
ನವದೆಹಲಿ: ದೇಶದ ಉದ್ಯೋಗ ಮಾರುಕಟ್ಟೆ ಧನಾತ್ಮಕ ಹಾದಿಯಲ್ಲಿದೆ. ಅಂಕಿಅಂಶ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ನಿರುದ್ಯೋಗದ ದರ ಶೇ. 5.2ಕ್ಕೆ ಇಳಿದಿದೆ, ಹಿಂದಿನ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಇದು ಶೇ. 5.4 ಆಗಿತ್ತು.
ಖಾರಿಫ್ ಕೃಷಿ ಕಾರ್ಯಾಚರಣೆಗಳು ಚುರುಕುಗೊಂಡ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಅವಕಾಶಗಳು ಹೆಚ್ಚಾಗಿದ್ದು, ಕೃಷಿ ವಲಯದಲ್ಲಿ ಉದ್ಯೋಗದ ಪಾಲು ಶೇ. 53.5 ರಿಂದ ಶೇ. 57.7 ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.
ನಗರ ಪ್ರದೇಶಗಳ ತೃತೀಯ ವಲಯದಲ್ಲಿಯೂ ಉದ್ಯೋಗದಲ್ಲಿ ಚೇತರಿಕೆ ದಾಖಲಾಗಿದ್ದು, ಕಾರ್ಮಿಕರ ಪಾಲು ಶೇ. 61.7 ರಿಂದ ಶೇ. 62 ಕ್ಕೆ ಏರಿಕೆಯಾಗಿದೆ. ಇದು ನಗರ ಆರ್ಥಿಕ ಚಟುವಟಿಕೆಗಳು ಪುನರುಜ್ಜೀವನಗೊಳ್ಳುತ್ತಿರುವುದನ್ನು ಸೂಚಿಸುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗಿಗಳ ಪ್ರಮಾಣವೂ ಹೆಚ್ಚಾಗಿದ್ದು, ಹಿಂದಿನ ತ್ರೈಮಾಸಿಕದ ಶೇ. 60.7ರಿಂದ ಜುಲೈ-ಸೆಪ್ಟೆಂಬರ್‌ನಲ್ಲಿ ಶೇ. 62.8ಕ್ಕೆ ಏರಿಕೆಯಾಗಿದೆ. ಅದೇ ಸಮಯದಲ್ಲಿ, ನಗರ ಪ್ರದೇಶಗಳ ನಿಯಮಿತ ವೇತನ ನೌಕರರ ಪ್ರಮಾಣ ಶೇ. 49.4ರಿಂದ ಶೇ. 49.8ಕ್ಕೆ ಏರಿಕೆಯಾಗಿದೆ.
ಮಹಿಳಾ ಉದ್ಯೋಗದಲ್ಲೂ ಧನಾತ್ಮಕ ಬದಲಾವಣೆ ಕಂಡುಬಂದಿದೆ. ಮಹಿಳಾ ಕಾರ್ಮಿಕ-ಜನಸಂಖ್ಯಾ ಅನುಪಾತ (WPR) ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಾಗಿದ್ದು, ಮಹಿಳಾ ಕಾರ್ಮಿಕರ ಕಾರ್ಮಿಕ ಬಲ ಪಾಲು ಏಪ್ರಿಲ್-ಜೂನ್‌ನ ಶೇ. 33.4ರಿಂದ ಜುಲೈ-ಸೆಪ್ಟೆಂಬರ್‌ನಲ್ಲಿ ಶೇ. 33.7ಕ್ಕೆ ಏರಿಕೆಯಾಗಿದೆ.
ಒಟ್ಟಾರೆಯಾಗಿ, ಕಾರ್ಮಿಕ ಬಲ ಭಾಗವಹಿಸುವಿಕೆಯ ದರ (LFPR) ಶೇ. 55ರಿಂದ ಶೇ. 55.1ಕ್ಕೆ ಏರಿಕೆಯಾಗಿದೆ. ಇದು 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಉದ್ಯೋಗಾವಕಾಶಗಳು ನಿಧಾನಗತಿಯಲ್ಲಿ ವಿಸ್ತರಿಸುತ್ತಿರುವುದನ್ನು ತೋರಿಸುತ್ತದೆ.
ಸೆಪ್ಟೆಂಬರ್ ವೇಳೆಗೆ ಕಾರ್ಮಿಕ ಬಲ ಪಾಲು 5 ತಿಂಗಳ ಗರಿಷ್ಠ ಮಟ್ಟವಾದ ಶೇ. 55.3 ಕ್ಕೆ ತಲುಪಿದ್ದು, ಉದ್ಯೋಗದ ಸ್ಥಿತಿಗತಿ ಕ್ರಮೇಣ ಸುಧಾರಿಸುತ್ತಿದೆ ಎಂಬುದಕ್ಕೆ ಇದು ಮತ್ತೊಂದು ದೃಢಸೂಚನೆ ಎಂದು ಅಂಕಿಅಂಶ ಇಲಾಖೆ ತಿಳಿಸಿದೆ.
