Thursday, January 29

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಿಂದ ಎಲಾನ್ ಮಸ್ಕ್ ನಿರ್ಗಮನ

ವಾಷಿಂಗ್ಟನ್: ಅಚ್ಚರಿಯ ಬೆಳವಣಿಗೆಯಲ್ಲಿ ಸ್ಪೇಸ್ ಎಕ್ಸ್ ಒಡೆತನನದ ಬಿಲಿಯನೇರ್ ಎಲಾನ್ ಮಸ್ಕ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಿಂದ ನಿರ್ಗಮಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಜಗತ್ತಿನ ಹಿರಿಯಣ್ಣ ಎನಿಸಿಕೊಂಡಿರುವ ಅಮೇರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ, ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್‌ ಮಸ್ಕ್ ಅವರು ಟ್ರಂಪ್‌ ಬಲಗೈ ಬಂಟ ಎಂದು ಗುರುತಿಸಿಕೊಂಡರು. ಆದರೆ ಇದೀಗ ಅವರಿಬ್ಬರ ಆಪ್ತತೆಯಲ್ಲಿ ಬಿರುಕು ಕಾಣಿಸಿಕೊಂಡಂತಿದೆ. ಇದೀಗ ಎಲೋನ್‌ ಮಸ್ಕ್ ಅವರು ಅಮೇರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತದಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬಂದಿರುವುದು ಅಚ್ಚರಿ ಹಾಗೂ ಕುತೂಹಲ ಸೃಷ್ಟಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ತೆರಿಗೆ ನೀತಿಯನ್ನು ಟೀಕಿಸಿದ ಮರುದಿನವೇ ಎಲೋನ್‌ ಮಸ್ಕ್ ಅವರು ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥ ಹುದ್ದೆ ತೊರೆದಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ವಿಶೇಷ ಸರ್ಕಾರಿ ಉದ್ಯೋಗಿಯಾಗಿ ನನ್ನ ನಿಗದಿತ ಅವಧಿ ಕೊನೆಗೊಂಡಿದೆ’ ಎಂದು ಬರೆದುಕೊಂಡಿರುವ ಮಸ್ಕ್, ಅನಗತ್ಯ ವೆಚ್ಚಗಳನ್ನು ಕಡಿತ ಮಾಡಲು ಅವಕಾಶ ನೀಡಿದ್ದಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೃತಜ್ಞತೆಗಳು’ ಎಂದು ಹೇಳಿದ್ದಾರೆ.