ವಿಕಸಿತ್ ಭಾರತ: 140 ಕೋಟಿ ಜನರಿಂದ ಹೊಸ ಭಾರತ ನಿರ್ಮಾಣವಾಗಲಿದೆ’ ಎಂದ ಮೋದಿ

ನವದೆಹಲಿ: ದೇಶಾದ್ಯಂತ ಸ್ವಾತಂತ್ರ್ಯ ದಿನವನ್ನು ದೇಶಭಕ್ತಿಯ ಪ್ರತೀಕವೆಂಬಂತೆ ಆಚರಿಸಲಾಗುತ್ತಿದೆ. ಬೆಳಿಗ್ಗೆಯೇ ಎಲ್ಲೆಡೆ ರಾಷ್ಟ್ರಧ್ವಜಾರೋಹಣ ನೆರವೇರಿದೆ. 78ನೇ ಸ್ವಾತಂತ್ರ್ಯ ದಿನಾಚರಣೆ ದೇಶಪ್ರೇಮದ ಮಹಾಹಬ್ಬವಾಗಿ ಅದ್ಧೂರಿಯಾಗಿ ನಡೆದಿದೆ.

ಇದೇ ವೇಳೆ, ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜರೋಹಣ ಮಾಡಿದರು.

ಈ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡದ ಪ್ರಧಾನಿ ಮೋದಿ, ‘2047ರ ವೇಳೆಗೆ ವಿಕಸಿತ ಭಾರತ’ ನಮ್ಮ ಗುರಿಯಾಗಿದೆ ಎಂದರು. ವಿಕಸಿತ ಭಾರತ ಮೂಲಕ ದೇಶದ 140 ಕೋಟಿ ಜನರಿಂದ ಹೊಸ ಭಾರತ ನಿರ್ಮಾಣವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರದ ನಿರ್ಮಾಣಕ್ಕಾಗಿ ಹಲವರು ಪ್ರಾಣತ್ಯಾಗ ಮಾಡಿದ್ದಾರೆ. ಅವರಿಗೆ ಹೃದಯಪೂರ್ವಕ ನಮನ ಎಂದ ಅವರು, ಭಾರತದ ಸ್ವಾತಂತ್ರ್ಯ ಸೇನಾನಿಗಳಿಗೂ, ರಾಷ್ಟ್ರದ ರಕ್ಷಣೆಗೆ ಯೋಗದಾನ ನೀಡಿದವರಿಗೂ ನನ್ನ ನಮನಗಳು ಎಂದು ಹೇಳಿದರು.

ನೈಸರ್ಗಿಕ ವಿಕೋಪಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮೋದಿ, ಅನೇಕ ಜನರು ಇದರಿಂದ ತಮ್ಮ ಕುಟುಂಬಗಳನ್ನು, ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಸರ್ಕಾರ ಅವರ ಪರವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.