
ಬಳ್ಳಾರಿ: ನಗರದ ಬ್ಯಾನರ್ ಗಲಾಟೆ ಹಾಗೂ ಗುಂಡಿನ ದಾಳಿ ಪ್ರಕರಣ ರಾಜಕೀಯವಾಗಿ ತೀವ್ರ ತಿರುವು ಪಡೆದುಕೊಂಡಿದ್ದು, ಮಾಜಿ ಸಚಿವರಾದ ಬಿ. ಶ್ರೀರಾಮುಲು ಹಾಗೂ ಗಣಿಗಾರಿಕಾ ಉದ್ಯಮಿ ಜನಾರ್ದನ ರೆಡ್ಡಿ ಅವರು, ಈ ದಾಳಿ ಜನಾರ್ದನ ರೆಡ್ಡಿಯವರನ್ನೇ ಗುರಿಯಾಗಿಸಿಕೊಂಡು ನಡೆಸಿದ ‘ಪೂರ್ವಯೋಜಿತ ದಾಳಿ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇದು ಆಕಸ್ಮಿಕ ಘಟನೆ ಅಲ್ಲ. ಜನಾರ್ದನ ರೆಡ್ಡಿಯವರ ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಸಂಪೂರ್ಣವಾಗಿ ಸುಟ್ಟುಹಾಕುವ ಉದ್ದೇಶದೊಂದಿಗೆ ದಾಳಿ ನಡೆಸಲಾಗಿದೆ,” ಎಂದು ಹೇಳಿದರು. ಇದೇ ವೇಳೆ, ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ವಿರುದ್ಧವೂ ಅವರು ಆರೋಪ ಹೊರಿಸಿದರು.
“ಕಾಂಗ್ರೆಸ್ ಕಾರ್ಯಕರ್ತರು ಕೇವಲ ಬ್ಯಾನರ್ ಕಟ್ಟಲು ಬಂದಿರಲಿಲ್ಲ. ಜನಾರ್ದನ ರೆಡ್ಡಿಯವರ ಮೇಲೆ ಗುಂಡು ಹಾರಿಸುವ ಹಾಗೂ ಮನೆಗೆ ಬೆಂಕಿ ಹಚ್ಚುವ ಉದ್ದೇಶದಿಂದಲೇ ಬಂದಿದ್ದರು. ಗುಂಡು ಗಾಳಿಗೆ ಹಾರಿಸಲ್ಪಟ್ಟಿಲ್ಲ, ಅದು ನೇರವಾಗಿ ಜನಾರ್ದನ ರೆಡ್ಡಿಯವರನ್ನೇ ಗುರಿಯಾಗಿಸಿಕೊಂಡಿತ್ತು. ದುರ್ಬಾಗ್ಯವಶಾತ್, ಅಮಾಯಕ ಯುವಕ ರಾಜಶೇಖರ್ ಪ್ರಾಣ ಕಳೆದುಕೊಂಡಿದ್ದಾನೆ,” ಎಂದು ಶ್ರೀರಾಮುಲು ಹೇಳಿದರು.
