Wednesday, January 28

ಮಾರಕ ದಾಳಿಗೆ ಪ್ರತೀಕಾರ: ಸಿರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಅಮೆರಿಕ ದಾಳಿ

ವಾಷಿಂಗ್ಟನ್: ಕಳೆದ ವಾರ ಅಮೆರಿಕದ ಸೈನಿಕರ ಮೇಲೆ ನಡೆದ ಮಾರಕ ದಾಳಿಗೆ ಪ್ರತೀಕಾರವಾಗಿ, ಅಮೆರಿಕ ಮಧ್ಯ ಸಿರಿಯಾದಾದ್ಯಂತ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆಯ ಡಜನ್ಗಟ್ಟಲೆ ಗುರಿಗಳ ಮೇಲೆ ವಾಯುದಾಳಿ ನಡೆಸಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.

‘ಆಪರೇಷನ್ ಹಾಕೈ ಸ್ಟ್ರೈಕ್’ ಎಂಬ ಹೆಸರಿನ ಈ ಕಾರ್ಯಾಚರಣೆಯಡಿ ಐಸಿಸ್ ಉಗ್ರರು, ಅವರ ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರ ಸಂಗ್ರಹ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿವೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ದೃಢಪಡಿಸಿದ್ದಾರೆ. ಅಗತ್ಯವಿದ್ದರೆ ಮುಂದುವರಿದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದೂ ಅವರು ಎಚ್ಚರಿಸಿದ್ದಾರೆ.

ಇದು ಯುದ್ಧದ ಆರಂಭವಲ್ಲ, ಬದಲಾಗಿ ಪ್ರತೀಕಾರದ ಸ್ಪಷ್ಟ ಘೋಷಣೆ ಎಂದು ಹೆಗ್ಸೆತ್ ಹೇಳಿದ್ದಾರೆ. “ಅಮೆರಿಕನ್ನರನ್ನು ಗುರಿಯಾಗಿಸಿಕೊಂಡರೆ, ಅವರು ಜಗತ್ತಿನ ಎಲ್ಲಿಯಾದರೂ ಇರಲಿ, ಅವರನ್ನು ಬೇಟೆಯಾಡಿ ನಾಶಪಡಿಸಲಾಗುತ್ತದೆ” ಎಂಬ ಸಂದೇಶವನ್ನು ಈ ದಾಳಿ ನೀಡುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, “ಡಿಸೆಂಬರ್ 13ರಂದು ಪಾಲ್ಮಿರಾ ಬಳಿ ಅಮೆರಿಕ ಪಡೆಗಳ ಮೇಲೆ ನಡೆದ ದಾಳಿಗೆ ನೇರ ಪ್ರತಿಕ್ರಿಯೆಯಾಗಿ, ಐಸಿಸ್ ಉಗ್ರರು, ಅವರ ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರ ತಾಣಗಳನ್ನು ಸಂಪೂರ್ಣವಾಗಿ ನಾಶಪಡಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ಆರಂಭಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಾಯಕತ್ವದಲ್ಲಿ ಅಮೆರಿಕ ತನ್ನ ನಾಗರಿಕರು ಮತ್ತು ಸೈನಿಕರ ರಕ್ಷಣೆಗೆ ಯಾವತ್ತೂ ಹಿಂದೆ ಸರಿಯುವುದಿಲ್ಲ” ಎಂದು ತಿಳಿಸಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಸಿರಿಯಾದ ಪಾಲ್ಮಿರಾ ಸಮೀಪ ನಡೆದ ದಾಳಿಯಲ್ಲಿ ಇಬ್ಬರು ಅಮೆರಿಕ ಸೈನಿಕರು ಹಾಗೂ ಒಬ್ಬ ಅಮೆರಿಕ ನಾಗರಿಕ ಅನುವಾದಕ ಮೃತಪಟ್ಟಿದ್ದರು. ಇನ್ನೂ ಮೂವರು ಅಮೆರಿಕ ಸೈನಿಕರು ಗಾಯಗೊಂಡಿದ್ದರು. ದಾಳಿಕೋರನು ಅಮೆರಿಕ ಮತ್ತು ಸಿರಿಯನ್ ಪಡೆಗಳ ಬೆಂಗಾವಲು ವಾಹನವನ್ನು ಗುರಿಯಾಗಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಈ ದಾಳಿಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ತೀವ್ರ ಪ್ರತೀಕಾರ’ದ ಭರವಸೆ ನೀಡಿದ್ದರು. ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ಅನ್ನಾ ಕೆಲ್ಲಿ, “ಸಿರಿಯಾದಲ್ಲಿ ನಮ್ಮ ವೀರರನ್ನು ಹತ್ಯೆ ಮಾಡಿದ ಐಸಿಸ್ ವಿರುದ್ಧ ಅಮೆರಿಕ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂಬ ಅಧ್ಯಕ್ಷರ ಮಾತು ಈಗ ಕಾರ್ಯರೂಪಕ್ಕೆ ಬಂದಿದೆ” ಎಂದು ಹೇಳಿದ್ದಾರೆ.