Saturday, December 6

ರಾಜಭವನಕ್ಕೆ ಮರುನಾಮಕರಣ; ಇನ್ನು ಮುಂದೆ ‘ಲೋಕಭವನ ಕರ್ನಾಟಕ’

ಬೆಂಗಳೂರು: ರಾಜ್ಯಪಾಲರ ಅಧಿಕೃತ ನಿವಾಸವಾಗಿರುವ ಬೆಂಗಳೂರು ರಾಜಭವನಕ್ಕೆ ಹೊಸ ಹೆಸರು ಸಿಕ್ಕಿದೆ. ಇನ್ನುಮುಂದೆ ಅದನ್ನು ‘ಲೋಕ ಭವನ, ಕರ್ನಾಟಕ’ ಎಂದು ಕರೆಯಲಾಗುವುದು ಎಂದು ರಾಜಭವನ ಮೂಲಗಳು ತಿಳಿಸಿವೆ.

ಕೇಂದ್ರ ಗೃಹ ಸಚಿವಾಲಯ ನವೆಂಬರ್ 25, 2025ರಂದು ಎಲ್ಲಾ ರಾಜ್ಯಗಳ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳಿಗೆ ಪತ್ರ ಬರೆದು, ದೇಶದ ಎಲ್ಲಾ ರಾಜಭವನಗಳನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡಲು ಶಿಫಾರಸು ಮಾಡಿತ್ತು. ಅದರಂತೆ ಕರ್ನಾಟಕವು ಕೂಡಾ ಹೊಸ ಹೆಸರನ್ನು ಜಾರಿಗೆ ತಂದಿದೆ.

ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ಬುಧವಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕಳುಹಿಸಿದ ಪತ್ರದಲ್ಲಿ, ಸರ್ಕಾರದ ಎಲ್ಲ ಇಲಾಖೆಗಳಲ್ಲಿ, ಸರ್ಕಾರಿ ಆದೇಶಗಳಲ್ಲಿ, ಅಧಿಕೃತ ವ್ಯವಹಾರಗಳಲ್ಲಿ, ವೆಬ್‌ಸೈಟ್‌ಗಳಲ್ಲಿ ಹಾಗೂ ಫಲಕಗಳಲ್ಲಿ ‘ರಾಜಭವನ’ ಎಂಬುದಕ್ಕೆ ಬದಲಾಗಿ ‘ಲೋಕ ಭವನ, ಕರ್ನಾಟಕ’ ಎನ್ನುವ ಹೆಸರನ್ನೇ ಬಳಸಬೇಕು ಎಂದು ಸೂಚಿಸಲಾಗಿದೆ.

ಇಲ್ಲಿಯವರೆಗೂ ಬ್ರಿಟಿಷ್ ಪರಂಪರೆಯಂತೆ ರಾಜಭವನಗಳು ರಾಜ್ಯಪಾಲರ ಆಡಳಿತ ಕೇಂದ್ರಗಳಾಗಿದ್ದವು. ಸಾರ್ವಜನಿಕರಿಗೆ ಹೆಚ್ಚಿನ ಪ್ರವೇಶ ಕಲ್ಪಿಸಬೇಕು ಹಾಗೂ ಪ್ರವಾಸಿಗರು, ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಮರುನಾಮಕರಣಕ್ಕೆ ಕೇಂದ್ರವು ಒತ್ತಾಯಿಸಿದೆ ಎಂದು ತಿಳಿದುಬಂದಿದೆ.

ಹೊಸ ಹೆಸರು ತಕ್ಷಣದಿಂದಲೇ ಅನ್ವಯವಾಗಲಿದ್ದು, ಅಧಿಕೃತ ದಾಖಲೆಗಳಲ್ಲಿ ‘ಲೋಕ ಭವನ, ಕರ್ನಾಟಕ’ ಎಂಬ ಪದಪ್ರಯೋಗ ಜಾರಿಯಲ್ಲಿರಲಿದೆ.