
ಹೊಸ ಕಾಯ್ದೆಯು ರಾಜ್ಯವು ತನ್ನ ಮಾನದಂಡ ಹಂಚಿಕೆಯನ್ನು ಮೀರಿ ಭರಿಸಬೇಕಾದ ಯಾವುದೇ ವೆಚ್ಚವನ್ನು ಕೇಂದ್ರ ಸರ್ಕಾರವು ನಿರ್ದೇಶಿಸಿದ ಕ್ರಮಗಳ ಪ್ರಕಾರ ರಾಜ್ಯಗಳೇ ಹೊರಬೇಕು ಎಂದು ಹೇಳುತ್ತದೆ. ಇದು ಕೇಂದ್ರವು ನಿಗದಿಪಡಿಸಿದ ಮಿತಿಯನ್ನು ಮೀರಿದ ಬೇಡಿಕೆಗೆ 100% ಜವಾಬ್ದಾರಿಯನ್ನು ರಾಜ್ಯಗಳು ಹೊರುವಂತೆ ಮಾಡಬಹುದು. ರಾಜ್ಯವು ನಿಗದಿತ ಅಥವಾ ಅದನ್ನು ಮೀರಿದ ವೆಚ್ಚವನ್ನು ಭರಿಸಲು ಸಾಧ್ಯವಾಗದಿದ್ದರೆ, ಜನರ ಅರ್ಹ ಕೂಲಿ ಅವಧಿಯ ಹಕ್ಕನ್ನು ಜಾರಿಗೊಳಿಸಲು ಸಾಧ್ಯವಿಲ್ಲ, ಇದು ಬೇಡಿಕೆ ಇರುವ ಕಡೆಗಳಲ್ಲಿ ಅನುದಾನ ನೀಡಲೇಬೇಕು ಎಂಬ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮನರೇಗಾ ಯೋಜನೆಯ ಹೆಸರು ಮತ್ತು ಸ್ವರೂಪದ ಬದಲಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಈ ಕಾಯ್ದೆಯು ಬಿತ್ತನೆ ಮತ್ತು ಕೊಯ್ಲು ಹೆಚ್ಚಾಗಿ ನಡೆಯುವ ಸಮಯದಲ್ಲಿ ಒಟ್ಟು 60 ದಿನಗಳ ಅವಧಿ ಕಾಮಗಾರಿಗಳನ್ನು ನಡೆಸದಿರುವ ಬಗ್ಗೆ ಮುಂಚಿತವಾಗಿ ಅಧಿಸೂಚಿಸಬೇಕು ಎಂದು ಆದೇಶಿಸುತ್ತದೆ. ಕೃಷಿ ಚಟುವಟಿಕೆಗಳು ಆ ಸಮಯದಲ್ಲಿ ಹೆಚ್ಚಾಗಬಹುದಾದರೂ, ಇಂತಹ ಒಂದು ಸಮಗ್ರ ನಿರ್ಬಂಧವು ಇನ್ನೂ ಕೂಲಿ ಉದ್ಯೋಗದ ಅಗತ್ಯವಿರುವವರ ಹಕ್ಕನ್ನು ಕಸಿಯುತ್ತದೆ, ವಿಶೇಷವಾಗಿ ಆದಿವಾಸಿ ಮತ್ತು ಅತಿ ಹಿಂದುಳಿದ ಸಮುದಾಯಗಳಂತಹ ದುರ್ಬಲ ಸಮುದಾಯಗಳು ಸಾಕಷ್ಟು ಕೃಷಿ ಕೆಲಸವನ್ನು ಪಡೆಯದೆ ಇರಬಹುದು. ಈ ನಿಬಂಧನೆಯು ಕೆಲಸದ ಅವಧಿಯನ್ನು ಕಡಿಮೆ ಮಾಡುವುದರಿಂದ ಕುಟುಂಬಗಳ ಸಂಪಾದನೆ ಕ್ಷೀಣಿಸುವ ಸ್ಥಿತಿಯನ್ನು ತಂದೊಡ್ಡುತ್ತದೆ, ಇದರಿಂದ ಅವರ ಜೀವನ ನಿರ್ವಹಣೆಯೂ ಕಷ್ಟವಾಗುತ್ತದೆ. ಪರಿಣಾಮವಾಗಿ ಜೀತ ಪದ್ಧತಿಗೆ ದಾರಿಯಾಗಬಹುದು, ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಕಡಿಮೆಯಾಗಲಿದೆ ಹಾಗೂ ನಗರ ಪ್ರದೇಶಗಳತ್ತ ಕೂಲಿಕಾರ್ಮಿಕರ ವಲಸೆಯೂ ಹೆಚ್ಚಾಗಲಿದೆ ಎಂದಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಹೊಸ ನಿಯಮಗಳು ಉದ್ಯೋಗ ಖಾತ್ರಿ ಯೋಜನೆಯ ಮೂಲ ಆಶಯಕ್ಕೆ ವಿರುದ್ಧವಾಗಿದ್ದು, “ಕೆಲಸದ ಹಕ್ಕು” ಅನ್ನು “ಅನುಮತಿ ಸಿಕ್ಕರೆ ಮಾತ್ರ ಕೂಲಿ”ಗೆ ಬದಲಾಯಿಸುತ್ತದೆ; “ಗ್ರಾಮೀಣ ಪ್ರದೇಶಗಳಾದ್ಯಂತ ಕೆಲಸ” ಇಂದ “ಅನುಮತಿ ನೀಡಿದೆಡೆ ಮಾತ್ರ ಕೂಲಿ”ಗೆ; ಮತ್ತು “ವರ್ಷಪೂರ್ತಿ ಕೆಲಸ” ದಿಂದ “ಕೃಷಿ ಚಟುವಟಿಕೆಗಳ ಋತುವಿನಲ್ಲಿ ಕೆಲಸವಿಲ್ಲ” ಎಂದು ಬದಲಾಯಿಸುತ್ತದೆ. ಇದು ಗ್ರಾಮೀಣ ಭಾಗದಲ್ಲಿ ಸಂಪನ್ಮೂಲ ಸೃಷ್ಟಿಯ ಆಶಯವನ್ನು ಬದಲಾಯಿಸಿ, ಗುತ್ತಿಗೆದಾರರ ಕೇಂದ್ರಿತ ಮಾದರಿಯಾಗಿಸಲು ದಾರಿ ಮಾಡಿಕೊಡುವ ಅಪಾಯವಿದೆ ಎಂದು ಸಿದ್ದರಾಮಯ್ಯ ಅವರು ಕೇಂದ್ರದ ಗಮನಸೆಳೆದಿದ್ದಾರೆ.
