ರಾಜಸ್ಥಾನದಿಂದ ಬಂದಿದ್ದು ನಾಯಿ ಮಾಂಸವಲ್ಲ, ಕುರಿ ಮಾಂಸ; ಸರ್ಕಾರದ ಸ್ಪಷ್ಟನೆ

ಬೆಂಗಳೂರು: ವಾರದಿಂದ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕುರಿ ಮಾಂಸದ ಜೊತೆ ನಾಯಿ ಮಾಂಸ ಬೆರೆಸಿ ತರಲಾಗಿದೆ ಎಂಬ ಆರೋಪ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಸಂಗತಿಯನ್ನು ಬಹಿರಂಗಪಡಿಸಿದೆ. ಮಾಂಸದ ಮಾದರಿ ಬಗ್ಗೆ ಪರೀಕ್ಷಾ ವರದಿ ಬಂದಿದ್ದು, ರಾಜಸ್ಥಾನದಿಂದ ರೈಲಿನಲ್ಲಿ ಬಂದಿರುವುದು ಕುರಿ ಮಾಂಸ ಎಂಬುದು ವರದಿಯಲ್ಲಿ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 26ರಂದು ರಾಜಸ್ಥಾನದ ಜೈಪುರದಿಂದ ರೈಲಿನಲ್ಲಿ ಕುರಿ ಮಾಂಸ ಬಂದಿದ್ದು, ಅದರಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂದು ಆರೋಪಿಸಿ ಹಿಂದೂ ಪರ ಹೋರಾಟಗಾರ ಪುನೀತ್‌ ಕೆರೆಹಳ್ಳಿ ತಂಡವು ರೈಲು ನಿಲ್ದಾಣದಲ್ಲಿ ಪ್ರತಿಭಟಿಸಿತ್ತು. ಈ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿ, ಪುನೀತ್ ಕೆರೆಹಳ್ಲಿಯನ್ನು ಪೊಲೀಸರು ಬಂಧಿಸಿದ್ದರು. ಇದೇ ವೇಳೆ ರೈಲಿನಲ್ಲಿ ರವಾನೆಯಾಗಿದ್ದ ಮಾಂಸದ ಮಾದರಿಯನ್ನು ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿದ್ದರು.

ಇದೀಗ ಪರೀಕ್ಷಾ ವರದಿ ಸರ್ಕಾರದ ಕೈಸೇರಿದ್ದು, ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದಾರೆ.‌ ಇತ್ತೀಚೆಗೆ ರಾಜಸ್ಥಾನದಿಂದ ಸರಬರಾಜಾಗುತ್ತಿದ್ದ ಮಾಂಸದ ಕುರಿತಾದ ಘಟನೆಗಳ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಬಂದಿದ್ದ ಮಾಂಸದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಇದೀಗ ಪ್ರಯೋಗಾಲಯಗಳಿಂದ ಪರೀಕ್ಷಾ ವರದಿ ಬಂದಿದ್ದು ರಾಜಸ್ಥಾನದಿಂದ ಬಂದ ಮಾಂಸವು ‘ಕುರಿ’ಯದ್ದೇ ಆಗಿದೆ ಎಂಬುದನ್ನು ಪ್ರಯೋಗಾಲಯವು ಖಚಿತಪಡಿಸಿದೆ ಎಂದು ತಿಳಿಸಿದ್ದಾರೆ. ಈ ವಿಚಾರದಲ್ಲಿ ಯಾವುದೇ ಅನಗತ್ಯ ಗೊಂದಲ ಸೃಷ್ಟಿಸದಂತೆ ಮತ್ತು ಈ ಕುರಿತ ಗಾಳಿ ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಅವರು ಮನವಿ ಮಾಡಿದ್ದಾರೆ.