Saturday, December 6

ಜನಿವಾರ ಕತ್ತರಿಸಿ ಬಿಸಾಡಲಾಗಿದೆ, ಲಿಂಗಾಯತರ ಶಿವದಾರವನ್ನೂ ಕತ್ತರಿಸಿದ್ದಾರೆ; ಅಶೋಕ್ ಆಕ್ರೋಶ

ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ ಒಬ್ಬ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ಕತ್ತರಿಸಿ ಬಿಸಾಡಲಾಗಿದೆ. ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದ ನಂಬಿಕೆಯನ್ನೇ ಸರ್ಕಾರ ಕಿತ್ತುಹಾಕಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.‌

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಯ ಜನಿವಾರ ಕತ್ತರಿಸಿ ಬಿಸಾಡಲಾಗಿದೆ. ಲಿಂಗಾಯತರ ಶಿವದಾರವನ್ನೂ ಕತ್ತರಿಸಿದ್ದಾರೆ. ಹಿಜಾಬ್‌ ಬಗ್ಗೆ ಪ್ರಶ್ನೆ ಮಾಡಿದ್ದಾಗ ಅದನ್ನು ಕಾಂಗ್ರೆಸ್‌ ನಾಯಕರು ಸಮರ್ಥಿಸಿಕೊಂಡಿದ್ದರು. ಬಟ್ಟೆಯೊಳಗೆ ಏನು ಬೇಕಾದರೂ ಬಚ್ಚಿಟ್ಟುಕೊಳ್ಳಬಹುದು. ಆದರೆ ಜನಿವಾರದಲ್ಲಿ ಏನೂ ಅಡಗಿಸಿಕೊಳ್ಳಲಾಗುವುದಿಲ್ಲ. ಇದರ ಜೊತೆಗೆ ತಾಳಿ, ಓಲೆಗೂ ಕೈ ಹಾಕಿದ್ದಾರೆ ಎಂದು ದೂರಿದರು.

ಹಿಂದೂಗಳು ಕುಂಕುಮ ಇಟ್ಟುಕೊಳ್ಳಲು, ಜನಿವಾರ ಹಾಕಿಕೊಳ್ಳಲು ಅವಕಾಶವಿಲ್ಲ. ಹಿಜಾಬ್‌ ಹಾಕಿಕೊಂಡವರನ್ನು ತಪಾಸಣೆ ಮಾಡುವುದಿಲ್ಲ. ಹಿಂದೂಗಳ ಮೇಲೆ ಸಿಎಂ ಸಿದ್ದರಾಮಯ್ಯನವರಿಗೆ ಕೋಪ ಇದೆ. ಈ ಸರ್ಕಾರ ಹಿಂದೂಗಳನ್ನು ದಮನ ಮಾಡುತ್ತಿದೆ. ಈ ಮೂಲಕ ವಿಕೃತ ಸಂತೋಷ ಕಂಡುಕೊಳ್ಳುತ್ತಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಲಿ ಎಂದರು.