Sunday, December 7

ವರ್ಷಪೂರ್ತಿ ‘ಸಂಘ ಶತಾಬ್ದಿ’ ವರ್ಷ; ಮಾರ್ಚ್ 21, 22, 23ರಂದು RSS ಅಖಿಲ ಭಾರತೀಯ ಪ್ರತಿನಿಧಿ ಸಭಾ ಭೈಠಕ್’ನಲ್ಲಿ ಕಾರ್ಯತಂತ್ರ

ಬೆಂಗಳೂರು:  ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ-ನಿರ್ಧಾರಗಳನ್ನು ನಿರೂಪಿಸುವ ಮಹತ್ವದ ಸಭೆ ಅಖಿಲ ಭಾರತೀಯ ಪ್ರತಿನಿಧಿ ಸಭಾ  ಇದೇ 2025ರ ಮಾರ್ಚ್ 21, 22, 23 ರಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರ ಆವರಣದಲ್ಲಿ ನಡೆಯಲಿದೆ.

ಬೈಠಕ್ ನಲ್ಲಿ ಹಿಂದಿನ ವರ್ಷ 2024-25ರ ಕಾರ್ಯಚಟುವಟಿಕೆಗಳ ಕುರಿತು ವಿಮರ್ಶಾತ್ಮಕ ಚರ್ಚೆಯ ಜೊತೆಗೆ ವಿಶೇಷ ಕಾರ್ಯಗಳ ಪ್ರಸ್ತುತಿಯೂ ಆಗಲಿದೆ. ಮುಂದಿನ ವಿಜಯದಶಮಿ (ದಸರಾ) 2025ಕ್ಕೆ ಸಂಘಕಾರ್ಯಕ್ಕೆ ನೂರು ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ 2025ರ ವಿಜಯದಶಮಿಯಿಂದ 2026ರ ವಿಜಯದಶಮಿಯವರೆಗೆ ಸಂಘ ಶತಾಬ್ದಿಯ ವರ್ಷ ಎಂದು ಕರೆಯಲಾಗುತ್ತದೆ.

ಸಭೆಯಲ್ಲಿ ಶತಾಬ್ದಿ ವರ್ಷದ ಕಾರ್ಯವಿಸ್ತಾರದ ಯೋಜನೆಯ ಜೊತೆ ಜೊತೆಗೆ ಮುಂಬರುವ ಶತಾಬ್ದಿ ವರ್ಷದ ಪ್ರಯುಕ್ತ ವಿಭಿನ್ನ ಕಾರ್ಯಕ್ರಮಗಳ ಆಯೋಜನೆ ಹಾಗೂ ಅಭಿಯಾನಗಳ ರೂಪುರೇಷೆಯ ತಯಾರಿ ನಡೆಯಲಿದೆ. ಬೈಠಕ್ ನಲ್ಲಿ ರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದ ಎರಡು ಪ್ರಸ್ತಾವನೆಯ ಕುರಿತು ವಿಚಾರ ವಿನಿಮಯಗೊಳ್ಳಲಿದೆ. ಜೊತೆಯಲ್ಲಿ ಸಂಘದ ಶಾಖೆಯ ಮೂಲಕ ಅಪೇಕ್ಷಿತ ಸಾಮಾಜಿಕ ಪರಿವರ್ತನೆಯ ಕಾರ್ಯಗಳ ಸಹಿತ ವಿಶೇಷವಾಗಿ ಪಂಚಪರಿವರ್ತನೆಗಾಗಿ ನಡೆದ ಪ್ರಯತ್ನಗಳ ಕುರಿತು ಚರ್ಚೆ ನಡೆಯಲಿದೆ. ಹಿಂದುತ್ವ ಜಾಗರಣ ಸಹಿತ ದೇಶದ ವರ್ತಮಾನದ ಸ್ಥಿತಿಗತಿಯ ಕುರಿತು ವಿಶ್ಲೇಷಣೆ ಹಾಗೂ ಮಾಡಬೇಕಾದ ಕಾರ್ಯದ ಕುರಿತೂ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಸಹಸರಕಾರ್ಯವಾಹರು, ಪದಾಧಿಕಾರಿಗಳ ಸಹಿತ ಕಾರ್ಯಕಾರಿಣಿಯ ಸದಸ್ಯರು ಉಪಸ್ಥಿತರಿರಲಿದ್ದಾರೆ. ಪ್ರಮುಖವಾಗಿ ಬೈಠಕ್ ಗೆ ಕ್ಷೇತ್ರೀಯ ಹಾಗೂ ಪ್ರಾಂತ ಸ್ತರದ 1480 ಆಹ್ವಾನಿತ ಪ್ರತಿನಿಧಿಗಳು ಅಪೇಕ್ಷಿತರಿದ್ದಾರೆ. ದೇಶಾದ್ಯಂತ ವಿಸ್ತಾರವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳ ಮೂಲಕ ಆಯ್ಕೆಯಾದ ಪ್ರತಿನಿಧಿಗಳು ಮತ್ತು ವಿವಿಧ ಕ್ಷೇತ್ರಗಳ 40ಕ್ಕೂ ಹೆಚ್ಚು ಸಂಘಟನೆಗಳ ರಾಷ್ಟ್ರೀಯ ಸ್ತರದ ಕಾರ್ಯಕರ್ತರು ಈ 3 ದಿನಗಳ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸುನೀಲ್ ಅಂಬೇಕರ್ ತಿಳಿಸಿದ್ದಾರೆ.