Saturday, December 6

ಪ್ರಿಯಾಂಕ್ ಖರ್ಗೆಯಿಂದ RSS ನಿಷೇಧದ ಒಲವು; ಸಾಮಾಜಿಕ ಮಾಧ್ಯಮಗಳಲ್ಲಿ ಭಿನ್ನ ವಿಭಿನ್ನ ಅಭಿಪ್ರಾಯ

ಬೆಂಗಳೂರು: ರಾಜ್ಯದಲ್ಲಿ RSS ನಿಷೇಧಿಸಲು ಒತ್ತಾಯಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂಗೆ ಪತ್ರ ಬರೆದಿರುವ ಬೆಳವಣಿಗೆ ಬಗ್ಗೆ ಬಿಜೆಪಿ ಆಕ್ರೋಶ ಹೊರಹಾಕಿದೆ.

ದಶಕದ ಹಿಂದೆ ಅಪ್ಪ ಮಲ್ಲಿಕಾರ್ಜುನ ಖರ್ಗೆಯವರು ಆರೆಸ್ಸೆಸ್‌ ಕಾರ್ಯಕ್ರಮದ ಸ್ಥಳಕ್ಕೆ ಭೇಟಿನೀಡಿ ಸಹಕರಿಸಿದ್ದರು. ಇದೀಗ ಪುತ್ರ ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್‌ ನಿಷೇಧದ ಒಲವು ತೋರಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಇದೇ ಸಂದರ್ಭದಲ್ಲಿ, ಮಲ್ಲಿಕಾರ್ಜುನ ಖರ್ಗೆಯವರು ಆರೆಸ್ಸೆಸ್‌ ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡಿ ಸಂಘದ ಪ್ರಮುಖರೊಂದಿಗೆ ಸಮಾಲೋಚಿಸಿರುವ ಫೋಟೋ ವೈರಲ್ ಆಗಿದೆ. ಈ ಫೋಟೋವನ್ನು ಸಾಮಾಜಿಕ ಮಾಧ್ಯಮ ‘X’ನಲ್ಲಿ ಪೋಸ್ಟ್ ಮಾಡಿರುವ ಪ್ರತಿಪಕ್ಷ ಬಿಜೆಪಿ, ‘ಇಂದು ನೀವು ಆರೆಸ್ಸೆಸ್‌ ವಿರುದ್ಧ ವಿಷ ಕಾರುತ್ತಾ ಸಂಘದ ಚಟುವಟಿಕೆ “ನಿಷೇಧಿಸಬೇಕು” ಎಂದು ಹೇಳುತ್ತಿದ್ದೀರ. ಆದರೆ 2002ರಲ್ಲಿ ಬೆಂಗಳೂರಿನ ನಾಗವಾರದಲ್ಲಿ ನಡೆದ ಸಮರಸತಾ ಸಂಗಮ ಕಾರ್ಯಕ್ರಮದ ಸಮಯದಲ್ಲಿ, ಅಂದು ಗೃಹಸಚಿವರಾಗಿದ್ದ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಸ್ವತಃ ಆ ಶಿಬಿರಕ್ಕೆ ಭೇಟಿ ನೀಡಿ, ಆರೆಸ್ಸೆಸ್‌ನ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿಕೊಂಡು, ಪೂರ್ಣ ಸಹಕಾರ ನೀಡಿದ್ದರು ಎಂಬುದನ್ನು ಮರೆತಿದ್ದೀರಾ?’ ಎಂದು ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಪ್ರಶ್ನಿಸಿದೆ. ನೀವು ಇಂದು ಹೈಕಮಾಂಡ್‌ ಮೆಚ್ಚಿಸಲು ನಾಟಕವಾಡುತ್ತಿದ್ದೀರಾ? ಎಂದು ಪ್ರಶ್ನಿಸಿರುವ ಬಿಜೆಪಿ, ಮೊದಲು ಮನೆಯ ಇತಿಹಾಸ ತಿಳಿದು ನಂತರ ರಾಷ್ಟ್ರಸೇವಕರ ಬಗ್ಗೆ ಮಾತನಾಡಿ ಎಂದು ಎದಿರೇಟು ನೀಡಿದೆ.

ಈ ಟ್ವೀಟ್’ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ‘ಆ ಸಮಯದಲ್ಲಿ ಖರ್ಗೆ ಅವರು ಗೃಹ ಸಚಿವರಾಗಿದ್ದರು. ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರದಂತೆ ನಿಮ್ಮ ಜನರಿಗೆ ಎಚ್ಚರಿಕೆ ನೀಡಲು, ಎಲ್ಲಾ ಸಮುದಾಯಗಳ ಅಧಿಕಾರಿಗಳು ಮತ್ತು ಪ್ರತಿನಿಧಿಗಳೊಂದಿಗೆ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ ನಂತರ ಅವರು ಆರ್‌ಎಸ್‌ಎಸ್ ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡಿದರು’ ಎಂದು ಸ್ಪಷ್ಟನೆ ನೀಡಿದ್ದಾರೆ.

ನೆಟ್ಟಿಗರಿಂದ ಖರ್ಗೆಗೆ ತರಾಟೆ:

ಪ್ರಿಯಾಂಕ್ ಖರ್ಗೆಯವರ ಈ ಸ್ಪಷ್ಟನೆಗೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಅಪ್ಪನ ರಾಜಕೀಯ ಪ್ರಭಾವದಿಂದ ರಾಜಕೀಯಕ್ಕೆ ಬಂದು MLA, ಮಿನಿಸ್ಟರ್ ಆಗಿರೋನಿಂಗೆ ಇವೆಲ್ಲ ಬೇಕಾ? ಎಂದು ನೆಟ್ಟಿಗರೊಬ್ಬರು ಹಾಕಿರುವ ರಿಪ್ಲೈ ಗಮನಸೆಳೆದಿದೆ.
ಅದರಲ್ಲೂ ‘ನಿಮ್ ಕೆಲ್ಸ ಫರ್ಸ್ಟ್ ಕರೆಕ್ಟ್ ಮಾಡ್ರಿ…’ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.