
ಈ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹರಾಗಿ, ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಅಖಿಲ ಭಾರತೀಯ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಕೃ. ನರಹರಿ ಅವರು ತಮ್ಮ 93 ವರ್ಷ ವಯಸ್ಸಿನಲ್ಲಿ ಗುರುವಾರ ಬೆಳಗ್ಗೆ 4.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.
ನರಹರಿ ಅವರ ನಿಧಾನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರೂ, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ಪ್ರಸಿದ್ಧ ಶಿಕ್ಷಣ ತಜ್ಞರೂ ಆಗಿದ್ದ ಕೃ. ನರಹರಿ ವಿಧಿವಶರಾಗಿದ್ದಾರೆ. ನಿಧನದಿಂದಾಗಿ ಒಂದು ಸಮಾಜಸಮರ್ಪಿತ ಜೀವನ ಅಂತ್ಯಗೊಂಡಿದೆ ಎಂದವರು ಸಂತಾಪ ಸೂಚಿಸಿದ್ದಾರೆ.
ಸಂಘದ ಹಾಗೂ ಸಮಾಜ ಜೀವನದ ಹಲವು ರಂಗಗಳಲ್ಲಿ ನಿರಂತರ ಕ್ರಿಯಾಶೀಲರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಅಸಂಖ್ಯಾತ ಕಾರ್ಯಕರ್ತರಿಗೆ ಕೃ. ನರಹರಿ ಪ್ರೇರಣೆಯಾಗಿದ್ದರು ಎಂದು ದತ್ತಾತ್ರೇಯ ಹೊಸಬಾಳೆ ಸ್ಮರಿಸಿದ್ದಾರೆ. ಶಿಕ್ಷಣ ರಂಗಕ್ಕೆ ಅವರು ನೀಡಿದ ಕೊಡುಗೆಯಿಂದಾಗಿ ಅವರು ಸದಾ ನೆನಪುಳಿಯುತ್ತಾರೆ. ಸಂಘ ಸ್ವಯಂಸೇವಕನ ಅನ್ವರ್ಥನಾಮದಂತೆ ಬದುಕಿದ ಅವರ ಬಾಳು ಸಾರ್ಥಕವಾದುದು ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
