Saturday, December 6

ವ್ಯಾಯಾಮದಿಂದ ಕ್ಯಾನ್ಸರ್ ದೂರವಾಗಬಹುದು: ಸಂಶೋಧನೆ ತೆರೆದಿಟ್ಟ ಸಂಗತಿ

ನವದೆಹಲಿ: ಪ್ರತಿರೋಧ ತರಬೇತಿ (RT) ಹಾಗೂ ಹೆಚ್ಚಿನ ತೀವ್ರತೆಯ ಮಧ್ಯಂತರ ತರಬೇತಿ (HIIT) ಎರಡೂ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಗ್ಗಿಸುವಲ್ಲಿ ಸಹಾಯ ಮಾಡುತ್ತವೆ ಎಂದು ಒಂದು ಅಧ್ಯಯನ ತಿಳಿಸಿದೆ.

ಆಸ್ಟ್ರೇಲಿಯಾದ ಎಡಿತ್ ಕೋವನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, 12 ವಾರಗಳ ತರಬೇತಿ ಬಳಿಕ ಕ್ಯಾನ್ಸರ್ ಬದುಕುಳಿದವರ ರಕ್ತದ ಮಾದರಿಗಳು ಸ್ತನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಶೇಕಡಾ 22ರಿಂದ 25ರವರೆಗೆ ತಗ್ಗಿಸಿದವು.

ವ್ಯಾಯಾಮದ ಪ್ರಭಾವ
ತೂಕದಂತಹ ಬಾಹ್ಯ ಶಕ್ತಿಯನ್ನು ಬಳಸಿ ಸ್ನಾಯು–ಶಕ್ತಿ ಹೆಚ್ಚಿಸುವುದೇ RT; ಕಡಿಮೆ ಅವಧಿಯ ತೀವ್ರ ವ್ಯಾಯಾಮದ ಸ್ಫೋಟ ಹಾಗೂ ಚೇತರಿಕೆ ಅವಧಿಯೊಂದಿಗೆ ನಡೆಯುವದು HIIT. ಎರಡೂ ತರಬೇತಿಗಳು ಮಯೋಕಿನ್ ಎನ್ನುವ ಪ್ರೋಟೀನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.

“RT ಹಾಗೂ HIIT ಎರಡೂ ವ್ಯಾಯಾಮಗಳು ಸಮಾನ ಪರಿಣಾಮಕಾರಿಯಾಗಿವೆ. HIIT ಯಲ್ಲಿ ಸ್ನಾಯು ದ್ರವ್ಯರಾಶಿ ಹೆಚ್ಚಳ, ಕೊಬ್ಬಿನ ಇಳಿಕೆ ಕೂಡಾ ಕ್ಯಾನ್ಸರ್ ಬೆಳವಣಿಗೆಯ ಕಡಿತಕ್ಕೆ ಸಂಬಂಧಿಸಿದೆ” ಎಂದು ಅಧ್ಯಯನದ ಸಂಶೋಧಕ ಫ್ರಾನ್ಸೆಸ್ಕೊ ಬೆಟ್ಟರಿಗಾ ವಿವರಿಸಿದರು.

RT ಸ್ನಾಯು ಶಕ್ತಿ ಹಾಗೂ ದ್ರವ್ಯರಾಶಿ ಸುಧಾರಣೆಗೆ ಕಾರಣವಾಗಿದೆಯಾದರೆ, HIIT ಹೃದಯ-ರಕ್ತನಾಳಗಳ ಫಿಟ್‌ನೆಸ್ ಹಾಗೂ ಕೊಬ್ಬಿನ ದ್ರವ್ಯರಾಶಿ ಇಳಿಕೆಗೆ ಸಹಾಯ ಮಾಡುತ್ತದೆ. “ನೀವು ಯಾವ ರೀತಿಯ ವ್ಯಾಯಾಮ ಮಾಡಿದರೂ ದೇಹದಲ್ಲಿ ಮಯೋಕಿನ್ ಮಟ್ಟ ಹೆಚ್ಚುತ್ತದೆ. ಅಂದರೆ ವ್ಯಾಯಾಮವೇ ಪ್ರಯೋಜನಕಾರಿ” ಎಂದು ಅವರು ಹೇಳಿದರು.

ಬದುಕುಳಿದವರ ಅಧ್ಯಯನ
ಸ್ತನ ಕ್ಯಾನ್ಸರ್ ಬದುಕುಳಿದವರ ಮೇಲೆ ನಡೆಸಿದ ಈ ಪ್ರಯೋಗಾಲಯ ಪರೀಕ್ಷೆಯಲ್ಲಿ, 12 ವಾರಗಳ ನಂತರ ಎಲ್ಲ ಭಾಗವಹಿಸಿದವರಲ್ಲಿಯೂ ಮಯೋಕಿನ್ ಮಟ್ಟ ಗಣನೀಯವಾಗಿ ಹೆಚ್ಚಿರುವುದು ಗಮನಿಸಲಾಯಿತು. ಇದರಿಂದ ವ್ಯಾಯಾಮವು ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿ ಪಾತ್ರವಹಿಸಬಹುದು ಎಂಬುದು ಮತ್ತೊಮ್ಮೆ ದೃಢಪಟ್ಟಿದೆ ಎಂದು ತಂಡ ತಿಳಿಸಿದೆ.