Saturday, December 6

ದೆಹಲಿಯ ಕೆಂಪುಕೋಟೆ ಬಳಿ ಸ್ಫೋಟ; ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಣೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಸಂಜೆ ಭೀಕರ ಸ್ಫೋಟ ಸಂಭವಿಸಿದೆ. ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್‌ ಬಳಿಯಲ್ಲಿ ನಿಲ್ಲಿಸಲಾಗಿದ್ದ ಕಾರು ಸ್ಫೋಟಗೊಂಡಿದ್ದು, ಈ ದುರ್ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಸಂಜೆ ಸುಮಾರು 6.55ರ ಹೊತ್ತಿಗೆ ಕಾರು ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಯಿಂದ ಸುತ್ತಮುತ್ತಲಿನ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಘಟನೆ ಬಳಿಕ ತಕ್ಷಣವೇ ಅಗ್ನಿಶಾಮಕ ದಳದ ಏಳು ವಾಹನಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ.

ಸ್ಫೋಟದ ಪರಿಣಾಮವಾಗಿ ಪಕ್ಕದ ವಾಹನಗಳು ಕೂಡ ಬೆಂಕಿಗಾಹುತಿಯಾಗಿದ್ದು, ಕೆಂಪುಕೋಟೆ ಪ್ರದೇಶದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಘಟನೆಯ ಬಳಿಕ ದೆಹಲಿ ಪೊಲೀಸ್ ಇಲಾಖೆ ನಗರಾದ್ಯಂತ ಹೈ ಅಲರ್ಟ್ ಘೋಷಿಸಿದ್ದು, ಚಾಂದನಿಚೌಕ್ ಮಾರುಕಟ್ಟೆ, ಕೆಂಪುಕೋಟೆ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಸಂಸತ್ ಭವನ ಮತ್ತು ಇಂಡಿಯಾ ಗೇಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ.

ಪೊಲೀಸರು ಮತ್ತು ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ) ತಂಡಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿವೆ. ಸ್ಫೋಟದ ನಿಜವಾದ ಕಾರಣದ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.