Saturday, December 6

“ಲಗಾಮಿಲ್ಲದ ಕುದುರೆ ಆಗಿದ್ದೀರಿ- ಹೊಸ ಪಕ್ಷ ಕಟ್ಟಿ”: ಯತ್ನಾಳ್’ಗೆ ಬೆಂಬಲಿಗರ ಆಗ್ರಹ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಟಾವೋ ಎನ್ನುತ್ತಾ ಬಿಜೆಪಿ ಪಾಳಯದಲ್ಲಿ ನಿರಂತರ ಸಂಚಲನ ಸೃಷ್ಟಿಸುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಇದೀಗ ಬಿಜೆಪಿಯಿಂದ ಹೊರಗೆ ಉಳಿಯುವಂತಾಗಿದೆ. ಯತ್ನಾಳ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಹೈಕಮಾಂಡ್ ಆರು ವರ್ಷ ಕಾಲ ಉಚ್ಚಾಟನೆ ಮಾಡಿದೆ. ಬಿಜೆಪಿ ಹೈಕಮಾಂಡಿನ ಈ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

ಪ್ರಬಲ ಪಂಚಮಸಾಲಿ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಶಾಸಕ ಯತ್ನಾಳ್ ಅವರು, ಆ ಸಮುದಾಯವನ್ನು ಬಿಜೆಪಿಯ ವೋಟ್ ಬ್ಯಾಂಕ್ ಆಗಿ ಹಿಡಿದಿಟ್ಟುಕೊಳ್ಳುವಲ್ಲೂ ಯಶಸ್ವಿಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆದ್ದಿರುವುದು ಯತ್ನಾಳ್ ಪ್ರಭಾವದಿಂದಲೇ ಎಂದು ಪಂಚಮಸಾಲಿ ಮೀಸಲಾತಿ ಹೋರಾಟದ ಮುಖಂಡರು ಹೇಳಿಕೊಂಡಿದ್ದಾರೆ. ಬಿಜೆಪಿ ವರಿಷ್ಠರ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪಂಚಮಸಾಲಿ ಮುಖಂಡರು, ‘ಈ ಬೆಳವಣಿಗೆಯಿಂದ ಬಿಜೆಪಿಗೆ ನಷ್ಟವೇ ಹೊರತು ಅನುಕೂಲವಾಗಲ್ಲ’ ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಸಾಮಾಜಿಕ ಮಾಧ್ಯಮಗಳಲ್ಲಿ ಯತ್ನಾಳ್ ಪರ ಪೋಸ್ಟ್’ಗಳು ಹರಿದಾಡುತ್ತಿದೆ. ಬಹುತೇಕ ಪೋಸ್ಟ್’ಗಳು ಬಿಜೆಪಿಗೆ ಶಾಕ್ ಕೊಡುವಂತಿದೆ. ಈ ವರೆಗೂ ಬಿಜೆಪಿ ಪರವಾಗಿ ಟ್ರೊಲ್ ಮಾಡುತ್ತಾ ಮೋದಿ ಪರವಾಗಿ ಪೋಸ್ಟ್’ಗಳನ್ನೂ ವೈರಲ್ ಮಾಡುತ್ತಿದ್ದ ನೆಟ್ಟಿಗರು, ಇದೀಗ ‘ಹೊಸ ಪಕ್ಷ ಕಟ್ಟಿ, ನಾವು ನಿಮ್ಮೊಂದಿಗಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

‘ಅನ್ಯಾಯ ಮಾಡಿ ಬಿಟ್ರು ನಿಮ್ಗೆ. Don’t worry ಹೊಸ ಪಕ್ಷ ಕಟ್ಟಿ’ ಎಂದು ಕೆಲವರು ಸಲಹೆ ನೀಡಿದರೆ, ಇನ್ನೂ ಕೆಲವರು, ‘ಹೊಸ ಕನ್ನಡ, ಕನ್ನಡಿಗ, ಕರ್ನಾಟಕ ಕೇಂದ್ರಿತ ಪ್ರಾದೇಶಿಕ ಪಕ್ಷ ಕಟ್ಟಿ’ ಎಂದು ನೀಡಿರುವ ಸಲಹೆಯೂ ಗಮನಸೆಳೆದಿದೆ.