Friday, July 25

ನಿಯಮಬಾಹಿರವಾಗಿ ಹಳೆಯ ತೆರಿಗೆ ಬಾಕಿಗಾಗಿ ನೋಟಿಸ್ ನೀಡಿದ್ದರೆ ಬಾಕಿ ಮನ್ನಾ; ಸಿಎಂ ಘೋಷಣೆ

ಬೆಂಗಳೂರು: ಯಾರಿಗಾದರೂ ನಿಯಮಬಾಹಿರವಾಗಿ ಹಳೆಯ ತೆರಿಗೆ ಬಾಕಿಗಾಗಿ ನೋಟಿಸ್ ನೀಡಿದ್ದರೆ ಆ ಹಳೆ ತೆರಿಗೆ ಬಾಕಿಯನ್ನು ಮನ್ನಾ ಮಾಡಲಾಗುವುದು. ಆದರೆ ಅವರೆಲ್ಲರೂ ಕಡ್ಡಾಯವಾಗಿ ಜಿಎಸ್ ಟಿ ನೋಂದಣಿಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಣ್ಣ ವ್ಯಾಪಾರಿಗಳಲ್ಲಿ ಜಿಎಸ್‌ಟಿ ನೋಟಿಸ್ ಕುರಿತು ಗೊಂದಲ ಇದೆ. ಜಿಎಸ್‌ಟಿ ಯನ್ನು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯ ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸುತ್ತದೆ. ಇದಕ್ಕೆ ಸಂಬಂಧಿಸಿದ ಎಲ್ಲ ನೀತಿ-ನಿಯಮಾವಳಿಗಳನ್ನು ಕೇಂದ್ರ ಸರ್ಕಾರವೇ ರಚಿಸಿದೆ. ಅವುಗಳ ಪಾಲನೆ ಮಾಡುವುದಷ್ಟೇ ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ. ಈ ನೀತಿ-ನಿಯಮಾವಳಿಗಳ ರಚನೆಯಲ್ಲಿ ರಾಜ್ಯಗಳ ಪಾತ್ರ ಇಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದ್ದು, ಅಂತಹ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿದ್ದರೂ, ಅವರಿಂದ ತೆರಿಗೆ ವಸೂಲು ಮಾಡುವುದಿಲ್ಲ. ಆದರೆ ಯಾರು ಕಾಯ್ದೆ ಪ್ರಕಾರ ತೆರಿಗೆ ಕಟ್ಟಬೇಕಾಗಿದೆಯೋ ಅವರು ಕಟ್ಟಬೇಕು ಎಂದು ಮುಖ್ಯಮತ್ರಿ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ.