Monday, December 8

ದೇಶದಲ್ಲಿ ಎಲ್ಲೂ ಇಲ್ಲದ ಎರಡು ಬಗೆಯ ತೆರಿಗೆ ಬೆಂಗಳೂರಿನಲ್ಲಿ ಮಾತ್ರ

ಬೆಂಗಳೂರು: ಬೆಂಗಳೂರಿನ ಜನರ ಮೇಲೆ ಕಸದ ಸೆಸ್‌ ಜೊತೆಗೆ, ಬಳಕೆದಾರರ ಶುಲ್ಕ ವಿಧಿಸಲಾಗಿದೆ. ಈ ನಿರ್ಧಾರವನ್ನು ಸರ್ಕಾರ ಹಿಂಪಡೆದು ಹಿಂದಿನಂತೆಯೇ ಚದರ ಅಡಿಗೆ ತಕ್ಕಂತೆ ಶುಲ್ಕ ವಿಧಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

ಬಿಬಿಎಂಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಜನರ ಮೇಲೆ ಕಾಂಗ್ರೆಸ್‌ ಸರಕಾರ ಟನ್ನುಗಟ್ಟಲೆ ತೆರಿಗೆಯ ಭಾರವನ್ನು ಹೇರಿದೆ. ಈಗ ಕಸದಿಂದ ರಸ ತೆಗೆಯುವ ಸ್ಕೀಮ್‌ ಮಾಡಿದ್ದಾರೆ. ಇಡೀ ದೇಶದಲ್ಲಿ ಅತಿ ಹೆಚ್ಚು ಕಸದ ತೆರಿಗೆಯನ್ನು ಕಾಂಗ್ರೆಸ್‌ ವಿಧಿಸಿದೆ. ಕೆಂಪೇಗೌಡರು ನಾಡು ಕಟ್ಟಿದ ನಾಡಪ್ರಭು ಎಂಬ ಹೆಸರು ಪಡೆದಿದ್ದರೆ, ಕಾಂಗ್ರೆಸ್‌ ನಾಯಕರು ನಾಡನ್ನು ಹಾಳು ಮಾಡಿದವರು ಎಂಬ ಬಿರುದು ಪಡೆದಿದ್ದಾರೆ ಎಂದು ಟೀಕಿಸಿದರು.

ಈ ಮೊದಲು ನಗರದಲ್ಲಿ ಸೆಸ್‌ ಇತ್ತು. ಈಗ ಇದರ ಜೊತೆಗೆ ಬಳಕೆದಾರರ ಶುಲ್ಕ ವಿಧಿಸಿದ್ದಾರೆ. ಸೆಸ್‌ನಿಂದಲೇ ಸುಮಾರು 250 ಕೋಟಿ ರೂ. ಸಂಗ್ರಹವಾಗುತ್ತಿದೆ. ಕಸದ ಟೆಂಡರ್‌ನ ಮೌಲ್ಯವೇ 147 ಕೋಟಿ ರೂ. ಆಗಿದ್ದರೆ, ಜನರಿಂದ ಅತ್ಯಧಿಕ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇನ್ನು ಬಳಕೆದಾರರ ಶುಲ್ಕವೂ ಸೇರಿದರೆ 500-600 ಕೋಟಿ ರೂ. ಸಂಗ್ರಹವಾಗುತ್ತದೆ. ಯಾರ ಮನೆ ಹಾಳು ಮಾಡಲು ಸರ್ಕಾರ ಇಷ್ಟು ಹಣವನ್ನು ಸಂಗ್ರಹಿಸುತ್ತಿದೆ? ಎಂದು ಪ್ರಶ್ನೆ ಮಾಡಿದರು.

ಒಂದೋ ಬಳಕೆದಾರರ ಶುಲ್ಕ, ಇಲ್ಲವಾದರೆ ಸೆಸ್‌ ಸಂಗ್ರಹಿಸಬೇಕು. ಆದರೆ ಬೆಂಗಳೂರಿನಲ್ಲಿ ಎರಡೂ ಶುಲ್ಕ ವಿಧಿಸಲಾಗಿದೆ. ಇದರಿಂದಾಗಿ ಮನೆಗಳ ಬಾಡಿಗೆ ದರ ಹೆಚ್ಚಲಿದೆ. ವಾಣಿಜ್ಯ ಕಟ್ಟಡಗಳ ಬಾಡಿಗೆ, ಕಲ್ಯಾಣ ಮಂಟಪ, ಆಸ್ಪತ್ರೆ, ಶಾಲೆ, ಹೋಟೆಲ್‌ಗಳ ದರ ಹೆಚ್ಚಲಿದೆ. ಒಂದು ತೆರಿಗೆಯಿಂದಾಗಿ ಎಲ್ಲ ದರಗಳು ಹೆಚ್ಚಲಿದೆ. ಬೆಂಗಳೂರಿನ ಜನರನ್ನು ಕಾಂಗ್ರೆಸ್‌ ದರೋಡೆ ಮಾಡುತ್ತಿದೆ. ಇದು ಕೇಂದ್ರ ಸರ್ಕಾರದ ಕಾಯ್ದೆ ಎಂದು ನೆಪ ಹೇಳುತ್ತಾರೆ. ಎರಡು ಬಗೆಯ ಶುಲ್ಕ ವಿಧಿಸಬೇಕೆಂದು ಕೇಂದ್ರ ಸರ್ಕಾರ ಎಲ್ಲೂ ಹೇಳಿಲ್ಲ ಎಂದರು.

ಬೆಂಗಳೂರಿನ ಶಾಸಕರ ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕು. ಹಿಂದೆ ಚದರ ಅಡಿಗೆ ತಕ್ಕಂತೆ ಕಸದ ಸೆಸ್‌ ವಿಧಿಸಲಾಗುತ್ತಿತ್ತು. ಅದೇ ಮಾದರಿಯನ್ನು ಈಗ ಮತ್ತೆ ತರಬೇಕು. ಬೇರೆ ಯಾವುದೇ ನಗರಗಳಲ್ಲಿ ಇಷ್ಟು ಶುಲ್ಕವಿಲ್ಲ. ಇದು ಅನಾಗರಿಕ ನಡೆ. ಕಾಂಗ್ರೆಸ್‌ನ ಐದು ಗ್ಯಾರಂಟಿಗಳಿಗಾಗಿ ನಗರದ ಜನರಿಂದ ಇಷ್ಟು ತೆರಿಗೆ ವಸೂಲಿ ಮಾಡಲಾಗುತ್ತಿದೆ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದರು.

ಈಗಾಗಲೇ ಬೆಂಗಳೂರಿನ ಜನರು ಹೋರಾಟ ಆರಂಭಿಸಿದ್ದಾರೆ. ಇದಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.

ಗ್ಯಾರಂಟಿಗಳಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ. ಇದಕ್ಕಾಗಿ ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡಲು ಪ್ರಯತ್ನ ನಡೆದಿದೆ. ಕಾಂಗ್ರೆಸ್‌ಗ ಮತ ನೀಡಿದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು ಸೀಮಿತವಾಗಲಿದೆ ಎಂದರು.