ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ಮಾಡುತ್ತಿರುವಾಗ ಅವರ ತೇಜೋವಧೆ ಮಾಡಿ, ಅವರ ವ್ಯಕ್ತಿತ್ವಕ್ಕೆ ಮಸಿ ಬಳಿದು, ಸರ್ಕಾರ ಅಸ್ಥಿರಗೊಳಿಸುವ ದುರುದ್ದೇಶದಿಂದ ಬಿಜೆಪಿ ಹಾಗೂ ಜೆಡಿಎಸ್ ನವರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷರಾದ ವಿ.ಆರ್ ಸುದರ್ಶನ್ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ .ಎಲ್ ಶಂಕರ್, ಎಲ್.ಹನುಮಂತಯ್ಯ, ಬಿ.ಆರ್.ಪಾಟೀಲ್ ಉಪಸ್ಥಿತಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿ.ಆರ್ ಸುದರ್ಶನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ಮಾಡುತ್ತಿರುವಾಗ ಅವರ ತೇಜೋವಧೆ ಮಾಡಿ, ಅವರ ವ್ಯಕ್ತಿತ್ವಕ್ಕೆ ಮಸಿ ಬಳಿದು, ಸರ್ಕಾರ ಅಸ್ಥಿರಗೊಳಿಸುವ ದುರುದ್ದೇಶದಿಂದ ಬಿಜೆಪಿ ಹಾಗೂ ಜೆಡಿಎಸ್ ನವರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇದರ ಜತೆಗೆ ರಾಜ್ಯಪಾಲರು ನೋಟೀಸ್ ನೀಡುವ ಮೂಲಕ ಆತುರದ ನಿರ್ಧಾರಕ್ಕೆ ಬಂದಿದ್ದು, ಅವರು ಆತುರ ನಿರ್ಧಾರ ಮಾಡಬಾರದು ಎಂದು ಮನವಿ ಮಾಡುತ್ತೇವೆ ಎಂದರು.
ಸಿದ್ದರಾಮಯ್ಯ ವಿರುದ್ಧದ ತನಿಖೆ ಬಗ್ಗೆ ಯಾರು ಮಾನವಿ ಮಾಡುತ್ತಿದ್ದಾರೆ. ಅವರ ಹಿನ್ನೆಲೆಯನ್ನು ರಾಜ್ಯಪಾಲರು ಪರಿಶೀಲಿಸಬೇಕು. ಕಾನೂನಿನ ನಿಯಮಗಳನ್ನು ಗಮನಹರಿಸಬೇಕು. ಅವರು ಬಿಜೆಪಿ ಹಾಗೂ ಜೆಡಿಎಸ್ ಅವರ ರೀತಿ ನಡೆದುಕೊಂಡರೆ ಸಂವಿಧಾನಕ್ಕೆ ಮಾಡುವ ಅಪಚಾರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ 136 ಸ್ಥಾನಗಳನ್ನು ಗೆದ್ದು ಆರಿಸಿಬಂದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ನಾವು ಕಟುವಾಗಿ ಖಂಡಿಸುತ್ತೇವೆ. ಅಂತಿಮವಾಗಿ ಜನ ಈ ಆರೋಪವನ್ನು ತಿರಸ್ಕರಿಸುತ್ತಿದ್ದಾರೆ ಎಂದವರು ಹೇಳಿದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್, ದೇಶದಲ್ಲಿ ಅಧಿಕಾರ ಮಾಡುತ್ತಿರುವ ಎನ್ ಡಿಎ ಸರ್ಕಾರ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸುವುದನ್ನು ಹವ್ಯಾಸವಾಗಿ ಮಾಡಿಕೊಂಡಿದ್ದು, ಅನೇಕ ಕಡೆಗಳಲ್ಲಿ ಯಶಸ್ಸು ಸಾಧಿಸಿದ್ದಾರೆ. ಗೋವಾ, ಮಹಾರಾಷ್ಟ್ರ, ಮಧ್ಯ ಪ್ರದೇಶ ಸೇರಿದಂತೆ ಅನೇಕ ಕಡೆ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಸರ್ಕಾರದ ಮುಖ್ಯಸ್ಥರನ್ನು ಗುರಿಯಾಗಿಸುವುದು, ಮಂತ್ರಿಗಳನ್ನು ಗುರಿಯಾಗಿಸುವುದು, ಪಕ್ಷಗಳನ್ನು ಒಡೆಯುವ ಮೂಲಕ ಸರ್ಕಾರ ಅಶ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಪರಿಪಾಠ ಮುಂದುವರಿದ ಭಾಗವೇ ಕರ್ನಾಟಕದಲ್ಲಿ ನಡೆಯುತ್ತಿದೆ. ಸಿದ್ದರಾಮಯ್ಯ ಅವರನ್ನು ಗುರಿ ಮಾಡಿದರೆ ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸಲು ಸುಲಭವಾಗುತ್ತದೆ ಎಂದು ಭಾವಿಸಿದ್ದಾರೆ. ಕಳೆದ ಐದು ದಶಕಗಳ ಕಾಲ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ಉಳಿಸಿಕೊಂಡಿರು ಘನತೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಮಾನಸಿಕವಾಗಿ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆ ಮೂಲಕ ಸರ್ಕಾರ ಅಸ್ಥಿರಗೊಳಿಸಬಹುದು ಎಂಬ ಭ್ರಮೆಯಲ್ಲಿ ಇದ್ದಾರೆ. ಇಲ್ಲದಿದ್ದರೆ, ಸಿದ್ದರಾಮಯ್ಯ ಅವರಿಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ವಿಚಾರದಲ್ಲಿ ಸಿದ್ದರಾಮಯ್ಯ ಅವರೇ ರಾಜೀನಾಮೆ ನೀಡಬೇಕು ಎಂದು ಗುರಿ ಮಾಡಿ ಅನೇಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಇದು ರಾಜಕೀಯ ಉದ್ದೇಶದಿಂದ ಗುರಿಯಾಗಿಸುತ್ತಿರುವ ಕಾರ್ಯಚಟುವಟಿಕೆಯಾಗಿವೆ. ಬಹಳ ವರ್ಷಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಮುಖ್ಯಸ್ಥರಿಗೆ ಸಿದ್ದರಾಮಯ್ಯ ಅವರು ಮೊದಲ ಟಾರ್ಗೆಟ್. ಈ 1935ನೇ ಇಸವಿಯಿಂದ 2021-22ರಲ್ಲಿ ಪಾರ್ವತಮ್ಮನವರಿಗೆ ನಿವೇಶನ ಹಂಚಿಕೆಯಾಗುವವರೆಗೂ ಎಲ್ಲಿಯೂ ಸಿದ್ದರಾಮಯ್ಯ ಅವರು ಭಾಗಿಯಾಗಿರುವುದಕ್ಕೆ, ಪ್ರಭಾವ ಬೀರಿರುವುದಕ್ಕೆ ಪ್ರಕರಣದಲ್ಲಿ ಯಾವ ಸಂದರ್ಭದಲ್ಲೂ ದಾಖಲೆಗಳಿಲ್ಲ. ಆದರೂ ಅವರ ರಾಜೀನಾಮೆ ಕೇಳಲಾಗುತ್ತಿದೆ ಎಂದು ದೂರಿದರು.