Sunday, February 15

ವರ್ಗಾವಣೆ ಶಿಫಾರಸು ಪತ್ರ ವಿವಾದ: ಸಿಎಂ ಕಚೇರಿಯಲ್ಲಿ ‘ಲೆಡರ್ ಹೆಡ್’ ದಂಧೆ ನಡೆಯುತ್ತಿದೆ ಎಂದು ಬಿಜೆಪಿ ಆರೋಪ

ಬೆಂಗಳೂರು: ಸಿಎಂ ಸಹಿ ಇರುವ ವರ್ಗಾವಣೆ ಶಿಫಾರಸು ವಿಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ಬಿಜೆಪಿ ನಾಯಕರು ವಾಕ್ಸಮರ ಮುಂದುವರಿಸಿದ್ದಾರೆ. Aa ಪತ್ರವನ್ನು ನಕಲಿ ಎಂದಿರುವ ಕಾಂಗ್ರೆಸ್, ಈ ಪತ್ರವನ್ನು ಮುಂದಿಟ್ಟು ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಇದಕ್ಕೆ ಎದಿರೇಟು ನೀಡಿರುವ ಬಿಜೆಪಿ ಶಾಸಕ ಸುನಿಲ್ ಕುಮಾರ್, ಸಿಎಂ ಸಹಿ ಇರುವ ಪತ್ರವೇ ನಕಲಿ ಎಂದಾದರೆ ಇನ್ನು ಸಿಎಂ ಕಚೇರಿ ಹೇಗೆ ಕಾರ್ಯ ನಿರ್ವಹಿಸುತ್ತಿದೆ ? ಎಂಬುದನ್ನು ಯೋಚಿಸಬೇಕಲ್ಲವೇ? ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಈಗ ಖುರ್ಚಿಯ ಮೇಲಷ್ಟೇ ಗಮನ. ಕಚೇರಿಯ ಮೇಲೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದಿರುವ ಸುನಿಲ್ ಕುಮಾರ್, ಈ ಪತ್ರ ನಕಲಿ ಎಂದಾದರೆ ಪತ್ರದಲ್ಲಿರುವ ಸಹಿಯ ಅಸಲಿಯತ್ತೇನೆಂಬುದೂ ಇತ್ಯರ್ಥವಾಗಬೇಕು. ಹೀಗಾಗಿ ಈ ಸಹಿ ಅಸಲಿಯೋ, ನಕಲಿಯೋ ಎಂಬುದನ್ನು ವಿಧಿ ವಿಜ್ಞಾನ ಪ್ರಯೋಗಾಲಯ (FSL) ಪರೀಕ್ಷೆಗೆ ಒಳಪಡಿಸಬೇಕು ಎಂದು ಸವಾಲು ಹಾಕಿದ್ದಾರೆ.

ಇದು ಸಿಎಂ ಕಚೇರಿಯಲ್ಲಿ ನಡೆಯುವ ಬಹುದೊಡ್ಡ ” ಲೆಡರ್ ಹೆಡ್ ” ದಂಧೆಯ ಎಳೆಯಾಗಿದ್ದರೂ ಆಶ್ಚರ್ಯ ಇಲ್ಲ ಎಂದಿರುವ ಅವರು,
ದಿನಾಂಕವಿಲ್ಲದ ಪತ್ರಕ್ಕೆ ಸಿಎಂ ಏಕೆ ಸಹಿ ಹಾಕಿದರು, ಪತ್ರಕ್ಕೆ ಸಹಿ ಹಾಕಿಸಿದ ವ್ಯಕ್ತಿಗಳು ಯಾರು? ಅವರಿಗೆ ಇದರಿಂದಾಗುವ ಲಾಭವೇನು? ಎಂಬುದೂ ತನಿಖೆಯಿಂದ ಬಹಿರಂಗಗೊಳ್ಳಲಿ. ಇಲ್ಲವಾದರೆ ಸಿದ್ದರಾಮಯ್ಯನವರು ಮಾಡಿರುವ ತನಿಖಾದೇಶ “kill the messenger” ಎಂಬ ತಂತ್ರದಂತಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಸಿದ್ದರಾಮಯ್ಯನವರಂತೆ ನಾನೂ ಕೂಡಾ ಸಾರ್ವಜನಿಕ‌ ಜೀವನದಲ್ಲಿರುವ ವ್ಯಕ್ತಿ. ವಿಪಕ್ಷದಲ್ಲಿರುವ ಜವಾಬ್ದಾರಿಯುತ ಶಾಸಕ. ನನಗೆ ಲಭಿಸಿದ ಈ ಪತ್ರ ಅಸಲಿ ಎಂದೇ ನಂಬಿ ಸರ್ಕಾರದ ಆಡಳಿತಾತ್ಮಕ ಲೋಪಕ್ಕೆ ಇದೊಂದು ಉದಾಹರಣೆ ಎಂದಿದ್ದೇನೆ. ಈ ರೀತಿಯ ಅಭಿವ್ಯಕ್ತಿಯೇ ತಪ್ಪು ಎನ್ನುವವರು ಕೂಡಾ ಹಿಂದೆ ವಿಪಕ್ಷದಲ್ಲಿದ್ದಾಗ ಏನು ಮಾಡಿದ್ದರೆಂಬುದನ್ನು ವಿವೇಚಿಸಬೇಕಾಗುತ್ತದೆ.
ಪತ್ರ ನಕಲಿ ಎಂದು ವಾದಿಸುವವರ ಮೇಲೆಯೂ‌‌ ಒಂದಿಷ್ಟು ಜವಾಬ್ದಾರಿ ಇದೆ. ಏಕೆಂದರೆ ಇದಕ್ಕೆ ಸಹಿ ಹಾಕಿರುವುದು ರಾಜ್ಯದ ಮುಖ್ಯಮಂತ್ರಿ. ಪತ್ರವೇ ನಕಲಿ ಎನ್ನುವುದಕ್ಕೆ ಮುನ್ನ ” ಲೆಟರ್ ಹೆಡ್ ” ಹಗರಣದ ಬಗ್ಗೆಯೂ ತನಿಖೆಯಾಗಲಿ’ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.