ಹೊಸ ಕಾಯ್ದೆಯಲ್ಲಿ ಹೆಚ್ಚಿನ ತಾಂತ್ರಿಕ ಹಸ್ತಕ್ಷೇಪಕ್ಕೆ ಅವಕಾಶವಿದ್ದು, ಇದರಿಂದ ಬಡತನ ರೇಖೆಗಿಂತ ಕೆಳಗಿರುವ ಮತ್ತು ಡಿಜಿಟಲ್ ಸೌಲಭ್ಯವಿಲ್ಲದ ಗ್ರಾಮೀಣ ನಾಗರಿಕರನ್ನು, ವಿಶೇಷವಾಗಿ ದಲಿತ ಮತ್ತು ಆದಿವಾಸಿ ಸಮುದಾಯಗಳನ್ನು ಯೋಜನೆಯಿಂದ ದೂರ ಮಾಡಬಹುದು ಎಂದಿದ್ದಾರೆ.
ವಿಬಿ-ಜಿ ರಾಮ್ ಜಿ ಕಾಯ್ದೆಯ ಜಾರಿಯು ಸಂವಿಧಾನದ 258 ಮತ್ತು 280ನೇ ವಿಧಿಗಳನ್ನು ಉಲ್ಲಂಘಿಸುತ್ತದೆ. ಸಂವಿಧಾನದ ಈ ವಿಧಿಗಳು ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ಹಣಕಾಸು ಚೌಕಟ್ಟು ವಿಧಿಸುವ ಮುನ್ನ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ, ಹಣಕಾಸು ಒಕ್ಕೂಟ, ಮತ್ತು ಸ್ಥಳೀಯ ಆಡಳಿತ ಬಲಗೊಳಿಸುವಿಕೆಗೆ ಮಹತ್ವ ನೀಡುತ್ತದೆ. ಆದರೆ ಕೇಂದ್ರ ಸರ್ಕಾರದ ಧೋರಣೆ ಸಹಕಾರಿ ಒಕ್ಕೂಟದ ಅಡಿಪಾಯಕ್ಕೆ ಅಪಾಯಕಾರಿಯಾಗಿದೆ ಎಂದವರು ಪ್ರತಿಪಾದಿಸಿದ್ದಾರೆ.
ಉದ್ಯೋಗ ಖಾತ್ರಿ ಕಾನೂನು ಕೇವಲ ಒಂದು ಕಲ್ಯಾಣ ಕಾರ್ಯಕ್ರಮವಲ್ಲ; ಇದೊಂದು ಐತಿಹಾಸಿಕ, ವಿಶ್ವಮಾನ್ಯತೆ ಪಡೆದ, ಹಕ್ಕು-ಆಧಾರಿತ ಶಾಸನವಾಗಿದೆ. ಇದು ಗ್ರಾಮ ಸ್ವರಾಜ್ಯ ಮತ್ತು ಅಂತ್ಯೋದಯ ಕಲ್ಪನೆಗಳ ಪ್ರತೀಕವಾದ ಮಹಾತ್ಮ ಗಾಂಧೀಜಿಯ ಹೆಸರನ್ನು ಹೊಂದಿರುವುದು ಅರ್ಥಪೂರ್ಣವಾಗಿದೆ. ಆದರೆ ಪ್ರಸ್ತುತ ಕಾನೂನಿನಲ್ಲಿ ಮಹಾತ್ಮಾ ಗಾಂಧಿ ಅವರ ಹೆಸರನ್ನು ತೆಗೆದುಹಾಕಿರುವುದು ದುರದೃಷ್ಟಕರವಾಗಿದ್ದು, ಹೊಸ ಕಾಯ್ದೆಯ ನೈತಿಕ ಬಲವನ್ನೇ ದುರ್ಬಲಗೊಳಿಸಿದೆ ಎಂದಿದ್ದಾರೆ.
ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ವಿಬಿ-ಜಿ ರಾಮ್ ಜಿ ಕಾಯ್ದೆಯ ಅನುಷ್ಠಾನವನ್ನು ತಡೆಹಿಡಿಯಲು, ಜೀವನೋಪಾಯದ ಹಕ್ಕನ್ನು ಬಲಪಡಿಸಲು ಮತ್ತು ಸಂವಿಧಾನಬದ್ಧವಾಗಿ ರಾಜ್ಯ ಸರ್ಕಾರಗಳೊಂದಿಗಿನ ಸಮಾಲೋಚನೆಗಳನ್ನು ನಡೆಸುವ ನಿಟ್ಟಿನಲ್ಲಿ ತಾವು ವೈಯಕ್ತಿಕವಾಗಿ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
