
ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಜುಲೈ 22 ರಿಂದ ಆರಂಭವಾಗಿ ಆಗಸ್ಟ್ 21ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಕೇಂದ್ರ ಸರ್ಕಾರ ಎಂಟು ಹೊಸ ಮಸೂದೆಗಳನ್ನು ಮಂಡಿಸಲು ಯೋಜನೆ ಹಾಕಿಕೊಂಡಿದೆ. ಅಧಿವೇಶನದ ವೇಳಾಪಟ್ಟಿ ಹಾಗೂ ಮಂಡನೆಯಾಗುವ ಮಸೂದೆಗಳ ಬಗ್ಗೆ ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ.
2025ರ ಆದಾಯ ತೆರಿಗೆ ಮಸೂದೆ ಈ ಅಧಿವೇಶನದ ಪ್ರಮುಖ ಆಕರ್ಷಣೆಯಾಗಿದ್ದು, ಈ ವರ್ಷ ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ಪರಿಚಯವಾಗಿತ್ತು. ಬಜೆಟ್ ಅಧಿವೇಶನದ ವೇಳೆ ಇದನ್ನು ಮಂಡಿಸಲಾಗಿದ್ದು, ಈಗ ತಿದ್ದುಪಡಿ ಸ್ವರೂಪದಲ್ಲಿ ಆಯ್ಕೆ ಸಮಿತಿಯಿಂದ ಅಂಗೀಕಾರ ಪಡೆದುಕೊಂಡಿದೆ. ಈಗ ಸಂಪುಟದ ಅನುಮೋದನೆಗಾಗಿ ಕಳುಹಿಸಲಾಗಿದ್ದು, ಬಳಿಕ ಸಂಸತ್ತಿನಲ್ಲಿ ಚರ್ಚೆಗೆ ಬರಲಿದೆ.
ಮಣಿಪುರ ಸರಕು ಮತ್ತು ಸೇವಾ ತೆರಿಗೆ ತಿದ್ದುಪಡಿ ಮಸೂದೆ ಕೂಡ ಪ್ರಸ್ತುತಿಅಗಲಿದೆ. ಈ ಮಸೂದೆ ಮೂಲಕ ರಾಜ್ಯದ ಜಿಎಸ್‌ಟಿ ಕಾನೂನನ್ನು ಕೇಂದ್ರದ ಪ್ರಕಾರ ಜೋಡಿಸುವ ಉದ್ದೇಶವಿದೆ. ಇದೇ ರೀತಿ, ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಮುಂದುವರಿಸಲು ಇನ್ನೊಂದು ಮಸೂದೆ ಕೂಡ ಮಂಡನೆಗೆ ಬರುತ್ತಿದೆ, ಏಕೆಂದರೆ ಪ್ರತಿ ಆರು ತಿಂಗಳಿಗೊಮ್ಮೆ ಇದರ ಮರುಅನುಮೋದನೆ ಅಗತ್ಯವಿರುತ್ತದೆ.
ಅಲ್ಲದೆ, ವ್ಯವಹಾರ ಮಾಡುತ್ತಿರುವವರ ಅನುಕೂಲಕ್ಕಾಗಿ ನಿಯಮಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ‘ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2025’ ಕೂಡ ಮಂಡನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಈ ಅಧಿವೇಶನದಲ್ಲಿ ಚರ್ಚೆಗೆ ಬರಲಿರುವ ಪ್ರಮುಖ ಮಸೂದೆಗಳು ಇವು:
- ಲೇಡಿಂಗ್ ಮಸೂದೆ, 2024
- ಸಮುದ್ರದ ಮೂಲಕ ಸರಕುಗಳ ಸಾಗಣೆ ಮಸೂದೆ
- ಕರಾವಳಿ ಸಾಗಣೆ ಮಸೂದೆ, 2024
- ಗೋವಾ ವಿಧಾನಸಭಾ ಕ್ಷೇತ್ರಗಳ ಪಂಗಡಗಳ ಪ್ರಾತಿನಿಧ್ಯ ಮಸೂದೆ, 2024
- ಮರ್ಚೆಂಟ್ ಶಿಪ್ಪಿಂಗ್ ಮಸೂದೆ, 2024
- ಭಾರತೀಯ ಬಂದರು ಮಸೂದೆ, 2025
- ಆದಾಯ ತೆರಿಗೆ ಮಸೂದೆ, 2025
- ಮಣಿಪುರ ಜಿಎಸ್‌ಟಿ ತಿದ್ದುಪಡಿ ಮಸೂದೆ, 2025
- ಜನ್ ವಿಶ್ವಾಸ್ ಮಸೂದೆ, 2025
- ಭಾರತೀಯ ನಿರ್ವಹಣಾ ಸಂಸ್ಥೆಗಳ ತಿದ್ದುಪಡಿ ಮಸೂದೆ, 2025
- ತೆರಿಗೆ ಕಾನೂನುಗಳು ತಿದ್ದುಪಡಿ ಮಸೂದೆ, 2025
- ಭೂಪರಂಪರೆ ತಾಣಗಳ ಸಂರಕ್ಷಣೆ ಮಸೂದೆ, 2025
- ಗಣಿ ಹಾಗೂ ಖನಿಜಗಳ ತಿದ್ದುಪಡಿ ಮಸೂದೆ, 2025
- ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ, 2025
- ಡೋಪಿಂಗ್ ವಿರೋಧಿ ತಿದ್ದುಪಡಿ ಮಸೂದೆ, 2025
ಈ ಅಧಿವೇಶನದಲ್ಲಿ ಹಿಂದೆ ಮಂಡನೆಯಾದ ಏಳು ಮಸೂದೆಗಳೂ ಚರ್ಚೆಗೆ ಬರಲಿದ್ದು, ಸಂಕೀರ್ಣ ವಿಷಯಗಳ ಪೈಕಿ ಕೆಲವು ರಾಜಕೀಯ ಪ್ರಸ್ತಾಪನೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.