Saturday, December 6

ಪರೀಕ್ಷೆ ವೇಳೆ ಮೂಗುತಿ, ಕಿವಿಯೋಲೆ ಬಿಚ್ಚಿಸಿದ KEA ವಿರುದ್ಧ ಯತ್ನಾಳ್ ಆಕ್ರೋಶ

ಬೆಂಗಳೂರು: ಪರೀಕ್ಷೆಯಲ್ಲಿ ನಕಲು ತಡೆಯೋ ಭರದಲ್ಲಿ ಹೆಣ್ಣು ಮಕ್ಕಳ ಕಿವಿಯೋಲೆ, ಮೂಗುತಿಯನ್ನು ಬಿಚ್ಚಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕ್ರಮ ಅತಾರ್ಕಿಕ, ಅಮಾನವೀಯ ಎಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅಧಿಕಾರಿಗಳ ಕ್ರಮವು ಹಿಂದೂ ವಿರೋಧಿ ನಿಲುವಾಗಿದೆ ಎಂದು ಆರೋಪಿಸಿದ್ದಾರೆ.

ಮೂಗುತಿ ಹಾಗೂ ಕಿವಿಯೋಲೆ ಬಿಚ್ಚಿಸಿವುದರಿಂದ ನಕಲು ತಡೆಯಬಹುದು ಎಂದು ಪರೀಕ್ಷಾ ಪ್ರಾಧಿಕಾರ ತಿಳಿದಿದ್ದರೆ, ಅದು ಮೂರ್ಖತನದ ಪರಮಾವಾಧಿಯಷ್ಟೇ ಎಂದವರು ಹೇಳಿದ್ದಾರೆ.

ತಂತ್ರಜ್ಞಾನ, ಸಿ.ಸಿ. ಕ್ಯಾಮೆರಾ ಗಳನ್ನೂ ಉಪಯೋಗಿಸಿ ಪರೀಕ್ಷೆಯಲ್ಲಿ ನಕಲು, ಅಕ್ರಮ ಆಗದಂತೆ ನೋಡಿಕೊಳ್ಳಬೇಕೇ ಹೊರತು ಈ ರೀತಿಯಾದ ಅವೈಜ್ಞಾನಿಕ ಕ್ರಮಗಳಿಂದ ಸಾಧ್ಯವಿಲ್ಲ. ಅಷ್ಟಕ್ಕೂ, ಕಿವಿಯೋಲೆ ಹಾಗೂ ಮೂಗುತಿಯಲ್ಲಿ ಏನನ್ನು ಅಡಗಿಸಿಕೊಳ್ಳಬಹುದು ಎಂಬುದನ್ನು ಪ್ರಾಧಿಕಾರ ಸ್ಪಷ್ಟೀಕರಿಸಬೇಕು ಎಂದಿದ್ದಾರೆ.

ಈ ರೀತಿಯಾದ ಅವೈಜ್ಞಾನಿಕ, ಅತಾರ್ಕಿಕ ನಿರ್ಧಾರಗಳನ್ನು ಪರೀಕ್ಷಾ ಪ್ರಾಧಿಕಾರ ಕೈಗೊಂಡರೆ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳುವ ಎಚ್ಚರಿಕೆಯನ್ನು ಯತ್ನಾಳ್ ನೀಡಿದ್ದಾರೆ.