸ್ ಕಂಪನಿಗಳಿಗೆ ಸ್ವಯಂ-ಆಡಿಟ್ ನಡೆಸುವಂತೆ ನಿರ್ದೇಶನ ನೀಡಿದೆ. ಈ ಮೂಲಕ ತಪ್ಪು ವಿನ್ಯಾಸಗಳ ಪತ್ತೆಹಚ್ಚಿ, ಗ್ರಾಹಕ ರಕ್ಷಣಾ ನಿಯಮಗಳ ತಾತ್ವಿಕ ರೂಪದಲ್ಲಿ ಅನುಸರಣೆ ಆಗಲಿದೆ ಎಂದು ಸರ್ಕಾರ ನಂಬಿದೆ.
“ಇಂದಿನ ಗ್ರಾಹಕರು ಮಾಹಿತಿ ಹೊಂದಿರುವವರು, ತಮ್ಮ ಹಕ್ಕುಗಳ ಬಗ್ಗೆ ಜಾಗರೂಕರಿದ್ದಾರೆ. ಅವರು ಸುಲಭವಾಗಿ ಮೋಸಕ್ಕೆ ಒಳಗಾಗುವುದಿಲ್ಲ” ಎಂದು ಜೋಶಿ ಹೇಳಿದರು. ಮಾರ್ಗಸೂಚಿಗಳನ್ನು ಪಾಲಿಸುವುದು ಕೇವಲ ಕಾನೂನುಬದ್ಧ ನಿರ್ಬಂಧವಲ್ಲ, ಗ್ರಾಹಕರ ವಿಶ್ವಾಸವನ್ನು ಗಳಿಸುವ ಪ್ರಾಮಾಣಿಕ ಪ್ರಯತ್ನವಾಗಿದೆ ಎಂದು ಅವರು ಸೂಚಿಸಿದರು.
ನ್ಯಾಷನಲ್ ಕಸ್ಟಮರ್ ಹೆಲ್ಪ್‌ಲೈನ್‌ನಲ್ಲಿ ಡಾರ್ಕ್ ಪ್ಯಾಟರ್ನ್‌ಗಳಿಗೆ ಸಂಬಂಧಿಸಿದ ದೂರುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ವಾಣಿಜ್ಯ ಕ್ಷೇತ್ರದಲ್ಲಿ ಜವಾಬ್ದಾರಿಯುತ ನಡವಳಿಕೆಗೆ ಒತ್ತಾಯಿಸಲಾಗಿದೆ.
‘IIT-BHU’ ಸಹಯೋಗದಲ್ಲಿ ನಡೆದ ‘ಡಾರ್ಕ್ ಪ್ಯಾಟರ್ನ್ಸ್ ಬಸ್ಟರ್ ಹ್ಯಾಕಥಾನ್-2023’ ಮೂಲಕ ಅಭಿವೃದ್ಧಿಗೊಂಡ ‘ಜಾಗೃತಿ ಅಪ್ಲಿಕೇಶನ್’, ‘ಜಾಗೋ ಗ್ರಾಹಕ ಜಾಗೋ ಅಪ್ಲಿಕೇಶನ್’ ಮತ್ತು ‘ಜಾಗೃತಿ ಡ್ಯಾಶ್‌ಬೋರ್ಡ್’ ಮೊದಲಾದ ಗ್ರಾಹಕ ರಕ್ಷಣಾ ಸಾಧನಗಳು ಈಗ ಇಲಾಖೆ ಕಾರ್ಯತಂತ್ರದ ಕೇಂದ್ರಬಿಂದುಗಳಾಗಿವೆ.
“ಮೋಸಗೊಳಿಸುವ ಆನ್‌ಲೈನ್ ವಿನ್ಯಾಸ ಶೈಲಿಗಳ ವಿರುದ್ಧ ನಮ್ಮ ಬದ್ಧತೆಯನ್ನು ಈ ಸಾಧನಗಳು ಸ್ಪಷ್ಟವಾಗಿ ಪ್ರತಿನಿಧಿಸುತ್ತವೆ” ಎಂದು ಸಚಿವರು ನುಡಿದರು.