
ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಇವಿಎಂ ಬದಲಿಗೆ ಮತಪತ್ರಗಳ ಮೂಲಕ ನಡೆಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿ ನಿಲುವನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸರ್ಕಾರದ ನಿರ್ಧಾರ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಕಾನೂನಿನಲ್ಲಿ ಸ್ಪಷ್ಟವಾಗಿಯೇ — ಇವಿಎಂ ಅಥವಾ ಮತಪತ್ರ ಬಳಸಬಹುದು ಎಂದು ಹೇಳಿದೆ. ಆ ಕಾನೂನು ತಂದದ್ದು ಬಿಜೆಪಿ ಸರ್ಕಾರವೇ. ಹೀಗಿರುವಾಗ ಏಕೆ ಅಸಮಾಧಾನ? ಎಂದು ಪ್ರಶ್ನಿಸಿದರು.
ರೈತ ಭೂಸ್ವಾಧೀನ ಪ್ರತಿಭಟನೆ, ತಮ್ಮ ವಿರುದ್ಧ ಹಾಗೂ ಸಹೋದ್ಯೋಗಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಹಿಂಪಡೆಯುವ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, “ಅನೇಕ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ. ರಾಜಕೀಯ ಒತ್ತಡದಿಂದ ಬಿಜೆಪಿ ಸರ್ಕಾರವೇ ಹಲವಾರು ಪ್ರಕರಣಗಳನ್ನು ದಾಖಲಿಸಿತ್ತು. ಭಾಷೆ, ನೀರಿನ ಹಕ್ಕು, ರೈತರ ಹೋರಾಟವನ್ನು ನಾವು ಪರಿಗಣಿಸಿದ್ದೇವೆ” ಎಂದರು.
“ಇಡಿ ನನ್ನ ವಿರುದ್ಧ ದಾಖಲಿಸಿದ್ದ ಪ್ರಕರಣ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಜಾಗೊಂಡಿದೆ. ಆದರೆ ಆಗ ನನ್ನನ್ನು ಅಭಿನಂದಿಸಲು ಯಾರೂ ಬಂದಿರಲಿಲ್ಲ” ಎಂದು ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದರು.